. 🔘 ಶಿಲ್ಪಿ ಕೆತ್ತಿಕೊಂಡ ಸೆಲ್ಫಿ 🔘
ಎಲ್ಲರೂ ತೆಗೀತಾರೆ, ನಾನ್ಯಾಕೆ ತೆಗಿಬಾರ್ದು?ನೋಡೋಣ ಈಸಲ ತೆಗಿಲೇಬೇಕು ಅಂತ ನಿರ್ಧಾರ ಮಾಡಿ ಸ್ನಾನಕ್ಕೆ ಇಳಿದೆ. ಅಷ್ಟರಲ್ಲೆ ನೆನಪಾಗಿದ್ದು ನನ್ನ ಗಣಿತ ಟೀಚರ್ ಹೇಳಿದ ಮಾತು “ನಾಳೆ ಮಾಡುವುದನ್ನು ಇವತ್ತೇ ಮಾಡು, ಇವತ್ತು ಮಾಡುವುದನ್ನು ಈಗಲೇ ಮಾಡು”.
ಆಗೆಲ್ಲಾ ನನಗನ್ನಿಸುತ್ತಿದ್ದದ್ದು, ನಾಳೆ ಮಾಡುವುದನ್ನು ಇವತ್ತು ಮಾಡಬಹುದು. ಇವತ್ತಿದ್ದು ಈಗಲೇ ಮಾಡಬಹುದು. ಆದರೆ ನಿನ್ನೆ ಮಾಡಬೇಕಾಗಿದ್ದದ್ದನ್ನು ಯಾವಾಗಪ್ಪ ಮಾಡೋದು? ಏನೇ ಆದರೂ ಇವತ್ತಿಂದ ಶುಭಸ್ಯ ಶೀಘ್ರಂ ಎಂದು ನಿರ್ಧರಿಸಿದೆ.
ಆಮೇಲೆ ತೆಗೆಯೋದನ್ನು ಈಗಲೇ ತೆಗೆಯಬೇಕು.ಶುರುವಿಗೆ, ಹಾಕ್ಕೊಂಡಿದ್ದ ಬಾತ್ ರೂಂ ಚಿಲ್ಕ ತೆಗೆದೆ.ಬಾಗಿಲು ತೆಗೆದೆ. ಚಾರ್ಜಿಗಿಟ್ಟಿದ್ದ ಮೊಬೈಲ್ ತೆಗೆದೆ.ಪಾಸ್ವರ್ಡ್ ಹಾಕಿ ಲಾಕ್ ತೆಗೆದೆ.
ಮೊಬೈಲ್ ಕ್ಯಾಮರಾ ಆನ್ ಮಾಡಿದೆ. ಅಷ್ಟರಲ್ಲಿ ಟಿ.ವಿ. ಜಾಹೀರಾತಿನಲ್ಲಿ ಹುಡುಗಿ ಹೇಳೋದು ಕೇಳಿತು. “ನಿಮ್ಮ ಹಳೆಯ ಸಾಮಾನ್ ಕಚ ಕಚಖ್ ಮಾಡಿ ನಮಗೆ ಕಳುಹಿಸಿ”. ಅಯ್ಯೊಯಬಾ… ಏನಿದವಸ್ಥೆ….!ಹ್ಹೇ.. ಬಿಡಿಪ್ಪ… ಟಿ.ವಿ.ಯಲ್ಲಿ ಹೇಳಿದ್ದು ಹಳೇದಲ್ವಾ… ನಮ್ಮದಿನ್ನೂ ಹೊಸದೇ….! ಹೌದು ಹಳೇದು ಅಂತ ಆಗಬೇಕಾದರೆ ಹೊಸದೊಂದು ಬರಬೇಕಲ್ವಾ ಎಂದು ಸಮರ್ಥಿಸಿ ಸಮಾಧಾನದ ಉಸಿರು ತಗೊಂಡು ತೆಗೆಯಲಾರಂಭಿಸಿದೆ. ಫ್ರಂಟ್ ಕ್ಯಾಮರಾಗೆ ಮುಖವೊಡ್ಡಿದೆ. ಮೊದಲ ಬಾರಿಗೆ ಲವ್ ಪ್ರಪೋಸ್ ಮಾಡಲು ಕನ್ನಡಿ ನೋಡ್ಕೊಂಡು ಪ್ರಾಕ್ಟೀಸ್ ಮಾಡುವಾಗ ಹೇಗೆ ಬೇರೆ ಬೇರೆ ಭಾವನೆಗಳನ್ನು ಉತ್ಪತ್ತಿ ಮಾಡಿ ಯಾವುದರಲ್ಲಿ ಪಾಸಾಗಬಹುದೆಂದು ಪರೀಕ್ಷೆ ಮಾಡಿದೆನೋ ಹಾಗೆ. ಹಾಳಾದ ಈ ನೆನಪಿಗೆ ಆ ಮೊದಲ ಹುಡುಗಿ ಯಾರೆಂದು ನೆನಪೇ ಆಗದೆ ಸರಿಯಾಗಿ ಭಾವನೆ ಬರದೆ ಬರಡಾಯಿತು ಮನಸ್ಸು.ತಕ್ಷಣ ಹೆಂಡತಿಯ ಕಾಲ್ ಮೊಬೈಲ್ ರಿಂಗ್ ಆಯ್ತು,ಕ್ಯಾಮರಾ ಆಫಾಯ್ತು.
“ರೀ ಸ್ನಾನದ ಸೋಪ್ ಖಾಲಿಯಾಗಿದೆ. "ಹಂಗೇ"ಹೋಗಿ ಸೋಪ್ ತಗೊಂಡು ಬನ್ನಿ” ಕಾಲ್ ಕಟ್ ಆಯ್ತು. ಕ್ಯಾಮರಾ ಆನ್ ಆಯ್ತು. ಈಗ ಬಂತು ನೋಡಿ ಸರಿಯಾದ ಭಾವನೆ… ಮತ್ತೆ ಒಂದೆರಡು ಕಚ ಕಚಖ್ ಎಂದು ಫೋಟೋ ತಗೊಂಡೆ. ಹೊಸ ಭಾವಕ್ಕಿಂತ ಹಳೇ ಭಾವವೆ ಚಂದ ಎಂದು ಎಲ್ಲಾ ಫೋಟೋಗಳನ್ನೊಮ್ಮೆ ನೋಡಲು ಶುರುಮಾಡಿದೆ.
ಹ್ಹಾಂ… ಬ್ಯಾಗ್ರೌಂಡಲ್ಲಿ… ಟ್ಯಾಪ್ ಕಾಣ್ತಾ ಇದೆ… ಅಯ್ಯೋ ಬ್ಯಾಗ್ರೌಂಡು ಬಿಡಿ ಸ್ವಾಮೀ…. ಫೋರ್ ಗ್ರೌಂಡಲ್ಲೂ ಒಂದು ಟ್ಯಾಪ್… ಹೋಗ್ಲಿ ಬಿಡಿ ಫೋರ್ ಗ್ರೌಂಡ್ ಟ್ಯಾಪನ್ನು ಕಟ್ ಮಾಡ್ಕೊಂಡರಾಯಿತು….!ಫೋಟೋಶಾಪಲ್ಲಿ.
ಮೊಬೈಲ್ ಪಕ್ಕಕ್ಕಿಟ್ಟು ನೀರು ಹೊಯ್ಕೊಂಡೆ. ಸ್ನಾನದ ಸೋಪ್ ಮುಗಿದರೇನಂತೆ ಬಟ್ಟೆ ಸೋಪ್ ಇದೆಯಲ್ಲಾ… ಬಟ್ಟೆಯಲ್ಲಿರುವ ಎಂತೆಂತಹ ಕಲೆಯೇ ಹೋಗುತ್ತದಂತೆ… ಇನ್ನು ಈ ಕಲೆಗಾರನ ಕೊಳೆ ಹೋಗದೆ ಇದ್ದೀತೋ? ಸ್ವಲ್ಪ ಉರಿಯಬಹುದು…!ಕಣ್ಣು. ಮುಚ್ಚಿಕೊಂಡರಾಯ್ತಪ್ಪ.
ತಲೆಗೆ ಸ್ನಾನ ಮಾಡೋವಾಗ ತಲೆಯ ಹಿಂಭಾಗಕ್ಕೆ ನೀರು ಬಿದ್ದ ಕೂಡಲೆ ಮೆದುಳು ಚುರುಕಾಗುತ್ತದಂತೆ.ಸಿಕ್ಕಾಪಟ್ಟೆ ಐಡಿಯಾಗಳು ಬಂದವು, ಹೇಗೆಲ್ಲಾ ಸೆಲ್ಫಿ ತೆಗೆಯಬಹುದೆಂದು.
ಈ ಸೆಲ್ಫಿ ಅನ್ನುವ ಪದ ಕೇಳುವಾಗಲೇ ಒಂದು ಥರಾ ಸ್ವಾರ್ಥ ಭಾವ ಕಾಡುತ್ತದೆ. ಸೆಲ್ಫಿಶ್ ಅಂದರೆ ಸ್ವಾರ್ಥಿ ಎಂಬ ಅರ್ಥವೇ ಇದಕ್ಕೆ ಕಾರಣ ಇರಬಹುದು.ಸೆಲ್ಫಿಗೂ ಶಿಲ್ಪಿಗೂ ಹತ್ತಿರದ ಸಂಬಂಧ ಇದೆ ಅನ್ನಿಸುತ್ತದೆ. ಶಿಲ್ಪಿ ಬೇರೆಯವರನ್ನು ಕೆತ್ತುತ್ತಾನೆ. ಸೆಲ್ಫಿ ತನ್ನ ತಾನೇ ಕೆತ್ತಿ ಕೊಚ್ಚಿಕೊಳ್ಳುತ್ತಾನೆ. ಸರಿಯಾದ ಅರ್ಥ ಬಂತಲ್ಲ ಈಗ… ಸೆಲ್ಫಿ ಅಂದರೆ ಸ್ವಾರ್ಥಿ ಎಂದು.
ಹಾಗೆ ನೋಡಿದರೆ ಯಾರು ಸ್ವಾರ್ಥಿಗಳು ಅಲ್ಲ ಹೇಳಿ.ಮೊನ್ನೆ ಮೊನ್ನೆ ಒಬಾಮಾ ಕೂಡ ತನ್ನ ಸೆಲ್ಫಿ ಫೋಟೋ ತಗೊಂಡಿದ್ದು ವಿಶ್ವದೆಲ್ಲೆಡೆ ಸುದ್ದಿಯಾಗಿತ್ತು.
ವಿಷಯ ಅಂದರೆ ಸೆಲ್ಫಿ ತೆಗೆಯುತ್ತಿರುವ ದೃಶ್ಯವನ್ನು ಇನ್ನೊಬ್ಬ ಫೋಟೋ ತೆಗೆಯೋದು ಕೂಡ ಇದೆ.ಇದನ್ನು ಏನು ಹೇಳಬೇಕು. ಅನ್ ಸೆಲ್ಫಿ… ಇಲ್ಲ ಡಿಸ್ ಸೆಲ್ಫಿ… ಹ್ಹೇ ಇಲ್ಲಪ್ಪ. ಇದನ್ನು ಇನ್ ಸೆಲ್ಫಿ ಎಂದು ಹೇಳಬಹುದೇನೋ.
