ತಿಳಿಸಿದಂತೆ ಪರಿಹಾರಾರ್ಥವಾಗಿ ಬೆಳಗ್ಗೆ ಎದ್ದ ಹಕ್ಕಿ, ಭೂಮಿಯನ್ನ ಮುಟ್ಟುವ ಮುನ್ನ ನಿನ್ನ ಮಂಡೂರಿನಲ್ಲಿರುವ ಕಸದ ರಾಶಿಯಿಂದ ಒಂದು ಬುಟ್ಟಿ ಕಸವನ್ನು ಮಂಡೆಯಲ್ಲಿ ಹೊತ್ತುಕೊಂಡು ಬೆಂಗಳೂರಿನ ಮಹಾನಗರ ಪಾಲಿಕೆಯ ಆವರಣದಲ್ಲಿ ಇರುವ ಕಸಬೇಸ್ವರ ದೇವರಿಗೆ ಸಮರ್ಪಣಾ ಯಾಮಿ ಸ್ವಾಹಾ.... ಮಾಡು, ಆಮೇಲೆ ಅದರಿಂದ ಒಂಭತ್ತು ಹಿಡಿ ಕಸ ತಗೊಂಡು ಪ್ರಸಾದ ರೂಪವಾಗಿ ನಿನ್ನ ಗೆಳೆಯರಿಗೆ ಹಂಚಬೇಕು. ಹೀಗೆ ಮಾಡುವುದರಿಂದ ನಿನ್ನ ಜಾತಕದಲ್ಲಿರುವ ಕಸ ದೋಷ ಪರಿಹಾರವಾಗಿ ಇನ್ನು ಆರೇ ತಿಂಗಳೊಳಗೆ ನಿನಗೆ ಅದೇ ಹುಡುಗಿ ಜೊತೆ ಕಳಂಕ ರಹಿತ ಕಂಕಣ ಭಾಗ್ಯ ಬರಲಿದೆ ಎಂದು.
ಮೂರು ದಿನ ನಂತರ ಒಂದು ಮೆಸ್ಸೇಜು ಬಂತು ನನ್ನ ಬದುಕಿನ ಪುಣ್ಯಕಾರ್ಯಕ್ಕೆ ಸಹಕರಿಸಿದ ಓ ಪಾಪಿ ಗೆಳೆಯನೆ ದಯಮಾಡಿ ಮಂಡೂರಿನಲ್ಲಿರುವ ನಮ್ಮ ಮನೆಗೆ ಬಂದು ಒಂಭತ್ತರ ಒಂದು ಭಾಗದ ಪ್ರಸಾದ ಸ್ವೀಕರಿಸಿ ಪುಣ್ಯಾತ್ಮನಾಗಬೇಕಾಗಿ ವಿನಂತಿ. ಸಲಹೆ ಕೊಟ್ಟಿದ್ದಕ್ಕೆ ಕೊಟ್ನಲ್ಲಪ್ಪ ಕೈಗೆ.... ಪ್ರಸಾದ...! ಹೊರಟೆ ಮಂಡೂರಿಗೆ ನಾವೆ ಪೂಜಿಸಿ ವಿಸರ್ಜಿಸಿದ ಪ್ರಸಾದ ಸ್ವೀಕರಿಸಲು. ಮನೆ ತಲುಪಿದೆ ಪ್ರಸಾದ ಸ್ವೀಕರಿಸಿ ಊಟವಾದ ನಂತರ ಮನೆಯೆದುರು ಜಗಲಿ ಮೇಲೆ ಕೂತಾಗ ಮೂಗಿನೊಳಗೊಂದು ಸುಂಯ್ಯನೇ ಕಿಕ್ಕಿನ ವಾಸನೆ ಪ್ರವೇಶ ಮಾಡಿತು. ಕಣ್ಣಲ್ಲೇ ಕೇಳಿದಕ್ಕೆ ಸಿಕ್ಕ ಉತ್ತರ ಇಲ್ಲೇ ಪಕ್ಕದಲ್ಲಿದೆ ಎಂದವನೆ ಅನತಿ ದೂರ ಕರಕೊಂಡು ಹೋಗಿ ರಾಶಿ ಕಸದ ಪರ್ವತ ತೋರಿಸಿದ. ಕಾಡಲಾರಂಭಿಸಿತು ಕಾಡೇ ಇಲ್ಲದೂರಿನಲ್ಲಿ ಈ ಕಸದ ಪರ್ವತನೆ ಬಾ ಅನ್ನುತಿತ್ತು. ನಿದ್ದೆ ಹೋಗು ಅನ್ನುತಿತ್ತು. ಗೆಳೆಯನಿಗೆ ಒಂದು ಮಾತು ಹೇಳಿ ವ್ಯೆರಾಗ್ಯದರಸನಂತೆ ಒಬ್ಬನೇ ನಡೆಯಲಾಂಭಿಸಿದೆ. ಬಂದು ತಲುಪಿದೆ.
ಆ ಹ್ಹಾ.. ಅತ್ತ ಇತ್ತ ಎತ್ತ ಸುತ್ತ ಕತ್ತೆತ್ತಿ ನೋಡಿದರತ್ತ ಕಸದ ರಾಶಿ. ರಾಶಿ ಕಸದ ನಡುವೆ ನಾನ್ಯಾರು?
ಸತ್ತ ಮೇಲೆ ನಿರ್ಧಾರ ಆಗುವ ಸ್ವರ್ಗ ನರಕಗಳ ಬಗ್ಗೆ ಒಂದು ತರ ವಿಶೇಷ ಆಕರ್ಷಣೆ, ಅನಾಥ ಪ್ರಶ್ನೆಗಳು ಇರುತ್ತವೆ. ನಮ್ಮ ಪೂರ್ವಜರು ಸ್ವರ್ಗ ಅಥವಾ ನರಕ ಈ ಎರಡರಲ್ಲೆಲ್ಲಾದರೂ ನಮಗೆ ಮತ್ತೆ ಸಿಗ್ತಾರ? ನಾವು ಅವರನ್ನು ಮತ್ತೆ ಮಾತಾಡಿಸಲಿಕ್ಕೆ ಸಾಧ್ಯನ? ಅಪ್ಪಿಕೊಳ್ಳುವುದಕ್ಕೆ ಸಾಧ್ಯನ? ಒಂದು ವೇಳೆ ಅಪ್ಪಿಕೊಂಡರೆ ಸ್ಪರ್ಶ ಸುಖ ಸಿಕ್ಕೀತ? ಎಂಬಂಥಃ ಸುಮಾರು ಪ್ರಶ್ನೆಗಳಲ್ಲಿ ಕೆಲವಕ್ಕೆ ಮಂಡೂರಿನಲ್ಲಿ ಉತ್ತರ ಸಿಕ್ಕಿತು. ಹೌದು ಮಂಡೂರಿಗೆ ಬಂದವನೆ ಒಂದು ಸಲ ಕಸದ ಸಾಮ್ರಾಜ್ಯದ ಮಧ್ಯೆ ಮಂಡಿಯೂರಿ ನಿಂತು ನೋಡಿದಾಗ, ಇಡೀ ಸಾಮ್ರಾಜ್ಯದಲ್ಲಿ ನಾನೊಬ್ಬನೆ ಅನಾಥ ರಾಜಕುಮಾರನಾದೆ. ಕಸದ ಸರ್ವ ಸಾಮ್ರಜ್ಯದ ಬಗ್ಗೆ ಒಂದು ತೆರನಾದ ಸೆಳೆತ ಶುರುವಾಯ್ತು, ಈ ಕಸದಲ್ಲೂ ಒಂದು ತರದ ಕಿಕ್ಕ್ ಇದೆ ಪ್ರತಿ ಕಸದಮೇಲು ಅಧಿಕಾರದ ವ್ಯಾಮೋಹ ಹುಟ್ಟಿತು. ಇಲ್ಲಿರುವ ರಾಶಿ ಕಸದಲ್ಲಿ ನಮ್ಮ ಮನೆಯಿಂದ ಬಂದಿರುವ ಎಷ್ಟೋ ಕಸ ಇರಬಹುದಲ್ವಾ. ನಮ್ಮ ಮನೆಯ ಕಸ ಅಂದರೆ ಅದು ನಮ್ಮ ಪೂರ್ವಜರ ಹಾಗೆ. ಈಗ ನಾನಿರುವ ಜಾಗ ಸ್ವರ್ಗನೋ ನರಕನೋ ಗೊತ್ತಾಗುತ್ತಿಲ್ಲ. ಆದರೆ ನಮ್ಮ ಮನೆಯೆಂಬ ಇಹಲೋಕ ತ್ಯಜಿಸಿದ ಕಸಗಳು ಇಲ್ಲಿವೆ. ಅಲ್ಲ ಅಲ್ಲ ಇದು ಸ್ವರ್ಗನೂ ಅಲ್ಲ ನರಕನೂ ಅಲ್ಲ ಇದು ಯಮಲೋಕ. ಇಲ್ಲಿ ಸ್ವರ್ಗ ನರಕ ನಿರ್ಧಾರ ಆಗಬೇಕಾದ ಜಾಗ ಆದರೆ ಇಲ್ಲಿ ಯಮ ನಿಯಮ ತಪ್ಪಿದ್ದಾನೆ. ಪುಣ್ಯಾತ್ಮ-ಪಾಪಾತ್ಮಗಳಂತೆ ವರ್ಗೀಕರಿಸಿ, ಪುಣ್ಯಾತ್ಮಗಳನ್ನು ಸ್ವರ್ಗಕ್ಕೆ ಕಳಿಸಿ ಪಾಪಾತ್ಮಗಳನ್ನು ನರಕಕ್ಕೆ ಅರ್ಥಾತ್ ಪುನರ್ ಜನ್ಮಕ್ಕೆ ಕಳುಹಿಸಬೇಕು. ಇದು ಯಮನ ನಿಯಮ. ಅಲ್ಲಿ ಪುಣ್ಯಾತ್ಮ-ಪಾಪಾತ್ಮ ಗಳಂತೆ ಇಲ್ಲಿ ಹಸಿ-ಕಸ; ಒಣ-ಕಸಗಳಾಗಿ ವಿಂಗಡಿಸಬೇಕು. ಹಸಿ ಕಸ ಅಂದರೆ ಪುಣ್ಯಾತ್ಮಗಳು ಇವುಗಳು ಗೊಬ್ಬರ ರೂಪದಲ್ಲಿ ನೇರ ಸ್ವರ್ಗಕ್ಕೆ. ಇನ್ನು ಒಣ ಕಸ ಪಾಪಾತ್ಮಗಳು ಪುನರ್ಜನ್ಮದ ಮೂಲಕ ಮರುಬಳಕೆಗೆ. ಆದರೆ ಇಲ್ಲಿನ ಪಾಪಿ ಯಮಧರ್ಮ ಅಧಿಕಾರಿ ಇದ್ಯಾವ ಕೆಲಸನೂ ಮಾಡದೆ ಇರುವ ಪರಿಣಾಮವಾಗಿ ಪುಣ್ಯಾತ್ಮ-ಪಾಪತ್ಮಗಳು ಒಟ್ಟಾರೆಯಾಗಿ ಒಟ್ಟಾಗಿ ಸಮ್ಮಿಶ್ರ ಸರಕಾರದ ಬದುಕು ನಡೆಸುತ್ತಿದೆ.
ಹುಡುಕುವುದಕ್ಕೆ ಶುರು ಮಾಡಿದೆ. ಹೈಸ್ಕೂಲಿನಲ್ಲಿ ಮಾತಿಲ್ಲದೆ ಹುಟ್ಟಿದ ಪ್ರೀತಿಯೊಂದು ಕೊನೆಗೂ ಮಾತಾಡಲು ಧೈರ್ಯ ಬರದೆ ಸಂಪರ್ಕ ವ್ಯವಸ್ಥೆ ಇಲ್ಲದೆ ಅನಾಥವಾದ ಪ್ರೇಮಿಯೊಬ್ಬ ತನ್ನ ಪೂಜನೀಯ ಪ್ರೇಮಿಯನ್ನು ತಾನು ಮದುವೆಯಾದ ಮೇಲು ಹುಡುಕುವಂತೆ ಹುಡುಕಿದೆ. ನಮ್ಮ ಮನೆಯ ಯಾವುದಾರೊಂದು ಕಸ ಸಿಕ್ಕೀತಾ ಎಂದು.........!
ಭೂಮಿಯ ಗುರತ್ವಾಕರ್ಷಣಾ ಬಲಕ್ಕೆ ಬಲಿಯಾಗಿ ತನ್ನ ಸ್ವಂತ ಸಾಮರ್ಥ್ಯದಿಂದ ಎದ್ದು ನಿಲ್ಲಲಾರದ ಸ್ಥಿತಿಯಲ್ಲಿ ಮುಚ್ಚಳವೆಂಬ ಶಿರವಿಲ್ಲದ ಬಾಟಲೊಂದು ಉತ್ತರದಿಕ್ಕಿಗೆ ತಲೆ ಹಾಕಿ ಮಲಗಿರುವುದ ನಾ ಕಂಡೆ..! ಈಗ ನನಗೆ ನೆನಪಿಗೆ ಬಂದಿದ್ದು ಪಾರ್ವತಿ ಸೃಷ್ಟಿಸಿದ ಗಣಪತಿ. ಶಿವನ ಕೋಪಕ್ಕೆ ತುತ್ತಾಗಿ ಗಣಪತಿಯ ಶಿರ ಛೇದಿಸಲ್ಪಟ್ಟಾಗ ಸತ್ಯಾಂಶ ತಿಳಿದ ಮೇಲೆ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ ಯಾವುದೋ ಒಂದು ಜೀವದ ತಲೆ ತಗೊಂಡು ಬನ್ನಿ ಎಂದು ಅಪ್ಪನೇ ಅಪ್ಪಣೆ ಮಾಡಿದ ಕಾರಣದಿಂದಾಗಿ ಮುಂದೆ ಗಣಪತಿಗೆ ಆನೆ ಮುಖ ಆದ ಪ್ರಕರಣ. ಈಗ ಇಲ್ಲಿ ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ದ ಮುಚ್ಚಳವಿಲ್ಲದ ಬಾಟಲೊಂದು ಯಾಕೋ ನನ್ನನ್ನು ಜನ್ಮ ಜನ್ಮಾಂತರ ಸಂಬಂಧ ಹಾಗೆ ಸೆಳೆಯಲಾರಂಬಿಸಿತು. ಭಾವುಕನಾದೆ. ಅದಕ್ಕೆ ಕಾರಣ ಈ ಬಾಟಲ್ ಕೆಲ ಕಾಲ ನನ್ನ ಮನೆಯಲ್ಲಿ ಬದುಕಿತ್ತೇನೋ ಎಂದು. ಕೈಗೆತ್ತಿಕೊಂಡೆ ಮೆಲ್ಲನೆ ಮೂಸಿ ನೋಡಿದೆ. ಖಚಿತ ಪಡಿಸಿಕೊಂಡೆ, ಹೋ, ಕೊನೆಗೂ ಸಿಕ್ಕಿತಲ್ಲಾ ನನ್ನದೆ ಮನೆಯ ಆತ್ಮೀಯ ಕಸ. ಬಹುದಿನದಿಂದ ಅಭಿಮಾನ ಮತ್ತು ಪಶ್ಚಾತಾಪದ ಭಾವಗಳು ಏಕ ಕಾಲದಲ್ಲಿ ಈ ಬಾಟಲ್ ಬಗ್ಗೆ ಇತ್ತು. ಅದೆಂದರೆ ಎರಡು ವಿಭಿನ್ನ ರೀತಿಯ ನಿರ್ಧಾರಗಳು ಈ ಬಾಟಲಿಂದನೆ ಆಗಿರೊದು. ನನ್ನ ಗೆಳೆಯನೊಬ್ಬ ತನ್ನ ಜೀವನದಲ್ಲಿ ಇನ್ನು ಮುಂದೆ ಕುಡಿಯುವುದಿಲ್ಲ ಇದೇ ಕೊನೆಯ ಬಾಟಲ್ ಎಂದು ಕಠಿಣ ಪ್ರಮಾಣ ಮಾಡಿದ ನೆನಪಿಗೆಂದೆ ಆ ಬಾಟಲನ್ನು ಮನೆಯಲ್ಲಿ ತಂದಿಟ್ಟಿದ್ದೆ. ಆದರೆ ನನಗೆ ಮದುವೆಯಾದ ಆರನೇ ದಿನಕ್ಕೆ ನನ್ನ ಶ್ರೀಮತಿಯವರು ನನ್ನ ಮತಿಗೆ ಅರಿವೆ ಬರದಂತೆ ಬಾಟಲನ್ನು ಒಣ ಕಸ ಎಂದು ನ್ಯಾಯ ತೀರ್ಮಾನ ಮಾಡಿ ಮರುಜನ್ಮಕ್ಕೆ ಕಳುಹಿಸಿದ್ದರು. ಪ್ರಮಾಣ ಮಾಡಿದ ಬಾಟಲೇ ಇಲ್ಲದ ಕಥೆಯನ್ನು ಕೇಳಿದ ಗೆಳೆಯ ಬೇಸರದಿಂದ ಕೊರಗಿ ಅದೇ ದಿನ ಮತ್ತೆ ಬಾಟಲ್ ಹಿಡಿದಿದ್ದ. ಹೌದು ಎಷ್ಟೋ ಜನರಿಗೆ ಕುಡಿಯುದನ್ನು ಬಿಡುತ್ತೇನೆ ಎಂದು ಪ್ರಮಾಣ ಮಾಡುದಕ್ಕೆ ಒಂದು ಕಾರಣ ಆದರೆ ಅದನ್ನು ಮತ್ತೆ ಶುರು ಮಾಡುವುದಕ್ಕೆ ಕೆಲವು ಕಾರಣಗಳು ಹಪ ಹಪಿಕೆಯಿಂದ ಕಾಯುತ್ತಿರುತ್ತವೆ.
