ಎಡದ ಕೈಯಲ್ಲಿದ್ದ ಇಂಜೆಕ್ಷನ್ ತನ್ನೊಳಗೆ ಹೀರಿಕೊಂಡಿದ್ದ ಮಕರಂದವನ್ನು ತನ್ನ ಬಲದಕೈಗೆ ಚುಚ್ಚಿ ಮೆಲ್ಲನೆ ಪಸರಿಸುತ್ತಿದ್ದರೆ ಮಣಿಸರದಲ್ಲಿ ನೇತಾಡುತ್ತಿದ್ದ ಮನುಷ್ಯಾಕೃತಿ ಅಲ್ಲಿಂದಲೇ ನಗುವ ಬೀರಿ ಆಶೀರ್ವಾದಿಸಿದಂತಿತ್ತು. ಚುಚ್ಚಿದ ಸೂಜಿಯನ್ನ ಸಿರೀಂಜಿನಿಂದ ಬಿಚ್ಚಿ ಬೇರೆ ಬೇರೆ ತೊಟ್ಟೆಗಳಲ್ಲಿ ತೆಗೆದಿಟ್ಟರು. ಬಲದ ಕೈಯಲ್ಲಿ ಹಣೆ ಮುಟ್ಟಿದರು, ಎದೆಗಿಂತ ಸ್ವಲ್ಪ ಕೆಳಭಾಗ ಮುಟ್ಟಿದರು, ಎಡಭುಜದ ಎದುರು ಭಾಗ ಮುಟ್ಟಿದರು, ಬಲಭುಜದ ಎದುರು ಭಾಗ ಮಟ್ಟಿದರು, ಕತ್ತಿನ ಭಾಗ ಮುಟ್ಟಿದರು, ಮಣಿಸರದಲ್ಲಿದ್ದ ಮನುಷ್ಯಾಕೃತಿಗೆ ಮುತ್ತನ್ನಿಟ್ಟರು. ಆಗೊಮ್ಮೆ ಅವರ ಬಹುಭಾಗ ಮುಚ್ಚಿದ ಮುಖ ಕಂಡಿತು. ಅಮ್ಮನ ಪ್ರಾಯ ಮೀರಿದ ಇಂಗ್ಲಿಷ್ ಟೀಚರನ್ನು ಟೀಚಾ ಟೀಚಾ ಎಂದು ಕರಿಬೇಡ ಅವರು ಟೀಚರಲ್ಲ ಸಿಸ್ಟರ್ ಎಂದು ಹೇಳುತ್ತಿದ್ದ ಶರೋನ್ ಕ್ಲೇರಾ ಫೆರ್ನಾಂಡಿಸ್ ನೆನಪಾದಳು.
ಈಗ ಇಲ್ಲಿ ಇಂಜೆಕ್ಷನ್ ಚುಚ್ಚಿಕೊಂಡ ಸಿಸ್ಟರ್ ನ ಹೆಬ್ಬೆರಳು ಮತ್ತು ತೋರು ಬೆರಳು ಮಣಿಸರದಲ್ಲಿದ್ದ ಒಂದೊಂದೇ ಮಣಿಗಳನ್ನು ದಾಟಿ ಕೂಡಿಸಿದ ಕೃತಿಯ ಏಸುವನ್ನು ಮುಟ್ಟುವಷ್ಟರಲ್ಲಿ ಸಿಸ್ಟರ್ ಗೆ ನಿದ್ದೆ ಬಂದಿತ್ತು.
ನಾನು ಎಡಕ್ಕೆ ತಿರುಗಿದೆ, ಮರಗಳೆಲ್ಲಾ ಓಡುತ್ತಿತ್ತು. ಯಾವ ಮರಗಳಿವು ಎಂದು ಗುರುತಿಸುವಾ ಎಂದರೆ ಇನ್ನೂ ಸರಿ ಬೆಳಕಾಗಿರಲಿಲ್ಲ. ಆದರೆ ಬಣ್ಣ ಹಸಿರೆಂದು ಗೊತ್ತಾಗುತ್ತಿತ್ತು. ಉಸಿರಾಡುತ್ತಿದ್ದದ್ದು ಶುದ್ಧ ಆಮ್ಲಜನಕವೆಂದು ಅರಿವಾಗುತ್ತಿತ್ತು. ಕಿಟಕಿಯ ಸರಳಿಗೆ ಮೂಗನ್ನೊತ್ತಿ ಕಣ್ಣು ಮುಚ್ಚಿಕೊಂಡೆ. ಬೆಡ್ ಪಕ್ಕದಲ್ಲಿ ಕೈಯಲ್ಲಿ ಇಂಜೆಕ್ಷನ್ ಹಿಡ್ಕೊಂಡು ಸಿಸ್ಟರ್ ನಿಂತಿದ್ದರು ನನಗೆ ಚುಚ್ಚಲೆಂದು. ಬೇಡ ಎನಲು ಸಾಧ್ಯವೇ ಇಲ್ಲದಾಗಿತ್ತು. ಒಂದು ಕೈಗೆ ಗ್ಲೂಕೋಸ್ ಚುಚ್ಚಿಟ್ಟಿದ್ದರು. ಇನ್ನೊಂದು ಕೈ ಅಲ್ಲಾಡದಂತೆ ಕಟ್ಟಿದ್ದರು. ಬಾಯಿ ತೆರೆದು ಹೇಳೋಣ ಅಂದರೆ ಸಿಲೀಂಡರ್ ನಿಂದ ಒಂದು ಪೈಪ್ ಮೂಲಕ ಶುದ್ಧ ಆಮ್ಲಜನಕ ಇಟ್ಟಿದ್ದರು.
