•ತೊರೆದು ಹೋದ ಪ್ರೀತಿಯಾತ್ಮ•
ನಾನು ನಿನ್ನಲ್ಲಿ ಮಾತಾಡದೆ ಇದ್ದರೆ,
ಜಗದಲಿ ನೀ ಮೂಕಿಯಾಗಿರುತ್ತಿದ್ದೆ ಎಂಬ ನನ್ನೊಳಗಿನ ಅಹಂಕಾರದ ಹಕ್ಕಿಮರಿಗೆ ರೆಕ್ಕೆ ಬೆಳೆದಿತ್ತು.
ನಿನ್ನ ಮನದ ಬಳ್ಳಿಯ ಒಡಲಲ್ಲಿ ಒಂದು ಚಿಗುರೆಲೆ ಚಿಗುರಬೇಕಿದ್ದರೂ ನಾನೇ ಮರವಾಗಬೇಕಿತ್ತು.
ಯಾವ ಗಾಳಿ ಬೀಸಿತೋ ಗೊತ್ತಿಲ್ಲ.
ಬೀಸುವ ಗಾಳಿಗೆ ಮರ ವಶವಾಗದೆ ಇದ್ದೀತೇ..?
ಮರ ಗಾಳಿಯ ವಶವಾದರೂ
ಬಳ್ಳಿ ಮರದ ವಶದಲ್ಲೇ ಇದ್ದೀತೆಂಬ
ಮರದ ಭ್ರಮೆ ಸುಳ್ಳಾಗಿ ಹೋಯ್ತಲ್ಲ.
ಮರವನು ಬಿಗಿದಪ್ಪಿದ್ದ ಬಳ್ಳಿಯ ಬಿಗು ಸಡಿಲಗೊಂಡಿದೆ
ಮರವ ಬಿಟ್ಟ ಬಳ್ಳಿ ನೆಲದೆದೆಯನು ಕಚ್ಚಿಕೊಂಡಿದೆ.
ಬಳ್ಳಿ ಮರದ ಆಸರೆಯಲ್ಲಿತ್ತು.
ಮರ ಬಳ್ಳಿಯ ಆ ಸೆರೆಯಲ್ಲಿತ್ತು.
ಈಗ ನೆಲದೆದೆಯಲ್ಲಿ ಹರಡಿಕೊಂಡಿಹ ಬಳ್ಳಿಯ ಕಂಡ ಮರ ಮರುಕದಿಂದ ಮರಗಟ್ಟಿದೆ.
ಮರಗಟ್ಟಿದ ಮರದ ನಾಲಗೆಯಲ್ಲಿ ಉಳಿದ ಮಾತೊಂದಿದೆ.
ನನ್ನ ತೊರೆದು ಹೋದ ನಿನಗೆ ಎಂದೆಂದಿಗೂ ಈ ಮರದ ಅಗತ್ಯ ಕಾಡದಿರಲಿ....!
ಯಾಕೆಂದರೆ
ನೀ ತೊರೆದು ಹೋದಾಗಿಂದ ಪ್ರತಿ ಕ್ಷಣವೂ ನನಗೆ ನಿನ್ನ ಅಗತ್ಯತೆ ಕಾಡುತ್ತಿದೆ.
ನಿನ್ನ ಆ ಸೆರೆಯಿಂದ ಕಳಚಲ್ಪಟ್ಟಾಗಿಂದ ನಿನ್ನ ಬುಡ ಸೇರ ಬೇಕಾದ ನನ್ನ ವೀರತನದ ವೀರ ರಸವೆಲ್ಲಾ, ಗರ್ಭ ಕಟ್ಟದೆ ಜಾರಿ ಹೋಗುವ ನಿರಾಸೆಯ ಮುಟ್ಟಿನಂತೆ ಕಲ್ಲಾಗಿರುವ ಒಣ ಕಲ್ಲ ಮೇಲೆ ಚೆಲ್ಲಿ ಹೋಗಿದೆ.
ಒಂದು ವೇಳೆ ನಿನಗೂ ನನ್ನ ಅಗತ್ಯತೆ ಕಾಡಿದರೆ....?
ನಿನ್ನ ಅಗತ್ಯತೆ ಕಾಡಿದಾಗೆಲ್ಲಾ ನಾನು ಪಡುವ ಹಿಂಸೆಯ ಈ ಸ್ಥಿತಿಯನ್ನು ನೀನೂ ಅನುಭವಿಸಬೇಕಾಗುತ್ತದೆ.
ಇರಲಿ ಕಾಡದಿರಲಿ
ನನ್ನ ತೊರೆದು ಹೋದ ನಿನಗೆ ಎಂದೆಂದಿಗೂ ಈ ಮರಗಟ್ಟಿದ ಮರದ ಅಗತ್ಯತೆ ಕಾಡದಿರಲಿ.
•ಸುಧಾಕರ ಜೈನ್ ಹೊಸಬೆಟ್ಟು ಗುತ್ತು•

No comments:
Post a Comment