ಇವತ್ತಿಗೂ ಪ್ರಪಂಚದ ಮೊತ್ತಮೊದಲ ಕುಡುಕ ಅಂದರೆ ಈ ಬಾಟಲ್. ಮಧ್ಯಪಾನ ತಯರಾದ ಕೂಡಲೆ ಬಾಟಲ್ ತಾನು ಕುಡಿದು ಜೋ-ಪಾನ ವಾಗುತ್ತದೆ. ಆದರೆ ಇಲ್ಲಿ ದುರಂತ ಅಂದರೆ ಬಾಟಲ್ ತನ್ನ ಕಂಟ ಪೂರ್ತಿ ಕುಡಿದರೂ ಕಿಕ್ ಏರದೆ ನೇರ ನಿಂತಿರುತ್ತದೆ. ಮನುಷ್ಯ ಅದನ್ನ ಕುಡಿದಾಗ ಅವನಿಗೆ ತುಂಬಿದ ಕಿಕ್. ಬಾಟಲ್ ಗೆ ಖಾಲಿಯಾದ ಕಿಕ್. ಆದರೆ ಫಲಿತಾಂಶ ಮಾತ್ರ ಎರಡುನೂ ಒಂದೇ ನೇರ ನಿಲ್ಲಲು ಹೋರಾಡಿ ಹೊರಳಾಡುತ್ತಿರುತ್ತದೆ. ಹೀಗೆ ಹೊರಳಾಟ ನಿಲ್ಲಿಸಿ ಉತ್ತರ ದಿಕ್ಕಿಗೆ ತಲೆ ಹಾಕಿ ಬಿದ್ದುಕೊಂಡ ಶಿರವಿಲ್ಲದ ಬಾಟಲನ್ನು ಕೈಗೆತ್ತಿಕೊಂಡು ಮನೆಯಲ್ಲಿನ ಎತ್ತರ ದಿಕ್ಕಿಗೆ ಎಸೆದಿದ್ದ ಯಾವುದಾದರೊಂದು ಮುಚ್ಚಳವನ್ನ ಮುಚ್ಚಿ ಬಾಟಲ್ ಗೆ ಹೊಸ ಜೀವ ಕೊಟ್ಟು ದ್ರವಪತಿ ಎಂದು ನಾಮಕರಣ ಮಾಡಿದರೆ ಇವ ಶಿವನ ಪಾಲಿಗೆ ಸೇರಿದಂತಾಗುತ್ತದೆ. ಶಿವ ಅಧಿಪತಿ, ಅವನಿಂದ ಗಣಪತಿ, ಇವ ಕಸಪತಿ ಇವನಿಂದ ದ್ರವಪತಿ ಎಂದು ಮೆಚ್ಚಿಕೊಂಡು ಹೊರಡುವಷ್ಟರಲ್ಲಿ ನೆನಪಾಯ್ತು ನಾನು ಉಸಿರಾಟಾನೇ ಮಾಡುತ್ತಿಲ್ಲವಲ್ಲ ಎಂದು. ಬದಲಾಗಿ ಬದುಕಲ್ಲಿ ಮೊತ್ತ ಮೊದಲ ಬಾರಿಗೆ ಪ್ರಾಣಾಯಾಮ ಕಲಿತೇ ಬಿಟ್ಟೆ ಬ್ರೀದ್ಇನ್ ಗಿಂತ ಎರಡು ಪಟ್ಟು ಬ್ರೀದ್ ಔಟ್ ಮಾಡುತ್ತಿದ್ದೆ. ಕಸದ ವಾಸನೆಯ ಸುಖವ ತಡೆಯಲಾರದೆ.
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:
Post a Comment