ಸ್ನಾನ ಮುಗಿಸಿ ಹೊರಬಂದೆ. ಕನ್ನಡಿ ಎದುರು ನಿಂತೆ.ಹಣೆಯ ಮೇಲೆ ನೀರ ಹನಿಗಳು ಶಿಸ್ತಿನಲ್ಲಿ ಕೂತಿದ್ದವು.ಇಳಿದು ಹೋಗುವ ಮುನ್ನ ನನ್ನ ಸೆಲ್ಫಿಯ ಹಣೆಬರಹ ನಿರ್ಧಾರ ಆಗಬೇಕೆಂದು ಮತ್ತೆ ಮೊಬೈಲ್ ಕೈಗೆತ್ತಿಕೊಂಡೆ. ಮೊಬೈಲಿನ ಫ್ರಂಟ್ ಕ್ಯಾಮರಾದಿಂದ ತೆಗೆದರೆ ಕಮ್ಮಿ ಗುಣಮಟ್ಟದ್ದಾಗುತ್ತದೆ ಎಂದು ಬ್ಯಾಕ್ ಕ್ಯಾಮರಾದಲ್ಲೇ ತೆಗೆಯಲು ನಿರ್ಧರಿಸಿದೆ. ಮೊದಲಿಗೆ ಸರ್ವ ವಿಘ್ನ ವಿನಾಶಕ ಗಣೇಶನ ಜೊತೆಗೊಂದು ಸೆಲ್ಫಿ ತೆಗೆದೆ. ನೋಡಿದರೆ ಫೋಟೋದಲ್ಲಿ ಕಳ್ಳ ಗಣಪಣ್ಣ ಮಾತ್ರ ಇದ್ದಾನೆ. ನಾನು ಬಿಡಿ, ಅವನ ಇಲಿಯೂ ಬರಲಿಲ್ಲ ನಾ ತೆಗೆದ ಸೆಲ್ಫಿಯಲ್ಲಿ. ಇರಲಿ ಗಣಪತಿ ಸ್ಥಾಪನೆ ಆದಂಗಾಯ್ತು.
ಮನೆಯಂಗಳಕೆ ಬಂದು ಮತ್ತೆ ಮೊಬೈಲ್ ಕ್ಯಾಮರಾ ಮುಖದೆದುರಿಗೆ ಹಿಡಿದು ಅಂದಾಜಿನಲ್ಲೇ ಕ್ಲಿಕ್ ಮಾಡಿದೆ. ರಪ್ಪ ಮೊಬೈಲ್ ತಿರುಗಿಸಿ ನೋಡಿದರೆ ಫೋಟೋದಲ್ಲಿ ಬಾಲ ಮಾತ್ರ ಕಾಣುತ್ತಿದೆ. ಅದು ಕೂಡ ಶೇಕ್ ಆಗಿದೆ. ಫೋಟೋ ತೆಗೆಯುವಾಗ ಪಕ್ಕದ ಮನೆಯ ನಾಯಿ ಬಂದು ನನ್ನ ಹಿಂದೆ ನಿಂತು ಬಾಲ ಅಲ್ಲಾಡಿಸುತ್ತಿತ್ತು. ಪಾಷ್ ಮಾರ್ರೆ ನಾಯಿ… ಕ್ಯಾಮರಾ ನೋಡಿದ್ರೂ ಬಾಲ ಅಲ್ಲಾಡಿಸುತ್ತದಲ್ಲ. ನಾಯಿ ಬಾಲಕ್ಕಿರುವ ಯೋಗ್ಯತೆ ನಂಗಿಲ್ವೆ? ಇದೊಳ್ಳೆ ಕಥೆ ಆಯ್ತಲ್ಲಾ. ವಾಸ್ತುನೇ ಸರಿಯಿಲ್ಲ.
ಲೊಕೇಷನ್ ಶಿಫ್ಟ್
ಕ್ಯಾಮರಾ
ಆಕ್ಷನ್
ಸ್ಮೈಲ್
ಎಂದು ಸ್ವಯಂ ಹೇಳಿಕೊಂಡು ಇನ್ನೊಂದು ಕ್ಲಿಕ್ಕಿಸಿದೆ.ಫೋಟೋ ನೋಡಿದರೆ ನನ್ನ ರುಂಡ ಇಲ್ಲ. ಕೆಳಭಾಗ ಮಾತ್ರ ಬಂದಿದೆ. ಜೊತೆಗೆ ಆಚೆ ಮನೆಯವರು ಒಣಗಲು ಹಾಕಿದ ಬಣ್ಣ ಮಾಸಿ ನೇತಾಡುತ್ತಿದ್ದ ಬಟ್ಟೆಗಳು.
ಅಯ್ಯೋ… ಈಗೇನು ಮಾಡೋದು ಎಂದು ಉಂಗುರವಿಲ್ಲದ ಉಂಗುರದ ಬೆರಳಿನಲ್ಲಿ ಮೆದುಳಿನ ಎಡಭಾಗಕ್ಕೆ ಒಂದು ಪೆಟ್ಟುಕೊಟ್ಟೆ. ಥಾಂ… ಎಂದು ಕೇಳಿದ ಹಾಗಾಯ್ತು.
ಅದ್ಯಾರೋ ಹೆಗಲ ಮೇಲೆ ಕೊಡಲಿ ಹಿಡ್ಕೊಂಡು ಊರ ಪೂರ್ತಿ ತನ್ನ ಕೊಡಲಿಯನ್ನು ಹುಡುಕಿದನಂತೆ.ಆಮೇಲೆ ಯಾರೋ ಒಬ್ಬರು ಹೇಳಿದರಂತೆ. ಓ ಪುಣ್ಯಾತ್ಮ ನೀನು ಹುಡುಕುವ ಕೊಡಲಿ ನಿನ್ನ ಹೆಗಲಲ್ಲೇ ಇದೆಯಲ್ಲ ಮಾರಾಯಾ..
ಈಗ ನಂದೂ ಕಥೆ ಅದೇ ಆಯ್ತಲ್ಲ.. ಪ್ರೊಫೆಶನಲ್ ಕ್ಯಾಮರಾ ನನ್ನ ಹೆಗಲಲ್ಲೇ ಇದ್ದರೂ ಕೂಡ ನನ್ನದೊಂದು ಫೋಟೋ ಬೇಕೆಂದರೆ ಯಾರ ಹೆಗಲಲ್ಲಿ ಕ್ಯಾಮರಾ ನೇತಾಡುತ್ತಿದೆ ಎಂದೇ ಹುಡುಕುವ ಹಣೆಬರಹ.
ಇನ್ನು ಇದೆಲ್ಲಾ ಆಗಲಿಕ್ಕಿಲ್ಲಾಂತ ಸೀದ ಮನೆಯೊಳಗೆ ಬಂದು ನನ್ನ ಹೆಗಲ ಕ್ಯಾಮರಾವನ್ನು ಸ್ಟಾಂಡಿಗೆ ಫಿಕ್ಸ್ ಮಾಡಿದೆ. ಮೂವತ್ತು ಸೆಕೆಂಡಿನಲ್ಲಿ ಕ್ಲಿಕ್ ಆಗುವಂತೆ ಸೆಲ್ಫ್ ಟೈಮರ್ ಇಟ್ಟೆ. ನಾನು ಹೋಗಿ ನಿಲ್ಲಬೇಕಾದಲ್ಲಿ ಒಂದು “ಹಿಡಿಸೂಡಿ” ಐಮೀನ್ ಪೊರಕೆ ಇಟ್ಟೆ.ಕಮ್ಮಿದ್ದಲ್ಲ ಈ ಪೊರಕೆ. ಮೊನ್ನೆ ಡೆಲ್ಲಿಯಲ್ಲಿ ಗೆದ್ದ ಪೊರಕೆಯ ಎರಡು ಕಡ್ಡಿ ಇದರಲ್ಲಿ ಬೆರೆತಿದೆ.
ಓ ಮೊನ್ನೆ ಬೆಳಿಗ್ಗೆ ವಾಕಿಂಗ್ ಹೋಗುವಾಗ ಜಿಂದಾಲ್ ಆಸ್ಪತ್ರೆ ಅಂಗಳದಲ್ಲಿ ನಮ್ಮ ಅರವಿಂದ “ಕ್ರೇಜಿ”-ವಾಲರು ಇನ್ನುಮುಂದೆ ತಾನು ಕಮಕ್ ಕಿಮಕ್ ಕೆಮ್ಮಂಗಿಲ್ಲ ಎಂದು ನಿರ್ಧರಿಸಿ ಯೋಗದ ಬೇರೆ ಬೇರೆ ಆಸನಗಳನ್ನು ಮಾಡಿ ಕೊನೆಗೆ ಪೊರಕೆ ಹಿಡಿದು ಸ್ವಚ್ಛಾಸನ ಮಾಡುತ್ತಿದ್ದರು. ಅದಾದ ಮೇಲೆಶವಾಸನದಲ್ಲಿದ್ದ ಆ ಪೊರಕೆಯ ಎರಡು ಕಡ್ಡಿಯನ್ನು ಕದ್ದು ತಂದು ಮನೆಯ ಪೊರಕೆಗೆ ಬೆರೆಸಿದೆ.
