Wednesday, January 14, 2015

ಕೇಕ್ ತಿಂದ ಮೇಲೆ ರಮೇಶಣ್ಣ

ಕೇಕ್ ತಿಂದ ಮೇಲೆ ಬೆರಳಿಗಂಟಿದ ಕೇಕನ್ನು ನೆಕ್ಕಿ ಕೈ ತೊಳೆದುಕೊಂಡಾಯ್ತು. ನೀರು ಕುಡಿದು ಬಾಯಿ ಮುಕ್ಕಳಿಸಕ್ಕೆ ಬೇಜಾರು. ಬಾಯಲ್ಲಿರುವ ಕೇಕಿನ ರುಚಿ ಇನ್ನೂ ಸ್ವಲ್ಪ ಹೊತ್ತು ಹಾಗೇನೇ ಇರಲಿ ಎಂದು. ಮತ್ತೆ ಒಂದು ಸುತ್ತು ಕೇಕ್ ಇದ್ದ ಪ್ಲೇಟನ್ನು ತೋರು ಬೆರಳಲ್ಲಿ ಅಡ್ಡವಾಗಿ ಒತ್ತಿ ಎಳೆದು ಅಲ್ಲಲ್ಲಿ ಇದ್ದ ಚೂರು ಚೂರು ಕೇಕನ್ನು ಒಟ್ಟಾಗಿಸಿ, ಬೆರಳ ತುದಿಗೆ ತಂದು ತಿಂದು ಮುಗಿಸಿದಾಗ ಬಾಯಾರಿಕೆ ಆದ ಕಾರಣ ಅನಿವಾರ್ಯವಾಗಿ ನೀರು ಕುಡಿಯಲೇ ಬೇಕಾಯ್ತು. ಬಾಯಲ್ಲಿದ್ದ ಕೇಕೆಲ್ಲ ತೊಳೆದು ಹೊಟ್ಟೆ ಸೇರಿತು.
ಮಗನ ಜನುಮದಿನ ಸಂಭ್ರಮಾಚರಣೆಯ ಸುಸ್ತು. ಬಂದ ನೆಂಟರೆಲ್ಲಾ ಅವರವರ ಮನೆ ಸೇರಿ ಆಗಿದೆ. ಆದರೂ ಮನೆಯಲ್ಲಿ ಇನ್ನೂ ಬರ್ತಡೆ ಪರಿಮಳ ಮಾಸಿಲ್ಲ. ತಂದೆಗೋ ನಮ್ಮ ಕಾಲದಲ್ಲೆಲ್ಲಾ ಇದೆಲ್ಲಾ ಇರಲೇ ಇಲ್ವೆ. ಆದರೂ ಇದೊಂಥರಾ ಚೆನ್ನಾಗಿದೆ ಕಾರಣದಿಂದಾದರೂ ಗೆಳೆಯರು, ನೆಂಟರು ಎಲ್ಲಾ ಒಂದು ಸಲ ಒಟ್ಟಾಂದಂಗೆ ಆಗುತ್ತೆ ಎಂದು ಯೋಚಿಸುತ್ತಾ ರಮೇಶಣ್ಣ ಮಂಚದಲ್ಲಿ ಕೂತು ಗೋಡೆಗೊರಗಿದರು. ಕಣ್ಣುಮುಚ್ಚಿಕೊಂಡರು ಇನ್ನೇನು ನಿದ್ದೆ ಬರಬಹುದೇನೋ ಎಂದು ಕನಸು ಕಾಣುವಷ್ಟರಲ್ಲಿ ತನ್ನ ಬಲಭಾಗದಲ್ಲಿರುವ ಲ್ಯಾಂಡ್ ಲೈನ್ ರಿಂಗಾಯ್ತು.
ಫೋನೆತ್ತಲೆಂದು ಬಲದ ಕೈ ಎತ್ತಿದರೆ ಕೈ ಎತ್ತಲಾಗುತ್ತಿಲ್ಲ........!
ಎಡದ ಕಾಲಿನ ಮೇಲಿದ್ದ ಬಲದ ಕಾಲನ್ನೆತ್ತಿ ಎದ್ದೇಳುವ ಎಂದರೆ ಅದೂ ಆಗುತ್ತಿಲ್ಲ.......!
ಇದೇನಿದು ಎಂದು ಮಗನನ್ನು ಕರೆಯೋಣ ಅಂತ ನೋಡಿದ್ರೆ ಧ್ವನಿ ಸರಿಯಾಗಿ ಹೊರಡುತ್ತಿಲ್ಲ......!
ಅಯ್ಯೊಬಾ ಏನಿದು ಏನಾಗಿದೆ..... ಒಂದೂ ಗೊತ್ತಾಗದೆ....
ಅಲ್ಲೇ ಪಕ್ಕದಲ್ಲಿದ್ದ ಲೋಟವನ್ನು ನೆಲಕ್ಕೆ ಗುದ್ದಿ ತನಗೆ ಸಾಧ್ಯ ಆದಷ್ಟು ಬೊಬ್ಬೆ ಹಾಕಿದರು. ಮಕ್ಕಳು ಹೆಂಡತಿ ಎಲ್ಲಾ ಓಡಿ ಬಂದರು. ರಮೇಶಣ್ಣನ ಬಲಭಾಗದ ಎಲ್ಲಾ ಅಂಗಾಂಗಳು ತನ್ನ ಬಲ ಕಳೆದುಕೊಂಡು ಕೆಲಸ ಮಾಡುತ್ತಿಲ್ಲ
ಆಸ್ಪತ್ರೆಗೆ ಕರೆದುಕೊಂಡು ಹೋದರು. ಎಲ್ಲಾ ಪರೀಕ್ಷೆಯ ನಂತರ ಬಂದ ಉತ್ತರ ವಿಷ ಆಹಾರದಿಂದ ಅಕಾಲಿಕ ಲಕ್ವಾ....
ಅಷ್ಟಕ್ಕೇ ನಿಲ್ಲದ ವೈದ್ಯರಿಗೆ ಇದೊಂದು ಸವಾಲಾಯ್ತು. ಸಂಶೋಧನಾತ್ಮಕ ಪರೀಕ್ಷೆ ಮಾಡಲಾಗಿ ಬಂದ ಫಲಿತಾಂಶ ವೈದ್ಯರ ಸಹಿತ ಎಲ್ಲರೂ ತಬ್ಬಿಬ್ಬಾದರು.
ತಿಂದ ಕೇಕ್ ವಿಷ ಆಹಾರವಾಗಿತ್ತು. ಕೇಕ್ ವಿಷವಾಗಲು ಕಾರಣವಾಗಿದ್ದು ಇಲಿಯ ಮೂತ್ರ.
ಹೌದು ಬೇಕರಿಯಲ್ಲಿ ಮಾಡಿಟ್ಟ ಕೇಕ್ ಗೆ ಇಲಿಯು ಮೂತ್ರ ಮಾಡಿದೆ. ಇಲಿ ಮೂತ್ರ ಮಾಡಿದ ಕೇಕಿನ ಭಾಗವನ್ನು ರಮೇಶಣ್ಣ ತಿಂದಿದ್ದಾರೆ. ಅದು ಬಹು ಅಪಾಯಕಾರಿ ವಿಷವಾಗಿ ಮೆದುಳಿಗೆ ಆಕ್ರಮಣವಾಗಿ ಲಕ್ವವಾಗಿ ದೇಹದ ಮೇಲೆ ಪರಿಣಾಮ ಬಿದ್ದಿದೆ.
★ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಫೋಟೋಜರ್ನಲಿಷ್ಟ್, ಬಿ ಹೆಚ್ ಶಿವುಕುಮಾರ್ ರವರು ಬೆಂಗಳೂರಿನಲ್ಲೇ ನಡೆದ ಘಟನೆಯನ್ನು ಹೀಗೆ ಒಮ್ಮೆ ಮಾತಾಡುವಾಗ ಹೇಳಿದ್ದರು. ಅದನ್ನೇ ಕಥೆಯಾಗಿ ಬರೆದೆ  



ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:

Post a Comment