Wednesday, January 14, 2015

ಕೆರೆಯ ಸೆರೆ

ಒಂದೂರಿನಲ್ಲೊಂದು ಕೆರೆ. ಊರ ಜನ ಕೆರೆಯ ನೀರನ್ನೇ ಕುಡಿಯಲು ಬಳಕೆ ಮಾಡುತಿಹರು. ಆದರೆ ಕೆರೆಯ ನೀರ ತಳದಲ್ಲಿ ಕೆಸರೇ ಇರಲು ನೀರು ಕುಡಿಯಲು ಸರಿಯಾಗಿ ಯೋಗ್ಯವಾಗದೆ ಇದ್ದರೂ ಕೆರೆಗೆ ತನ್ನ ಅನಿವಾರ್ಯ ಮಹತ್ವದ ಬಗ್ಗೆ ಅಹಂ. ಇದನ್ನು ಸಹಿಸಲಾರದ ಪುಂಡ ಹುಡುಗನೋರ್ವ ಒಂದು ದಿನ ಎಲ್ಲರಿಗೂ ಕೇಳುವಂತೆ ಕೆರೆಗೆ ದೊಡ್ಡದಾದ ಕಲ್ಲನ್ನೊಂದು ಎತ್ತಿ ಹಾಕಿದ. ಆಗ ಕೆರೆಯ ನೀರೆಲ್ಲಾ ಕದಡಿ ಕೆಸರೇ ಕೆಸರಾದವು..., ಊರ ಹಿರಿಯರೆಲ್ಲಾ ಸೇರಿ ಯುವಕರನ್ನೂ ಸೇರಿಸಿ, ಕಲ್ಲು ಎತ್ತಿಹಾಕಿದ ಯುವಕನನ್ನೂ ಕರೆಸಿ ಕೆರೆಯ ನೀರನ್ನು ಖಾಲಿ ಮಾಡಿದರು. ಕೆಸರನ್ನೆತ್ತಿ ಹಾಕಿದರು. ಕೆರೆಯನ್ನು ಸ್ವಚ್ಛ ಮಾಡಿದರು.
ಕಲ್ಲೆತ್ತಿಹಾಕಿದ ಯುವಕಂಗೆ ಎಲ್ಲರೂ ಒಬ್ಬೊಬ್ಬರೇ ಒಂದೊಂದು ಪರಿಯಲ್ಲಿ ಬುದ್ಧಿ ಹೇಳಿದರು. ಆಗ ಪುಂಡ ಯುವಕ ತನ್ನ ಬಗ್ಗೆ ಹೆಮ್ಮೆಯಿಂದಲೇ ನಸುನಗುತ್ತಾ ಅಂದ. 'ನಾವು ಸಮಸ್ಯೆಯ ಜೊತೆಗೆ ಬದುಕಬಾರದು. ಅದಕ್ಕೂ ಮೊದಲು ನಮ್ಮ ಜೊತೆಗಿರುವ ಸಮಸ್ಯೆಯನ್ನು ಗುರುತಿಸಬೇಕು. ಮುಂದೆಂದೂ ಸಮಸ್ಯೆಯ ವಂಶ ಬೆಳೆಯದಂತೆ ನಾಶ ಮಾಡಬೇಕು. ನಾವು ಒಂದು ಸಲ ಸಮಸ್ಯೆಯ ಜೊತೆಗೆ ಬದುಕುವುದನ್ನು ಅಭ್ಯಾಸ ಮಾಡಿಕೊಂಡರೆ ಮತ್ತೆ ನಮಗೆ ಸಮಸ್ಯೆಯ ಮೇಲೆ ಕೂಡ ಮೋಹ ಹುಟ್ಟುತ್ತದೆ. ಆಮೇಲೆ ಸಮಸ್ಯೆಯನ್ನು ದೂರ ಮಾಡಲು ಮನಸ್ಸೇ ಒಪ್ಪದೆ ಜೀವನಪೂರ್ತಿ ಸಮಸ್ಯೆಯ ಜೊತೆಗೆ ಬದುಕುವ ಅನಿವಾರ್ಯತೆ ಬಂದೊದಕುತ್ತದೆ. ಒಂದುವೇಳೆ ಈಗ ನಾನು ಕೆರೆಗೆ ಕಲ್ಲನ್ನೆತ್ತಿ ಹಾಕದೆ ಇರುತ್ತಿದ್ದರೆ ನಾವು ಇನ್ನೆಷ್ಟೋ ದಿನ ಕೆಸರ ನೀರೆ ಬಳಕೆ ಮಾಡುತ್ತಿದ್ದೇವಲ್ಲ?'
ಆಗ ಹಿರಿಯರು ಪುಂಡ ಹುಡುಗನನ್ನು ಮೆಚ್ಚಿದರು. ಕೆಸರಿನ ಜೊತೆಗೆ ಮೇಲೆತ್ತಿದ ಅವನೆತ್ತಿ ಹಾಕಿದ ಕಲ್ಲಿಗೆ ಒಂದು ಸುತ್ತು ಬಂದರು.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment