Wednesday, January 14, 2015

ಹಣ ಮೇಲೋ ಗುಣ ಮೇಲೋ

ಏಳನೆ ಕ್ಲಾಸಿನಲ್ಲಿದ್ದೆ. ಆಗ ಹಣ ಮೇಲೋ ಗುಣ ಮೇಲೋ ಎಂಬ ವಿಷಯದ ಬಗ್ಗೆ ಚರ್ಚಾಭಾಷಣ ಇತ್ತು. ನಾನು ಹೆಸರು ಕೊಟ್ಟಿದ್ದೆ. ನನ್ನ ಅಪ್ಪಾಜಿ ನನಗೆ ಹಣನೇ ಕೊಡುತ್ತಿರಲಿಲ್ಲ. ಅವರಲ್ಲಿ ಹಣನೇ ಇರುತ್ತಿರಲಿಲ್ಲ ಅಂತ ಗೊತ್ತಾಗಿದ್ದು ನಾನು ದುಡಿಯಲು ಆರಂಭಿಸಿ ಅವರು ನನ್ನಲ್ಲಿ ದುಡ್ಡು ಕೇಳಲಾರಂಭಿಸದಾಗಲೆ. ಹಣದ ಕೊರತೆ ಇದ್ದದ್ದರಿಂದ ಅನಿವಾರ್ಯವಾಗಿ ನನ್ನಲ್ಲಿ ಇಲ್ಲದ ಗುಣದ ಬಗ್ಗೆ ಮಾತಾಡಲು ಒಲವಾಯ್ತು.
ಚೀಟಿಯಲ್ಲಿ ಬರೆದು ಶಾಲೆಯ ಮಾವಿನ ಮರದ ಗೆಲ್ಲಿನಲ್ಲಿ ಕೂತು ಬಾಯಿಪಾಠ ಮಾಡುತ್ತಿದ್ದೆ. ಕಣ್ಣುಮುಚ್ಚಿ ಕಿವಿಗೆರಡು ಬೆರಳಿಟ್ಟು ಜೋರಾಗಿ ಓದುತ್ತಿದ್ದೆ. ಬೆನ್ನ ಮೇಲೊಂದು ಕೈ ತಟ್ಟಿದ ಹಾಗಾಯ್ತು. ಭಯಗೊಂಡು ಕಿವಿ ಮುಚ್ಚಿದ್ದ ಕೈ ಬಿಚ್ಚಿ ರಪ್ಪನೆ ಗೆಲ್ಲು ಹಿಡಿದುಕೊಂಡೆ. ತಿರುಗಿ ನೋಡಿದೆ.. ಗಣಿತ ಟೀಚರ್..... ಯಾಕೋ ಹೆದರಿಕೊಂಡಿಯೆನೊ.. ಬಾ.. ಇಳಿ ಕೆಳಗೆ ಕ್ಲಾಸ್ ಗೆ ಬೆಲ್ ಆಗಿದೆ. ಗಡಿಬಿಡಿಯಲ್ಲಿ ನಡುಗುತ್ತಿದ್ದೆ. ಇಳಿಯಲಾಗುತ್ತಿರಲಿಲ್ಲ. ಹಾರುವ ಎಂದರೆ ಅದೂ ಭಯ ಆಗಿತ್ತು. ಟೀಚರ್ ಎರಡು ಕೈ ನೀಡಿದರು, ಬಾ ಎಂದರು. ನಾಚಿಕೆ ಆಯ್ತು ಆದರೆ ಅವರ ಪ್ರೀತಿ ನೋಡಿದರೆ ಇಲ್ಲ ಎನ್ನಲಾಗಿಲ್ಲ. ಮೆಲ್ಲನೆ ಬಗ್ಗಿದೆ ಗಟ್ಟಿಯಾಗಿ ಹಿಡಿದುಕೊಂಡರು. ಕೆಳಗಿಳಿಸುವ ಮೊದಲು ಒಂದಷ್ಟು ಹೊತ್ತು ಹಾಗೇ ಹಿಡಿದುಕೊಂಡಿದ್ದರು. ನನ್ನ ಕೈ ಅವರನ್ನು ಸುತ್ತಿಕೊಂಡಿತ್ತು. ನಮ್ಮ ಪ್ರೀತಿಯನ್ನು ಸಹಿಸದೆ ಕಣ್ಣು ಮುಚ್ಚಿಕೊಂಡಿತು. ಮೆಲ್ಲನೆ ಕೆಳಗಿಳಿಸಿದರು. ಕ್ಲಾಸ್ ಗೆ ಹೋದೆವು. ಹಾಜರಿ ಪುಸ್ತಕ ನೋಡಿಕೊಂಡೇ ಎಲ್ಲರ ಹಾಜರಿ ಕರೆದರು. ನನ್ನ ಹೆಸರು ಬರುವಾಗ ಒಂದುಕ್ಷಣ ಸ್ವರ ಬಂದ ಕಡೆಗೆ ಹುಡುಕಿದರು. ಕೂಡಿಸುವ ಪಾಠ ಇಷ್ಟ ಆಗುತ್ತಿತ್ತು, ಕಳೆಯುವುದೆಂದರೆ ಬೇಜಾರಾಗುತ್ತಿತ್ತು. ಕ್ಲಾಸ್ ಮುಗಿಸಿ ಹೋಗುವಾಗ ಹಾಜರಿ ಪುಸ್ತಕ ಬಿಟ್ಟು ಹೋದರು. ರಪ್ಪನೆ ಹಾಜರಿ ಪುಸ್ತಕ ತಗೊಂಡೆ ಎದೆಗಪ್ಪಿಕೊಂಡು ಓಡಿದೆ. ಟೀಚರ್ ವಿಜ್ಞಾನ ಮಾಸ್ಟರ್ ಹತ್ತಿರ ಮಾತಾಡುತ್ತಿದ್ದರು. ನೋಡಿ ಬೇಜಾರಾಯ್ತು. ಪುಸ್ತಕ ಕೊಟ್ಟು ಮಾತಾಡದೆ ಸೀದ ಬಂದೆ. ಮರುದಿನ ಗಣಿತ ಟೀಚರ್ ಶಾಲೆಗೆ ಬರಲಿಲ್ಲ. ನಮಗೆ ಮಗ್ಗಿ ಓದಲು ಹೇಳಿದರು. ಎರಡು ಇಪ್ಪತ್ಲಿ ಯಿಂದ ಆರು ಇಪ್ಪತ್ಲಿ ವರೆಗೆ ಬಿಡದೆ ಬಾಯಿಪಾಠ ಮಾಡಿದೆ. ಅದರ ಮರುದಿನ ಟೀಚರ್ ಕ್ಲಾಸ್ ಗೆ ಬಂದರು. ಮಗ್ಗಿ ಹೇಳಿಸಿದರು. ಎಲ್ಲರು ತಪ್ಪಿದರೂ ನಾನು ತಪ್ಪಲಿಲ್ಲ. ಸಂಜೆ ಚರ್ಚಾಭಾಷಣದಲ್ಲಿ ಗುಣ ಗೆದ್ದಿತು. ನನಗೊಂದು ಪೆನ್ನು ಬಹುಮಾನ ಬಂದಿತು. ಬಂದ ಬಹುಮಾನದಲ್ಲಿ ಗಣಿತ ಟೀಚರ್ ಹೆಸರನ್ನೇ ಮೊದಲು ಬರೆದೆ. ಅದೊಂದು ದಿನ ಒಬ್ಬನೇ ಕೂತಿದ್ದೆ. ಗಣಿತ ಟೀಚರ್ ಬಂದು ನನಗೆ ಮುಖಮಾಡಿ ಕೂತರು, ಹಣೆ ನೇವರಿಸಿದರು. ಹೊಟ್ಟೆ ಉರಿಯುತ್ತಿತ್ತು ಅವರಿಗಿರುವ ಸ್ವಾತಂತ್ರ್ಯ ನನಗೆ ಇರಲಿಲ್ವೇ.... ನಾನು ಕೈ ಕಟ್ಟಿ ಕೂತಿದ್ದೆ. ತಲೆ ನೇವರಿಸುತ್ತೆಲೇ ಹೇಳಿದರು 'ನೀನು ಚೆನ್ನಾಗಿ ಓದಬೇಕು, ಊರಿಗೆ ಹೆಸರು ತರಬೇಕು. ನಾಳೆಯಿಂದ ನಿಮಗೆ ಗಣಿತ ಪಾಠಕ್ಕೆ ಬೇರೆ ಟೀಚರ್ ಬರ್ತಾರೆ' ಎಂದರು. 'ಯಾಕೆ ಟೀಚರ್ ನೀವು ಬರಲ್ವಾ....?' 'ನನಗೆ ಟ್ರಾನ್ಸ್ಫರ್ ಆಗಿದೆ'. ಹಾಗಂದರೆ ಏನೂಂತ ನನಗೆ ಗೊತ್ತಿರಬೇಕೆ. 'ಅದು ಎಷ್ಟು ದಿನ ಇರುತ್ತೆ ಟೀಚರ್' ಎಂದು ಕೇಳಿದೆ. ಆಗ ಟೀಚರ್ 'ಇಲ್ಲ ಪುಟ್ಟ, ನಾವೆಲ್ಲ ನಾಲ್ಕು ವರ್ಷಕ್ಕಿಂತ ಹೆಚ್ಚು ಒಂದೇ ಶಾಲೆಯಲ್ಲಿ ಇರಬಾರದು. ಈಗ ಬೇರೆ ಊರಿಗೆ ಹೋಗ್ತಾ ಇದ್ದೀನಿ'. 'ನಿಮ್ಮ ಅಮ್ಮನೂ ಜೊತೆಗೆ ಬರ್ತಾರಾ' ಎಂದು ಕೇಳಿದೆ. ಆಗ ಟೀಚರ್ 'ನಾವು ಅಮ್ಮನ ಜೊತೆಗೆ ಬದುಕುವ ಹಾಗಿಲ್ಲ. ನಾವು ಸಿಸ್ಟರ್ ಗಳು. ಅಮ್ಮ ಅಪ್ಪ ಸಂಸಾರ ಎಲ್ಲ ಬಿಟ್ಟಿರುತ್ತೇವೆ. ಜೀವನಪೂರ್ತಿ ಮದುವೆ ಆಗುವ ಹಾಗಿಲ್ಲ. ಹೀಗೆ ಒಂದೂರಿಂದ ಒಂದೂರಿಗೆ ಹೋಗುತ್ತಾ ನಿಮಗೆಲ್ಲಾ ಪಾಠ ಮಾಡುತ್ತಾ ಬದುಕಬೇಕು'.
