Thursday, January 15, 2015

★ ತೆರೆಯ ಹಿಡಿದುದ ಕಂಡರೆ ★


ಅಷ್ಟದಿಕ್ಪಾಲಕರ ಒಡ್ಡೋಲಗದಲ್ಲಿ ನನಗೆ ವಿಶೇಷವಾಗಿ ಕಂಡಿದ್ದು ತೆರೆ ಹಿಡಿದ ಜೀವ ಸಂಜೀವ.
ಯಕ್ಷಗಾನದಲ್ಲಿ ಹೆಚ್ಚಿನವರಿಗೆ ತೆರೆ ಹಿಡಿಯುವುದು ಅಂದರೆ ಒಂದು ಕೀಳರಿಮೆಯ ತಿರಸ್ಕೃತ ಭಾವ ಇದೆ. ಒಂದಾ ಆಗಷ್ಟೇ ನಾಟ್ಯ ಕಲಿಯುವ ವಿದ್ಯಾರ್ಥಿಗೆ ತೆರೆ ಹಿಡಿವ ಕೆಲಸ ಸಿಗುತ್ತದೆ. ಅಥವಾ ನಾಟ್ಯದಲ್ಲಿ ದಡ್ಡನಾಗಿರುವವನಿಗೆ ತೆರೆ ಹಿಡಿಯುವ ಪಾತ್ರ ಸಿಗುತ್ತದೆ. ಕಾರಣಕ್ಕಾಗಿಯೇ ಹೆಚ್ಚಿನವರು ತೆರೆ ಹಿಡಿಯಲು ಒಪ್ಪಿಕೊಳ್ಳೋದೆ ಇಲ್ಲ. "ಹ್ಹೇ ನಾನು ತೆರೆ ಹಿಡಿಯೋದಾ......?"
ಹೀಗಿರಲು ಯಕ್ಷಗಾನದ ಮಹಾನ್ ಗುರುಗಳಾದ ಸಂಜೀವರೇ ತನ್ನ ಶಿಷ್ಯರ ಆಟಕ್ಕೆ ತೆರೆ ಹಿಡಿಯುವುದು ಅಂದರೆ.....?
ಹೌದು ಒಬ್ಬ ಉತ್ತಮ ಗುರುವಿನೊಳಗೆ ಒಬ್ಬಾಕೆ  ತಾಯಿ ಇರುವಳು. ಗುರು ತನ್ನ ಪ್ರತಿ ಶಿಷ್ಯರನ್ನು ತನ್ನದೇ ಮಕ್ಕಳೆಂದು ಪೊರೆಯುವನು.
ತನ್ನ ಶಿಷ್ಯರ ತಪ್ಪುಗಳನ್ನು ತೆರೆಯೊಳಗೆ ಮರೆಯಲ್ಲೇ ತಿದ್ದುವನು.. ತೀಡುವನು. ಗುರು ತೆರೆ ತೆರೆದರೆ ಮಾತ್ರ ಶಿಷ್ಯ ಧರೆಗಿಳಿಯುವನು.., ಬೆಳಗುವನು.. ಬಾಳುವನು.. ತಾನೂ ಗುರುವಾಗುವನು.
ಅಬ್ಬಾ ಗುರು ಎನ್ನುವ ಪದವೇ ದೊಡ್ಡದು ಎಂದೂ ಲಘುವಲ್ಲ. ತೆರೆ ತೆರೆದಲ್ಲಿಗೆ ಶಿಷ್ಯ ಧರೆಗಿಳಿದಲ್ಲಿಗೆ ಗುರುವಿನ ಕರ್ತವ್ಯ ಮುಗಿದು ಹೋಗುವುದಿಲ್ಲ. ಶಿಷ್ಯನ ವಿಷಯದಲ್ಲಿ ಗುರು ಎಂದೂ ಮೌನಿಯಾಗುವುದಿಲ್ಲ, ಯಾಕೆಂದರೆ ಶಿಷ್ಯನೆಂದರೆ ಅದು ತಾನೆ ಗರ್ಭದೊಳಗೆ ಕಾಪಿಟ್ಟು ಇಳೆಗಿಳಿಸಿದ ಮಗುವಲ್ಲವೆಕಣ್ಣಲ್ಲಿ ಕಣ್ಣಿಟ್ಟು ಮಗುವಿನ ಸರ್ವಾಂಗೀಣ ಬೆಳವಣಿಗೆಗೆ ಕಾರಣನಾಗುವ ತಾಯಿಯಂತೆ ಶಿಷ್ಯನ ಬದುಕಿನುದ್ದಕ್ಕೂ ಗುರುವಿನ ಕರುಣೆಯೇ ಬೆಳಕಾಗಬಲ್ಲುದು, ಸರೆಗಾಗಬಲ್ಲುದು; ರಕ್ಷಣೆಯ ಆಸರೆಯಾಗಬಲ್ಲದು. ಗುರುವಿನ ಸೆರಗಿಗೆ ಆಯುಷ್ಯದ ಹಂಗಿಲ್ಲ. ಅದು ತನ್ನ ವಿದ್ಯಾರ್ಥಿ ಬೆಳೆದು ತಾನು ತನ್ನ ವಿದ್ಯಾರ್ಥಿಗೆ ತೆರೆ ಹಿಡಿವವರೆಗೂ ನಿರಂತರವಾಗಿರುತ್ತದೆ.
                

ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment