Wednesday, January 14, 2015

★ ಅಂಬಾ ★

ಮೇಯುತ್ತಿದ್ದ ದನವನ್ನೇ ನೋಡುತ್ತಿದ್ದೆ. ನನ್ನೊಳಗೊಂದು ನನ್ನ ಅಹಂಕಾರ ಮುರಿದು ಜಗದ ಸತ್ಯ ತೋರಿಸುವ ಒಳಗಣ್ಣಿತ್ತು ಅದು ದನದ ಕಣ್ಣನ್ನೇ ನೋಡುತ್ತಿತ್ತು. ಅದೇ ಅಲ್ಲದೆ ನನ್ನ  ಹೆಗಲಮೇಲೆ ಇನ್ನೊಂದು ಮುಚ್ಚಿದ ಕಣ್ಣು ನೇತಾಡುತ್ತಿತ್ತು. ಅದು ಸದಾ ಮುಚ್ಚಿರುತ್ತದೆ ತೆರೆದರೆ ಕಂಡಿದ್ದು ಕಂಡಂತೆ ದಾಖಾಲಾಗುತ್ತದೆ. ನೇತಾಡುತ್ತಿದ್ದ ಕಣ್ಣು ನನ್ನ ಬಲಗಣ್ಣನ್ನು ಅಪ್ಪಿಕೊಂಡು ಒಂದು ಕ್ಷಣ ದನದ ಕಣ್ಣನ್ನು ದೂರದಿಂದಲೇ ಹತ್ತಿರ ಸೆಳೆದು ನೋಡಿ ಮುಚ್ಚಿತು. ತನ್ನೊಳಗೊಂದು ದನದ ಕಣ್ಣು ದಾಖಲಾಯ್ತು. ದಾಖಲಿಗೆ ಕಾರಣ ಆಕಳ ಕಣ್ಣಲ್ಲ ಕಣ್ಣ ಸುತ್ತ ಮನೆಯ ಮಾಡಿದ ನೊಣ. ನೊಣವು ಕಣ್ಣೊಳಗೆ ಹೋಗದಂತೆ ಕಾಪಾಡುತ್ತಿತ್ತು ಕಣ್ಣ ರೆಪ್ಪೆ.
ದನಕೆ ದಣಿದ ಆಯಸ
ನೊಣಕೆ ಕಣ್ಣೀರ ಪಾಯಸ.
ದನದ ಕಣ್ಣಿನ ಕಣ್ಣೀರ
ಕಥೆಯ ಕೇಳ ಬಯಸಿತು
ಎನ್ನ ಮನದ ಕಿವಿಯು.
ಕೂತೆ ಹಣೆಮೇಲೇ ಬೆರಳಾಡಿಸಿದೆ. ಸುಖದ ಭಾರವನ್ನು ಹೊರಲಾರೆನಂದೋ ಏನೋ ತನ್ನ ಗಲ್ಲವನ್ನು ಮೆಲ್ಲನೆ ನೆಲಕ್ಕೂರಿತು. ಮೆಲ್ಲನೆ ಕೇಳಿದ ತಾಯಿ ನಿನಗೆ ಎಷ್ಟು ಮಕ್ಕಳು ಎಂದು.
ದನವೋ ಮೆಲ್ಲನೆ ಗಲ್ಲವನ್ನೊಮ್ಮ ಎತ್ತಿ ಕೂತಿದ್ದ ನನ್ನ ತೊಡೆಯ ಮೇಲಿರಿಸಿ ಕೇಳಿತು ನನ್ನ ಕೆಚ್ಚಳ ಹಾಲು ಕುಡಿವ ನಿಮ್ಮನ್ನೂ ಸೇರಿಸಿ ಅಷ್ಟೂ ಮಕ್ಕಳ ಒಟ್ಟು ಲೆಕ್ಕ ಹೇಳಲೇ ಅಥವಾ ಜನ್ಮ ನೀಡಿದ ಒಟ್ಟು ಮಕ್ಕಳ ಲೆಕ್ಕ ಹೇಳಲಾ......?
ಬೆಳಗ್ಗೆ ತಗೊಂಡಿದ್ದ ನಂದಿನಿ ಹಾಲಿನ ಪ್ಯಾಕೆಟ್ ಓಪನ್ ಮಾಡಿ ಹಾಲು ಬಿಸಿ ಮಾಡಲು ಮರೆತದ್ದು ನೆನಪಾಯ್ತು. ಕಾವೇರಿ ನೀರಿಗೆ ಜಗಳ ಮಾಡುತ್ತಿದ್ದ ಹೆಂಗಸರಂತೆ ಕಂಡವು ದನದ ಕಣ್ಣ ಸುತ್ತ ಹಾರುತ್ತಿದ್ದ ನೊಣಗಳು.
ಕಣ್ಣರೆಪ್ಪೆ ಹೆಚ್ಚೆಂದರೆ ನೊಣ ಕಣ್ಣೊಳಗೆ ಹೋಗದಂತೆ ಕಾಪಾಡ ಬಹುದಷ್ಟೇ. ಕಣ್ಣ ಸುತ್ತ ನೊಣ ಮನೆಯ ಮಾಡದಂತೆ ಹೇಗೆ ಕಾಪಾಡಲಿ....! ನಮ್ಮ ಕೈಯಂತೆ ಕೆಲಸ ಮಾಡುವ ಬಾಲ ಕಣ್ಣವರೆಗೆ ತಲುಪದು. ಇನ್ನು ಕಿವಿ ಕಣ್ಣ ಹತ್ತಿರನೇ ಇದ್ದರೂ ಅದು ಬಾಲದಷ್ಟು ಉದ್ದ ಇಲ್ಲ ಅಲ್ಲ. ತನ್ನ ಕಣ್ಣೀರ ಕುಡಿದು ಬದುಕುವ ನೊಣದ ಜೊತೆಗೊಂದು ಕಣ್ಣೀರ ಸಂಬಂಧ ಬೆಳೆದು ಬಿಟ್ಟಿತ್ತು ರಕ್ತ ಸಂಬಂಧ ಹಾಗೆ. ಹಾರುವ ನೊಣ ಹಾರದೇ ಇದ್ದರೆ ಎನೋ ಕಳೆದು ಕೊಂಡ ಹಾಗೆ ಆಗುತ್ತದೆ ಮಾರಯ ಹೋಗು ನೀನು ಎಂದಿತು.

ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

No comments:

Post a Comment