'ಹೇಳಲು ಗೊತ್ತಿದ್ದು ಹೇಳಬೇಕಾದ್ದನ್ನು ಹೇಳಲಾರದ ಪರಿಸ್ಥಿತಿಗೆ ಬಂದು ತಲುಪಿದರೆ ಬೇಕಾ ಬದುಕು'. ಛೇ ಸಾಧ್ಯವೇ ಇಲ್ಲ. ಕಿರಿ ಕಿರಿ ಆಯ್ತು, ಕೈಗೆ ಚುಚ್ಚಿದ್ದ ಗ್ಲೂಕೋಸ್ ಕನೆಕ್ಷನ್ ಕಿತ್ತು ಬರುವಂತೆ ಕೈಯನ್ನು ಮೇಲಕ್ಕೆತ್ತಿ ಕೆಳಗೆ ಕುಕ್ಕಿದೆ....... ಕೈ ಕಿಟಕಿ ಸರಳಿಗೆ ತಾಗಿತ್ತು. ಮೆಲ್ಲನೆ ಚೀರಿದೆ. ಕೈಯಲ್ಲಿ ಮಣಿಸರ ಹಿಡಿದುಕೊಂಡಿದ್ದ ಸಿಸ್ಟರ್ "ವ್ಹಾಟ್ ಹಾಪಂಡ್ ಮೈ ಸನ್" ಎಂದು ಕೇಳಿದರು. ಕನ್ನಡದಲ್ಲಿ ಕನಸುಬಿದ್ದ ಆಸ್ಪತ್ರೆ ದೃಶ್ಯವನ್ನು ಇಂಗ್ಲೀಷ್ ಗೆ ಟ್ರಾಂಸ್ಲೇಟ್ ಮಾಡಿದರೆ ಲೇಟಾಗುತ್ತೆ ಎಂದು ''ನತಿಂಗ್'' ಅನ್ನೋ ಭಾವದಲ್ಲಿ ಕಿರು ನಗೆಯನ್ನು ಬೀರಿದೆ.
ಕೈಯಲ್ಲಿ ಮೂಡಿದ ರೈಲ ಸರಳಿನ ಚಿತ್ರವನ್ನು ಒರೆಸುತ್ತಾ ಕೂತೆ. ಕಿಟಕಿಯ ಹೊರ ನೋಡಿದೆ. ಓಡುತ್ತಿದ್ದ ಮರಗಳೆಲ್ಲಾ ನಿಲ್ಲಲಾರಂಭಿಸಿತು. ದೂರದಲ್ಲೊಂದು ಹಳದಿ ಬಣ್ಣದ ಬೋರ್ಡ್ ಕಂಡಿತು. ಅದರಲ್ಲಿದ್ದ ಕಪ್ಪಕ್ಷರಗಳು "ಸುಬ್ರಹ್ಮಣ್ಯ ರೋಡ್" ಎಂದು ಚೆನ್ನಾಗಿ ಓದುವಷ್ಟು ಬೆಳಕಾಗಿತ್ತು. ಸಿಸ್ಟರ್ ಗೆ ನಮಸ್ಕರಿಸಿ ರೈಲಿನಿಂದ ಕೆಳಗಿಯವುದಕ್ಕೆ ತಯಾರಾದೆ. ಸಿಸ್ಟರ್ ಒಮ್ಮೆ ನನ್ನೆಡೆಗೆ ನೋಡಿ "ಏಸು ನಿನ್ನನ್ನು ಪ್ರೀತಿಸುತ್ತಾನೆ, ನಿನಗೆ ಓಳ್ಳೆಯದಾಗಲಿ" ಎಂದು ಕನ್ನಡದಲ್ಲೇ ಹೇಳಿದರು. ನಾನಾಗ "ಆಮೇನ್" ಎಂದು ರೈಲಿಂದ ಕೆಳಗಿಳಿದೆ. ಉಸಿರಾಡಿದ ಪ್ರತಿಯುಸಿರಲ್ಲೂ ಶುದ್ಧ ಆಮ್ಲಜನಕವನ್ನೇ ಹೀರುತ್ತಾ ಹೆಜ್ಜೆ ಹಾಕುವಾಗ ಮತ್ತೊಮ್ಮೆ ಆಸ್ಪತ್ರೆಯ ಕನಸು ನೆನಪಾಯ್ತು. ಇದೇ ಶುದ್ಧ ಆಮ್ಲಜನಕ ನಗರದ ಆಸ್ಪತ್ರೆಯಲ್ಲಿ ಸಿಲೀಂಡರಲ್ಲಿ ತುಂಬಿ ಉಸಿರುಗಟ್ಟುವ ಹಾಗೆ ಉಸಿರಾಡಿಸುತ್ತಾರೆ, ಉಸಿರು ನಿಲ್ಲದಿರಲೆಂದು.
ಏನು ಬದುಕೋ ಎಂದು ಲೆಕ್ಕಕ್ಕಿಂತ ಒಂದೆರಡು ಹೆಚ್ಚೇ ಉಸಿರಾಡಿದೆ.
ಸುಬ್ರಹ್ಮಣ್ಯ ದಾಟಿ ಅವನಪ್ಪನೂರಾದ ಧರ್ಮಸ್ಥಳನೂ ದಾಟಿ ಬೆಳ್ತಂಗಡಿಗೆ ಬಂದಿಳಿದರೆ ಅಂಗಡಿ ಮಾಲಿಕ ಭಾವ ಬೈಕಿನಲ್ಲಿ ಮನೆಗೆ ಕರೆದುಕೊಂಡು ಹೋದರು. ಎರಡನೇ ಮಹಡಿಯಲ್ಲಿ ತಂಗಿ ಮಗ ಮನು ಕಾಯುತ್ತಿದ್ದವನೆ ನನ್ನ ಕಂಡೊಡನೆ ಅಲ್ಲಿಂದಲೇ ಒಳ್ಳೆ ನರೇಂದ್ರ ಮೋದಿ ಥರ ಕೈ ಬೀಸಿದ. ನಾನು ಅವನ ಅಭಿಮಾನಿ ಥರ ಬಳಿಗೋಡಿ ಅಪ್ಪಿಕೊಂಡು ಮುತ್ತನ್ನಿಟ್ಟೆ, ಯಾರೂ ತಡೆಯಲಿಲ್ಲ. ಎರಡನೇ ಕ್ಲಾಸಿನ ಮಗ ಸುಮಾರು ಪ್ರಶ್ನೆ ಕೇಳಿದ. ಅವನಿಗಿವತ್ತು ಗಣಿತ ಪರೀಕ್ಷೆ ಅಂತೆ. ಆರು ಹದಿನೆಂಟ್ಲಿ ಎಷ್ಟು ಎಂದು ಕೇಳಿದ. ಸ್ನಾನ ಮಾಡ್ಕೊಂಡು ಬಂದು ಹೇಳ್ಳಾ ಎಂದು ಕೇಳಿದೆ. ಆಗವನು ಆರೊಂದ್ಲಾ ಆರು ಶುರು ಮಾಡಿ ಆರ್ ಹದಿನೆಂಟ್ಲಿವರೆಗೆ ಬರುವಾಗ ನಿಮ್ಮ ಸ್ನಾನ ಮುಗಿಯುತ್ತಾ......!
ಜೊತೆಗೆ ಊಟಕ್ಕೆ ಕೂತೆವು. ಕತ್ತಿಗೆ ಟೈ ಹಾಕ್ಕೊಂಡಿದ್ದ. ಅಮ್ಮನಿಗೆ ಬೈತಿದ್ದ ಊಟ ಮುಂಚೆ ಟೈ ಕಟ್ಟಬಾರದಮ್ಮ. ಬಗ್ಗಿ ಊಟ ಮಾಡುವಾಗ ಟೈ ಊಟದ ತಟ್ಟೆಗೆ ತಾಗಿ ಟೈಯಲ್ಲಿ ಸಾಂಬಾರಾಗುತ್ತೆ. ಅಬ್ಬಾ ನನಗಿದು ಗೊತ್ತೇ ಇರಲಿಲ್ಲ. ನನ್ನ ಬದುಕಲ್ಲಿ ಈವರೆಗೆ ಟೈ ಕಟ್ಟಲೇ ಇಲ್ಲ. ಎರಡನೇ ಕ್ಲಾಸಿನಲ್ಲಿರುವಾಗ ಗೋಣಿಚೀಲದ ದಾರ ಕಟ್ಟುತ್ತಿದ್ದೆ ಜಾರುತ್ತಿದ್ದ ಚಡ್ಡಿಯನ್ನು ಗಟ್ಟಿಯಾಗಿಸಲು.
(ಮುಂದುವರಿದು)
ಸಾಕಿಷ್ಟೇ.
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:
Post a Comment