ಇಲ್ಲಮ್ಮ ಇವತ್ತು ಕ್ಲಾಸ್ ಬಂಕ್ ಮಾಡುವಂಗಿಲ್ಲಮ್ಮ ಪ್ಲೀಸ್ ಅಮ್ಮ ನಾಳೆ ಹೋಗೋಣ್ವಾ...... ಹೂಂ ಸರಿ ಏನೋ ಇಷ್ಟರವರೆಗೆ ಇಲ್ಲದ ಕಮಿಟ್ ಮೆಂಟ್ ಈ ಸಲ ಬಂದಿದೆ ಅಂದ್ರೆ..... ಇರ್ಲಿ ನೋಡೋಣ ನಾಳೆನೇ ಹೋಗೋಣ ಬಿಡು.....
ಅಯ್ಯೋ ಏನಮ್ಮ ನೀವು..? ಏನೋ...! ಸ್ವಲ್ಪ ಒತ್ತಾಯ ಮಾಡ್ತೀರೇನೋ ಅಂತ ಸ್ವಲ್ಪ ಡ್ರಾಮ ಮಾಡುವುದಕ್ಕೆಂದು ಹೋದರೆ ಹೀಗಾ ಕೈ ಕೊಡೋದು....?ಏನಿಲ್ಲ ಕ್ಲಾಸಿಗೆ ಬಂಕ್ ಮಾಡಿ ಫಿಲ್ಮಿಗೆ ಬಂದು ಬಿಡ್ತಿನಿ ಅಷ್ಟೇ ಹೋಗಿಯೇ ಬಿಡೊಣ... ಆಮೇಲೆ ಅಲ್ಲಿಂದ ವಿದೌಟ್ ಗಡಿಬಿಡಿ ಗಡ್ ಬಡ್ ತಿನ್ನೋಣ ಎಂದು ಹೇಳಿ ಗಡಿಬಿಡಿಯಲ್ಲೇ ಸ್ನಾನಕ್ಕೆ ಹೊರಟಳು ಮಗಳು.
ಅಮ್ಮಾ...., ಕುಕ್ಕರ್ ವಿಸೀಲ್ ಯಾಕೆ ಇನ್ನೂ ಆಗಿಲ್ಲ, ಕಾಲೇಜಿಗೆ ಲೇಟ್ ಆಗ್ತಿದೆ ಎಂದು ಮಗಳು ಬಾತ್ ರೂಮಿನಿಂದಲೇ ಕೂಗಿ ಕರೆದಳು.
ಮೇಡಮ್ ರವರೆ ನೀವು ಇವತ್ತೇ ನಿಮ್ಮ ಸ್ನಾನ ಮುಗಿಸಿಕೊಂಡು ಬನ್ನಿ.....
ಏನು... ? ಕುಕ್ಕರ್ ವಿಸಲ್ ಆದ್ರೆ ಮಾತ್ರಾನೋ ತಾವು ಬಾತ್ ರೂಮಿಂದ ಹೊರ ಬ...........! ಇಲ್ಲ, ಅಮ್ಮನ ಉಳಿದ ಮಾತೇ ಕೇಳಲಾಗದಷ್ಟು ದೊಡ್ಡ ಶಬ್ಧವೊಂದು ಅಡುಗೆ ರೂಮಿನಿಂದ ಕೇಳಿತು.... ಮಗಳು ಓಡಿ ಬಂದು ನೋಡಿದರೆ.....
ಉಸಿರುಕಟ್ಟಿಕೊಂಡಿದ್ದ ಕುಕ್ಕರ್ ಈಗ ಅದು ತನ್ನ ಬಸಿರೊಡೆದು ಉಸಿರಬಿಟ್ಟಿದೆ.
ಅಮ್ಮ ಉಸಿರಾಡುವುದಕ್ಕೇ ಒದ್ದಾಡುತ್ತಿದ್ದರು.....
ಬಲದ ಕೈ ಪೂರ್ತಿ ಅರೆ ಬೆಂದು ಕೆಂಪಾಗಿತ್ತು.
ಮಗಳು ಅಪ್ಪಾ ಎಂದು ಜೋರಾಗಿ ಕಿರುಚಿಕೊಂಡಳು ಆದರೆ ಗಂಟಲಿಂದ ಧ್ವನಿ ಬರಲೇ ಇಲ್ಲ......
ಅಷ್ಟರಲ್ಲೇ ವಾಕಿಂಗ್ ಹೋಗಿದ್ದ ಅಪ್ಪ ಮತ್ತು ಅಣ್ಣ ಓಡಿ ಬಂದರು. ಅಮ್ಮನನ್ನು ಆಸ್ಪತ್ರೆಗೆ ಸೇರಿಸಿದರು.
ಶಸ್ತ್ರ ಚಿಕಿತ್ಸೆ ಆಗಿ ಮನೆಗೆ ಬಂದರು ಆದರೆ ದಿನದಿಂದ ದಿನಕ್ಕೆ ತನ್ನ ಬಲದ ಕೈ ಬಲವನ್ನೇ ಕಳೆದುಕೊಂಡಿತು. ಬಲ ಕೈಯ ಸ್ಥಿತಿ ಎಡದ ಕೈಗೂ ಪಸರಿಸುತು.
ಮತ್ತೆ ವೈದ್ಯರಲ್ಲಿಗೆ ಕರೆದುಕೊಂಡು ಬಂದರು. ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಿದರು. ವರದಿ ಬಂದಾಗ ವೈದ್ಯರೇ ಒಂದು ಕ್ಷಣ ದಿಗಿಲಾಗುತ್ತಾರೆ.
ಆಸ್ಪತ್ರೆಯಲ್ಲಿ ಯಾರೋ ಕಿರಿಯ ಸಹಾಯಕರು ಒಬ್ಬರು ಮಾಡಿದ ತಪ್ಪಿನಿಂದಾಗಿ, ಅಮ್ಮನ ಶರೀರಕ್ಕೆ ಯಾವುದೋ ಒಂದು ಮಾರಕ ರೋಗದ ವೈರಾಣು ಪ್ರವೇಶಮಾಡಿ ದೇಹದ ಜೀವ ಸಾಮರ್ಥ್ಯವನ್ನು ಸಂಪೂರ್ಣವಾಗಿ ನಾಶಮಾಡಿತ್ತು.......!
ಸಂಪೂರ್ಣವಾಗಿ ಜೀವ ಸಾಮರ್ಥ್ಯವನ್ನು ಕಳೆದುಕೊಂಡಿದ್ದ ತಾಯಿ ಆಸ್ಪತ್ರೆಯ ಬೆಡಲ್ಲಿ ಮಲಗಿದ್ದರು.
ಮಗಳು ಅಮ್ಮನಿಗೆ ಕಾಮತರ ಅಂಗಡಿಯಿಂದ ಗಡ್ ಬಡ್ ಐಸ್ ಕ್ರೀಮ್ ತಗೊಂಡು ಆಸ್ಪತ್ರೆಗೆ ಬಂದಳು. ಅಮ್ಮ ತಗೊಮ್ಮ ಗಡ್ ಬಡ್ ಐಸ್ ಕ್ರೀಮ್. ನಾವು ಅವತ್ತು ತಿನ್ನಬೇಕಾಗಿದ್ದ ಇವತ್ತಾದರೂ ತಿನ್ನುವ ಎಂದು ಅಮ್ಮನ ಕೈ ಹಿಡಿಯುತ್ತಾಳೆ ಮಗಳು...........! ಒಂದು ಕೈಯ್ಯಲ್ಲಿ ಐಸ್ ಕ್ರೀಂ. ಇನ್ನೊಂದು ಕೈಯ್ಯಲ್ಲಿ ಅಮ್ಮನ ಕೈ. ತಂಪಾಗಿತ್ತು.....! ಎರಡೂ ತಂಪಾಗಿತ್ತು...!
ಅಮ್ಮನ, ಕೈ ತಂಪಾಗಿತ್ತು. ಕಣ್ಣು ಮುಚ್ಚಿತ್ತು, ಕುಕ್ಕರಿನ ಉಸಿರು ನಿಂತೇ ಹೋಗಿತ್ತು.
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:
Post a Comment