ಹಾಗೆ ಆ ಪೊರಕೆಗೆ ಫೋಕಸ್ ಮಾಡಿ ಕ್ಲಿಕ್ ಮಾಡಿ ಹೋಗಿ ನಿಲ್ಲಬೇಕೆನ್ನುವಷ್ಟರಲ್ಲಿ ಧರಣಿಪಾಲನ ಒಡತಿಯಾದ ಭೂಮಿಯ ಗುರುತ್ವಾಕರ್ಷಣಾ ಮೋಡಿ(ದಿ)ಗೆ ಪೊರಕೆ ಅಡ್ಡಬಿತ್ತು. ನಾನಿನ್ನು ಎಲ್ಲಿ ನಿಲ್ಲಬೇಕೆಂದು ಗೊತ್ತಾಗದೆ ಅತಂತ್ರನಾದೆ. ಕ್ಯಾಮರಾ ಕ್ಲಿಕ್ ಆಯ್ತು. ಗುಡಿಯಲ್ಲಿ ದೇವರೇ ಇಲ್ಲದ ಹಾಗೆ ಚಿತ್ರದಲ್ಲಿ ನಾನೇ ಇಲ್ಲದಾದೆನು. ಮತ್ತೊಮ್ಮೆ ಗುರುತ್ವಾಕರ್ಷಣಾ ಮೋಡಿಗೆ ವಿರುದ್ಧ ಬಲವಾಗಿ ಪೊರಕೆಯನ್ನು ಗಟ್ಟಿಯಾಗಿ ನೇರ ನಿಲ್ಲಿಸಿದೆ. ಕ್ಲಿಕ್ ಮಾಡಿದೆ. ಪೊರಕೆ ಜಾಗಕ್ಕೆ ಹೋಗಿ ಪೊರಕೆಯನ್ನು ತಳ್ಳಿ ನಾ ನಿಂತೆ. ಇನ್ನೂ ಇಪ್ಪತ್ತು ಸೆಕೆಂಡು ಬಾಕಿ ಇತ್ತು.ಆಗ ಕ್ಯಾಮರಾದ ಹಿಂದೆ ಹೆಂಡತಿ ಪ್ರವೇಶ ಆಯ್ತು.
ಹೆಂಡತಿಯ ಕಂಡು
ನಗೆಯನಾಡಿದ ಗಂಡು.
ಕ್ಯಾಮರಾ ಕ್ಲಿಕ್. ಫೋಟೋ ನೋಡಿ ನಾನೂ ಕ್ಲಿಕ್.
ಇಲ್ಲಿಗೆ ಈ ಸೆಲ್ಫಿ ಶಿಲ್ಪಿಯ ಕಥೆಯು ಮುಗಿಯಿತು. ಈ ಕಥೆಯನ್ನು ಓದಿದ ಆ ಲೋಕದವರಿಗೆ, ಈ (e)ಲೋಕಗಳಾದ ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಶೇರ್ ಮಾಡಿ ಓದಿಸಿದವರಿಗೆ ಸನ್ಮಂಗಳವಾಗಲಿ.
ಜಯ ನಮೋ ಸೆಲ್ಫಿ ||
ಜಯ ಜಯ ಶಿಲ್ಪಿ ||
- 🔘 ಸುಧಾಕರ ಜೈನ್ ಹೊಸಬೆಟ್ಟು ಗುತ್ತು 🔘

No comments:
Post a Comment