Wednesday, January 14, 2015

ಪುಣ್ಯಾತ್ಮ-ಪೂಜಾತ್ಮ

ಅಪ್ಪ-ಅಮ್ಮ , ಅಕ್ಕ-ತಮ್ಮ ಇನ್ನು ಹುಡುಗಿ ಪೂಜ ಸೇರಿ ಒಟ್ಟು ಐದು ಜನ ಇರೋ ಪುಟ್ಟ ಸಂಸಾರ. ಮನೆಯ ಗೋಡೆಯ ಮೇಲಿರೋ ಗಡಿಯಾರ ನೋಡಿ ಚಿಕ್ಕ ಮುಳ್ಳು ಎಂಟರಲ್ಲಿದ್ದು ದೊಡ್ಡ ಮುಳ್ಳು ಹನ್ನೆರಡರಲ್ಲಿದ್ದರೆ ಭರ್ತಿ ಎಂಟುಗಂಟೆ ಎಂದು ತಿಳಿವ ಪ್ರಾಯ ಅದು. ಆಗಲೇ ಗಡಿಯಾರದ ಪಕ್ಕದಲ್ಲಿ ಇರುವ ತನ್ನ ಅಪ್ಪ ಅಮ್ಮನ ಮದುವೆಯ ಫೋಟೋ, ಅದಾದ ಮೇಲೆ ಅಕ್ಕ, ತಮ್ಮ, ಅಪ್ಪ, ಅಮ್ಮ ಮತ್ತು ಪೂಜ ಇರೋ ಗ್ರೂಪ್ ಫೋಟೊ. ಪ್ರತಿದಿನ ಗಂಟೆ ನೋಡುವಾಗ ಅದನ್ನು ನೋಡಿ ಒಬ್ಬೊಬ್ಬರನ್ನೇ ಗುರುತಿಸಿ ಮೆಲ್ಲನೆ ಹೆಸರಿಟ್ಟು ಕರೆವ ಆಟ ಆಡುತ್ತಿದ್ದಳು. ಮತ್ತೊಮ್ಮೆ ಗಂಟೆ ನೋಡಿ ಸ್ವಲ್ಪ ಪಕ್ಕಕ್ಕೆ ಸರಿದ ದೊಡ್ಡ ಮುಳ್ಳನ್ನು ನೋಡಿ ಓಳಹೋಗಿ ಅಮ್ಮನಿಗೆ ಗಂಟೆಗೊಮ್ಮೆ ಗಂಟೆ ಹೇಳುತ್ತಿದ್ದಳು. ಇನ್ನು ದೊಡ್ಡ ಮುಳ್ಳು ಹನ್ನೊಂದನ್ನು ದಾಟಿ ಹನ್ನೆರಡಕ್ಕೆ ತಲುಪದೇ ಇರುತ್ತಿದ್ದರೆ ಗೊಂದಲಕ್ಕೀಡಾಗುತ್ತಿದ್ದಳು.
ಇನ್ನೇನು ಸರಿಯಾಗಿ ಗಂಟೆ ನೋಡಲು ತಿಳಿಯುವ ಪ್ರಾಯ ತುಂಬಿತು. ಆಗ ಅಕ್ಕನ ಕೈಯ ಬಂಧಿಯಾಗಿ ಶಾಲೆಗೆ ಹೆಜ್ಜೆ ಹಾಕಲಾರಂಭಿಸುತ್ತಾಳೆ. ಕ್ರಮೇಣ ಶಾಲೆಗೆ ಹೊರಡುವಾಗ ಆರೇಳು ನಿಮಿಷ ತಡ ಆದರೂ ಗಂಟೆ ನೋಡಿಕೊಂಡು ಚುರುಕಾಗುತ್ತಾಳೆ. ವಾರ, ತಿಂಗಳ ಹೆಸರು ಲೆಕ್ಕ ಹಾಕುತ್ತಾಳೆ. ತನಗೀಗ ನಡೆಯುತ್ತಿರುವುದು ಯಾವ ವರ್ಷ ಎಂಬುದನ್ನು ಸುಲಭದಲ್ಲಿ ಲೆಕ್ಕ ಹಾಕಿ ಹದಿನೇಳಾಯ್ತು ಎಂದು ನಾಚುವಷ್ಟು ಬೆಳೆಯುತ್ತಾಳೆ.
ಅದೊಂದು ದಿನ ಸೆಕೆಂಡ್ ಪಿ.ಯು.ಸಿ. ಓದುತ್ತಿದ್ದಾಗ ಹತ್ತನೇ ತರಗತಿಯ ಅಂಕಪಟ್ಟಿಯನ್ನು ಹುಡುಕುತ್ತಿರಬೇಕಾದರೆ ಒಂದು ಹಳೆಯ ಫೋಟೋ ಸಿಕ್ಕಿತು. ಒಂದು ಮಗುವಿನ ಜೊತೆ ತಂದೆ ತಾಯಿಯ ಹಾಗೆ ನಿಂತದ್ದ ಫೋಟೋ ಅದು. ಅಷ್ಟೇ ಆಗಿದ್ದರೆ ಫೋಟೋ ಬದಿಗಿಟ್ಟು ಅಂಕಪಟ್ಟಿಯನ್ನು ಹುಡುಕುವ ಕೆಲಸವನ್ನು ಮಾಡಬಹುದಿತ್ತು. ಆದರೆ ಅದರಲ್ಲಿರುವ ಮಗುವಿನ ಫೋಟೋ ತಾನು ಮೂರು ವರ್ಷದಲ್ಲಿದ್ದಾಗ ಇದ್ದ ಫೋಟೋವನ್ನೇ ಹೋಲುತ್ತಿತ್ತು. ಯಾರಿರಬಹುದು ಮಗು ತನ್ನಂತೆ.....?
ತಕ್ಷಣ ಹದಿನೇಳರ ಮಗಳು ತಂದೆಯ ಬಳಿಬಂದು ಫೋಟೋ ತೋರಿಸಿ ಅಪ್ಪ ಫೋಟೋದಲ್ಲಿರುವ ಮಗು ಯಾರದ್ದು.......! ಸತ್ಯ ಹೇಳು.......! ಫೋಟೋ ನೋಡಿದ ತಂದೆ ತನ್ನ ನಡುಗುತ್ತಿರುವ ಕೈಯಿಂದ ಹಣೆಯ ಬರಹದ ಅಕ್ಷರಗಳನ್ನು ಒದ್ದೆ ಮಾಡಿದ ಬೆವರನ್ನು ಕಷ್ಟಪಟ್ಟು ಒರೆಸಲಾರಂಭಿಸಿದರು. ಅಪರಾಧಿ ಭಾವದಿಂದ ಮಾತಾಡದೆ ನಡುಗಲಾರಂಭಿಸಿದರು. ಕ್ಷಣಮಾತ್ರನೂ ತಡಮಾಡದೆ ಮಗಳ ಕೈಯಲ್ಲಿದ್ದ ಫೋಟೋನ ತಗೊಂಡು ತಪ್ಪಿಸಿಡಲು ಒದ್ದಾಡಿ.... ಅಸಹಾಯಕನಾಗಿ ಎಲ್ಲಿ........! ಎಲ್ಲಿ ಸಿಕ್ತು ನಿಂಗೆ ಫೋಟೊ ...? ಎಂದು ಗದರಿದರು. ಮಗಳು ತಂದೆಯ ವರ್ತನೆ ಕಂಡು ಮಂಕಾದಳು. ಮೆಲ್ಲನೆ ಹೋಗಿ ಅಪ್ಪನ ಅಪ್ಪಿಕೊಂಡಳು. ಏನಾಯ್ತಪ್ಪ ನಾನೇನಾದರು ತಪ್ಪು ಮಾಡಿದ್ನಾ. ಮಗಳು ಹೀಗೆ ಕೇಳಿದಾಗ ಮಗಳ ಹಣೆಗೊಂದು ಮುತ್ತನ್ನಿಟ್ಟು ಇಲ್ಲ ಮಗಳೇ ನಿನ್ನದೇನೂ ತಪ್ಪಿಲ್ಲ. ನೀನೀಗ ಹೋಗಿ ಮಲಗು. ನಾಳೆ ಮಾತಾಡುವ ಎಂದು ವಿಷಯಾಂತರ ಮಾಡಿ ಮಗಳ ಹಣೆ ಸವರುತ್ತಾ ಹಣೆಗೆ ಮತ್ತೊಂದು ಮುತ್ತನಿಟ್ಟು ಬೆನ್ನುತಟ್ಟಿ ಹೋಗೆಂದರು. ದೇಹಕ್ಕಿಂತ ಮನಸ್ಸು ಭಾರ ಆಗಿ ನೆಲಕ್ಕೂರಿದ ಹೆಜ್ಜೆಯನ್ನು ಎತ್ತಲಾರದೆ ಕಾಲನ್ನು ಮೆಲ್ಲನೆ ಜಾರಿಸಿ ನಡೆವ ಪೂಜಾಗೆ ಈಗ ತನ್ನ ಹಣೆಯ ಸವರಿ ಬೆನ್ನು ತಟ್ಟಿದ ಅಪ್ಪನ ಕೈ....., ಮುತ್ತನ್ನಿಟ್ಟ ಎರಡಾಗಲಾರದೆ ಒಂದಾಗಿರುವ ತುಟಿಯ ಬಗ್ಗೆ ಕುತೂಹಳದ ಪ್ರಶ್ನೆ ಹುಟ್ಟತ್ತದೆ.
                 

         ಪ್ರಶ್ನೆ ಹುಟ್ಟಬೇಕು ಉತ್ತರ ಹುಡುಕಬೇಕು. ಸಿಕ್ಕ ಉತ್ತರವನ್ನು ಮತ್ತೆ ಪ್ರಶ್ನಿಸಿ ಹೌದೆಂಬುದರವರೆಗೆ ಉತ್ತರ ಹುಡುಕಬೇಕು. ಆದರೆ ಇಲ್ಲಿ ತಂದೆ ದಿನ ಮೂರಾದರೂ ತಂದೆಯ ತುಟಿ ಎರಡಾಗದೇ ಇದ್ದಾಗ ಮಗಳಿಗೆ ಎಲ್ಲಿಲ್ಲದ ಕುತೂಹಲ, ಫೋಟೋದಲ್ಲಿ ಇರುವವರೆಲ್ಲ ಯಾರು ಹಾಗು ಅದಕ್ಕಿಂತಲೂ ಹೆಚ್ಚಾಗಿ ಫೋಟೋ ನನಗೆ ಸಿಕ್ಕಾಗ ಅಪ್ಪ ಯಾಕೆ ಅಷ್ಟು ವಿಚಲಿತರಾಗಿದ್ದಾರೆ .....? ಹುಟ್ಟಿದ ಪ್ರಶ್ನೆಗೆ ಸಿಗದ ಉತ್ತರ. ಹ್ಹೂಂ..... ಮತ್ತೆ ಅಪ್ಪನಲ್ಲಿ ಅದೇ ಪ್ರಶ್ನೆಯನ್ನು ಕೇಳಿದರೆ ಎಲ್ಲಿ ವಿಚಲಿತರಾಗಿ ಬಿಡುತ್ತಾರೋ ಎಂಬ ಕೊರಗಲ್ಲೇ ಹುಟ್ಟಿದ ಪ್ರಶ್ನೆಗೆ ಉತ್ತರ ಹುಡುಕಲಾರದೆ ಒದ್ದಾಡುತ್ತಿರುವ ಮಗಳನ್ನು ತಂದೆ ಗಮನಿಸುತ್ತಾರೆ. ಅದೊಂದು ದಿನ ಧೈರ್ಯ ಮಾಡಿ ಮಗಳೊಡನೆ ಸತ್ಯಕಥೆ ಹೇಳುವುದಕ್ಕೆ ಮುಂದಾಗುತ್ತಾರೆ. ಮಗಳನ್ನು ಏಕಾಂತಕ್ಕೆ ಕರೆದುಕೊಂಡು ಹೋಗುತ್ತಾರೆ.
ಗೋಡೆಗೆ ಮುಖಮಾಡಿ ಕೂತು ತೊಡೆ ಮೇಲೆ ಮಗಳನ್ನ ಮಲಗಿಸಿಕೊಂಡರು. ಇನ್ನು ಮಾತಿನ ಭಾವ ಕಾಣದಂತ ತನ್ನ ಹಣೆಯನ್ನು ಗೋಡೆಗೊರಗಿಸಿದರು. ಒಣಗಿದ ಗಂಟಲನ್ನು ತೇವ ಮಾಡಲೂ ಆಗದೆ ಒಂದೇ ಉಸಿರಲ್ಲಿ ಇಡೀ ಕಥೆಯನ್ನು ಹೇಳಿ ಬಿಡುವಂತೆ ಶುರುಮಾಡಿದರು. ಮಗಳೆ ಫೋಟೋದಲ್ಲಿ ಇರುವುದು ನನ್ನ ತಮ್ಮ ಮತ್ತು ಅವನ ಹೆಂಡತಿ ಜೊತೆಗೆ ಅವರ ಏಕೈಕ ಮುದ್ದಿನ ಮಗಳು. ಅದೊಂದು  ದಿನ ಕೆಲಸಕ್ಕೆಂದು ಹೊರಟ ತಮ್ಮ ಒಂದು ಅಪಘಾತದಲ್ಲಿ ಸ್ಥಳದಲ್ಲೇ ತೀರಿಕೊಂಡ. ತಮ್ಮನ ಹೆಂಡತಿಗೆ ಸುದ್ದಿ ತಲುಪಿತು. ತನ್ನ ಬದುಕಲ್ಲಿ ಇಷ್ಟರವರಗೆ ತಾನು ಸಂಸಾರ ಮಾಡಿದ್ದು ಅನ್ನುವುದಕ್ಕಿಂತಲೂ ಗಂಡನೆಂಬ ದೇವರ ಜೊತೆಗೆ ಬದುಕಿದ್ದು. ಆದರೆ ಇನ್ನು ದೇವರೇ ಇಲ್ಲ ಎಂದು ಗೊತ್ತಾದ ಕ್ಷಣದಿಂದ ಬದುಕಲ್ಲಿ ಉಸಿರಾಡುವುದೇ ಕಷ್ಟವಾಯಿತು. ಯಾರ ಯಾವ ಸಮಾಧಾನವನ್ನು ಕೇಳಲಾರದಂತೆ ಕಿವಿ ಕಿವುಡಾಯಿತು. ಮಾತು ಮೌನವಾಯ್ತು. ಗಂಡನೆಂಬ ದೇವರೊಡನೆ ಬದುಕಿದ ಫಲವಾಗಿ ಪ್ರಸಾದ ರೂಪವಾಗಿ ಪಡೆದ ಮಗಳ ಮುಖವನ್ನೊಮ್ಮೆ ನೋಡಿ, ತಡಮಾಡದೆ ಅದೇ ಕ್ಷಣ ಗಂಡನೊಡನೆ ಹೊರಟೇ ಬಿಟ್ಟಳು......
ಒಟ್ಟಿಗೆ ಇಬ್ಬರ ಅಂತ್ಯಸಂಸ್ಕಾರವನ್ನು ಮಾಡಿ ಮುಗಿಸಿ ಮಗಳನ್ನು ಹೆಗಲಿಗೇರಿಸಿಕೊಂಡು ಬಂದೆ. ನನಗಾಗ ಒಬ್ಬಳು ಮಗಳಿದ್ದಳು ಜೊತೆಗೆ ಇನ್ನೊಬ್ಬಳಾದಳು. ಅದು ನೀನೇ ಮಗಳೇ.......!
ನಾನು ನಿನ್ನ ಅಪ್ಪನಲ್ಲ ದೊಡ್ಡಪ್ಪ.........!   ಎಂದು ಮಾತು ನಿಲ್ಲಿಸಿ ಬೊಬ್ಬಿಟ್ಟು ಅತ್ತರು. ಗೋಡೆಗೊರಿದ ಅದೇ ಹಣೆಯ ಮುಖದಲ್ಲಿದ್ದ ಕಣ್ಣುಗಳಿಂದ ಇಳಿದ ನೀರು ತೊಡೆ ಮೇಲೆ ಮಲಗಿದ್ದ ಮಗಳ ತೆರೆದ ಕಣ್ಣುಗಳಿಂದ ಇಳಿವ ಕಣ್ಣೀರಿನ ಜೊತೆ ಬೆರೆಸಿ ಹರಿದುಹೋಯ್ತು.

ಅಮ್ಮ ಅಪ್ಪನನ್ನು ನೋಡಿದ ನೆನಪಿಲ್ಲ ಆದರೆ ಸಾಕುತ್ತಿರುವ ಅಪ್ಪ ಅಮ್ಮ ಒಂದು ಕ್ಷಣಾನೂ ನನಗೆ ಅನಾಥ ಪ್ರಜ್ಣೆಕಾಡುವುದಕ್ಕೆ ಬಿಡಲಿಲ್ಲ. ಪರಕೀಯ ಭಾವ ಕಾಡಲೇ ಇಲ್ಲ. ಎಷ್ಟರವರೆಗೆಂದರೆ ಮೂರು ವರ್ಷದ ಮಗು ಅಪ್ಪ ಅಮ್ಮನನ್ನು ಕಳೆದುಕೊಂಡ ಸತ್ಯ ಕಥೆಯನ್ನು ಬದುಕು ಪೂರ್ತಿ ಮುಚ್ಚಿಟ್ಟು ನನಗೆ ನೋವೇ ಬರದ ಹಾಗೆ ನೋಡಿಕೊಳ್ಳುವ ನಿರ್ಧಾರ ಮಾಡಿದ್ದರು. ಅದಕ್ಕಿಂತಲೂ ಒಂದಂಶ ಹೆಚ್ಚಾಗಿ ಅವರ ಇಬ್ಬರು ಮಕ್ಕಳಿಗಿಂತಲೂ ಹೆಚ್ಚಾಗಿ ನನ್ನನ್ನೇ ಮುದ್ದು ಮಾಡಿದ ಕ್ಷಣಗಳೇ ನೆನಪಿಗೆ ಬರುತ್ತದೆ.
        ಆದರೂ ತನ್ನದಲ್ಲದ ಸಂಬಂಧ ತನ್ನದೇ ಎಂದು ಸಾಕಿದ ಜೀವಗಳಿಂದು ತನ್ನದಲ್ಲವು ಎಂಬ ಸತ್ಯ ಗೊತ್ತಾದ ಮೇಲೆ ಇಲ್ಲ ಇದು ತನ್ನದೇ ಎಂಬ ಭಾವದಿಂದ ಬದುಕುವ ಪ್ರತಿಕ್ಷಣದಲ್ಲೂ ಒಂದು ಎಚ್ಚರ ಇದೆ. ಇವರು ನನ್ನ ಅಪ್ಪ ಅಲ್ಲ ದೊಡ್ಡಪ್ಪ ಹೌದು ಖಂಡಿತಾ....., ಇವರು ನನ್ನ ಅಮ್ಮ ಅಲ್ಲ ದೊಡ್ಡಮ್ಮ ಹೌದು ಖಂಡಿತಾ ಹೌದು..... ಅಪ್ಪ ಅಮ್ಮ ಎಂದು ನಂಬಿದ್ದ ಸಂಬಂಧದಲ್ಲಿ ಇಂದೀಗ "ದೊಡ್ಡ" ಎಂಬ ಪದವೊಂದು ಬೆರೆತು ಹೋಯ್ತಲ್ಲಾ......! ಹೌದು ಇದು ಖಂಡಿತಾ ಚಿಕ್ಕದಲ್ಲ ದೊಡ್ಡದೇ ಆದರೂ ಅವರೆಂದೂ ದೊಡ್ಡತನವನ್ನು ಪ್ರದರ್ಶಿಸಿದವರಲ್ಲ. ನನಗಿವರು ಅಪ್ಪ ಅಮ್ಮ ಅಷ್ಟೇ. ನನ್ನೀ ದೇವರುಗಳಿಗೆ ಬೇರೆ ಹೆಸರಲ್ಲಿ ಅರ್ಚನೆ ಮಾಡಲಾರೆ. ಪೂಜಾತ್ಮಗಳಿಗೆ ನನ್ನ ಬದುಕಿನ ಸಾಧನೆಯನ್ನೇ ಕಾಣಿಕೆಯನ್ನಾಗಿಸುವೆ ಎಂದು ಹೆಮ್ಮೆಯಿಂದ ಬದುಕ ಕಟ್ಟಲಾರಂಭಿಸಿದಳು ಪೂಜಾ.
                     


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment