ನನ್ನ ಬದುಕಿನಲ್ಲಿ ಮೊತ್ತ ಮೊದಲ ಬಾರಿಗೆ ಪ್ರಶ್ನೆ ಹುಟ್ಟಿಸಿದ ಗುರುವೆಂದರೆ ಇದೇ ರೇಡಿಯೋ.
ನನ್ನ ಬಾಲ್ಯದ ಬದುಕಿನಲ್ಲಿ ಭಾವನೆಗಳನ್ನು ತುಂಬಿದ ಗುರು ಈ ರೇಡಿಯೋ. ಒಂದು ಸಲ
ರೇಡಿಯೋ ಬಿಚ್ಚಿ ಅದರ ಒಳಗೆ ಹುಡುಕಿದ್ದೆ ಅದರಲ್ಲಿ ಮಾತಾಡುವವರು ಎಲ್ಲಿ ಕೂತಿರುತ್ತಾರೆ ಎಂದು. ಆಕಾಶವಾಣಿ ಎಂದು ಹೇಳುತ್ತಿದ್ದಾಗ ಆಕಾಶದಲ್ಲಿ ಹುಡುಕುತ್ತಿದ್ದೆ. ಕಾಣದ ಲೋಕದ ಸ್ವರದ ಬಗ್ಗೆ ನನ್ನದೇ ಕಲ್ಪನೆಯ ಲೋಕವನ್ನು ಸೃಷ್ಟಿ ಮಾಡುತ್ತಿದ್ದೆ.
ಗೋಡೆಯಲ್ಲಿ ನೇತಾಡುತ್ತಿದ್ದ ಗಡಿಯಾರವನ್ನು ನೋಡುತ್ತಿದ್ದದ್ದು ರೇಡಿಯೋ ಮಾತಾಡದೆ ಇದ್ದಾಗ ಮಾತ್ರ.
ಬೆಳಗ್ಗೆ ಪ್ರದೇಶ ಸಮಾಚಾರ ಕೇಳಿ ತಿಂಡಿ. ವಾರ್ತೆ ಮುಗಿದು ಚಿತ್ರಗೀತೆ ಶುರುವಾಗುವಾಗ ಬಚ್ಚಲು ಮನೆಯೊಳಗೆ ಸೇರಿ ಚಿತ್ರಗೀತೆಯೊಂದಿಗೆ ಸ್ನಾನ. ಚಿತ್ರಗೀತೆ ಮುಗಿದು ಹಿಂದಿ ಇಂಗ್ಲಿಷ್ ವಾರ್ತೆ ಶುರುವಾಗುವಾಗ ರೇಡಿಯೋ ಬಂದ್.
ಹೆಗಲಮೇಲೆ ಶಾಲೆ ಬ್ಯಾಗ್ ಬಂದು ಹೊರಡು ಎನ್ನುತ್ತಿತ್ತು. ಹೀಗೆ ನಮ್ಮ ಶಿಸ್ತಿನ ದಿನಚರಿ ಸಾಗುತ್ತಿತ್ತು.
"ಇತೀ ಸಂಸ್ಕೃತ ವಾರ್ತಾಃ ಶೂಯಂತಾಂ ಪ್ರಾವಚಿಕಃ ಬಲದೇವಾನಂದ ಸಾಗರಹ"
ಇದು ನಾವು ಬಾಯಿಪಾಠ ಮಾಡಿಕೊಂಡ ಸಂಸ್ಕೃತ ವಾಖ್ಯ.
ಇನ್ನು ನಮ್ಮ ಆಕಾಶವಾಣಿ ನಿಲಯದಿಂದ ಪ್ರಸಾರ ಆಗುತ್ತಿದ್ದ ಯುವವಾಣಿ, ವನಿತಾವಾಣಿ, ಕೃಷಿರಂಗ, ಹಲೋ ಆಕಾಶವಾಣಿ. ಆಗ ಟಿ.ವಿ. ಇಲ್ಲದ ನಮ್ಮೂರಲ್ಲಿ ಆದಿತ್ಯವಾರ ಸಂಜೆ ಬರುತ್ತಿದ್ದ ಚಲಚಿತ್ರ ಧ್ವನಿ ಮುದ್ರಿಕೆ ಪ್ರಸಾರ. ಇವೆಲ್ಲಾ ಕಾಣದ ಲೋಕವನ್ನು ನಮ್ಮ ಮನಸ್ಸಿನಲ್ಲೇ ಕಟ್ಟಿಕೊಂಡು ಬೆಳದವರು ನಾವು. ನಮ್ಮ ಕಲ್ಪನೆ ದೃಶ್ಯ ಅಂದರೆ ಅದು ನಮ್ಮದೇ ಸ್ವಂತಲೋಕ ಇರುತ್ತದೆ. ಇಲ್ಲೆ ಹುಟ್ಟಿದ್ದು ಭಾವನೆ ಚಿಗುರು. ಯುವವಾಣಿಯಲ್ಲಿ ಕಥೆ ಓದಿ ಹೇಳುತ್ತಿದ್ದಾಗ ಅಲ್ಲಿ ಬರುವ ಪಾತ್ರಗಳ ಭಾವಕ್ಕೆ ತಕ್ಕಂತೆ ನಾವೆ ಬಟ್ಟೆ ತೊಡುತ್ತಿದ್ದೆವು. ಸನ್ನಿವೇಶಕ್ಕೆ ತಕ್ಕಂತೆ ದೃಶ್ಯ ಕಟ್ಟುತ್ತಿದ್ದೆವು. ನಾವು ಹೀಗೆ ಒಂದು ಕಥೆ ಬರೆಯಬೇಕು ಎಂದುಕೊಳ್ಳುತ್ತಿದ್ದೆವು.
ಇವತ್ತು ನಾನು ಭಾವನಾತ್ಮಕವಾಗಿ ನಾಲ್ಕು ಅಕ್ಷರ ಬರೆಯುತ್ತಿದ್ದೇನೆ ಎಂದರೆ ಅದರ ಗುರು ಈ ರೇಡಿಯೋ.
ಈ ರೇಡಿಯೋ ಜೊತೆಗೊಂದು ಭಾವನಾತ್ಮಕ ಸಂಬಂಧ ಇದೆ. ಮನೆಯಲ್ಲಿದ್ದ ರೇಡಿಯೋ ಹಾಳಾಗಿತ್ತು. ಶಿಕ್ಷಕರ ದಿನವಾದ ಇಂದು 550 ರೂಪಾಯಿ ಕೊಟ್ಟು ಗುರುವನ್ನು ಮನೆಗೆ ಕರೆದು ತಂದು ನೆಲೆಯಾಗಿಸಿದೆ.
ಆಗ ಊರಲ್ಲಿ ಇನ್ನೂ ಕರೆಂಟ್ ಕಂಭಗಳು ಎದ್ದು ನಿಂತಿರಲಿಲ್ಲ. ಆಗ ಈ ರೇಡಿಯೋಗೆ ಬ್ಯಾಟರಿ ಹಾಕುತ್ತಿದ್ದರು. ಒಂದು ತಿಂಗಳು ಕಳೆದು ಒಂದು ವಾರ ಬರುತ್ತಿತ್ತು. ಆ ಮೇಲೆ ವೀಕ್ ಆದ ಬ್ಯಾಟರಿ ಚೇಂಜ್ ಮಾಡುತ್ತಿದ್ದರು. ಆಗ ಈ ಹಳೆಯ ವೀಕ್ ಬ್ಯಾಟರಿ ನಮ್ಮ ಆಟದ ಲ್ವಾರಿ, ಟೆಂಪೋ, ಬಸ್ಸು ಮಾಡಲು ಚಕ್ರವಾಗುತ್ತಿತ್ತು. ಕೆಲವು ದಿನಗಳ ನಂತರ ಈ ವೀಕ್ ಬ್ಯಾಟರಿ ಲೀಕ್ ಆಗುತ್ತಿತ್ತು ಆಗ ಅದನ್ನು ತಕ್ಷಣ ಅಮ್ಮನಿಗೆ ಒಪ್ಪಿಸಬೇಕಿತ್ತು. ಬ್ಯಾಟರಿಯ ಒಳಗೆ ಹೊಳೆವ ಇದ್ದಿಲು ಇರುತ್ತಿತ್ತು ಅದನ್ನು ಅಮ್ಮ ಗುದ್ದಿ ತೆಗೆದು ಸೆಗಣಿಯ ಜೊತೆಗೆ ಬೆರಸಿ ಮನೆಯೊಳಗಿನ ನೆಲಕ್ಕೆ ಸಾರಿದರೆ ಈಗಿರುವ ಮಾರ್ಬಲ್ ನೆಲಕ್ಕಿಂತ ಹಿತವಾಗಿ ಹೊಳೆಯುತ್ತಿತ್ತು.
ಆದರೆ ಇಂದು ತಂದ ರೇಡಿಯೋಗೆ ಬ್ಯಾಟರಿ ಬೇಕಾಗಿಲ್ಲ ಅಂದು ಸ್ವಂತ ಮನೆಯಲ್ಲಿಲ್ಲದ ಕರೆಂಟ್, ಇವತ್ತು ರೆಂಟ್ ಕಟ್ಟುವ ಮನೆಯಲ್ಲೂ ಕರೆಂಟಿದೆ. ನಿಮ್ಮ ಹಳೇಯ ನೋಕಿಯ ಮೊಬೈಲ್ ಫೋನಿನ ದೊಡ್ಡ ಪಿನ್ ಚಾರ್ಜರ್ ನಿಂದ ರೇಡಿಯೋ ಕೆಲಸ ಮಾಡುತ್ತದೆ. ಇದು ನಾನೆ ಕಂಡುಕೊಂಡಿದ್ದು. ಅಧಿಕಪ್ರಸಂಗ ಸಂಶೋಧನೆಯಲ್ಲಿ ಔಟ್ ಪುಟ್ ಇನ್ ಪುಟ್ ಸ್ಟಡಿ ಮಾಡಿ ಕನೆಕ್ಟ್ ಮಾಡಿದಾಗ ವರ್ಕ್ ಆದಾಗ ಅಂದು ಮಾರ್ಕೋನಿಗೆ ಆದ ಸಂತೋಷ ಇಂದು ನನಗಾಯ್ತು.
ನೆನಪಿರಬಹುದು ನಿಮಗೂ ಮನೆಯಲ್ಲಿ ಗೋಡೆಗೊಂದು ರೇಡಿಯೋ ಸ್ಟಾಂಡ್ ಇರುತ್ತಿತ್ತು. ಅದೇ ಅವತ್ತು ಶ್ರೀಮಂತಿಕೆಯ ಪ್ರತಿನಿಧಿಯಾಗಿ ಮೆರೆಯುತ್ತಿತ್ತು. ಅದಕ್ಕೊಂದು ಚಿಲಕ, ಆ ಚಿಲಕಕ್ಕೊಂದು ಬೀಗ. ಮನೆಯ ಹಿರಿಯ ಯಜಮಾನನ ಸೊಂಟದ ನೂಲಿನಲ್ಲಿ ಅಥವಾ ಜನಿವಾರದಲ್ಲಿ ಆ ಬೀಗದ ಕೀ. ಪ್ರತಿದಿನ ರೇಡಿಯೋ ಬಂದ್ ಮಾಡಿದ ಮೇಲೆ ಬೀಗ ಹಾಕಿ ಆಗ ಬೀಗದಲ್ಲಿ ತನ್ನ ದೇಹದ ಸ್ವಲ್ಪ ಭಾರವನ್ನು ಹಾಕಿ ನೇತಾಡಿ ಬೀಗ ಬಿದ್ದಿದೆ ಎಂದು ಖಚಿತಪಡಿಸಿಕೊಂಡೇ ಮುಂದಡಿ ಇಡುತ್ತಿದ್ದರು.
ಹೀಗೆ ರೇಡಿಯೋ ಜೊತೆಗೆ ಬೆಳೆದ ನಾವು ಕಲಿತದ್ದು ಬಹಳಷ್ಟಿದೆ. ಸಮಯದ ಶಿಸ್ತು, ಸಂಗೀತ ಸಂಸ್ಕಾರ, ಕೃಷಿಮಾಹಿತಿ, ಆರೋಗ್ಯ ಮಾಹಿತಿ. ಕಥೆ ಕೇಳಿದಾಗ ಬರೆವ ಹುಮ್ಮಸ್ಸು. ಅದಕ್ಕಿಂತಲೂ ಹೆಚ್ಚಾಗಿ ಬಾಲ್ಯದಲ್ಲೇ ವಾರ್ತೆಯ ಮೂಲಕ ರಾಷ್ಟ್ರೀಯ ಸುದ್ದಿ, ಪ್ರದೇಶ ಸಮಾಚಾರದ ಮೂಲಕ ರಾಜ್ಯ ಸುದ್ದಿ ತಿಳಿದುಕೊಳ್ಳುತ್ತಿದ್ದೆವು. ಮೊದಲ ದಿವಸ ಹವಾಮಾನ ವರದಿ ಮುನ್ಸೂಚನೆ ಕೇಳಿ ಮರುದಿವಸ ಬರಲಿರುವ ಮಳೆಯ ಬಗ್ಗೆ ಗೆಳಯರಿಗೆ ಭವಿಷ್ಯ ಹೇಳುತ್ತಿದ್ದೆವು.
ಹೀಗೆ ರೇಡಿಯೋದಿಂದ ಬದುಕಲ್ಲಿ ಕಲಿತ ಪಾಠ ಇವತ್ತು ರೇಡಿಯೋವನ್ನು ಬದುಕಿನ ಗುರುವೆಂದು ಭಾವನಾತ್ಮಕವಾಗಿ ಹೆಮ್ಮೆಯಿಂದ ಗೌರವಿಸುವಂತೆ ಮಾಡಿದೆ. ಶಿಕ್ಷಕರ ದಿನವಾದ ಇಂದು ಮನದ ಗುರು ರೇಡಿಯೋಗೆ ನಮೋ ನಮಃ.
ಆದರೊಂದು ಬೇಜಾರೆಂದರೆ ಕರ್ನಾಟಕದ ಎಲ್ಲಾ ಆಕಾಶವಾಣಿ ಇಂದು ಎಫ್. ಎಮ್ ನಲ್ಲಿ ಪ್ರಸಾರ ಆಗುತ್ತಿದೆ ಆದರೆ ಬೆಂಗಳೂರು ಆಕಾಶವಾಣಿ ಒಂದು ಮಾತ್ರ ಇಂದಿಗೂ ಎಫ್.ಎಮ್ ನಲ್ಲಿ ಪ್ರಸಾರ ಆಗುತ್ತಿಲ್ಲ. ಇದರಿಂದಾಗಿ ರೇಡಿಯೋ ಕಾರ್ಯಕ್ರಮಗಳನ್ನು ತುಂಬಾನೇ ಮಿಸ್ ಮಾಡಿಕೊಳ್ಳುತ್ತಾ ಇದ್ದೇವೆ.
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:
Post a Comment