ನನಗೆ ಅವರಾಡಿದ ಮಾತಲ್ಲಿ ಕೇಳಿದ್ದು ಮದುವೆ ಆಗುವ ಹಾಗಿಲ್ಲ ಎಂದ ಮಾತು ಮಾತ್ರ. ತುಂಬಾ ಖುಷಿಯಾಯ್ತು. ನನ್ನ ಗಣಿತ ಟೀಚರ್ ಜೀವನಪೂರ್ತಿ ಯಾರನ್ನೂ ಮದುವೆ ಆಗದೆ ಉಳಿಯುತ್ತಾರಲ್ಲ, ನನ್ನ ಬದುಕಿನ ಮೊದಲ ಪ್ರೇಮ ಚಿರಾಯುವಾಗುತ್ತಲ್ಲ ಎಂದು. ಟೀಚರ್ ಕಣ್ಣಲ್ಲಿ ಇಳಿದ ನೀರು ನನ್ನ ಕೈಗೆ ಬಿದ್ದಿತ್ತು. ಕನ್ನಡಕ ತೆಗೆದು ಕಣ್ಣೊರೆಸಿಕೊಂಡರು. ಗೊತ್ತೇ ಇರಲಿಲ್ಲ ನಾನು ಅಳುತ್ತಿದ್ದೆ. ಡೆಸ್ಕ್ ಮೇಲಿದ್ದ ಟೀಚರಲ್ಲದ ಸಿಸ್ಟರ್ ಕೈಗೆ ತಲೆಇಟ್ಟು ಅತ್ತುಬಿಟ್ಟೆ. ಅವರ ಅಡ್ರಸ್ ಬರೆದುಕೊಟ್ಟರು. ಪತ್ರ ಬರೆಯಲು ಹೇಳಿದರು. ಆಮೇಲೆ ಸುಮಾರು ಪತ್ರ ಬರೆಯುತ್ತಿದ್ದೆ. ಪ್ರೀತಿಯ ಸಿಸ್ಟರ್ ಗೆ ನಿಮ್ಮ ಪ್ರೀತಿಯ ವಿದ್ಯಾರ್ಥಿ ನಾನು ಬರೆವ ಪತ್ರ ಎಂದು ಪ್ರತಿ ಪತ್ರದಲ್ಲೂ ಬರೆಯುತ್ತಿದ್ದೆ. ಎಂಟನೆ ಕ್ಲಾಸಿಗೆ ಹೋದಾಗ ಪೈತಾಗೋರಸ್ ಪ್ರಮೇಯವನ್ನು ಪತ್ರದಲ್ಲಿ ಬರೆದಿದ್ದೆ. ಅವರು ಬರೆದ ಪತ್ರಗಳನ್ನು ಮಗ್ಗಿ ಪುಸ್ತಕದ ಮಧ್ಯದಲ್ಲಿ ತೆಗೆದಿಡುತ್ತಿದ್ದೆ. ಮಗ್ಗಿ ಪುಸ್ತಕವನ್ನು ಗಣಿತ ಪುಸ್ತಕದಲ್ಲಿ ತೆಗೆದಿಡುತ್ತಿದ್ದೆ. ಏಳನೆ ತರಗತಿಯಿಂದ ಹತ್ತನೇ ತರಗತಿವರೆಗೆ ಬೇರೆ ಯಾವ ಸಬ್ಜೆಕ್ಟಿನಲ್ಲಿ ಫೈಲ್ ಆದರೂ ಗಣಿತದಲ್ಲಿ ಒಂದು ಸಲಾನೂ ಫೈಲ್ ಆಗಲಿಲ್ಲ.



ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:

Post a Comment