Wednesday, January 14, 2015

ಕಾಂಟ್ ಡಿಲೀಟ್

ಸ್ಮಾರ್ಟ್ ಫೋನ್ ಯುಗಾರಂಭ ಆದಮೇಲೆ ಜಿ ಮೇಲ್, ಫೇಸ್ ಬುಕ್ ಎಲ್ಲಾ ಒಂದರಲ್ಲೇ ಸಿಂಕ್ ಆಗಿ ನನ್ನಲ್ಲಿ ಒಟ್ಟು ಎಂಟು ಸಾವಿರದ ಏಳುನೂರ ಐವತ್ತ ನಾಲ್ಕು ಕಾಂಟಾಂಕ್ಟ್ ಇದೆ ಎಂದು ತೋರಿಸ್ತಾ ಇತ್ತು. ಕೆಲವೊಂದು ನಾಕೈದು ಸಲ ಸೇವಾಗಿತ್ತು.
    ವಾರದ ರಜೆಯಂದು ಬೆಳಗ್ಗೆ ಶುರು ಮಾಡಿ ಸಂಜೆಯಾಗುವಾಗ ಆರು ನೂರ ಇಪ್ಪತ್ತೆಂಟಕ್ಕೆ ಇಳಿಸಿದೆ. ಆದರೆ ಇಲ್ಲಿದ್ದ ಇಪ್ಪತ್ತೆಂಟು ವಿಶೇಷ  ಕಾಂಟಾಕ್ಟ್ ಗಳಿಂದ ಖಂಡಿತಾ ಎಂದಿಗೂ ನನಗೆ ಫೋನ್ ಬರುವುದಿಲ್ಲ. ಒಂದು ವೇಳೆ ನಾನಾಗಿ ಮಾಡಿದ್ರೆ ಫೋನ್ ಎತ್ತೋದೂ ಇಲ್ಲ....., ಹಾಗೂ ಒಂದು ವೇಳೆ ಎತ್ತಿದರೂ ಆಗ ಅವರ ಸ್ವರದ ಬದಲಾಗಿ ಬೇರೆಯವರ ಸ್ವರ ಕೇಳುತ್ತದೆ..! ಕಾರಣ ಇಪ್ಪತ್ತೆಂಟು ಜನ ನಾಟ್ ರೀಚೇಬಲ್ ಆಗಿದ್ದಾರೆ. ಅಂದ್ರೆ ಇನ್ಯಾವತ್ತು ಅಟಂಡ್ ಮಾಡದ ಲೋಕಕ್ಕೆ ಹೋಗಿದ್ದಾರೆ. ಅವರೆಲ್ಲಾ ತೀರಿಕೊಂಡಿದ್ದಾರೆ. ನನಗೆ ಡಿಲೀಟ್ ಅನ್ನುವ ಪದ ತುಂಬಾ ಭಾವರಹಿತ ವಾದದ್ದು. ದಿನಾ ಸಂಜೆಯಾಗುವಾಗ ನೂರು ಫೋಟೋ ತೆಗೆದು ಮೂರು ಫೋಟೋ ಫೈಲ್ ಮಾಡಿ ಉಳಿದವನ್ನೆಲ್ಲಾ ನಿರ್ದಾಕ್ಷಿಣ್ಯವಾಗಿ ಡಿಲೀಟ್ ಮಾಡುತ್ತೇನೆ. ಆದರೆ ಇದು ಹಾಗೆ ಆಗಿಲ್ಲ. ಇಪ್ಪತೆಂಟು ಹೆಸರುಗಳನ್ನೂ ಹೆಬ್ಬೆರಳಲ್ಲಿ ಒತ್ತಿದ್ದೇನೆ. ಒಂದೊಂದರಲ್ಲೂ ಒಂದೊಂದು ಭಾವದಲ್ಲಿ ಮಾತಾಡಿದ್ದೇನೆ. ಸಾಲ ಕೇಳಿದ್ದೇನೆ, ಸಾಲ ವಾಪಸ್ಸು ಕೊಡುಲು ತಡವಾದಾಗ ಬೈಸಿಕೊಂಡಿದ್ದೇನೆ. ಹಾಸ್ಯ ಮಾಡಿದ್ದೇನೆ, ಜಗಳ ಮಾಡಿದ್ದೇನೆ, ಸುಳ್ಳು ಹೇಳಿದ್ದೇನೆ. ನಾನೇ ಫೋನೆತ್ತಿ ನಾನಲ್ಲ ಎಂದಿದ್ದೇನೆ.... ಇಲ್ಲದ ಊರಲ್ಲಿ ಇದ್ದೆ ಎಂದಿದ್ದೇನೆ. ಇದ್ದ ಊರಲ್ಲಿ ಇಲ್ಲ ಎಂದಿದ್ದೇನೆ. ಸಿಟ್ಟು ಬಂದಾಗ ಬ್ಲ್ಯಾಂಕ್ ಮೆಸ್ಸೇಜ್ ಕಳಿಸಿದ್ದೇನೆ.
ಹೀಗೆ ಒಂದ ಎರಡ? ಇಷ್ಟೆಲ್ಲಾ ಇಷ್ಟ ಇರುವ ಜೀವಗಳ ಜೀವಹೋದ ಮೇಲೆ ನನ್ನಲ್ಲಿ ಉಳಿದಿರುವುದು ಸಂಖ್ಯಾ ಸಂಪತ್ತು ಮಾತ್ರ.
ಡಿಲೀಟ್ ಮಾಡೋದು ಅಷ್ಟು ಸುಲಭ ಅಲ್ಲಸೇವು ಮಾಡುವ ಮನಸ್ಸು ಹುಟ್ಟಲಾರಂಬಿಸಿದೆ
.

               
.            ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment