🛡🏵🛡🏵🛡🏵🛡🏵🛡
*ಅನಗತ್ಯ ಖರ್ಚಿಗೊಪ್ಪದ ಜಬ್ಬಾರ್ ಕುಬೇರ.*
⏪⏹⏸⏩⏺⏪⏹⏸⏩
ಕಟೀಲು ಸಪ್ತಾಹದ ನಾಲ್ಕನೇ ದಿನ.
ದಿನಾಂಕ 20/07/2018 ಎಂದಿನಂತೆ ಇಂದೂ ಸುದೀರ್ಘವಾದ ತಾಳಮದ್ದಳೆ.
ಪ್ರಸಂಗ ಸಮರ ಸೌಗಂಧಿಕಾ. ಜಬ್ಬಾರ್ ಸಮೋರವರದ್ದು ಕುಬೇರ.
ತಾಳಮದ್ದಳೆ ಮುಗಿಯುವಾಗ ತಡರಾತ್ರಿಯಾಗಿತ್ತು.
ಪುತ್ತೂರಿನಲ್ಲಿರುವ ತನ್ನ ಮನೆಗೆ ತಲುಪಲು ತಡರಾತ್ರಿಯ ವೇಳೆ ಬಸ್ಸಿನ ವ್ಯವಸ್ಥೆ ಇಲ್ಲ. ಆದ ಕಾರಣ ಕಟೀಲಿನಿಂದಲೇ ಶ್ರೀಹರಿ ಆಸ್ರಣ್ಣರು ಕಾರಿನ ವ್ಯವಸ್ಥೆ ಮಾಡಿದ್ದರು.
ಪುತ್ತೂರಿನ ಕಡೆಗೆ ಹೋಗುವ ಇನ್ನೊಬ್ಬ ಕಲಾವಿದ ಗಣರಾಜ ಕುಂಬ್ಳೆಯವರೂ ಆ ಕಾರಿನಲ್ಲಿ ಹೋಗುವವರಿದ್ದರು.
ಆದರೆ ಗಣರಾಜ ಕುಂಬ್ಳೆಯವರ ಸಂಬಂಧಿಕರೊಬ್ಬರು ತಾಳಮದ್ದಳೆಗೆ ಬಂದು ಅವರನ್ನು ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗುವುದು ಅಂತ ಆಯ್ತು.
ಅಷ್ಟಾಗುವಾಗ ತನಗೊಬ್ಬನಿಗಾಗಿ ಕಾರು ಬೇಡ ಯಾಕೆ ಸುಮ್ಮನೇ ವ್ಯರ್ಥ ಖರ್ಚುಮಾಡುವುದು.
ನಾನು ಇಲ್ಲೇ ಮಲಗಿದ್ದು ನಾಳೆ ಬೆಳಿಗ್ಗೆ ನನ್ನಷ್ಟಕ್ಕೇ ಬಸ್ಸಿನಲ್ಲಿ ಹೋಗುತ್ತೇನೆ. ಮಲಗುವುದಕ್ಕೊಂದು ಜಾಗ ಸಿಕ್ಕರೆ ಸಾಕು ಎಂದರು.
ಒಂದು ವ್ಯವಸ್ಥೆಗೆ ತಾನು ಭಾರವಾಗಬಾರದು, ದುಡ್ಡು ಇನ್ನೊಬ್ಬರದ್ದೇ ಆದರೂ ತನ್ನಿಂದಾಗಿ ಅಥವಾ ತನಗಾಗಿ ಅನಗತ್ಯ ಖರ್ಚಾಗುವುದಕ್ಕೊಪ್ಪದ ಜಬ್ಬಾರರ ಈ ಗುಣ ತುಂಬಾ ಇಷ್ಟ ಆಯ್ತು.
ದೇವರ ಕೋಣೆಯಲ್ಲಿ ದಿನವಿಡೀ ದೀಪವೊಂದು ಬೆಳಗುತ್ತಿದ್ದರೆ ಅದು ಭಕ್ತಿಯಾಗುತ್ತದೆ.
ಆದರೆ ಬಚ್ಚಲುಮನೆಯಲ್ಲಿ ದಿನವಿಡೀ ಲೈಟೊಂದು ಉರಿಯುತ್ತಿದ್ದರೆ ಅದು ವ್ಯರ್ಥ ಖರ್ಚು ಎಂದಾಗುತ್ತದೆ.
ಉರಿಯುವಲ್ಲಿ ಉರಿಯದೆ ಬೆಳಗಬೇಕಾದಲ್ಲಿ ಬೆಳಗುವ ಈ ನಮ್ಮ ಜಬ್ಬಾರರ *“ಕುಬೇರ ಧರ್ಮ"*
ನಮಗೂ ಪ್ರೇರಣೆಯಾಗಲಿ ಎಂಬ ಪ್ರೀತಿಯಿಂದ ಈ ಅಕ್ಷರಗಳು.
ರಾತ್ರಿ ಜಬ್ಬಾರರು ಉಳಿದುಕೊಂಡ ರೂಮ್ ನಂಬರ್ 20 ನಾನು ಉಳಿದುಕೊಂಡಿದ್ದ ರೂಮ್ ನಂಬರ್ 30.
ಹತ್ತು ನಂಬರಿನ ಅಂತರದ ದಾರಿಯಲ್ಲಿ ಸಾಗಿ ಕುಬೇರ ಜಬ್ಬಾರರ ರೂಮಿನ ಬಾಗಿಲು ತಟ್ಟಿದೆ ಕೀಚಕ ವಧೆಯ ಅರ್ಜುನ ನಾನೆಂಬ ಅಳುಕಿನಲ್ಲೇ.
ಕೈಯ್ಯಲ್ಲಿದ್ದ ಮೊಬೈಲನ್ನು ಚಾರ್ಜಿಗಿಟ್ಟ ಕುಬೇರ. ಚಾರ್ಜ್ ಖಾಲಿಯಾಗುತ್ತಿದ್ದ ಮೊಬೈಲನ್ನು ಕೈಯ್ಯಲ್ಲಿ ಹಿಡಿದುಕೊಂಡು ರೆಕಾರ್ಡ್ ಮಾಡುತ್ತಿದ್ದ ಅರ್ಜುನ.
ಅರ್ಜುನನಿಗೆ ನಾನು ಸಿದ್ಧಪಡಿಸಿಕೊಂಡಿದ್ದ ಅರ್ಥದ ಔಟ್ ಲೈನ್ ಹೀಗಿದೆ ಎಂದು ವಿವರಿಸಿದೆ. ಒಂದು ವೇಳೆ ನಾನು ಇವರಿಗೆ ಸಿಗದೆ ನೇರ ಸ್ಟೇಜ್ ಗೆ ಹೋಗುತ್ತಿದ್ದರೆ ಅರ್ಜುನನಿಂದ ಒಂದು ತಪ್ಪಾಗುತ್ತಿತ್ತು. ಅದನ್ನು ತಪ್ಪಿಸಿದರು. ತಿದ್ದಿ ಹೇಳಿದರು. ತಿದ್ದಿದ್ದು ಮಾತ್ರವಲ್ಲದೆ, ನೀವು ಸಿದ್ಧಪಡಿಸಿದ್ದರಲ್ಲಿ ಅದೊಂದು ತುಂಬಾ ಚೆನ್ನಾಗಿದೆ, ಕ್ರಿಯೆಟಿವ್ ಆಗಿದೆ ಅದನ್ನು ಬಿಡದೇ ಹೇಳಿ ಎಂದು ಮೋಟಿವೇಟ್ ಕೂಡ ಮಾಡಿದರು.
ಮರುದಿನದ ಪ್ರಸಂಗ ಕೀಚಕ ವಧೆ. ಅದರಲ್ಲಿ ನನ್ನದೊಂದು ಅರ್ಜುನ.
ಅರ್ಜುನನ ಹೆಸರು ದೊಡ್ಡದು.
ಆದರೆ
ಆಫೀಸಿನಲ್ಲಿ ಅರ್ಜುನನ ಹೆಸರಲ್ಲಿ ರಜೆ ಕೇಳಿದಗಾ, ಕೀಚಕನನ್ನು ಮರ್ಡರ್ ಮಾಡೋದು ಭೀಮ ಅಲ್ವಾ ಮಾರಾಯ ?
ಮತ್ತೆ
ನಿನ್ನ ಅರ್ಜನನಿಗೆ ಎಂತ ಕೆಲಸ ಉಂಟು ಅಂತ ಕೇಳಿದ್ದರು.
ಅದು ನಾವು ಈ ಸಲ ಕೀಚಕನನ್ನು ಉಸಿರುಗಟ್ಟಿಸಿ ಮರ್ಡರ್ ಮಾಡುವುದು ಅಂತ ಪ್ಲಾನ್ ಮಾಡಿದ್ದೇವೆ.
ಭೀಮ ಉಸಿರುಗಟ್ಟಿಸುವಾಗ ನಾನು ಒಂದು ಕೈಯ್ಯಲ್ಲಿ ಕೀಚಕನ ಕಾಲನ್ನು ಒತ್ತಿ ಹಿಡ್ಕೊಂಡು ಇನ್ನೊಂದು ಕೈಯ್ಯಲ್ಲಿ ಕೀಚಕನ ಪಾದದಡಿಗೆ ಕಚಗುಳಿ ಹಾಕ್ಲಿಕ್ಕೆ ಉಂಟು. ಕೀಚಕ ನಗುನಗುತ್ತಾ ಸಾಯಬೇಕು. ನೀವು ನಂಗೆ ರಜೆವೊಂದು ಕೊಡಿ ಮಾರ್ರೆ ಎಂದು ಕೇಳಿದ್ದೆ.
ಒಬ್ಬನೇ ಕುಳಿತು ಒಂದಷ್ಟು ಪಾತ್ರಗಳ ಜೊತೆಗೆ ಒಂದಷ್ಟು ಪಾತ್ರಗಳನ್ನು ಓದುವುದು ಸುಲಭ, ಬರೆಯುವುದೂ ಸುಲಭ. ಆದರೆ ಪಾತ್ರವಾಗಿ ಮಾತಾಡಬೇಕಲ್ಲಾ
ಆಗ ಆಗುವ ಕಷ್ಟಕ್ಕೆ ಹೀಗೆ ಹಿರಿಯರಿರುವ ಜಾಗಕ್ಕೆ ನಮ್ಮ ದಾರಿ ಹತ್ತಿರವಾಗುತ್ತಾ ಹೋಗುತ್ತದೆ.
ಕಾಲನ್ನು ಒತ್ತಿ ಹಿಡಿದು ಪಾದದಡಿಗೆ ಕಚಗುಳಿ ಹಾಕುವುದಕ್ಕಾಗದರೂ ಕಾಲ ಹಿಡಿಯುವ ಬಾಗುವಿಕೆ ಇರಬೇಕಲ್ಲ.
ಮಲಗಿರುವ ಕೃಷ್ಣನ ಕಾಲ ಬುಡದಲ್ಲಿ ಕುಳಿತ ಅರ್ಜುನನಿಗೆ ಕೃಷ್ಣನೇ ಮುಂದಕ್ಕೆ ಸಾರಥಿಯಾಗಿ ಸಿಕ್ಕ.
ಮಲಗಲು ಅಣಿಯಾಗುತ್ತಿದ್ದ ಕುಬೇರ ಜಬ್ಬಾರರ ಕಾಲು ಹಿಡಿದ ಈ ಅರ್ಜನನಾಗುವ ನನಗೆ ಜಬ್ಬಾರರ ಶಕ್ತಿಯ ಆಶೀರ್ವಾದ ಸಿಕ್ಕಿತು.
ಜಬ್ಬಾರರಿಗೊಂದು ಪ್ರೀತಿಯ ನಮಸ್ಕಾರ.
➖➖➖➖➖➖➖➖➖
ಸುಧಾಕರ ಜೈನ್ ಹೊಸಬೆಟ್ಟು ಗುತ್ತು.
21/07/2018.
🔹🔰🔹🔰🔹🔰🔹🔰🔹
No comments:
Post a Comment