Saturday, March 24, 2018

ಬೆನ್ನಿನ ಮೇಲೆ ಗ್ರೀಸಿನ ಮೂರು ಗೆರೆಗಳು.

💈 ಬೆನ್ನಿನ ಮೇಲೆ ಗ್ರೀಸಿನ ಮೂರು ಗೆರೆಗಳು.
💈 

🚏 23/03/2018

🏀 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.


ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ಬೈಕಲ್ಲಿ ಬರ್ತಾ ಇದ್ದೆ. ಗಂಟೆಗೆ 40ಕಿಲೋ ಮೀಟರ್ ನ ಸ್ಪೀಡನಲ್ಲಿದ್ದ  ಬೈಕನ್ನು ಓವರ್ ಟೇಕ್ ಮಾಡಿ ಹೋಗುತ್ತಿದ್ದ ವಾಹನಗಳೆಲ್ಲವೂ ಮರು ಕ್ಷಣದಲ್ಲಿ ಮಾಯವಾಗುತ್ತಿದ್ದವು.

ಊರಲ್ಲಿ ಜೋರಾಗಿ ಮಳೆ ಬಂದಾಗ, ಮನೆಯ ಮುಂದಿನ ಕಿರು ನದಿಯ ದಂಡೆಯಲ್ಲಿರುವ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದೆ.  ಹರಿದು ಹೋಗುತ್ತಿದ್ದ ನೀರನ್ನೇ ನೋಡುತ್ತಾ ಇದ್ದೆ. ಅಲ್ಲೂ ಹೀಗೆ, ನೀರಲ್ಲಿ ತೇಲಿಕೊಂಡು ಬರುವ ತೆಂಗಿನ ಕಾಯಿಯೋ ಮರದ ದಿಮ್ಮಿಯೋ ನೋಡು ನೋಡುತ್ತಿದ್ದಂತೆ ವೇಗವಾಗಿ ನೀರಿನೊಡನೆ ಹರಿದು ಹೋಗುತ್ತಲೆ ಇದ್ದವು.

ಬೆಂಗಳೂರಿನ ಅಂತರರಾಷ್ಟ್ರೀಯ ರಸ್ತೆಯ ಬದಿಯ ಎತ್ತರದಲ್ಲಿ ಕುಳಿತು ನೋಡಿದರೆ, ಊರಿನ ತೋಡು ನೆನಪಾಗುತ್ತದೆ.

ಅಲ್ಲೂ ಹರಿಯುತ್ತದೆ. ಇಲ್ಲೂ ಹರಿಯುತ್ತದೆ.

ಎಡವಿ ಹರಿತಕ್ಕೆ ಸಿಕ್ಕಿಕೊಂಡರೆ

ಅಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಇಲ್ಲಿ ಹರಿದು ಹರಿದು ಹರಿದುಕೊಂಡೇ ಹೋಗುತ್ತದೆ.

ಅಲ್ಲಿಯಾದರೂ ಈಜಬಹುದು. ಇಲ್ಲಿ ಈಜುವುದು ಬಿಡಿ ತೇಲುವುದಕ್ಕೂ ಉಳಿಯದಂತಾಗುತ್ತದೆ.



ನನ್ನ ಗಾಡಿ ಪ್ಲೈಓವರ್ ಮೇಲೆ ಹತ್ತಿತ್ತು. ಅಲ್ಲೊಂದು ಮೂರು ಚಕ್ರದ ಜೀಪ್ ನಿಂತಿತ್ತು...! 

ಅಲ್ಲ ಚಕ್ರ ನಾಲ್ಕಿತ್ತು.

ಆದರೆ ಒಂದು, ಗಾಡಿಯ ನಟ್ಟು ಬೋಲ್ಟ್ ಗಳ ನಂಟನ್ನು ಕಳಚಿಕೊಂಡಿತ್ತು. 

ಮೂರು ಜನ ಇದ್ದರು. 

ಇಬ್ಬರು ಜೀಪನ್ನು ಎತ್ತುತ್ತಿದ್ದರು.

ಒಬ್ಬರು ಜೀಪಿನ ಪ್ಲೇಟ್ ಗೆ ಜ್ಯಾಕ್ ಕೊಡಲು ನೋಡುತ್ತಿದ್ದರು.

ಸ್ವಲ್ಪ ಎತ್ತರಕ್ಕೆ ಎತ್ತುತ್ತಿದ್ದಂತೆ ಆಗದು ಎಂದು ಕೆಳಗಿರುಸುತ್ತಿದ್ದರು. 

ನಾನು ನನ್ನ ಬೈಕಿನ ಸೈಡ್ ಸ್ಟಾಂಡನ್ನು ನೆಲಕ್ಕೂರಿಸಿದೆ. ಬೈಕಿನ ಕೀ ಯನ್ನು ಕಿಸೆಯೊಳಗಿಟ್ಟುಕೊಂಡೆ. ಅವರ ಬಳಿಗೆ ಹೋದೆ. ಜೀಪಿಗೆ ಕೈ ಕೊಟ್ಟೆ. ಜೋರಲ್ಲಿ ಬಾಯಿಂದ ಸೌಂಡ್ ಮಾಡಿದೆ. 

"ಐಸಭಾ..... ದೆತೊನಿ... ಹ್ವಾಯ್ ಪಾಡ್ ... ಪಾಡ್. ಪಾಡ್ ಮಿತ್ತ್... ದೆರ್ಪಿ... ಆಂಡ್ ಪೋಂಡ್....” ಇದು ನಮ್ಮ ತುಳು ಭಾಷೆಯ ಪದಗಳು.

ಒಂದು ನಾಲ್ಕು ಜನ ಸೇರಿ ಭಾರದ ವಸ್ತಗಳನ್ನು ಎತ್ತುವಾಗ ಅಥವಾ ಸಾಗಿಸುವಾಗ ಪರಸ್ಪರರ ಶಕ್ತಿಯನ್ನು ದ್ವಿಗುಣಗೊಳಿಸುವಲ್ಲಿ ಪ್ರೇರಣಾ ಶಕ್ತಿಯಾಗಿ, ಮೋಟಿವೇಟ್ ಗಾಗಿ ಈ ಶಬ್ಧಗಳನ್ನು ಫುಲ್ ಎನರ್ಜಿಟಿಕ್ ಆಗಿ ಹೇಳುವುದಿದೆ. ಹಾಗೆ ನೋಡಿದರೆ ಒಬ್ಬ ಇದನ್ನು ಎನರ್ಜಿಟಿಕ್ ಆಗಿ ಹೇಳುವ ಶೈಲಿಗೇ ಕೆಲಸದ ಭಾರ ಅರ್ಧದಷ್ಟು ಕಡಿಮೆಯಾಗಿರುತ್ತದೆ.

ಹೀಗೆ ನಾನಿಲ್ಲಿ ಜೀಪಿಗೆ ಕೈ ಕೊಟ್ಟು ಫುಲ್ ಸೌಂಡ್ ಮಾಡಿ ಇಷ್ಟು ಹೇಳುವಾಗ ಜ್ಯಾಕ್ ಜೀಪಿನ ಪ್ಲೇಟ್ ಕೆಳಗಡೆ ಕುಳಿತಿತ್ತು. ಮೂರೂ ಜನರು ಒಂದು ಕ್ಷಣ ನನ್ನೆಡೆಗೆ ನೋಡಿ ಒಂದು ಉಸಿರು ಬಿಟ್ಟರು. 

ಅವರಂದುಕೊಂಡಿದ್ದರು ನಾನು ಬಂದು ಎತ್ತಿದ್ದರಿಂದಲೇ ಆಯ್ತು ಅಂತ.    


ಆದರೆ ಸತ್ಯ ಹೇಳಬೇಕೆಂದರೆ, ನಿಜಕ್ಕೂ ನಾನು ಒಂದು ಹತ್ತು ಕೆಜಿಯಷ್ಟೂ ಭಾರ ಎತ್ತಲಿಲ್ಲ. ಕಾಲು ಉಳುಕಿದ್ದರಿಂದ ಎತ್ತಲು ಆಗುತ್ತಲಿರಲಿಲ್ಲ. 

ಅವರೇ ಎತ್ತಿದ್ದು. ಮೊದಲು ಎತ್ತಲು ನೋಡಿದಾಗ ಆಗದೇ ಇದ್ದದ್ದು ಈಗ ಆಗಿಯೇ ಹೋಯ್ತು. 

ನಾನು ಮಾಡಿದ್ದು ಕೇವಲ ಒಂದು ಮೋಟಿವೇಷನ್ ಸೌಂಡ್ ಅಷ್ಟೇ. ಅದು ಅವರಲ್ಲೇ ಕಮರಿ ಹೋಗಿದ್ದ ಪೋಸಿಟಿವ್ ಎನರ್ಜಿಯನ್ನು ಚಿಗುರಿಸಿತು. ಅವರ ಒಳಗಿದ್ದ ಅಷ್ಟೂ ಶಕ್ತಿಯನ್ನು ಹೊರಗೆ ತಂದಿತ್ತು.

ಮೂವರೂ ಬಂದು ಕೈ ಕುಲುಕಿದರು.  ಪರಸ್ಪರ ಹೆಸರು ಹೇಳಿಕೊಂಡೆವು. ಒಬ್ಬನ ಹೆಸರು ರಝಾಕ್.
 ಇನ್ನೊಬ್ಬನ ಹೆಸರು ಶಂಕರ. ಮತ್ತೊಬ್ಬರು ಜೀಪಿನ ಮಾಲೀಕ ರಹೀಮ.

ಈ ರಹೀಮರಿಗೆ ಗೆದ್ದ ಮರುಕ್ಷಣದ ಭಾವುಕತೆ.  
ಹತ್ತಿರಕ್ಕೆ ಎಳೆದುಕೊಂಡು ಬೆನ್ನ ಮೇಲೆ ಕೈ ಇಟ್ಟರು. ತಟ್ಟಿದರು. ಸವರಿದರು.

ಶಂಕರ ಟಯರ್ ಫಿಕ್ಸ್ ಮಾಡಿ ಬೋಲ್ಟ್ ಗಳನ್ನು ತಿರುಗಿಸುತ್ತಿದ್ದರು. ರಝಾಕ್ ಜ್ಯಾಕನ್ನು ಸಡಿಲಿಸುತ್ತಿದ್ದರು.

ನಾವಿದ್ದ ಪ್ಲೈ ಓವರ್ ಎಂಬೀ ಮೇಲು ಸೇತುವೆಯ ರಸ್ತೆಯ ಹೊಯಿಲಿನಲ್ಲಿ ವಾಹನಗಳು ಹರಿದು ಹೋಗುತ್ತಲೇ ಇದ್ದವು. 




ಜೀಪ್ ರೆಡಿ ಆಯ್ತು. ರಹೀಮರೇ ಡ್ರೈವರ್ ಸೀಟಲ್ಲಿ ಕುಳಿತರು. 
ಅವರು ಗಾಡಿ ಸ್ಟಾರ್ಟ್ ಮಾಡಿದರು. ಕ್ಲಚ್ ಬಿಟ್ಟರು. ಎಕ್ಸೆಲರೇಟರು ಕೊಟ್ಟರು.

ನಾನೂ ಗಾಡಿ ಸ್ಟಾರ್ಟ್ ಮಾಡಿದೆ. ನೆಲಕ್ಕೂರಿಸಿದ್ದ ಸ್ಟಾಂಡ್ ತೆಗೆದೆ. ಎಕ್ಷೆಲರೇಟರ್ ಕೊಟ್ಟೆ.

ಮನೆಗೆ ಬಂದು ಅಂಗಿ ತೆಗೆದೆ. ಅಂಗಿಯ ಬೆನ್ನಿನ ಮೇಲೆ ಗ್ರೀಸಿನ ಮೂರು ಗೆರೆಗಳು.

ಬೆನ್ನು ಸವರಿದ, ಬೆನ್ನು ತಟ್ಟಿದ ರಹೀಮರ ಬೆರಳಿನ ಅಚ್ಚು ನನ್ನ ಬೆನ್ನ ಮೇಲೆ ಇತ್ತು.

ರಾಮ ಸೇತುವೆ ದಾಟಿ ಹೋದ. ಅಳಿಲಿನ ಬೆನ್ನ ಮೇಲೆ ಮೂರು ಗೆರೆ ಎಳೆದ.

ರಹೀಮ ಮೇಲು ಸೇತುವೆ ದಾಟಿ ಹೋದ. ನನ್ನ ಬೆನ್ನ ಮೇಲೆ ಗ್ರೀಸಿನ ಮೂರು ಗೆರೆ ಎಳೆದು ಹೋದ. 



🏀 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

🎯 9900500832. 


🐿🥢🐿🥢🐿🥢🐿🥢🐿

Thursday, September 14, 2017

ಮೊಬೈಲಿನ ಪಕ್ಕಾಸಿಗೆ ಸಿಕ್ಕಿಸಿದ ಸರಿಗೆಯ ಕೊಕ್ಕೆ.

💈🏮💈🏮💈🏮💈🏮💈


ಮೊಬೈಲಿನ ಪಕ್ಕಾಸಿಗೆ ಸಿಕ್ಕಿಸಿದ ಸರಿಗೆಯ ಕೊಕ್ಕೆ.


💈🏮💈🏮💈🏮💈🏮💈

14/09/2017


ಒಂದನೇ ಕ್ಲಾಸಿನಲ್ಲಿ ಒಂದು ಎರಡು ಬರೆಯಲು ಸುಲಭ ಆಗುವಂತೆ ಹಾಕಿದ ಗೆರೆಯಂತೆ ಜೋಡಿಸಿದ ಮನೆಯ ಗೋಡೆಯ ಮೇಲಿನ ಪಕ್ಕಾಸು ಮತ್ತು ರೀಪು.

ಆ ಪಕ್ಕಾಸು ರೀಪುಗಳ ಮೇಲೆ,

ನಮ್ಮ ಪರಶುರಾಮ ಸೃಷ್ಟಿಯ ನೆಲದ ಮಣ್ಣಿನಿಂದ ತಯಾರಿಸಿದ ಹಂಚು.


ಈ ಪಕ್ಕಾಸಿನ ಒಂದು ತುದಿಯಲ್ಲಿ ಒಂದು ಕೊಕ್ಕೆಯಾಗಿ ಸಿಕ್ಕಿಸಿದ ಸರಿಗೆ.

ಆ ಕೊಕ್ಕೆಯ ಹೊಟ್ಟೆ ತುಂಬಾ ನೇತಾಡಿಕೊಂಡಿರುವ ಆಮಂತ್ರಣ ಪತ್ರಿಕೆಗಳು.


ಮದುವೆ, ಸೀಮಂತ, ನಾಮಕರಣ, ಉಪನಯನ, ಮಾತ್ರವಲ್ಲದೇ ಸತ್ತವರ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯೂ ಆ ಕೊಕ್ಕೆಯಲ್ಲೇ ಜೀವಂತವಾಗಿ ನೇತಾಡುತ್ತಿರುತ್ತದೆ.

ಈ ರೀತಿಯಲ್ಲೊಂದು ಆಮಂತ್ರಣ ಪತ್ರಿಕೆಯನ್ನು ತೆಗೆದಿಡುವ ಪ್ರೀತಿಯೊಂದು ಇತ್ತು.

ಈಗ ಏನಿದ್ದರೂ ಸಾಫ್ಟ್ ಯುಗ.
ಎಲ್ಲವೂ ಸಾಫ್ಟ್ ಕಾಪಿಯಲ್ಲೇ ಮುಗಿದು ಹೋಗುತ್ತದೆ.

ಅದೆಷ್ಟೋ ಆಮಂತ್ರಣ ಪತ್ರಿಕೆಗಳು ಕೇವಲ ವ್ಹಾಟ್ಸಾಪ್, ಫೇಸ್ ಬುಕ್ಕ್, ಟೆಲಿಗ್ರಾಂ, ಜಿಮೇಲ್ ನಲ್ಲಿ ಬಂದು ಸೇರುತ್ತದೆ, ಡಿಲೀಟಾಗಿ ಹೋಗುತ್ತದೆ.


ಯಾವುದೇ ತಾಳಮದ್ದಳೆ ಕೈಗೇ ಸಿಗದೆ ಹಾಗೇ ಹರಿದು ಹೋಗುವ ಹಾಗಾಗಬಾರದು, ಅದೊಂದು ದಾಖಲಾಗಿ ಉಳಿಯಬೇಕೆನ್ನುವ ಉದ್ದೇಶದಿಂದ ಹುಟ್ಟಿದ ರೆಕಾರ್ಡಿಂಗ್ ಮೇಳ. ಅಲ್ಲಿ ರೆಕಾರ್ಡ್ ಆಗುವ ತಾಳಮದ್ದಳೆಗಳ ಆಮಂತ್ರಣ ಪತ್ರಿಕೆಗಳು ದಾಖಲೀಕರಣಕ್ಕಾಗಿ ತೆಗೆದಿಡುವಲ್ಲಿ ಹುಡುಕುವಾ ಅಂದರೆ ಮತ್ತೆ ಅದು ಸಿಗದೇ ಒದ್ದಾಡುತ್ತಿದ್ದೆವು.

ಈ ಸಮಸ್ಯೆಯನ್ನು ಗಮನಿಸುತ್ತಿದ್ದ ನಮ್ಮ ರೆಕಾರ್ಡಿಂಗ್ ಮೇಳದವರೇ ಆದ ಈ ರಂಜನ್ ಹೊಳ್ಳರು ಸುರತ್ಕಲ್ ಇವರು ರೆಕಾರ್ಡಿಂಗ್ ಮೇಳದ ಈ ಸಮಸ್ಯೆಯಿಂದಲೇ ಪ್ರೇರಣೆಗೊಂಡು ಅದಕ್ಕೊಂದು ಪರಿಹಾರವನ್ನು ಕಂಡುಕೊಂಡ ಪರಿ ಇದು.


ಈ ಎಲ್ಲಾ ಆಮಂತ್ರಣ ಪತ್ರಿಕೆಗಳನ್ನು ಒಂದು ಸರಿಗೆಯ ಕೊಕ್ಕೆಯಲ್ಲಿ ಸಿಕ್ಕಿಸಿಡಬೇಕೆಂದು ಯೋಚನೆ ಮಾಡಿದ ಇವರು, ತನ್ನ ಮೊಬೈಲಿನ ಪಕ್ಕಾಸಿಗೇ ಒಂದು ಸರಿಗೆಯ ಕೊಕ್ಕೆಯನ್ನು ಸಿಕ್ಕಿಸಿಕೊಂಡಿದ್ದಾರೆ.


ರಂಜನ್ ಹೊಳ್ಳ ಸುರತ್ಕಲ್ ಇವರು ಯಕ್ಷಗಾನ ಮತ್ತು ತಾಳಮದ್ದಳೆಗೆ ಸಂಬಂಧ ಪಟ್ಟ ಯಾವುದೇ ಆಮಂತ್ರಣ ಪತ್ರಿಕೆ ಬಂದರೆ ಅದನ್ನು ಒಂದು ಕಡೆ ಶೇಖರಣೆ ಮಾಡಿಡುತ್ತಿದ್ದಾರೆ.

ಟೆಲಿಗ್ರಾಂನಲ್ಲೊಂದು ಒಬ್ಬರೇ ಇರುವ ಗ್ರೂಪ್ ಮಾಡಿಕೊಂಡು, ಬೇರೆ ಬೇರೆ ಯಕ್ಷಗಾನ ಗ್ರೂಪಿನಲ್ಲಿ ಬರುವ ಆಮಂತ್ರಣ ಪತ್ರಿಕೆಗಳನ್ನು ತನ್ನ ಗ್ರೂಪಿಗೆ ಫಾರ್ವರ್ಡ್ ಮಾಡಿಕೊಂಡು ಶೇಖರಣೆ ಮಾಡುತ್ತಾ ಬರುತ್ತಿದ್ದಾರೆ.

ಯಾರಿಗಾದರೂ ಯಾವುದಾದರೂ ಆಮಂತ್ರಣ ಪತ್ರಿಕೆ ಮತ್ತೊಮ್ಮೆ ಬೇಕೆಂದರೆ ಇವರನ್ನು ಸಂಪರ್ಕಿಸಬಹುದು.

ರಂಜನ್ ಹೊಳ್ಳ ಸುರತ್ಕಲ್ ಇವರ ಫೋನ್ ನಂಬರ್ 8880277121.


ನಿಮ್ಮ ಕೈಗೆ ಸಿಕ್ಕ ಯಕ್ಷಗಾನಕ್ಕೆ ಸಂಬಂಧಪಟ್ಟ ಆಮಂತ್ರಣ ಪತ್ರಿಕೆಗಳನ್ನು ಇವರ ನಂಬರಿಗೆ ಕಳುಹಿಸಿಕೊಡಿ.


ಯಾರದ್ದೋ ಪಕ್ಕಾಸಿನಲ್ಲಿ ನೇತಾಡುತ್ತಿರುವ, ಯಾರದ್ದೋ ಗೋಡೆಗೆ ಅಂಟಿಸಿರುವ, ಮರದಲ್ಲೋ, ಕರೆಂಟ್ ಕಂಬದಲ್ಲೋ ಇರುವ ಆಮಂತ್ರಣ ಪತ್ರಿಕೆಯ ಫೋಟೋ ತೆಗೆದಾದರೂ ರಂಜನ್ ಹೊಳ್ಳ ಸುರತ್ಕಲ್ ಇವರಿಗೆ ಕಳುಹಿಸಿಕೊಂಡಿ.

🔵ಸುಧಕಾರ ಜೈನ್ ಹೊಸಬೆಟ್ಟು ಗುತ್ತು.


🚦🔹🚦🔹🚦🔹🚦🔹🚦🔹🚦

Monday, September 11, 2017

ಹೃದಯದಲ್ಲೇ ಮೂರಡಿ ಗೆಲ್ಲುವ ವಾಮನ

💈🏮💈🏮💈🏮💈🏮💈


ಹೃದಯದಲ್ಲೇ ಮೂರಡಿ ಗೆಲ್ಲುವ ವಾಮನ


ಸುಧಾಕರ ಜೈನ್ ಹೊಸಬೆಟ್ಟು ಗುತ್ತು.


           🚦11/9/2017🚦



💈🏮💈🏮💈🏮💈🏮💈



ಹೃದಯದಲ್ಲಿ ಮೂರಡಿ ಜಾಗ ಉಂಟಾ ಎಂದು ಪ್ರಶ್ನೆ ಹುಟ್ಟುತ್ತದೆ ಅಂತ ಅಂದರೆ, ಕೇಳಲಾರಂಭಿಸುವ ಪ್ರೇಕ್ಷಕನ ವಿಶಾಲ ಹೃದಯವೇ ಉತ್ತರವಾಗುತ್ತದೆ.





ಇದು ನಮ್ಮ ವಿನಾಯಕ ಭಟ್ಟ ಗಾಳಿಮನೆಯವರ ಸಂಯೋಜನೆಯಲ್ಲಿ ನೆರವೇರಿದ ವಾಮನ ಚರಿತ್ರೆ ತಾಳಮದ್ದಳೆಯ ಬಗ್ಗೆ ನನ್ನದೊಂದೆರಡು ಅಕ್ಷರಗಳು.


ದಿನಾಂಕ 05/09/2017ರಂದು ಎಂ. ಕೆ ಹರೀಶ್ಚಂದ್ರ ರಾವ್ ಮತ್ತು ಮಕ್ಕಳು, ತಮ್ಮ ಮನೆಯಾದ ಲಕ್ಷ್ಮೀ ನಿವಾಸ ಕೊಂಡೇಬೆಟ್ಟು ಅಶ್ವತ್ಥಪುರ ಇಲ್ಲಿ  
ವೇದಮೂರ್ತಿ ಪ್ರಭಾಕರ ಭಟ್ಟರ ಅಧ್ಯಕ್ಷತೆಯಲ್ಲಿ ಆಯೋಜಿಸಿದ ತಾಳಮದ್ದಳೆ.





ಕೃಷ್ಣಮೂರ್ತಿ ಮಾಯಣ ಎಂಬವರಿಂದ 18 ನಿಮಿಷಗಳ ಸಂಪೂರ್ಣ ವಿವರಗಳೊಂದಿಗೆ,  ಪಾತ್ರಧಾರಿಗಳ ಪರಿಚಯ ಭಾಷಣದ ಜೊತೆಗೆ ಆರಂಭವಾಗುತ್ತದೆ ಈ ತಾಳಮದ್ದಳೆ.


ಯಾವುದೇ ಒಂದು ತಾಳಮದ್ದಳೆ ಅಂದರೆ, ಪ್ರೇಕ್ಷಕನಾದವನ ಮೊದಲ ಪ್ರಶ್ನೆ ಅದರಲ್ಲಿರುವಕಲಾವಿದರುಗಳು ಯಾರೆಲ್ಲಾ ಇರಬಹುದೆಂಬುವುದೇ ಆಗಿರುತ್ತದೆ.  


ಅದಕ್ಕೆ ಉತ್ತರವಾಗಿ “ಅ ಶ್ರೇಣಿ” ಯ ಕಲಾವಿದರಾಗಿದ್ದರೆ ಅದನ್ನಾಲಿಸುವ ಕುತೂಹಲದಆಯುಷ್ಯ ಹೆಚ್ಚಾಗುತ್ತದೆ. ಇಲ್ಲದೇ ಹೋದರೆ ಕುತುಹಲದ ಆಯುಷ್ಯವೇ ಮುಗಿದುಹೋಗುತ್ತದೆ.


ಈ ತಾಳಮದ್ದಳೆಯಲ್ಲಿ ಹೆಚ್ಚಿನವರು “ಅ ಶ್ರೇಣಿ” ಯ ಅಂದರೆ “ಎ ಗ್ರೇಡಿನ” ಕಲಾವಿದರಲ್ಲ.

ರಾಧಾಕೃಷ್ಣ ಕಲ್ಚಾರ್ ಮತ್ತು ಶಿವಶಂಕರ ಬಲಿಪರನ್ನು ಹೊರತು ಪಡಿಸಿ.


ಇದನ್ನು ಕೇಳುವುದಕ್ಕೆ ಆರಂಭಿಸುವಾಗ ಪಾತ್ರಧಾರಿಗಳ ಪರಿಚಯ ಆಗುತ್ತಿದ್ದಂತೆ ನನ್ನ ಕುತೂಹಲದ ಆಯುಷ್ಯ ನರಳುವುದಕ್ಕಾರಂಭಿಸಿತು.


ನಾನು ಒಬ್ಬ ಓದುಗನಾಗಿ, ಒಬ್ಬ ಬರಹಗಾರನಾಗಿ ಒಂದು ಲೇಖನವನ್ನು ಒಬ್ಬ ಓದುಗ ಯಾವೆಲ್ಲಾ ಕಾರಣಕ್ಕೆ ಓದ ಬೇಕು ಎಂಬುದಕ್ಕೆ ಕೆಲವು ಕಾರಣಗಳನ್ನು ಕಂಡುಕೊಂಡಿದ್ದೇನೆ.





ಅದರಲ್ಲಿ ಪ್ರಧಾನವಾಗಿರುವ ಕಾರಣ ಅಂದರೆ ಅದನ್ನು ಬರೆದವರು ಯಾರು ಎಂಬ ಕಾರಣದಿಂದ ಓದುತ್ತಾನೆ. ಆಮೇಲೆ ಯಾವ ವಿಷಯದ ಬಗ್ಗೆ ಇರುವ ಲೇಖನ ಎಂಬುವುದರ ನೆಲೆಯಿಂದ ಓದುವುದು. ಹೀಗೆ ಅನೇಕ ಕಾರಣಗಳು ಬೆಳೆಯುತ್ತಾ ಬೆಳೆಯುತ್ತಾ, ಲೇಖನದ ಉದ್ದದ ಅಳತೆಯೂ ಒಂದು ಕಾರಣವಾಗಿ ನಿಲ್ಲುತ್ತದೆ.


ಆದರೆ ಇದೆಲ್ಲದಕ್ಕಿಂತಲೂ ನಾನು ಕಂಡುಕೊಂಡ ಇನ್ನೊಂದು ಕಾರಣ ಉಂಟು. ಬರಹಗಾರನ ಕುಲ ಗೋತ್ರ ಗೊತ್ತೇ ಇಲ್ಲದೆ ಬರಹಗಾರನ ಬಗ್ಗೆ ಪೂರ್ವಗ್ರಹ ಇಲ್ಲದೇ ಓದಬೇಕುಂತಾದರೆ..,


ಒಂದು, ಬರಹದ ಹೆಡ್ಡಿಂಗ್ ಓದುಗನನ್ನು ಸೆಳೆಯಬೇಕು. ಹೆಡ್ಡಿಂಗ್ ಮೊದಲ ವಾಕ್ಯವನ್ನು ಓದಿಸುವಂತಾಗಿಸಬೇಕು. ಮೊದಲ ವಾಕ್ಯ ಎರಡನೇ ವಾಕ್ಯವನ್ನು, ಹೀಗೆ ಮುಂದುವರಿಯುತ್ತಾ ಬರಹದಂತ್ಯದವರೆಗೆ ಕರೆದುಕೊಂಡು ಹೋಗುವ ಶಕ್ತಿ ಬರಹಗಾರನಲ್ಲಿರಬೇಕು. ಇದು ನನ್ನ ನಂಬಿಕೆ.


ಹಾಗೆಯೇ ಒಂದು ತಾಳಮದ್ದಳೆಯನ್ನು ಪ್ರೇಕ್ಷಕನೋರ್ವ ಕೇಳುವುದಕ್ಕೆ ಇರುವ ಕಾರಣಗಳಲ್ಲಿಇರುವ ಪ್ರಧಾನ ಕಾರಣ ಅಂದರೆ ಅದರಲ್ಲಿರುವ ಕಲಾವಿದರು ಯಾರೆಲ್ಲಾ..? ಆಮೇಲೆ ಯಾವಪ್ರಸಂಗ. ಹೀಗೆ ಹೋಗುತ್ತಾ ಹೋಗುತ್ತಾ ಕೊನೆಗೆ ಅದು ಎಷ್ಟು ಗಂಟೆಯ ಪ್ರಸಂಗ ಅಂತ ಅನ್ನುವುದು ಕೂಡ ಒಂದು ಕಾರಣವಾಗಿ ನಿಲ್ಲುತ್ತದೆ.


ಈಗ ಈ ತಾಳಮದ್ದಳೆಯನ್ನು ಕೇಳುವುದಕ್ಕೆ ಇರುವ ಕಾರಣಗಳಲ್ಲಿ, ಪ್ರಧಾನವಾಗಿರುವ ಆ ಕಾರಣವೇ ನನ್ನ ಕುತೂಹಲವನ್ನು ನರಳುವುದಕ್ಕಾರಂಭಿಸಿದ್ದು. ಅಂದರೆ “ಅ ಶ್ರೇಣಿ” ಯ ಕಲಾವಿದರುಗಳು ಕೆಲವರು ಮಾತ್ರ ಇರುವುದೇ ಇದಕ್ಕೆ ಕಾರಣ.





ಆದರೂ ಕೇಳಬೇಕು, ಕೇಳಿಸುತ್ತದೆ ಅಂದರೆ ಅದಕ್ಕಿರುವು ಕಾರಣ ಏನು.


ನಮ್ಮ ವಿನಾಯಕ ಭಟ್ಟ ಗಾಳಿಮನೆಯವರು ವಾಮನ ಮಾಡಿದ್ದಾರೆ ಎಂಬುದೇ ಆಗಿತ್ತು. ಇದು ಒಂದು ಕಾರಣವಾದರೆ, ಆಮೇಲೇ ಕೇಳುತ್ತಾ ಕೇಳುತ್ತಾ ಹೋದಂತೆ ಹುಟ್ಟಿದ ಕಾರಣಗಳು ಕೆಲವು ಇದೆ. ಆ ಕೆಲವು ಕಾರಣಗಳಲ್ಲಿ ಒಂದಾದರೂ ನಿಮಗೂ ಕಾರಣವಾಗಿ ನೀವು ಕೇಳುವಂತಾದರೆ ನಾನು ಬರೆದ ಕಾರಣ ಜೀವಂತವಾಗುತ್ತದೆ.


1). ಮಾಧವ ಆಚಾರ್ಯ ಸಂಪಿಗೆ ಇವರ ಭಾಗವತಿಗೆ.


