Wednesday, January 14, 2015

ಅಜ್ಜಿ ಕಥೆ

ನಿಮಗೂ ಒಂದು ಥರದ ಅಜ್ಜಿ ಇರ್ತಾರೆ.
ಇವರು ನನ್ನ ಅಜ್ಜಿ. ಅಜ್ಜಿ ಅಂದ್ರೆ ಅಪ್ಪನ ಅಮ್ಮನೂ ಅಲ್ಲ ಅಮ್ಮನ ಅಮ್ಮನೂ ಅಲ್ಲ. ನಮ್ಮ ಮನೆಯ ಪಕ್ಕದವರು ಅಷ್ಟೇ. ಹಾಗಂತ ಅಷ್ಟೇ ಅಲ್ಲ. ಸರಿಯಾಗಿ ನಡೆಯಲು ಕಲಿವ ಮುನ್ನ ಇವರ ತೊಡೆಯೇರಿ ಕತ್ತನಪ್ಪುತ್ತಿದ್ದೆ. ನಡೆಯಲು ಕಲಿತ ಮೇಲಂತು ಬೆಳಗ್ಗೆ ಎದ್ದ ಕೂಡಲೆ ಅಜ್ಜಿಮನೆಗೆ ಓಡುತ್ತಿದ್ದೆ. ಮಾವಿನ ಎಲೆಯನ್ನು ಉದ್ದನೆ ಮಧ್ಯಕೆ ಹರಿದು ಅದನ್ನು ಮಡಚಿ ಅವರೇ ಕಚ್ಚಿ, ಕಚ್ಚಿದ್ದನ್ನು ತೊಳೆದು ಕೊಡುತ್ತಿದ್ದರು. ಇನ್ನೊಂದು ಎಲೆಯನ್ನು ಹಾಗೇ ಮಡಚಿ ಅವರು ತನ್ನ ಹಲ್ಲುಜ್ಜುತಾ ನನಗೆ ಕಲಿಸಿದರು. ಎಲೆಯ ಮಧ್ಯದ ನಾರನ್ನು ಕಿವಿಗೆ ಇಡುತ್ತಿದ್ದರು. ಹಲ್ಲುಜ್ಜಿದ ಮೇಲೆ ಕಿವಿ ಮೇಲಿನ ನಾರು ತೆಗೆದು ನಾಲಗೆ ಸ್ವಚ್ಛ ಮಾಡುವುದನ್ನೂ ಕಲಿಸಿಕೊಟ್ಟಿದ್ದರು.
ಅಮವಾಸೆ ಬಂತೆಂದರೆ ಒಂದು ಕೈಯಲ್ಲಿ ಬೆಲ್ಲ ತುಂಡು ಇನ್ನೊಂದು ಕೈಯಲ್ಲಿ ಕಹಿ ಮದ್ದನ್ನು ಹಿಡಿದು ಮುದ್ದಲ್ಲೇ ಹತ್ತಿರ ಕರೆದು ತೊಡೆ ಮಧ್ಯ ಮಲಗಿಸಿಕೊಂಡು ಹೊರಲಾಡದಂತೆ ನನ್ನ ಕೈಗಳನ್ನು ಅವರ ಕಾಲಡಿಗೆ ಹಾಕಿ ಅವರೇ ತಯಾರಿಸಿದ ಕಹಿ ಮದ್ದನ್ನು ನನ್ನ ಬಾಯೊಳಗೆ ಹಾಕಿ ಮದ್ದು ಉಗುಳದಂತೆ ನನ್ನ ಮೂಗನ್ನು ಒತ್ತಿ ಹಿಡಿಯುತ್ತಿದ್ದರು. ಅನಿವಾರ್ಯವಾಗಿ ಮದ್ದು ನುಂಗಲೇ ಬೇಕು. ಆಗಂತು ಅಜ್ಜಿ ನನ್ನ ಶತ್ರುನೇ ಆಗುತ್ತಿದ್ದರು.
ಕಣ್ಣಾಮುಚ್ಚಾಲೆ ಆಟ ಆಡುವಾಗ ಅವರ ಕೈಗಳು ನನ್ನ ಕಣ್ಣುಗಳನ್ನು ಒತ್ತಿ ಹಿಡಿಯುತ್ತಿದ್ದವು. ಇನ್ನು ಬೇರೆಯವರು ಹುಡುಕುವಾಗ ಅವರ ಬೆನ್ನ ಹಿಂದೆಯೇ ಅವಿತುಕೊಂಡು ಸೆರಗಲ್ಲೇ ಮರೆಯಾಗುತ್ತಿದ್ದೆ. ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೆ ಎಂದು ಹಕ್ಕಿ ಹುಡುಕಲು ಹೊರಟ ಕೂಡಲೆ ಅಜ್ಜಿಯ ಸೆರಗಿಂದ ಹೊರಬಂದು ಗೂಡು ಸೇರಿಕೊಂಡುಬಿಡುತ್ತಿದ್ದೆ.
ಶಾಲೆಗೆ ಹೋಗಲು ಶುರುಮಾಡಿದ ಮೇಲಂತು ಅವರ ಮನೆಯಂಗಳ ದಾಟಿನೇ ಶಾಲೆಗೆ ಹೋಗೋದು. ಹರಿದ ಪುಸ್ತಕಗಳನ್ನು ಬಿಸಿ ಗಂಜಿ ಅಂಟಿಸಿ ಪುಟಗಳನ್ನು ಅಂಟಿಸುತ್ತಿದ್ದರು. ಚಂದಮಾಡಿ ಬೈಂಡ್ ಹಾಕುತ್ತಿದ್ದರು. ಶಾಲೆ ಬ್ಯಾಗ್ ಹರಿದರೆ ಟೈಲರ್ ಆಗುತ್ತಿದ್ದರು. ಛತ್ರಿ ಹಾಳಾದರೆ ರಿಪೇರಿ ಮಾಡುತ್ತಿದ್ದರು. ಪ್ರೀತಿಯಿಂದ ಗೊಮ್ಮಟನನ್ನಾಗಿಸಿ ಎಣ್ಣೆ ಹಚ್ಚಿ ಬಿಸಿನೀರ ಸ್ನಾನ ಮಾಡಿಸುತ್ತಿದ್ದರು.
ಶುಕ್ರವಾರ ಸಂಜೆ ಮತ್ತು ಶನಿವಾರ ಮಧ್ಯಾಹ್ನದವರೆಗೆ ನಾನು ಅವರ ಮನೆಗೆ ಹೋಗುವ ಹಾಗಿಲ್ಲ. ಶುಕ್ರವಾರ ನಮ್ಮೂರಿನ ಸಂತೆ ಅವತ್ತೊಂದು ದಿನ ಮಾರ್ಕೆಟ್ ಗೆ ಹೋಗಿ ಬಂಗುಡೆ ಮೀನು ತಂದು ಅಡುಗೆ ಮಾಡುವರು. ನಾನು ಶುದ್ಧ ಸಸ್ಯಾಹಾರಿ ಆಗಿದ್ದರಿಂದ ನನ್ನ ಮೇಲಿನ ಪ್ರೀತಿಯ ಸಲುವಾಗಿ ಅಜ್ಜಿಯಿಂದ ಅದೆಷ್ಟೋ ಮೀನುಗಳು ಇನ್ನೂ ಸಮುದ್ರದಲ್ಲೇ ಬದುಕುತ್ತಿವೆ. ಅಜ್ಜಿ ಮೀನು ತಿಂದರೆ ನನಗೆ ಮುತ್ತಿಡಲು ಆಗದೆ ಕೊರಗುತ್ತಿದ್ದರು.
ಅಕ್ಷರ ಬರದ ಈಕೆ ಜನಪದ ಹಾಡುಗಳನ್ನು ಕಲಿಸಿದರು ನನಗೆ. ಪುರಾಣದ ಕಥೆಗಳನ್ನು ಹೇಳಿದರು. ತೆಂಗಿನ ಎಲೆಯಲ್ಲಿ ಗಿರ್ಗಿಟ್ ಮಾಡಲು ಕಲಿಸಿದರು. ಕಾಗದದಲ್ಲಿ ದೋಣಿಮಾಡಲು ಕಲಿಸಿದರು. ಕೋಳಿ ಹಿಡಿಯುವುದನ್ನು ಕಲಿಸಿದರು. ಗಿಡುಗ ಬಂದಾಗ ಕೋಳಿಮರಿಗಳನ್ನು ರಕ್ಷಣೆ ಮಾಡೋದು ಹೇಗೆಂದು ಕಲಿಸಿಕೊಟ್ಟರು.
ಇವತ್ತು ಇವರಿಗೆ ಸುಮಾರು ಎಂಭತ್ತು ವರ್ಷ ವಯಸ್ಸಿರಬಹುದು. ಬೆನ್ನು ಬಗ್ಗಿದೆ. ನೇರ ನಿಂತು ಅಪ್ಪಿಕೊಳ್ಳಲು ಆಗುವುದಿಲ್ಲ. ಕಿವಿ ಸರಿಯಾಗಿ ಕೇಳುವುದಿಲ್ಲ. ಕಣ್ಣಲ್ಲೇ ಹೆಚ್ಚು ಮಾತಾಡುತ್ತಾ ಸರೆಗ ತುದಿಯನ್ನು ಒದ್ದೆ ಮಾಡುತ್ತಾರೆ. ಪ್ರತೀ ಸಲ ಊರಿಗೆ ಹೋದಾಗ "ನೀನು ಇನ್ನೊಂದು ಸಲ ಬರುವವರೆಗೆ ಖಂಡಿತಾ ಬದುಕಿರುತ್ತೇನೆ". ಎಂದು ಹೇಳಿದಾಗ ಬೇಗ ಊರಿಗೇ ಹೋಗಬಾರದು ಅಂದುಕೊಳ್ಳುತ್ತೇನೆ. ಆದರೆ ಒಂದು ಸತ್ಯದ ಭಯ ಇದ್ದೇ ಇದೆ. ಗೊತ್ತಿದೆ ಸಾವು ಯಾವ ಘಳಿಗೆಯಲ್ಲಾದರೂ ಬರಬಹುದು. ಒಂದಾ ಅವರದ್ದು ಇಲ್ಲಂದ್ರೆ ನಂದು ಯಾರಿಗ್ಗೊತ್ತು. ಹಾಗಾಗಿ ಪ್ರತೀ ಭೇಟಿಯನ್ನ ಅಂತಿಮ ಭೇಟಿಯೆಂದೇ ಭಾವಿಸಿ ಪ್ರೀತಿಯ ಅಭದ್ರತೆಯಲ್ಲೇ ಬೀಳ್ಕೊಟ್ಟು ಕಳಿಸುತ್ತಾರೆ.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment