ಏನು ಯಮಧರ್ಮರಾಯರೆ ಹೇಗಿದ್ದೀರಾ....?
ಯಾವಾಗ ಬಂದ್ರಿ.?
ಇವತ್ತು ಯಾರನ್ನು ಎತ್ತಾಕ್ಕೊಂಡು ಹೋಗ್ತೀರಾ....?
ಹೀಗೆ ಸಾಲು ಸಾಲಾಗಿ ಕೊಟ್ಟ ಸಾಲ ವಾಪಸ್ಸು ಕೇಳುವಂತೆ ಪ್ರಶ್ನೆಗಳನ್ನು ಮೇಲಿಂದ ಮೇಲೆ ಕೇಳಿದೆ. ಆಗ ಯಮಧರ್ಮರಾಯರು ಏನು ಮಾನವ ಧೈರ್ಯ ನಿನಗೆ....? ಒಳ್ಳೆ ನೆಂಟರಲ್ಲಿ ಮಾತಾಡಿದ ಹಾಗೆ ಮಾತಾಡುತ್ತಿಯಲ್ಲ ಮಾರಾಯ ಎಂಥದಾ ನಿಂದು ಕಥೆ ಎಂಥ......
ಮತ್ತೆ ಎಂಥ ಮಾರ್ರೆ ನೀವೇನು ದಿನಾ ಬರ್ತೀರ ನಮ್ಮ ಕಡೆಗೆ ಯಾವಾಗಲೋ ಒಂದು ಸಲ ಬರ್ತೀರಿ ಬಂದವರೇ ನಿಮ್ಮ ಪಟ್ಟಿಯಲ್ಲಿ ಹೆಸರಿದ್ದವರನ್ನು ಕರ್ಕೊಂಡು ಹೋಗ್ತೀರಿ.....! ಅಂದ ಹಾಗೆ ಇವತ್ತಿನ ನಿಮ್ಮ ಪಟ್ಟಿಯಲ್ಲಿ ಯಾರಿದ್ದಾರೆ.
ಅಯ್ಯೋ ಮಾರಾಯ ಇವತ್ತು ಇದೇ ಊರಿನ ಮೂರು ಜನರ ಹೆಸರಿದೆ ನಮ್ಮ ಪಟ್ಟಿಯಲ್ಲಿ. ನಾನು ಸ್ವಲ್ಪ ಬೇಗನೇ ಬರುವುದು ಹಾಗೆ ಇವತ್ತೂ ಸಮಯಕ್ಕೇ ಮೊದಲೇ ಬಂದೆವು. ಆದರೆ ಅವರಿಗೆ ಇನ್ನೂ ಸ್ವಲ್ಪ ಕಾಲಾವಕಾಶ ಇದೆ ಹಾಗಾಗಿ ಕಾಯ್ತಾ ಇದ್ದೇವೆ.
ಏನು ಸಮಯ ಪ್ರಜ್ಞೆನಪ್ಪ ಈ ಶ್ರೀಯುತ ಯಮಧರ್ಮರದ್ದು. ಎಂತೂ ಸ್ವಲ್ಪ ಟೈಮ್ ಇದಿಯಲ್ಲಾ ಇವರತ್ತಿರ ಸ್ವಲ್ಪ ಮಾತಾಡಬೇಕು ಅನ್ನಿಸಿತು. ಕುತೂಹಲದ ಕೆಲವಷ್ಟು ಪ್ರಶ್ನೆಗಳಿವೆ ಕೇಳಿಬಿಡುವ ಎಂದು ಹತ್ತಿರ ಕೂತೆ. ಹೇಳಿ ಯಾರು ಇವತ್ತು ನಿಮ್ಮ ಪಾಷಕ್ಕೆ ವಶವಾಗಿ ಶವವಾಗೋದು ಎಂದು ಕೇಳಿದೆ. ಸೊಂಟಕ್ಕೆ ಸಿಕ್ಕಿಸಿದ ಒಂದು ಪಟ್ಟಿಯನ್ನು ನನ್ನ ಕೈಗಿತ್ತರು. ತೆರದು ನೋಡಿದೆ ಇವತ್ತಿನ ದಿನಾಂಕದ ಎದುರು ಮೂರು ಹೆಸರುಗಳಿದ್ದು ಆ ಎಲ್ಲಾ ಹೆಸರು ನನಗೆ ಗೊತ್ತಿರುವ ಹೆಸರೇ ಆದರೆ ಯಾವ ಹೆಸರಿನ ಬಗೆಗೂ ಆತಂಕ ಆಗಿಲ್ಲ. ಅದಕ್ಕೆ ಕಾರಣ ಆ ಮೂರು ಜನರೂ ತನ್ನ ಎಡದ ಕೈಯನ್ನು ಎತ್ತಬೇಕಾದರೆ ಬಲದ ಕೈಯ, ಬಲದ ಕೈಯನ್ನು ಎತ್ತಬೇಕಾದರೆ ಎಡದ ಕೈಯ ಸಹಾಯ ಪಡೆಯುವುದಕ್ಕೂ ಅಶಕ್ತರಾಗಿ ಮಲಗಿದಲ್ಲಿಂದಲೇ ಎಲ್ಲ ದೇವರ ಬಿಟ್ಟು ಯಮನನ್ನೇ ಪ್ರಾರ್ಥಿಸುತ್ತಿದ್ದರು. ಹೋಗ್ಲಿ ಬೇಗ ಪಾಪ ಅಂತ ನಾನು ಪಟ್ಟಿಯನ್ನು ಓದುತ್ತಾ ಹೋದೆ........! ನೋಡಿದರೆ ಅಬ್ಬಬ್ಬಾ....ಎರಡು ದಿನದ ನಂತರದ ದಿನಾಂಕದ ಎದುರು ಶ್ರೀನಿಧಿಯ ಹೆಸರು ಕಾಣುತ್ತಿದೆ. ಅಯ್ಯೊಯ್ಯಪ್ಪ ಏನಿದು ಕಥೆ.....! ನಿಧಿಗೆ ಡಯಲ್ ಮಾಡಿದೆ ನಾಟ್ ರೀಚೆಬಲ್ ಬಂತು. ವಾಟ್ಸಾಪ್ ಮೆಸ್ಸೇಜ್ ಮಾಡೋಣ ಅಂತ ನೋಡಿದ್ರೆ ಲಾಸ್ಟ್ ಸೀನ್ ಹಿಸ್ಟರಿ ಹನ್ನೆರಡು ಗಂಟೆಗಳ ಕಾಲ ಆಗಿತ್ತು. ಏನು ಮಾಡೋದೀಗ ಗೊತ್ತಾಗಿಲ್ಲ. ಈ ನಿಧಿ ಬೇರೆ ಪಯಣಿಗ ಅದು ಇದು ಅಂತ ಹೇಳಿ ಅವನ ಮೀಮಾ ಸೈಕಲ್ ಹತ್ಕೊಂಡು ಯಾವ ಊರಿಗೆ ಹೋಗಿದ್ದಾನೋ ಗೊತ್ತಿಲ್ವೇ. ಒಂದು ಉಪಾಯ ಹೊಳೆಯಿತು. ಯಮದೇವರಲ್ಲಿ ಬೇಡಿಕೊಂಡೆ ನಾನೊಂದು ಪತ್ರ ಬರೆದುಕೊಡ್ತೇನೆ ಅದನ್ನು ನೀವು ಒಂದು ವಾರದ ನಂತರ ನಿಮ್ಮ ಪಾಷದ ವಶವಾಗಲಿರುವ ಶ್ರೀನಿಧಿಗೆ ಕೊಡಬೇಕು ದಮ್ಮಯ್ಯ ಅಂದೆ. ಅದಕ್ಕವರು ಎರಡು ದಿನ ಇದಿಯಲ್ಲ ಮಾರಾಯ ನೀನೆ ಹೋಗಿ ಕೊಡು ಅಂದರು. ಇಲ್ಲ ಅವ ಎಲ್ಲಿ ಇರ್ತಾನೆ ಎಂದು ಹೇಳಕ್ಕೆ ಆಗೋದಿಲ್ಲ. ಅವ ಇನ್ನು ನನಗೆ ಸಿಗಲಾರ. ನಿಮಗಾದರೆ ಎರಡು ದಿನದಲ್ಲಿ ಎಲ್ಲಿ ಇದ್ದರೂ ಸಿಗಲೇಬೇಕಲ್ಲ, ಆಗ ಹೀಗೆನೇ ಅರ್ಧ ಗಂಟೆ ಮೊದಲೇ ಹೋಗಿ ನಾನು ಕೊಡುವ ಪತ್ರ ಕೊಡಿ, ದಮ್ಮಯ್ಯ ಮಾರ್ರೆ ಇದೊಂದು ಮಾತು ಈಡೇರಿಸಬೇಕು ನೀವು ಎಂದಾಗ ಒಪ್ಪಿದರು. ರಪ್ಪ ಮನೆಗೆ ಹೋಗಿ ಬರೆದು ತಂದ ಪತ್ರವನ್ನು ಯಮನ ಕೈಗೆ ಕೊಡಲು ಹೊರಟರೆ ಹೆಗಲ ಮೇಲೆ ಜೋಲುತ್ತಿದ್ದ ಜೋಳಿಗೆಗೆ ಹಾಕಲು ಹೇಳಿದ. ಅಂಚೆ ಪೆಟ್ಟಿಗೆಯೊಳಗೆ ತುರುಕಿಸಿದ ಹಾಗೆ ತುರುಕಿಸಿದೆ.
ಅಯ್ಯೋ ಯಮದೇವರು ಹೋಗಿಯೇ ಬಿಟ್ಟರಲ್ಲಾ ಛೇ ಒಂದು ಕಾಪಿ ಝೆರಾಕ್ಸಾದರೂ ಮಾಡ್ಕೊಬೇಕಿತ್ತು. ನಮ್ಮ ವಿದ್ಯಾರ್ಥಿ ಕೇಂದ್ರದ ಗೆಳೆಯರಿಗೆ ಓದಕ್ಕೆ ಬೇಕಿತ್ತು. ಏನ್ ಮಾಡೋದೀಗ.....?
ನೆನಪಿದೆ ಎಲ್ಲವೂ ಹೇಗೆ ಮರೆಯಲಿ ಆ ಒಲವಾಕ್ಷರಗಳನು....
ನನ್ನ ಪ್ರೀತಿಯ ಓ ಭಾವಜೀವಿ ಶ್ರೀನಿಧಿ, ಮೊನ್ನೆ ಮೊನ್ನೆ ಫೋನ್ ಮಾಡಿ ನೀನು ನನ್ನಲ್ಲೊಂದು ಬೇಡಿಕೆ ಇಟ್ಟಿರುವೆ. ನಿನ್ನ ಮನೆಗೊಮ್ಮೆ ಬಂದು ಗಂಜಿ ಊಟ ಮಾಡಬೇಕು ಅದಕ್ಕೆ ನೀನೇ ಮಾಡಿದ ಹುರುಳಿಕಾಳಿನ ಚಟ್ನಿ ಬೇಕು. ಊರಿಂದ ತಂದಿರೋ ದನದ ತುಪ್ಪಬೇಕು. ಊಟ ಆದಮೇಲೆ ಆ ಒಂದು ತೃಪ್ತ ಭಾವದ ಫೋಟೋ ತೆಗಿಬೇಕು ನೀನು ಎಂದು ಹೇಳಿದೆಯಲ್ಲ ಮಾರಾಯ. ನಾನು ನಿನ್ನ ಆಸೆಯನ್ನು ತೀರಿಸುವ ಮೊದಲೇ ನೀನೀಗ ತೀರುವೆಯಲ್ಲ. ಎಲ್ಲಿ ಹುಡುಕಲಿ ನಿನ್ನ ಒಂದು ಕ್ಷಣ ನೀ ನನ್ನೆದುರಿಗೆ ಸಿಗುವಂತಾದರೆ ಸಾಕು ನಿನ್ನದೊಂದು ನಗು ಮುಖದ ಫೋಟೋ ತೆಗೆಯಬಲ್ಲೆನೆಂಬ ಅಹಂ ಇದೆ ನಂಗೆ. ಆದರೆ ಅದರಿಂದ ನಿನಗೇನು ಲಾಭ ಆದೀತು. ನಾನಷ್ಟೇ ಇದು ನಾ ತೆಗೆದಿರೋ ನಿನ್ನ ಕೊನೆಯ ಚಿತ್ರ ಎಂದು ತೃಪ್ತಿಪಡಬಹುದೇ ವಿನಃ ನಿನಗೆ ಆ ತೃಪ್ತಿಯನು ಕೊಡಲಾರದೆ ಹೋಗುವೆನಲ್ಲ. ಬದುಕಿನಲ್ಲಿ ಯಾವ ಸಂಬಂಧ ಯಾವ ಕ್ಷಣದಲ್ಲಿ ಕೊನೆಯಾದೀತೆಂದು ಹೇಳತೀರದು. ನೀನು ಹೇಳಿದಂದೋ ಅದರ ಮರುದಿನವೋ ನಾನಿನ್ನ ಬರ ಹೇಳಿದ್ದರೆ ನಮ್ಮೀರ್ವರ ಸಂಬಂಧದ ಒಂದು ಜೊತೆಯೂಟ ಆಗಿ ಹೋಗುತ್ತಿತ್ತು. ಈಗ ನಾನು ನೀನಿಲ್ಲದ ನಿನ್ನೂಟವನ್ನು ಮಾಡಬೇಕದ ಕಾಲ ಸನ್ನಿಹವಾಯ್ತಲ್ಲಾ.
ಪ್ರತಿಸಲನೂ ನಾವು ನಮ್ಮದೊಂದು ಚಿಕ್ಕ ಅಹಂಮ್ಮಿನ ಕೋಟೆಯೊಳಗೆನೇ ರಾಜ್ಯಭಾರ ಮಾಡುತ್ತಿರುತ್ತೇವೆ. ಇನ್ನೊಂದು ಸಂಬಂಧಕ್ಕೆ ಬೆಲೆ ಕೊಡದೆ ತನ್ನ ತಲೆಯ ಮೇಲಿರುವ ಕಿರೀಟಕ್ಕೆ ಬೆಲೆಯ ನೆಲೆ ಬಯಸುತ್ತೇವೆ. ತೀರಿಕೊಂಡ ಮೇಲೆ ಛೇ ಮೊನ್ನಮೊನ್ನೆ ನಾನವರಲ್ಲಿ ಮಾತಾಡಿದ್ದು, ಅಯ್ಯೋ ಹೋಗಿಬಿಟ್ರಲ್ಲಾ. ತುಂಬಾ ಒಳ್ಳೆಯವರು. ಆದರೆ ಸಾಯುವಕಾಲಕ್ಕೆ ಅವರು ನನ್ನಲ್ಲಿ ಹೇಳಿದ್ದ ಒಂದು ಕೆಲಸವನ್ನೂ ಮಾಡದೆ ಹೋದೆನಲ್ಲ. ಛೇ ನನ್ನನ್ನು ನಂಬಿದ್ದರಲ್ಲ... ನನಗೊಂದು ಚಿಕ್ಕ ಸಿಟ್ಟಿತ್ತು, ಆಹಂಮಿತ್ತು ಮಾತುಬಿಟ್ಟಿದ್ದೆ. ಇರಲಿ ಒಂದು ವಾರ ಹೋಗಲಿ ಎಲ್ಲಾ ಸರಿಯಾಗುತ್ತೆ ಅಂದುಕೊಂಡೆ ನನ್ನ ಅಹಂಕಾರದಿಂದ. ವಾರ ತಿಂಗಳಾಯ್ತು, ತಿಂಗಳು ವರ್ಷವಾಗ್ತಾ ಬಂತು ನನ್ನ ನಾಲಗೆಯಲ್ಲಿ ಅವರ ಹೆಸರು ಹೊರಳಲೇ ಇಲ್ಲ.
ನಮ್ಮ ಪ್ರತಿಯೊಂದು ಭೇಟಿಯೂ ಕೂಡ ಅಂತಿಮ ಭೇಟಿ ಎಂದೇ ಭಾವಿಸಿ ಪ್ರತಿ ಭೇಟಿಯಿಂದ ಬೇರ್ಪಡಿಸುವಾಗ ಪ್ರೀತಿಯನ್ನೇ ಅಕ್ಷರವಾಗಿಸಿದರೆ ಜೀವ ಕ್ಷರವಾದರೂ ಸಂಬಂಧ ಕ್ಷರವಾಗದೆ ಅಕ್ಷರವಾಗುತ್ತದೆ.
ಶ್ರೀನಿಧಿ ನಿನ್ನ ಅಂದಿನ ಕರೆಯನ್ನೇ ಕೊನೇಯ ಕರೆಯೆಂದು ಭಾವಿಸಿ ನಿನ್ನಾಸೆಯನ್ನು ಈಡೇರಿಸಿರುತ್ತಿದ್ದರೆ ಇಂದು ನಾನು ನಿನ್ನನು ಆತಂಕವಿಲ್ಲದೇ ಬಿಟ್ಟುಕೊಡುತ್ತಿದ್ದೆನೇನೋ......?
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

ಭಾವನಾತ್ಮಕ ಬರಹ...
ReplyDelete