                   ತಾಳಮದ್ದಳೆ ಆರಂಭ ಆಯ್ತು. ಮಾಧವ ಆಚಾರ್ಯರ ಭಾಗವತಿಗೆ ಆರಂಭವಾಗುತ್ತಿದ್ದಂತೆ ನನ್ನ ಕುತೂಹಲ ಚಿಗುರಲಾರಂಭಿಸಿತು. ಒಂದು ಶುದ್ಧ, ಹಳೆಯ ಪರಂಪರೆಯ ಭಾಗವತಿಗೆ. ಅದಕ್ಕಿಂತಲೂ ಮುಖ್ಯವಾಗಿ ಪ್ರಸಂಗದ ಕವಿ ಬರೆದ ಪದ್ಯಕ್ಕೆ ಸಿಗುವ ನ್ಯಾಯ. ಅಷ್ಟು ಚಂದ ಸಾಹಿತ್ಯ ಸ್ಪಷ್ಟತೆ. ಯಕ್ಷಾಗಾನ ಕವಿ ಬರೆದ ಪದ್ಯವನ್ನು ಪ್ರೇಕ್ಷಕನಿಗೆ ತಲುಪಿಸುವಲ್ಲಿ ಸಾಹಿತ್ಯದ ಸ್ಪಷ್ಟತೆಯ ವಿಷಯಕ್ಕೆ ಬಂದರೆ, ಬಡಗಿನ ಭಾಗವತರಿಗಿಂತ ತೆಂಕಿನ ಭಾಗವತರು ಕಡಿಮೆ ಶ್ರಮ ವಹಿಸುವುದು. ಆದರೆ ಈ ನಮ್ಮ ಮಾಧವ ಆಚಾರ್ಯರ ಭಾಗವತಿಗೆ  ಕೇಳುತ್ತಾ ಆನಂದ ತಡೆಯಲಾರೆದೆ ನೇರವಾಗಿ ಅವರಿಗೊಂದು ಫೋನ್ ಮಾಡಿ ಮಾತಾಡಿದೆ. ಮಾಧವ ಆಚಾರ್ಯರು ಈ ಪ್ರಸಂಗದಲ್ಲಿ ಬಲಿಪ ಪರಂಪರೆಯ ಶೈಲಿಯಲ್ಲಿ ಹಾಡಿದ್ದಾರೆ. ಬಲಿಪ ಶಿವಶಂಕರ ಭಟ್ ಅಲ್ಲೇ ಇದ್ದದರಿಂದ ತುಂಬಾ ಭಯದಿಂದಲೇ ಹಾಡಿದ್ದೆ ಎಂದರು. ತಾಯಿ ಮಾಡುವ ಅಡುಗೆಯ ರುಚಿಯನ್ನೇ ಮಕ್ಕಳೂ ಮಾಡುತ್ತಾರೆ ಅಂದರೆ ಅದು ಆ ತಾಯಿ ಮಾಡಿದ ರುಚಿಯಲ್ಲೊಂದು ಧರ್ಮದ ಶಕ್ತಿ ಎಂದು ನಂಬುವ ಭಾವುಕತೆ, ಜೀವಂತ ಇದೆ. ಹಾಗಿರುವಾಗ ಆ ತಾಯಿಯನ್ನು ತಾಯಿಯಂತೇ ಪ್ರೀತಿಸುವ ಅಭಿಮಾನ ಹೊಂದಿರುವಜೀವವೂ ಹಾಗೆ ಮಾಡುತ್ತದೆ ಎಂದರೆ ಅದು ಆ ನಂಬಿಕೆಗೆ ಸಿಗುವ ಧೈರ್ಯ. ಈ ಮಾಧವಆಚಾರ್ಯರು ಬಲಿಪ ಪರಂಪರೆಯನ್ನು ಅನುಕರಣೆ ಮಾಡುತ್ತಿಲ್ಲ. ಅವರಲ್ಲೊಂದು ಜನಪದೀಯ ಸ್ವಂತಿಕೆ ಇದೆ. ತನ್ನ ಪ್ರೀತಿಯ ತಾಯಿ ಮಾಡಿದ ಅಡುಗೆಯ ಕ್ರಮವನ್ನೇ ಬಳಸುವದೇ ಆದರೂ, ಅದಕ್ಕೆ ಬಳಸುವ ಪಾತ್ರೆ, ಅಡುಗೆ ಸಾಹಿತ್ಯ.., ಇದೆಲ್ಲಾ ತನ್ನ ಮನೆಯದ್ದೇ, ತನ್ನದೇ ಮನಸಿನದ್ದೇ.





 2). ಕೃಷ್ಣಮೂರ್ತಿ ಮಾಯಣರದ್ದು ಕಶ್ಯಪ.


         ಇವರದ್ದು ನಾನು ಇದೇ ಮೊದಲು ಅರ್ಥ ಕೇಳುವುದು. ಇವರು ಒಳ್ಳೆಯ ಓದುಗನೆಂಬುವುದು ಇವರ ಅರ್ಥಗಾರಿಕೆಯಲ್ಲಿ ಗೊತ್ತಾಗುತ್ತದೆ. ‘ಆಳವಾದ ಅಧ್ಯಯನ’ ಅಂತ ಹೇಳುತ್ತೇವಲ್ಲಾ ಹಾಗೆ ಇದೆ. ಆದರೆ ಇವರದ್ದು ಒಂದೇ ಒಂದು ದೋಷ ಅಂತ ಅಂದರೆ ಇವರ ಜ್ಞಾನ ತುಂಬಿದ ಕೆರೆ.  ತೊರೆಯಾಗಿ, ನದಿಯಾಗಿ ಹರಿದು ಹೋಗುವುದಕ್ಕೆ ಸಿಕ್ಕ ಅವಕಾಶಗಳು ಕಡಿಮೆ ಅಂತ ಕಾಣುತ್ತದೆ. ಶ್ರೀಯುತರು ಇನ್ನಷ್ಟು ಕೂಟದಲ್ಲಿ ಅರ್ಥಧಾರಿಯಾಗಿ ಕುಳಿತುನಿಮ್ಮ ಜ್ಞಾನದ ಕೆರೆಯನ್ನು ತೊರೆಯನ್ನಾಗಿಸಿ ಪ್ರೇಕ್ಷಕನೆಡೆಗೆ ಹರಿಯಬಿಡುವ ಭಾಗ್ಯ ನಿಮ್ಮದು ಮತ್ತು ನಮ್ಮದೂ ಆಗಲಿ ಎಂದು ಪ್ರಾರ್ಥನೆ.





3). ವಿನಾಯಕ ಭಟ್ ಗಾಳಿಮನೆಯವರ ವಾಮನ.





ಈ ಪ್ರದರ್ಶನದಲ್ಲಿ ಸೆಳೆತದ ಕೇಂದ್ರ ಬಿಂದುವೇ ಈ ವಿನಾಯಕ ಭಟ್ ಗಾಳಿ ಮನೆಯವರು. ಹಿರಿಯ ಅರ್ಥಧಾರಿಗಳಾದ ರಾಧಕೃಷ್ಣ ಕಲ್ಚಾರ್ ಇವರ ಜೊತೆಗೆ ಅರ್ಥ ಸಮುದ್ರವನ್ನು ಈಜಿ ದಾಟಿದ ಸಂತೋಷ.


ರಾಧಕೃಷ್ಣ ಕಲ್ಚಾರರು ಚೆನ್ನಾಗಿ ಮಾತಾಡಿಸುತ್ತಾರೆ ಎಂದು ಒಂದು ಮಾತೇ ಇದೆ. ಆದರೆ ಮಾತಾಡುವ ತಾಕತ್ತು ಇರಬೇಕಾಲ್ಲಾ…!


ಆದರೆ ಇಲ್ಲಿ ನಮ್ಮ ಈ ವಿನಾಯಕ್ ಭಟ್ ಗಾಳಿಮನೆಯವರು ಮಾತಿಗೆ ಮಾತು, ಮಾತಿಗೆ ಮಾತು ಆಡುವ ಚಂದವನ್ನು ಕೇಳುತ್ತಾ ಆನಂದದ, ಕುತೂಹಲದ ಆಯುಷ್ಯ ಮತ್ತಷ್ಟು ಹೆಚ್ಚಾಗುತ್ತದೆ.


ಒಬ್ಬ ಚೆನ್ನಾಗಿ ಚೆಂಡನ್ನು ಎಸೆಯಬಲ್ಲನೆಂದರೆ ಅವನ ಎದುರಿಗೆ ಗೋಡೆಯ ಹಾಗೆ ನಿಂತರೂ ಸಾಕಾಗುತ್ತದೆ. ಆ ಚೆಂಡು ಮರಳಿ ಎಸೆದವನ ಕೈ ಸೇರುತ್ತದೆ. ಆದರೆ ಜೀವಂತಗೋಡೆಯಾದರೆ…! ಎಸೆದ ಚೆಂಡನ್ನು ಒಂದು ಕ್ಷಣ ಹಿಡಿದುಕೊಂಡು ಮತ್ತೆ ತಕ್ಷಣ ಹಿಂತಿರಿಗಿಸುವ ಪ್ರಕ್ರಿಯೆಯಲ್ಲಿ ಒಂದು ಜೀವ ಇರುತ್ತದೆ, ಜೀವಂತಿಗೆ ಇರುತ್ತದೆ. ಇದು ತಾಳಮದ್ದಳೆಯ ಅರ್ಥಗಾರಿಕೆಯಲ್ಲಿ ಎಲ್ಲಾ ಕಡೆ ಎಲ್ಲರಿಗೂ ಆಗುವುದಿಲ್ಲ. ಇಲ್ಲಿ ವಿನಾಯಕರು ಇದನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ.


ಅಷ್ಟೇ ಅಲ್ಲದೆ ವಿನಾಯಕ ಭಟ್ಟರ ಆರಂಭದ ಕಾಲದ ಅರ್ಥವನ್ನು ನೋಡಿದ್ದೇನೆ, ಕೇಳಿದ್ದೇನೆ, ಅದರ ಬಗ್ಗೆ ಬರೆದಿದ್ದೇನೆ. ಅವರು ಅಂದು ಇದ್ದ ಎತ್ತರದಿಂದ ಇಂದು ಏರಿದ ಎತ್ತರದ ಅಂತರ ಅದು ಬಹಳ ಎತ್ತರವಾಗಿದೆ.

ವಿನಾಯಕ ಭಟ್ಟರೇ ನಿಮ್ಮ ವಿನಯತೆಯೇ ನಿಮ್ಮನ್ನು ಮೇಲಕ್ಕೆತ್ತುತ್ತಿರುವುದು.  


4). ರಾಧಕೃಷ್ಣ ಕಲ್ಚಾರರದ್ದು ಬಲಿ.



ರಾಧಣ್ಣನ ಬಗ್ಗೆ ಈ ಲೇಖನದಲ್ಲಿ ಹೆಚ್ಚೇನು ಹೇಳುವುದಿಲ್ಲ. ಆದರೂ ಅವರೊಂದು ಪೀಠಿಕೆಯಲ್ಲಿ ಬಳಸಿದ ಸಿದ್ಧಾಂತ ತುಂಬಾ ಇಷ್ಟ ಆಗಿ ಅವರು ಮುಂಬೈಯಲ್ಲಿ ಇದ್ದಾರೆ ಎಂದು ಗೊತ್ತಿದ್ದರೂ ಅವರಿಗೊಂದು ಫೋನ್ ಮಾಡಿ ಮಾತಾಡಿದೆ.


ಆ ಬಲಿಯ ಎದುರಿಗೆ ಯಜ್ಞಾಗ್ನಿ ಊರ್ಧ್ವಮುಖವಾಗಿ ಜ್ವಾಲೆಗಳು ಪ್ರಜ್ವಳಿಸುತ್ತಿರುವುದನ್ನೇ ರೂಪಕವಾಗಿ ತಗೊಂಡು ಇದು ನಮ್ಮ ಬದುಕಿನ ಅಭಿಲಾಷೆಗಳನ್ನು ಊರ್ಧ್ವಮುಖಿಯಾಗಿ ಎತ್ತರಿಸಬೇಕು ಎಂಬುವುದನ್ನು ಇದು ಸೂಚಿಸುತ್ತದೆ ಎಂದು ಹೇಳುವಾಗ ನಮ್ಮ ಕಣ್ಣೆದುರಿಗೆ ಒಂದು ಯಜ್ಞ ಮಂಟಪದ ದೃಶ್ಯವೇ ಬಂದು ನಿಲ್ಲುತ್ತದೆ.


5). ವೇಂಕಟರಮಣ ಭಟ್ ಕೆರೆಗದ್ದೆ ಇವರದ್ದು ಶುಕ್ರಾಚಾರ್ಯ.





ಶ್ರೀಯುತರು ನನ್ನ ಬಹು ಆಪ್ತರು. ಆದರೆ ಇದೇ ಮೊದಲು ನಾನಿವರ ಅರ್ಥವನ್ನು ಕೇಳಿದ್ದು.


ತನ್ನ ಪ್ರೀತಿಯ ವಿದ್ಯಾರ್ಥಿಗೆ ಒಬ್ಬ ಗುರುವಾದವನು ಹೇಗೆ ಪ್ರೀತಿಯಿಂದ ಬುದ್ಧಿ ಹೇಳುತ್ತಾನೋ ಹಾಗೆ ಪ್ರೀತಿಯಿಂದ ಅರ್ಥ ಹೇಳಿದ ಕೆರೆಗದ್ದೆಯವರು ನಿಜಕ್ಕೂ ಪ್ರೇಕ್ಷಕನ ಮನ ಗೆದ್ದಿದ್ದಾರೆ. ಒಂದು ಕಡೆ ತನ್ನ ವಿದ್ಯಾರ್ಥಿಯಲ್ಲಿ ಭಾವುಕನೂ ಆಗುವ ಸನ್ನಿವೇಶ ಬಂದಾಗ ಅಲ್ಲಿಯೂ ತುಂಬಾ ಚಂದ ಮಾಡಿದ್ದಾರೆ.


ಇನ್ನು ಯಕ್ಷಗಾನದ ಚಂದದ ಶೈಲಿಯ ವಿಷಯಕ್ಕೆ ಬಂದರೆ, ವಿನಾಯಕ್ ಭಟ್ಟ ಗಾಳಿಮನೆಮತ್ತು ಕೃಷ್ಣಮೂರ್ತಿ ಮಾಯಣ ಇವರಿಬ್ಬರಿಗಿಂತ ಈ ಕೆರೆಗದ್ದೆ ವೆಂಕಟರಮಣರದ್ದೇ ತುಂಬಾ ಚಂದ.





6).ಹಿಮ್ಮೇಳದಲ್ಲಿ ದೇವಾನಂದ ಭಟ್ , ಪುರುಷೋತ್ತಮ ತುಳುಪುಳೆ, ರವಿಪ್ರಸಾದ್ ಶೆಟ್ಟಿ. ತುಂಬಾ ಚೆನ್ನಾಗಿ ತಮ್ಮ ಕಾರ್ಯ ನಿರ್ವಹಿಸಿದ್ದಾರೆ‌.


ಇನ್ನು ಬಲಿಪ ಶಿವಶಂಕರ ಭಾಗವತರದ್ದು ಪದ್ಯ ಆರಂಭವಾಗುವಾಗ ನಾನು ಬೈಕಿನಲ್ಲಿ ಬೆಂಗಳೂರಿನ ರಿಂಗ್ ರೋಡಿನಲ್ಲಿ ಹೋಗುತ್ತಿದ್ದೆ. ಅವರ ಪದ್ಯ ಕೇಳುತ್ತಿದ್ದಂತೆ ಒಂದು ಸಲ ಬೆನ್ನು ನೇರಮಾಡಿ ಕುಳಿತುಕೊಂಡೆ. ರಸ್ತೆಯ ಬದಿಯಲ್ಲಿ ಹಾಕಿರುವ ಗೆರೆಗಿಂತಲೂ ಹೊರಬಂದೆ. ಓವರ್ ಟೇಕ್ ಮಾಡಿ ಹೋಗುವರೆಲ್ಲಾ ಹೋಗುತ್ತಲೇ ಇದ್ದರು. ಬಲಿಪರು ಹಾಡುತ್ತಲೇಇದ್ದರು.





ಈ ಒಂದು ತಾಳಮದ್ದಳೆಯನ್ನು ಆಯೋಜನೆ ಮಾಡಿದ ಮನೆಯವರಿಗೆ,


ಸಂಯೋಜನೆ ಮಾಡಿದವರಿಗೆ,


ಮತ್ತು ಇದನ್ನು ರೆಕಾರ್ಡ್ ಮಾಡಿದ ವಿನಾಯಕ್ ಭಟ್ ಗಾಳಿಮನೆಯವರಿಗೆ,


ರೆಕಾರ್ಡ್ ಮಾಡಲು ತನ್ನ ರೆಕಾರ್ಡರನ್ನೊದಗಿಸಿದ ಪವನ್ ಕಿರಣ್ ಕೆರೆಯವರಿಗೆ,


ರೆಕಾರ್ಡ್ ಮಾಡುವಲ್ಲಿ ಕಾಳಜಿವಹಿಸಿ ನನಗೆ ಫೋನ್ ಮಾಡಿ ರೆಕಾರ್ಡಿಂಗ್ ಸೆಟ್ಟಿಂಗ್ ಬಗ್ಗೆ ಕಲಿತು ರೆಕಾರ್ಡ್ ಮಾಡಿದ ಎಂ ಎಸ್ ಸೌಂಡ್ಸ್ ನ ಸುನಿಲ್ ಕುಮಾರ್ ವರಿಗೆ,


ಮತ್ತು ಈ ತಾಳಮದ್ದಳೆಯನ್ನು ಮೊತ್ತ ಮೊದಲಾಗಿ ನನಗೊಪ್ಪಿಸಿ ಇದನ್ನು ಆಲಿಸಿ ಒಂದೆರಡು ಅಕ್ಷರ ಬರೆಯಲು ಅವಕಾಶಕೊಟ್ಟ ವಿನಾಯಕ್ ಭಟ್ಟರಿಗೆ,


ಇನ್ನೀಗ ಈ ಲೇಖನವನ್ನು ಓದಿ ಈ ತಾಳಮದ್ದಳೆಯನ್ನೊಮ್ಮೆ ಕೇಳುವ ಮನಸ್ಸುವ ಮಾಡುವ ಎಲ್ಲಾ ಪ್ರೀತಿಯ ಮನಸ್ಸುಗಳಿಗೆ ಪ್ರೀತಿಯ ಧನ್ಯವಾದಗಳು.





ಲಾಷ್ಟ್ ಲೈನ್ : ಈ ಲೇಖನದ ಹೆಡ್ಡಿಂಗ್ ಮತ್ತು ಅದರ ಕೆಳಗಿನ ಹೆಸರನ್ನು ಒಂದೇ ವಾಕ್ಯವೆಂದು ಓದಬೇಕಾಗಿ ವಿನಂತಿ….!





💈ಸುಧಾಕರ ಜೈನ್ ಹೊಸಬೆಟ್ಟು ಗುತ್ತು.




🏮🚦🏮🚦🏮🚦🏮🚦🏮

Monday, April 4, 2016

ನನ್ನ ರಫ್ ಪುಸ್ತಕದೊಂದು ಪುಟ

ಗೋರ್ಕಲ್ಲ ಮೇಲೆ ಮಳೆಗರೆದರೆ ಆ ಕಲ್ಲು ನೀರು ಕುಡಿಯುವುದೇ ಸರ್ವಜ್ಞ…?

        ಮೂರ್ಖಂಗೆ ನೂರು ಕಾಲ ಬುದ್ಧಿಯನ್ನು ಹೇಳುವುದೆಂದರೆ ಅದು ಕಲ್ಲಿನ ಮೇಲೆ ನೀರೆರೆದಂತೆ. ಇದು ಸರ್ವಜ್ಞನ ಮಾತು.
ಸರಿ ಆದರೆ ನನ್ನದೊಂದು ಹುಚ್ಚು ಅಧಿಕ ಪ್ರಸಂಗ ಇದೆ.
ಕಲ್ಲ ಮೇಲೆ ಎಷ್ಟೇ ನೀರೆರೆದರೂ ಅದು ಒಂದು ತೊಟ್ಟನ್ನೂ ತನ್ನೊಳಗೆ ಇಂಗಿಸಿಕೊಳ್ಳದು. ಆದರೆ ನಾನು ನೀರೆರೆಯುವಷ್ಟು ಕಾಲ ಏನಿಲ್ಲಂದರೂ ಒರಟು ಒಣಕಲ್ಲು ಒದ್ದೆಯಾದರೂ ಆಗುತ್ತದಲ್ಲಾ….  ಒರಟು ಒಣಕಲ್ಲಿನ ಬಣ್ಣ ಬದಲಾಗಿ ಒದ್ದೆ ಕಲ್ಲಿನ ಬಣ್ಣವಾದರೂ ಬರುತ್ತದಲ್ಲ. ಮಾತ್ರವಲ್ಲದೆ ಒರಟು ಒಣಕಲ್ಲಿನ ಮೇಲೆ ನಿರಂತರ ನೀರೆರೆದರೆ ನೀರು ಬಿದ್ದ ಭಾಗ ಸವೆದು ಒರಟಿದ್ದದ್ದು ಮುಟ್ಟಲು ಹಿತವಾಗುವಂತಾಗುತ್ತದಲ್ಲ. ನೀರ ಪಸೆಯಿಂದ ಒರಟು ಒಣಕಲ್ಲಿನ ಮೇಲೆ ಪಾಚಿಯೊಂದು ಸುಖ ಸಂಸಾರ ಮಾಡುವಂತಾಗುತ್ತದಲ್ಲ. ನಾನ ನೀರೆರವ ಕಲ್ಲಿನೆಡೆಯಲ್ಲಿ ಎಲ್ಲಾದರೊಂದು ಸೆಲೆಯೊಂದಿದ್ದು ಆ ಸೆಲೆಯಲ್ಲಿ ಬಾಯಿತೆರದಿರುವ ಚಿಪ್ಪೊಂದಿದ್ದರೆ....., ಆಗ ಎಂದಾದರೊಂದು ದಿನ ನನ್ನ ಕೈಯಿಂದ ಜಾರಿ ಬೀಳುವ ನೀರ ಹನಿಯು  ಮುತ್ತಾಗಬಹುದಲ್ಲ.
ಇಷ್ಟಕ್ಕಾದರೂ ಇಷ್ಟದಿಂದಲೇ, ಎಂದೂ ಕುಡಿಯದೆಂದು ಗೊತ್ತಿರುವ ಕಲ್ಲ ಮೇಲೆ ನೀರೆರೆಯುತ್ತೇನೆ.

- ಸುಧಾಕರ ಜೈನ್ ಹೊಸಬೆಟ್ಟು ಗುತ್ತು.
  
Sudhakara Jain Hosabettu Gutthu






•ಹಿರಿದಾಗ ಬೇಕಾದ ಆಕೆ ಇರಿದು ಹೋದಳು•


ನೀರೆ ತಾನು ತನ್ನ ಹರಿಯ ಬಿಟ್ಟು ಹರಿಯ ಬಯಸಿದಳು

ಹರಿ ತಾನು ಕಟ್ಟೆಯ ಕಟ್ಟಿ ತಡೆಯ ಹೊರಟರೆ

ಕಟ್ಟೆಯೊಳಗೆ ನೀರೆ ನಿಲ್ಲುವಳೇ...?

ಹರಿಯ ಬಂಧನದಲ್ಲಿ ಇರುವವರೆಗೂ
ಇಂಗುತ್ತಾ, ಆವಿಯಾಗುತ್ತಾ ಕಟ್ಟೆಯನ್ನು ಸಡಿಲಿಸುತ್ತಾ, ಹರಿಯ ಬಿಟ್ಟು, ಹರಿಯ ಬಯಸುತ್ತಾಳೆ.

ಕರುಣೆಯಿಂದಲೇ ಪೆಟ್ಟ ಕೊಟ್ಟ;
ತನ್ನ ಕಠಿಣ ಕಟ್ಟೆಯನ್ನು ಒಡೆದೇ ಬಿಟ್ಟ

ಹರಿದೋಡಿದಳು,

ಹರಿದು ಹರಿದು ಹರಿಯ ಮನವನು ಹರಿದೋಡಿದಳು

ಇಳಿಯತ್ತಾ ಇಳಿಯುತ್ತಾ ಬಹುದೂರ ಸಾಗಿದಳು

ಹರಿಯ ಬಿಟ್ಟು ಹರಿಯುವ ಹಸಿವನ್ನು ಪೂರ್ತಿ ತೀರಿಸದೆ ಮತ್ತಷ್ಟು ಮತ್ತು ಮತ್ತಷ್ಟು ಹರಿದೋಡಿದಳು

ತನ್ನೊಡಲ ಸಿಹಿಯ ಕಳೆದುಕೊಂಡಳು

ಸೂರ್ಯನನ್ನೇ ತನ್ನೊಳಗೆ ಮುಳುಗಿಸಬಲ್ಲ ಅಬ್ಧಿಯಾದಳು

ಉಪ್ಪಾದ ನೀರೆ ಮುಪ್ಪಾದಳು

ನೆಕ್ಕಿದವರೆಲ್ಲಾ ಕೊಂಡಾಡಿದರು

ಉಪ್ಪಿಗಿಂತ ರುಚಿ ಬೇರುಂಟೆ

ಉಂಟೆ ಈ ಉಪ್ಪು ನೀರಲ್ಲಿ ಎಲೆಯೊಂದು ಚಿಗುರಬಲ್ಲ ಬೇರುಂಟೆ

ಮುಪ್ಪಾಗಿ ಉಪ್ಪಾಗಿ ಕೊರಗಿ ಈಗ ಮತ್ತೆ ತಾನು ಸಿಹಿಯಾಗಬೇಕೆಂದು ಕೊಂಡರೆ...?

ತನ್ನ ಸಾವೇ ಆಗಬೇಕು
ತಳ ಸೇರದೆ ತೇಲಾಡಬೇಕು
ಕಾಯವ ಬಿಟ್ಟು ಮಾಯವೇ ಅಗಬೇಕು
ಸೂರ್ಯಂಗೆ ಮಯ್ಯನೊಡ್ಡಿ
ಆವಿಯಾಗಬೇಕು
ಮೋಡವಾಗಿ ಬೀಸುವ ಗಾಳಿಗೆ ಕಾಯಬೇಕು

ಹೋದ ಜನ್ಮದಲ್ಲಿ ತನ್ನ ಹರಿಯ ಬಂಧನದ ತಡೆಯನ್ನು ಅರಿಯದೆ ಮುರಿದು ಹರಿದು ಹೋದಾಕೆ ಈಗ,

ಮತ್ತೆ ಮಳೆಯಾಗಲು ತನ್ನನ್ನು ತಡೆಯುವ ತಡೆಯನ್ನು ತಾನೇ ಬಯಸಬೇಕು

ಆ ತಡೆಗೂ ಕಾಯಬೇಕು ಕಾಯಬೇಕು

ಕಾದು ಕಾದು ತಡೆಯೊಂದು ಸಿಕ್ಕರೆ

ಮರುಜನ್ಮ ಪಡೆದು ಹನಿಯಾಗಿ ಧರೆಗಿಳಿವ ನೀರೆ ನಿಲ್ಲುವಳೇ

ಹರಿಯ ಬಯಸುತ್ತಾಳೆ.....!


•ಸುಧಾಕರ ಜೈನ್ ಹೊಸಬೆಟ್ಟು ಗುತ್ತು•

〰〰〰〰〰〰〰〰〰〰〰〰
•ತೊರೆದು ಹೋದ ಪ್ರೀತಿಯಾತ್ಮ•

ನಾನು ನಿನ್ನಲ್ಲಿ ಮಾತಾಡದೆ ಇದ್ದರೆ,

ಜಗದಲಿ ನೀ ಮೂಕಿಯಾಗಿರುತ್ತಿದ್ದೆ ಎಂಬ ನನ್ನೊಳಗಿನ ಅಹಂಕಾರದ ಹಕ್ಕಿಮರಿಗೆ ರೆಕ್ಕೆ ಬೆಳೆದಿತ್ತು.

ನಿನ್ನ ಮನದ ಬಳ್ಳಿಯ ಒಡಲಲ್ಲಿ ಒಂದು ಚಿಗುರೆಲೆ ಚಿಗುರಬೇಕಿದ್ದರೂ ನಾನೇ ಮರವಾಗಬೇಕಿತ್ತು.

ಯಾವ ಗಾಳಿ ಬೀಸಿತೋ ಗೊತ್ತಿಲ್ಲ.

ಬೀಸುವ ಗಾಳಿಗೆ ಮರ ವಶವಾಗದೆ ಇದ್ದೀತೇ..?

ಮರ ಗಾಳಿಯ ವಶವಾದರೂ
ಬಳ್ಳಿ ಮರದ ವಶದಲ್ಲೇ ಇದ್ದೀತೆಂಬ
ಮರದ ಭ್ರಮೆ ಸುಳ್ಳಾಗಿ ಹೋಯ್ತಲ್ಲ.

ಮರವನು ಬಿಗಿದಪ್ಪಿದ್ದ ಬಳ್ಳಿಯ ಬಿಗು ಸಡಿಲಗೊಂಡಿದೆ
ಮರವ ಬಿಟ್ಟ ಬಳ್ಳಿ ನೆಲದೆದೆಯನು ಕಚ್ಚಿಕೊಂಡಿದೆ.

ಬಳ್ಳಿ ಮರದ ಆಸರೆಯಲ್ಲಿತ್ತು.

ಮರ ಬಳ್ಳಿಯ ಆ ಸೆರೆಯಲ್ಲಿತ್ತು.

ಈಗ ನೆಲದೆದೆಯಲ್ಲಿ ಹರಡಿಕೊಂಡಿಹ ಬಳ್ಳಿಯ ಕಂಡ ಮರ ಮರುಕದಿಂದ ಮರಗಟ್ಟಿದೆ.

ಮರಗಟ್ಟಿದ ಮರದ ನಾಲಗೆಯಲ್ಲಿ ಉಳಿದ ಮಾತೊಂದಿದೆ.

ನನ್ನ ತೊರೆದು ಹೋದ ನಿನಗೆ ಎಂದೆಂದಿಗೂ ಈ ಮರದ ಅಗತ್ಯ ಕಾಡದಿರಲಿ....!

ಯಾಕೆಂದರೆ

ನೀ ತೊರೆದು ಹೋದಾಗಿಂದ ಪ್ರತಿ ಕ್ಷಣವೂ ನನಗೆ ನಿನ್ನ ಅಗತ್ಯತೆ ಕಾಡುತ್ತಿದೆ.

ನಿನ್ನ ಆ ಸೆರೆಯಿಂದ ಕಳಚಲ್ಪಟ್ಟಾಗಿಂದ ನಿನ್ನ ಬುಡ ಸೇರ ಬೇಕಾದ ನನ್ನ ವೀರತನದ ವೀರ ರಸವೆಲ್ಲಾ,  ಗರ್ಭ ಕಟ್ಟದೆ ಜಾರಿ ಹೋಗುವ ನಿರಾಸೆಯ ಮುಟ್ಟಿನಂತೆ ಕಲ್ಲಾಗಿರುವ ಒಣ ಕಲ್ಲ ಮೇಲೆ ಚೆಲ್ಲಿ ಹೋಗಿದೆ.

ಒಂದು ವೇಳೆ ನಿನಗೂ ನನ್ನ ಅಗತ್ಯತೆ ಕಾಡಿದರೆ....?

ನಿನ್ನ ಅಗತ್ಯತೆ ಕಾಡಿದಾಗೆಲ್ಲಾ ನಾನು ಪಡುವ ಹಿಂಸೆಯ ಈ ಸ್ಥಿತಿಯನ್ನು  ನೀನೂ ಅನುಭವಿಸಬೇಕಾಗುತ್ತದೆ.

ಇರಲಿ ಕಾಡದಿರಲಿ

ನನ್ನ ತೊರೆದು ಹೋದ ನಿನಗೆ ಎಂದೆಂದಿಗೂ ಈ ಮರಗಟ್ಟಿದ ಮರದ ಅಗತ್ಯತೆ ಕಾಡದಿರಲಿ.

•ಸುಧಾಕರ ಜೈನ್ ಹೊಸಬೆಟ್ಟು ಗುತ್ತು•
“ದೇವರ ಇಚ್ಛೆಗೆ ಶರಣಾಗು”

ಶರಣಾಗಲು ಸಾಧ್ಯವಾಗುತ್ತಿದ್ದರೆ,

ನೀನು ನನಗೆ ದೇವರಾಗುತ್ತಿದ್ದೆ.
ನಾನು ನಿನಗೆ ದೇವರಾಗುತ್ತಿದ್ದೆ.

🔹ಸುಧಾಕರ ಜೈನ್ ಹೊಸಬೆಟ್ಟು ಗುತ್ತು.