ಈ ಹುಡುಗ ಹುಟ್ಟಿ ನಡೆಯಲಾರಂಭಿಸಿ ಅಂಗಳದಲ್ಲಿರುವ ತನ್ನ ಅಮ್ಮನನ್ನು ಗುರುತಿಸಿ ಕೂಗಿ ಕರೆಯುವುದನ್ನು ಕಲಿಯುವ ಮೊದಲೇ ದೊಡ್ಡಮ್ಮನ ಮನೆಗೆ ಶಿಫ್ಟ್.
ಇಲ್ಲಿಂದ ಶುರುವಾಗುತ್ತೆ ಮರೆಯಲೇಬೇಕಾದ ಮೂಕ ರೋದನದ ಕ್ಷಣಗಳು. ನೆನಪಿಲ್ಲ ಹುಡುಗನಿಗೆ ತನ್ನ ಅಮ್ಮನನ್ನು ಸ್ಪಷ್ಟ ಉಚ್ಚಾರದಿಂದ ‘ಅಮ್ಮಾ’ ಎಂದು ಕರೆದದ್ದು. ಅಷ್ಟರಲ್ಲೇ ದೊಡ್ಡಮ್ಮ ಎಂದು ಕರೆಯುವುದನ್ನು ಕಲಿತು ಬಿಟ್ಟಿದ್ದ. ಬಿಡಕ್ಕೆ ಆಗಲ್ವೇ.
ಅಮ್ಮ ಯಾವುದೋ ಒಂದು ತಿಂಗಳಲ್ಲಿ ಬರುವುದು ಆ ದಿನದ ರಾತ್ರಿ ಮಗನಿಗೆ ತಾನು ದಿನಾ ಮಲಗುವ ಸಮಯ ಮೀರಿದರೂ ನಿದ್ದೆ ಬರುವುದಿಲ್ಲ. ಅಮ್ಮನನ್ನು ತಬ್ಬಿಕೊಂಡು ಮಲಗಬೇಕು, ಅಮ್ಮನ ಬೆವರ ಪರಿಮಳವನ್ನೆ ಉಸಿರಲ್ಲಿ ಅಡಗಿಸಿಡಬೇಕು ಏನು ಆಸೆ. ಬೆಳಗ್ಗೆ ಎದ್ದಾಗ ರಾತ್ರಿ ತುಂಬಾ ಚಿಕ್ಕದೆನ್ನುವ ಕೊರಗು. ಬೆಳಗ್ಗೆ ಶಾಲೆಗೆ ಹೋಗುವಾಗ ದುಃಖ. ಗೊತ್ತು ಸಂಜೆ ಬರುವಾಗ ಅಮ್ಮ ವಾಪಾಸ್ಸ್ ಹೋಗಿರುತ್ತಾರೆ. ಆದರೂ ಸಂಜೆ ಶಾಲೆಯಿಂದ ಬರುವಾಗ ಯಾವುದೇ ಮರದ ಕೆಳಗಡೆ ಕಲ್ಲಿದ್ದರೆ ಅದು ದೇವರದ್ದೇ ಎಂದು ನಂಬಿ ಅದರೆದುರು ನಿಂತು ಕೈ ಮುಗಿದು ಒಂದು ಎಲೆಯನ್ನು ಮೇಲೆ ಹಾರಿಸುವುದು. ಅದು ಮೇಲ್ಮುಖವಾಗಿ ಬಿದ್ದರೆ ಅಮ್ಮ ಹೋಗಿರುವುದಿಲ್ಲ ಕೆಳಮುಖವಾಗಿ ಬಿದ್ದರೆ ಅಮ್ಮ ಹೋಗಿರುತ್ತಾರೆ ಎಂದು. ಒಂದು ವೇಳೆ ಮೇಲ್ಮುಖವಾಗಿ ಬಿದ್ದರೆ ನಿಲ್ಲದೆ ಓಡುವುದೆ. ಒಂದುವೇಳೆ ಕೆಳಮುಖವಾಗಿ ಬಿದ್ದರೆ ಮತ್ತೆ ಎರಡು ಸಲ ಹಾರಿಸಲಿಕ್ಕಿದೆ.
ಹೀಗೆ ದೊಡ್ಡಮ್ಮನ ಮನೆಯಲ್ಲೇ ಬೆಲೆಯುವ ಈ ಹುಡುಗನಿಗೆ ಪ್ರತೀ ಕ್ಷಣವೂ ಪರಕೀಯ ಭಾವದಿಂದಲೇ ಬದುಕುತ್ತಾನೆ. ಊಟ ಮಾಡುವಾಗ ಎರಡನೆ ಸಲಕ್ಕೆ ಅನ್ನ ಬೇಕೆಂದರೆ ಕೇಳಲು ಭಯ. ಬಟ್ಟೆ ಒಗೆಯಲು ಮತ್ತು ಸ್ನಾನಕ್ಕೆ ಕಸ್ತೂರಿ ಬಾರ್ ಸೋಪ್. ಇನ್ನೊಂದು ಪರಿಮಳ ಬರುವ ಸಾಬೂನ್ ಅನ್ನೋದು ಇದೆ ಅದನ್ನು ಸ್ನಾನಕ್ಕೆ ಬಳಕೆ ಮಾಡುತ್ತಾರೆ ಅನ್ನೋದು ಅವೆರಡರ ವ್ಯತ್ಯಾಸ ಕಂಡು ಹಿಡಿಯುವ ಬುದ್ಧಿ ಬಂದಾಗಷ್ಟೇ.
ಅಂತೂ ಮೂರು ವರ್ಷ ಅಂಗನವಾಡಿ ಒಂದು ವರ್ಷ ಒಂದನೇ ತರಗತಿ ದೊಡ್ಡಮ್ಮನ ಮನೆಯಲ್ಲಿ ವ್ಯಾಸಂಗ ಮುಗಿಸಿ ಉನ್ನತ ವ್ಯಾಸಂಗಕ್ಕೆ ಅಜ್ಜಿ ಮನೆಗೆ ಶಿಫ್ಟ್. ಅಜ್ಜಿ ಮಾಡುವ ಕಳ್ಳತನದ ಕೆಲಸವನ್ನು ಮುಚ್ಚಿಡುವುದನ್ನು ಕಲಿಯುವ ಪ್ರಾಯ, ವಿರೋಧಿಸುವ ಪ್ರಾಯ ಇನ್ನೂ ಬಂದಿಲ್ಲ. ಏಳನೇ ತರಗತಿ ಪಾಸ್ ಆದ. ಮೇಸ್ತ್ರೀ ಜೊತೆಗೆ ಕೆಲಸಕ್ಕೆ ಹೊರಟ ಎರಡು ತಿಂಗಳ ರಜೆಯಲ್ಲಿ. ದಿನ ಒಂದಕ್ಕೆ ಸುಮಾರು ಐದು ರೂಪಾಯಿಯಂತೆ ಮುನ್ನೂರು ರೂಪಾಯಿ ಒಂದೇ ಸಲ ಕೈಯಲ್ಲಿ ಹಿಡ್ಕೊಂಡ. ಪ್ರಪಂಚ ತುಂಬಾ ಚಿಕ್ಕದಾಗಿ ಕಾಣಿಸಿತು, ಅದರಲ್ಲೇ ಅಮ್ಮ ಕಂಡರು. ತಾನು ತಗೋಬೇಕಾದ ಸ್ಕೂಲ್ ಬುಕ್ ಕಂಡವು. ಮೊಣಕಾಲಿನವರೆಗಿದ್ದ ಚಡ್ಡಿ ಸ್ವಲ್ಪ ಉದ್ಧವಾಗಿ ಪ್ಯಾಂಟಿನಂತೆ ಕಂಡಿತು. ಮುನ್ನೂರು ರೂಪಾಯಿ ತನ್ನ ಬದುಕಿನ ಮೊತ್ತ ಮೊದಲ ಸಂಪಾದನೆ. ಫೀಜ್ ಕಟ್ಟಿ ಪ್ಯಾಂಟ್ ತಗೊಂಡು ಅಮ್ಮನಿಗೊಂದು ಕುಪ್ಪಸದ ಅರಿವೆ ತಗೊಂಡ ಒಪ್ಪಂದದ ಮೇರೆಗೆ. ಅದೆಂದರೆ ಕುಪ್ಪಸದ ಸ್ಟಿಚಿಂಗ್ ಚಾರ್ಜ್ ಅಮ್ಮನೇ ಕೊಡಬೇಕಿತ್ತು.
ಇಡೀ ಹೈಸ್ಕೂಲಿನಲ್ಲಿ ಪ್ಯಾಂಟ್ ಧರಿಸಿದ ಏಕೈಕ ಹುಡುಗ ಎಂಬ ಖ್ಯಾತಿ ಪಡೆದು ಮೂರೂ ವರ್ಷದಲ್ಲಿ ಒಂದೇ ಪ್ಯಾಂಟ್ ನಲ್ಲಿ ಮೆರೆದ.
ಹೈಸ್ಕೂಲ್ ಮುಗಿಸಿದ. ಕಾಲೇಜಿಗೆ ಸೇರಲೆಂದೇ ಹೋಟೆಲ್ಲಿನಲ್ಲಿ ಪಾತ್ರೆ ತೊಳೆಯಲು ಕೆಲಸಕ್ಕೆ ಸೇರಿದ. ಆದರೆ ಅಣ್ಣನ ಸ್ಟೂಡಿಯೋಗೆ ಜನ ಬೇಕೆಂದು ಕಾಲೇಜ್ ಯೋಜನೆ ಸ್ಕಿಪ್ ಮಾಡಿ ಒಂದು ವರ್ಷ ಅಸಿಸ್ಟೆಂಟ್ ಫೋಟೋಗ್ರಾಫರ್. ವರ್ಷ ಬಿಟ್ಟು ಒಂದು ದಿನ ತನ್ನ ಬದುಕಿನ ದಾರಿ ಇದಲ್ಲ ಎಂದು ಮನೆಯವರಿಗೆ ತಿಳಿಸದೆ ಮನೆಬಿಟ್ಟು ನಗರ ಸೇರಿದ, ಕಾಲೇಜು ಸೇರಿದ. ಮನೆ ಮನೆಗೆ ಪೇಪರ್ ಹಾಕುವ ಕೆಲಸಕ್ಕೆ ಸೇರಿಕೊಂಡ. ದುಡಿಮೆಯಲ್ಲಿ ಸುಸ್ತಿಗಿಂತ ಶಿಸ್ತು ಕಂಡ. ಮಾಲಿಕರು ಮೆಚ್ಚಿದರು. ಅಡಿಷನಲ್ ಕೆಲಸ ಒಪ್ಪಿಸಿದರು. ಪೇಪರಿನ ಜೊತೆಗೆ ಹಾಲು ಹಾಕುವುದು ಜೊತೆಗೆ ಫಿಲ್ಮ್ ಫೋಸ್ಟರ್ ಅಂಟಿಸುವುದು. ಬೆಳಗ್ಗೆ ಮೂರು ಗಂಟೆಗೆ ದಿನ ಆರಂಭ. ಕೆಲಸ ಮುಗಿಸಿ ಒಂಭತ್ತು ಗಂಟೆಗೆ ಕಾಲೇಜ್. ಮಧ್ಯಾಹ್ನ ಒಂದು ಗಂಟೆ ನಿದ್ದೆ. ರಾತ್ರಿ ಒಂದು ಬಸ್ಸು ತೊಳೆದರೆ ಐವತ್ತು ರೂಪಾಯಿ. ಒಟ್ಟು ದಿನದ ಸಂಪಾದನೆ ನೂರೈವತ್ತು ರೂಪಾಯಿ. ಇಲ್ಲೇ ಶುರುವಾಗಿದ್ದು ರೌಡಿಸಂ ಸಂಬಂಧ. ನೆನಪಿಗೆ ಬಂದಿದ್ದು ತನ್ನ ಬದುಕಿನ ಮೊದಲ ಶತ್ರು ಅಜ್ಜಿ......! ರೌಡಿ ಕೇಳಿದ ‘ಅಜ್ಜಿ ಕಥೆ ಮುಗಿಸಿ ಬಿಡ್ಲಾ.....?’
ಬೇಡ ಅದಕ್ಕೆ ಮುಂಚೆ ತನ್ನ ಮನೆಯ ಪಕ್ಕದ ಹುಡುಗನಿಗೆ ಸ್ವಲ್ಪ ಚಳಿ ಹುಟ್ಟಿಸುವ ಯೋಜನೆ ರೂಪಗೊಂಡಿತು. ಆದರೆ ಯೋಜನೆ ಲೀಕ್ ಆಗಿತ್ತು ಆತನೂ ತಯಾರಿ ನಡೆಸಿದ್ದ. ಹಾಗಾಗಿ ಪಕ್ಕದ ಮನೆ ಹುಡುಗನಿಗೆ ಅಟಾಕ್ ಮಾಡುವುದನ್ನು ಕ್ಯಾನ್ಸಲ್ ಮಾಡಿ ಅಜ್ಜಿಗೆ ಗುರಿ ಇಟ್ಟ. ಆದರೆ ಚಾಲಾಕಿ ಅಜ್ಜಿ ನಡೆದದ್ದಕ್ಕಿಂತ ಹೆಚ್ಚೇ ಚೀರಾಡಿ ಚಾ ಚೀ ಆಗುವಷ್ಟರಲ್ಲಿ ಪಕ್ಕದ ಮನೆ ಹುಡುಗ ಪೊಲೀಸ್ ತರಿಸಿದ್ದ. ತನ್ನ ರೌಡಿ ಗೆಳೆಯರೊಡನೆ ಈತನೂ ಅರೆಸ್ಟ್ ಆದ. ಮರುದಿನ ಸಂಜೆ ಪೇಪರಿನಲ್ಲಿ ಮಿಂಚಿದ "ಉಪ್ಪು ತಿಂದ ಮೊಮ್ಮಗನಿಂದಲೇ ಅಜ್ಜಿಗೆ ಚೂರಿ."
ನಾಲ್ಕು ದಿನ ಜೈಲು ವಾಸ. ಐದನೇ ದಿನ ಜಾಮೀನಿನ ಮೇಲೆ ಬಿಡುಗಡೆ. ಒಳಗಿದ್ದ ನಾಲ್ಕು ದಿನ ಹಿರಿಯ ರೌಡಿಗಳಿಂದ ತಮ್ಮ ಫೀಲ್ಡ್ ಗೆ ಆಹ್ವಾನ. ಮನೆಗೆ ಬಂದ ಮಗನ ಜೊತೆಗೆ ಕೂತು ಊಟ ಮಾಡಲು ಒಪ್ಪದ ತಂದೆ. ಮಗನ ಪರಿಸ್ಥಿತಿ ಕಂಡು ಉಣ್ಣಲು ಒಪ್ಪದ ಅಮ್ಮ. ಇದೆಲ್ಲದರ ನಡುವೆ ಬದುಕಲು ಸಾಧ್ಯವೇ ಇಲ್ಲ.
ಕೈಯಲ್ಲಿ ನಾಯಿ ಕಟ್ಟುವ ಸರಪಳಿ ಮನೆಯ ಅಟ್ಟದಲ್ಲಿ ಆತ್ಮಹತ್ಯೆಗೆ ಜಾಗ ಫಿಕ್ಸ್ ಮಾಡಿ ಮುಹೂರ್ತಕ್ಕೆ ವೈಟಿಂಗ್. ಅಷ್ಟರಲ್ಲಿ ದೊಡ್ಡಪ್ಪನ ಮಗನ ಎಂಟ್ರಿ. ವಿಷಯ ಗೊತ್ತಾಗಿ ಗುಟ್ಟು ಕಾಪಾಡಿ ಕೆಲಸ ಕೊಟ್ಟ. ಮತ್ತೆ ಅದೇ ಮನೆ ಮನೆಗೆ ಪೇಪರ್ ಹಾಕುವ ಕಾಯಕ.
ಗೆದ್ದ ಬದುಕಲ್ಲಿ ಮತ್ತೆ ವಿದ್ಯಾಭ್ಯಾಸ ಮುಂದುವರಿಕೆಗೆ ಮನೆಬಿಟ್ಟು ಬಂದ.
ಕಾಲೇಜು ಪೂರ್ತಿ ಮುಗಿವ ಮುನ್ನ ಬೆಂಗಳೂರು ಸೇರಿಕೊಂಡ. ಶರಣಾಗತಿ ಕಲಿತ ಬದುಕು ಕಲಿತ.

No comments:
Post a Comment