Wednesday, January 14, 2015

★ ಮೂರು ಬೆರಳಗಲದ ಮೊಬೈಲ್ ★


ಹುಡುಗಿ ಅಂದ್ರೆ ಸ್ಲಿಮ್ಮಾಗಿ ಇರಬೇಕು. ಮೊಬೈಲ್ ಅಂದ್ರೆ ಸ್ಮಾರ್ಟಾಗಿ ದೊಡ್ಡ ಡಿಸ್ಪ್ಲೇ ಬೇಕು. ಒಂದು ಸಲ ಕಿರು ಬೆರಳಲ್ಲಿ  ಮುಟ್ಟಿದರೂ ಸ್ಪಂದಿಸುವಂತಿರಬೇಕು. ಹೀಗೆಲ್ಲ ಏನೇನೋ ಆಸೆ ಪಟ್ಟು ಅಂಗೈಯಗಲಕ್ಕಿಂತ ಹೆಚ್ಚಿನ ಅಗಲದ ಮೊಬೈಲ್ ತಗೊಂಡು ಮೆರೆಯುತ್ತಿರಲು.....!
ಹಸ್ತರೇಖೆ ವಕ್ರವಾಗಿ ಅಂಗೈಯಲ್ಲಿದ್ದ ಮೊಬೈಲ್ ನೆಟ್ ವರ್ಕ್ ನೆಟ್ಟಗಾಗದೆ ಮರಗಟ್ಟಿತು. ತುರ್ತು ಚಿಕಿತ್ಸೆಗೆಂದು ಮೊಬೈಲ್ ತಜ್ಞರ ಬಳಿಗೆ ಹೋದರೆ ಒಂದು ವಾರ ಆಗ್ತದೆ ಎಂದು ಹೇಳಿ ಅದರ ಆತ್ಮ ಮತ್ತು ಮೆದುಳನ್ನು ನನ್ನ ಕೈಗಿತ್ತರು.....
ಯಬ್ಬಾ ಒಂದು ವಾರ ವಿದೌಟ್ ಮೊಬೈಲ್, ವಿದೌಟ್ ವಾಟ್ಸಾಪ್ ವಿದೌಟ್ ಫೇಸ್ ಬುಕ್.......! ಮೈ ಮೊಬೈಲ್..... ಕಾಂಟ್ ಇಮ್ಯಾಜಿನ್ ಯೂ ನೋ.....
ಒಂದು ಹಂತಕ್ಕೆ ವಾಟ್ಸಾಪ್ ಗೆ ಕಾಂಪ್ರಮೈಸ್ ಮಾಡ್ಕೊಂಡೆ. ಇನ್ನು ಫೇಸ್ ಬುಕ್ ಅಂತು ಆಫೀಸ್ ಸಿಸ್ಟಮ್ ಲ್ಲಿ ನೋಡಬಹುದಲ್ಲ ಅಂತ ಯೋಚನೆ ಮಾಡಿ ಒಂದು ಗಟ್ಟಿ ನಿರ್ಧಾರ ಮಾಡಿದೆ. ಎಡಗಾಲಿಟ್ಟು ಹೊರ ಬಂದವನೇ ಬಲಗಾಲಿಟ್ಟು ಒಳಹೋಗಿದ್ದು ನೋಕಿಯಾ ಮೊಬೈಲ್ ಷೋ ರೂಂ ಗೆ. ಡಬಲ್ ಬೆಡ್ ರೂಂ, ಮುಟ್ಟಿ ಸರಿಸೋ ಸ್ಕ್ರೀನ್ ಯಾವುದೂ ಬೇಡ. ತುಂಬಾ ಬೇಸಿಕ್ ಸಿಂಗಲ್ ಸಿಮ್ ಇರುವ ಸ್ಟಾರ್ಟಿಂಗ್ ಮೊಬೈಲ್ ಕೊಡಿ ಎಂದು ಸಾವಿರದ ಇನ್ನೂರ ಐವತ್ತು ರೂಪಾಯಿಯ ಮೊಬೈಲ್ ತಗೊಂಡು ಬಂದೆ.
ಹಳೇ ಆತ್ಮವನ್ನು ಇದರಲ್ಲಿ ಸ್ಥಾಪಿಸಿದೆ. ಜೀವ ಬಂತು ಆದರೆ ಹಳೆಯ ಯಾವ ಸಂಬಂಧಗಳು ಕೂಡ ನೆನಪಿಗೆ ಬರಲಿಲ್ಲ... ಸಂಬಂಧಗಳ ಯಾವ ನೆನಪುಗಳು ಕೂಡ ಆತ್ಮವೆಂಬ ಸಿಮ್ಮ್ ಲ್ಲಿ ಉಳಿದಿರಲಿಲ್ಲ.
ಮೂರೇ ಬೆರಳಗಲದ ಮೊಬೈಲ್.... ಯಬ್ಬಾ ಬದುಕು ಒಂದು ಸಲ ಮೂರು ನಾಲ್ಕು ವರ್ಷದ ಹಿಂದಕ್ಕೆ ಹೋಯ್ತು.
ಚೆನ್ನಾಗಿತ್ತು ಆಗಿನ ಕಾಲದ ಮೊಬೈಲ್..
ಐದುಗೆರೆ ನೆಟ್ ವರ್ಕ್.... ಐದು ಗೆರೆ ಕಾಣಬೇಕೆಂದರೆ ನಾವು ಪೇಟೆಗೆ ಬರಬೇಕಿತ್ತು. ಮನೆಯಂಗಳದಲ್ಲಿ ನಿಂತರೆ ಎರಡೇ ಗೆರೆ, ಒಳಗೆ ಹೋದರೆ ಒಂದೊಂದು ಸಲ ಒಂದು ಗೆರೆ ಮೂಡುತ್ತಿತ್ತು. ಇನ್ನು ಒಂದು ಕಾಲ್ ಬಂದರೆ ಮರ ಏರುತ್ತಿದ್ದೆವು. ಹೌದು ಮರ ಏರಿದರೆ ಮೂರು ಗೆರೆಯ ನೆಟ್ ವರ್ಕ್ ಸಿಗುತ್ತಿತ್ತು.
ಎರಡು ಮೂರು ದಿನಕ್ಕೊಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ ಸಾಕಿತ್ತು. ಅದರಲ್ಲೂ ಒಂದು ಗೆರೆ ಕಮ್ಮಿ ಆದರೂ ಚಾರ್ಜ್ ಗೆ ಇಟ್ಟು ಭರ್ತಿ ಮಾಡಿ ಇಡುತ್ತಿದ್ದೆವು.
ಇಡೀ ಮೈ ಮುಚ್ಚುವ ಒಂದು ಸುತ್ತು ಜಿಪ್ ಇರೋ ಅಂಗಿ. ಎದುರು ಭಾಗ ಪಾರದರ್ಶಕವಾದರೆ ಹಿಂಬಾಗ ಕಪ್ಪು ಬಣ್ಣದ್ದಾಗಿತ್ತು. ಮೆಸ್ಸೇಜ್ ಫ್ರೀ ಇಲ್ಲದ ಕಾಲ ಇತ್ತು. ಆಗೆಲ್ಲ ಮಿಸ್ ಕಾಲ್ ಗೆ ಪ್ರತಿ ಮಿಸ್ ಕಾಲ್ ಕೊಡೋದರಲ್ಲೇ ಭಾವನೆ ವಿನಿಮಯ ಆಗುತ್ತಿತ್ತು. ಇನ್ನು ದಿನ ಒಂದಕ್ಕೆ ನೂರು ಮೆಸ್ಸೇಜ್ ಫ್ರೀ ಆದ ಮೇಲಂತು.... ಮೊಬೈಲ್ ನೋಡದೇನೇ ಟಕ ಟಕ ಅಂತ ಮೆಸ್ಸೇಜ್ ಮಾಡುವ ಚಾತುರ್ಯತೆ ಇತ್ತು. ಮೆಸ್ಸೇಜ್ ಟೈಪ್ ಮಾಡುವಾಗ ಉತ್ಪತ್ತಿಯಾಗುವ ಬಟನ್ ಶಬ್ಧ... ಅದರಲ್ಲೊಂದು ಸಂಗೀತವೇ ಇತ್ತು. ಇನ್ನು ಟೈಪ್ ಸ್ಪೀಡ್ ಹೇಗಿತ್ತೆಂದರೆ ಅದು ಮಾತಿಗಿಂತ ಸ್ಪೀಡಿತ್ತಪ್ಪ. ಅದರ ಫಲವಾಗಿ ಕೀಪ್ಯಾಡ್ ಮೇಲೆ ಅಕ್ಷರಗಳೇ ಕಾಣದೇ ಇದ್ದರೂ ಕೂಡ ಯಾವಾಕ್ಷರ ಎಲ್ಲಿ ಇರುತ್ತದೆ ಎಂದು ಗೊತ್ತಿರುತ್ತಿತ್ತು
ಅದೊಂದು ದಿನ ಕಾಲೇಜಿನಲ್ಲಿ ಕ್ಲಾಸ್ ಆಗ್ತಾ ಇರುವಾಗ ಪ್ಯಾಂಟಿನ ಕಿಸೆಯೊಳಗಿಂದ ಅಲ್ಲಾಡಿದ ಅನುಭವ. ಮೊಬೈಲನ್ನು ಚೂರು ಹೊರತೆಗೆದು ನೋಡಿ ಮೆಸ್ಸೇಜ್ ಓದಿ ತಕ್ಷಣ ಕಿಸೆಯೊಳಗೆ ಮೊಬೈಲ್ ಸಹಿತ ಕೈ ತುರುಕಿಸಿ, ಪಾಠ ಮಾಡುತ್ತಿದ್ದ ಮೇಡಂ ಮುಖ ನೋಡಿಕೊಂಡೇ ಕಿಸೆಯೊಳಗಿಂದಲೇ ಬಂದ ಮೆಸ್ಸೇಜ್ ಗೆ ರಿಪ್ಲೈ ಮಾಡುತ್ತಿದ್ದೆವು.
ಹೆಚ್ಚಿನವರು ಮುಟ್ಟಿದ ನೋಕಿಯಾ ಮೊಬೈಲೆಂದರೆ "ತ್ರಿ ತ್ರಿ ಒನ್ ಝೀರೋ" (3310), ಡಬಲ್ ಒನ್ ಡಬಲ್ ಝೀರೋ(1100) ಮೊಬೈಲ್ ತುಂಬಾ ಗಟ್ಟಿ ಮೊಬೈಲ್ ಎಷ್ಟೆಂದರೆ ಒಗ್ಗರಣೆ ಹಾಕುವಾಗ ಬೆಳ್ಳುಳ್ಳಿ ಗುದ್ದಲು ಬಳಕೆ ಮಾಡಬಹುದಾಷ್ಟು ಗಟ್ಟಿಯ ಮೊಬೈಲ್ ಅದು.
ಬರೆ ಕಾಲ್, ಮಿಸ್ ಕಾಲ್ ಮೆಸ್ಸೇಜ್ ಗೆ ಸೀಮಿತವಾಗಿದ್ದ ಮೊಬೈಲ್ ಇಂದು ಎಷ್ಟು ಅನಿವಾರ್ಯ ಆಗಿದೆ. ಹೇಗೆಂದರೆ ಮೊನ್ನೆ ಊರಿಗೆ ಹೋದಾಗ ಪಕ್ಕದ ಮನೆಯ ಅಜ್ಜಿ ದುಬಾಯಿಯಲ್ಲಿರುವ ಅವರ ಮೊಮ್ಮಗನಿಗೆ ವಾಟ್ಸಾಪ್ ಅಲ್ಲಿ ತನ್ನ ತಟ್ಟೆಯಲ್ಲಿ ಉಪ್ಪು ಖಾರದ ಜೊತೆ ಕಣ್ಣು ಮುಚ್ಚಿ ಮಲಗಿದ್ದ ಇಡೀ ಮೀನಿನ ಫೋಟೋ ತೆಗೆದು  ಕಳಿಸಿದರು. ಇಷ್ಟಕ್ಕೆ ಸುಮ್ಮನಿರದ ಅಜ್ಜಿ ಒಂದು ವಾಯ್ಸ್ ಮೆಸ್ಸೇಜ್ ಕೂಡ ಕಳುಹಿಸಿದರು.....! "ಮಗಾ ನನಗೆ ಇವತ್ತು ಮಧ್ಯಾಹ್ನಕ್ಕೆ ಬಂಗುಡೆ ಫ್ರೈ. ನಿನಗೆ ಅಲ್ಲಿ ಸಿಗುವುದಿಲ್ಲ ಅಲ್ವಾ ಅದಕ್ಕೆ ಫೋಟೋ ಕಳಿಸಿದ್ದೇನೆ ನೋಡಿ ಊಟ ಮಾಡು ಆಯ್ತಾ.

     

ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment