Monday, April 4, 2016

ನನ್ನ ರಫ್ ಪುಸ್ತಕದೊಂದು ಪುಟ

ಗೋರ್ಕಲ್ಲ ಮೇಲೆ ಮಳೆಗರೆದರೆ ಆ ಕಲ್ಲು ನೀರು ಕುಡಿಯುವುದೇ ಸರ್ವಜ್ಞ…?

        ಮೂರ್ಖಂಗೆ ನೂರು ಕಾಲ ಬುದ್ಧಿಯನ್ನು ಹೇಳುವುದೆಂದರೆ ಅದು ಕಲ್ಲಿನ ಮೇಲೆ ನೀರೆರೆದಂತೆ. ಇದು ಸರ್ವಜ್ಞನ ಮಾತು.
ಸರಿ ಆದರೆ ನನ್ನದೊಂದು ಹುಚ್ಚು ಅಧಿಕ ಪ್ರಸಂಗ ಇದೆ.
ಕಲ್ಲ ಮೇಲೆ ಎಷ್ಟೇ ನೀರೆರೆದರೂ ಅದು ಒಂದು ತೊಟ್ಟನ್ನೂ ತನ್ನೊಳಗೆ ಇಂಗಿಸಿಕೊಳ್ಳದು. ಆದರೆ ನಾನು ನೀರೆರೆಯುವಷ್ಟು ಕಾಲ ಏನಿಲ್ಲಂದರೂ ಒರಟು ಒಣಕಲ್ಲು ಒದ್ದೆಯಾದರೂ ಆಗುತ್ತದಲ್ಲಾ….  ಒರಟು ಒಣಕಲ್ಲಿನ ಬಣ್ಣ ಬದಲಾಗಿ ಒದ್ದೆ ಕಲ್ಲಿನ ಬಣ್ಣವಾದರೂ ಬರುತ್ತದಲ್ಲ. ಮಾತ್ರವಲ್ಲದೆ ಒರಟು ಒಣಕಲ್ಲಿನ ಮೇಲೆ ನಿರಂತರ ನೀರೆರೆದರೆ ನೀರು ಬಿದ್ದ ಭಾಗ ಸವೆದು ಒರಟಿದ್ದದ್ದು ಮುಟ್ಟಲು ಹಿತವಾಗುವಂತಾಗುತ್ತದಲ್ಲ. ನೀರ ಪಸೆಯಿಂದ ಒರಟು ಒಣಕಲ್ಲಿನ ಮೇಲೆ ಪಾಚಿಯೊಂದು ಸುಖ ಸಂಸಾರ ಮಾಡುವಂತಾಗುತ್ತದಲ್ಲ. ನಾನ ನೀರೆರವ ಕಲ್ಲಿನೆಡೆಯಲ್ಲಿ ಎಲ್ಲಾದರೊಂದು ಸೆಲೆಯೊಂದಿದ್ದು ಆ ಸೆಲೆಯಲ್ಲಿ ಬಾಯಿತೆರದಿರುವ ಚಿಪ್ಪೊಂದಿದ್ದರೆ....., ಆಗ ಎಂದಾದರೊಂದು ದಿನ ನನ್ನ ಕೈಯಿಂದ ಜಾರಿ ಬೀಳುವ ನೀರ ಹನಿಯು  ಮುತ್ತಾಗಬಹುದಲ್ಲ.
ಇಷ್ಟಕ್ಕಾದರೂ ಇಷ್ಟದಿಂದಲೇ, ಎಂದೂ ಕುಡಿಯದೆಂದು ಗೊತ್ತಿರುವ ಕಲ್ಲ ಮೇಲೆ ನೀರೆರೆಯುತ್ತೇನೆ.

- ಸುಧಾಕರ ಜೈನ್ ಹೊಸಬೆಟ್ಟು ಗುತ್ತು.
  
Sudhakara Jain Hosabettu Gutthu






•ಹಿರಿದಾಗ ಬೇಕಾದ ಆಕೆ ಇರಿದು ಹೋದಳು•


ನೀರೆ ತಾನು ತನ್ನ ಹರಿಯ ಬಿಟ್ಟು ಹರಿಯ ಬಯಸಿದಳು

ಹರಿ ತಾನು ಕಟ್ಟೆಯ ಕಟ್ಟಿ ತಡೆಯ ಹೊರಟರೆ

ಕಟ್ಟೆಯೊಳಗೆ ನೀರೆ ನಿಲ್ಲುವಳೇ...?

ಹರಿಯ ಬಂಧನದಲ್ಲಿ ಇರುವವರೆಗೂ
ಇಂಗುತ್ತಾ, ಆವಿಯಾಗುತ್ತಾ ಕಟ್ಟೆಯನ್ನು ಸಡಿಲಿಸುತ್ತಾ, ಹರಿಯ ಬಿಟ್ಟು, ಹರಿಯ ಬಯಸುತ್ತಾಳೆ.

ಕರುಣೆಯಿಂದಲೇ ಪೆಟ್ಟ ಕೊಟ್ಟ;
ತನ್ನ ಕಠಿಣ ಕಟ್ಟೆಯನ್ನು ಒಡೆದೇ ಬಿಟ್ಟ

ಹರಿದೋಡಿದಳು,

ಹರಿದು ಹರಿದು ಹರಿಯ ಮನವನು ಹರಿದೋಡಿದಳು

ಇಳಿಯತ್ತಾ ಇಳಿಯುತ್ತಾ ಬಹುದೂರ ಸಾಗಿದಳು

ಹರಿಯ ಬಿಟ್ಟು ಹರಿಯುವ ಹಸಿವನ್ನು ಪೂರ್ತಿ ತೀರಿಸದೆ ಮತ್ತಷ್ಟು ಮತ್ತು ಮತ್ತಷ್ಟು ಹರಿದೋಡಿದಳು

ತನ್ನೊಡಲ ಸಿಹಿಯ ಕಳೆದುಕೊಂಡಳು

ಸೂರ್ಯನನ್ನೇ ತನ್ನೊಳಗೆ ಮುಳುಗಿಸಬಲ್ಲ ಅಬ್ಧಿಯಾದಳು

ಉಪ್ಪಾದ ನೀರೆ ಮುಪ್ಪಾದಳು

ನೆಕ್ಕಿದವರೆಲ್ಲಾ ಕೊಂಡಾಡಿದರು

ಉಪ್ಪಿಗಿಂತ ರುಚಿ ಬೇರುಂಟೆ

ಉಂಟೆ ಈ ಉಪ್ಪು ನೀರಲ್ಲಿ ಎಲೆಯೊಂದು ಚಿಗುರಬಲ್ಲ ಬೇರುಂಟೆ

ಮುಪ್ಪಾಗಿ ಉಪ್ಪಾಗಿ ಕೊರಗಿ ಈಗ ಮತ್ತೆ ತಾನು ಸಿಹಿಯಾಗಬೇಕೆಂದು ಕೊಂಡರೆ...?

ತನ್ನ ಸಾವೇ ಆಗಬೇಕು
ತಳ ಸೇರದೆ ತೇಲಾಡಬೇಕು
ಕಾಯವ ಬಿಟ್ಟು ಮಾಯವೇ ಅಗಬೇಕು
ಸೂರ್ಯಂಗೆ ಮಯ್ಯನೊಡ್ಡಿ
ಆವಿಯಾಗಬೇಕು
ಮೋಡವಾಗಿ ಬೀಸುವ ಗಾಳಿಗೆ ಕಾಯಬೇಕು

ಹೋದ ಜನ್ಮದಲ್ಲಿ ತನ್ನ ಹರಿಯ ಬಂಧನದ ತಡೆಯನ್ನು ಅರಿಯದೆ ಮುರಿದು ಹರಿದು ಹೋದಾಕೆ ಈಗ,

ಮತ್ತೆ ಮಳೆಯಾಗಲು ತನ್ನನ್ನು ತಡೆಯುವ ತಡೆಯನ್ನು ತಾನೇ ಬಯಸಬೇಕು

ಆ ತಡೆಗೂ ಕಾಯಬೇಕು ಕಾಯಬೇಕು

ಕಾದು ಕಾದು ತಡೆಯೊಂದು ಸಿಕ್ಕರೆ

ಮರುಜನ್ಮ ಪಡೆದು ಹನಿಯಾಗಿ ಧರೆಗಿಳಿವ ನೀರೆ ನಿಲ್ಲುವಳೇ

ಹರಿಯ ಬಯಸುತ್ತಾಳೆ.....!


•ಸುಧಾಕರ ಜೈನ್ ಹೊಸಬೆಟ್ಟು ಗುತ್ತು•

〰〰〰〰〰〰〰〰〰〰〰〰
•ತೊರೆದು ಹೋದ ಪ್ರೀತಿಯಾತ್ಮ•

ನಾನು ನಿನ್ನಲ್ಲಿ ಮಾತಾಡದೆ ಇದ್ದರೆ,

ಜಗದಲಿ ನೀ ಮೂಕಿಯಾಗಿರುತ್ತಿದ್ದೆ ಎಂಬ ನನ್ನೊಳಗಿನ ಅಹಂಕಾರದ ಹಕ್ಕಿಮರಿಗೆ ರೆಕ್ಕೆ ಬೆಳೆದಿತ್ತು.

ನಿನ್ನ ಮನದ ಬಳ್ಳಿಯ ಒಡಲಲ್ಲಿ ಒಂದು ಚಿಗುರೆಲೆ ಚಿಗುರಬೇಕಿದ್ದರೂ ನಾನೇ ಮರವಾಗಬೇಕಿತ್ತು.

ಯಾವ ಗಾಳಿ ಬೀಸಿತೋ ಗೊತ್ತಿಲ್ಲ.

ಬೀಸುವ ಗಾಳಿಗೆ ಮರ ವಶವಾಗದೆ ಇದ್ದೀತೇ..?

ಮರ ಗಾಳಿಯ ವಶವಾದರೂ
ಬಳ್ಳಿ ಮರದ ವಶದಲ್ಲೇ ಇದ್ದೀತೆಂಬ
ಮರದ ಭ್ರಮೆ ಸುಳ್ಳಾಗಿ ಹೋಯ್ತಲ್ಲ.

ಮರವನು ಬಿಗಿದಪ್ಪಿದ್ದ ಬಳ್ಳಿಯ ಬಿಗು ಸಡಿಲಗೊಂಡಿದೆ
ಮರವ ಬಿಟ್ಟ ಬಳ್ಳಿ ನೆಲದೆದೆಯನು ಕಚ್ಚಿಕೊಂಡಿದೆ.

ಬಳ್ಳಿ ಮರದ ಆಸರೆಯಲ್ಲಿತ್ತು.

ಮರ ಬಳ್ಳಿಯ ಆ ಸೆರೆಯಲ್ಲಿತ್ತು.

ಈಗ ನೆಲದೆದೆಯಲ್ಲಿ ಹರಡಿಕೊಂಡಿಹ ಬಳ್ಳಿಯ ಕಂಡ ಮರ ಮರುಕದಿಂದ ಮರಗಟ್ಟಿದೆ.

ಮರಗಟ್ಟಿದ ಮರದ ನಾಲಗೆಯಲ್ಲಿ ಉಳಿದ ಮಾತೊಂದಿದೆ.

ನನ್ನ ತೊರೆದು ಹೋದ ನಿನಗೆ ಎಂದೆಂದಿಗೂ ಈ ಮರದ ಅಗತ್ಯ ಕಾಡದಿರಲಿ....!

ಯಾಕೆಂದರೆ

ನೀ ತೊರೆದು ಹೋದಾಗಿಂದ ಪ್ರತಿ ಕ್ಷಣವೂ ನನಗೆ ನಿನ್ನ ಅಗತ್ಯತೆ ಕಾಡುತ್ತಿದೆ.

ನಿನ್ನ ಆ ಸೆರೆಯಿಂದ ಕಳಚಲ್ಪಟ್ಟಾಗಿಂದ ನಿನ್ನ ಬುಡ ಸೇರ ಬೇಕಾದ ನನ್ನ ವೀರತನದ ವೀರ ರಸವೆಲ್ಲಾ,  ಗರ್ಭ ಕಟ್ಟದೆ ಜಾರಿ ಹೋಗುವ ನಿರಾಸೆಯ ಮುಟ್ಟಿನಂತೆ ಕಲ್ಲಾಗಿರುವ ಒಣ ಕಲ್ಲ ಮೇಲೆ ಚೆಲ್ಲಿ ಹೋಗಿದೆ.

ಒಂದು ವೇಳೆ ನಿನಗೂ ನನ್ನ ಅಗತ್ಯತೆ ಕಾಡಿದರೆ....?

ನಿನ್ನ ಅಗತ್ಯತೆ ಕಾಡಿದಾಗೆಲ್ಲಾ ನಾನು ಪಡುವ ಹಿಂಸೆಯ ಈ ಸ್ಥಿತಿಯನ್ನು  ನೀನೂ ಅನುಭವಿಸಬೇಕಾಗುತ್ತದೆ.

ಇರಲಿ ಕಾಡದಿರಲಿ

ನನ್ನ ತೊರೆದು ಹೋದ ನಿನಗೆ ಎಂದೆಂದಿಗೂ ಈ ಮರಗಟ್ಟಿದ ಮರದ ಅಗತ್ಯತೆ ಕಾಡದಿರಲಿ.

•ಸುಧಾಕರ ಜೈನ್ ಹೊಸಬೆಟ್ಟು ಗುತ್ತು•
“ದೇವರ ಇಚ್ಛೆಗೆ ಶರಣಾಗು”

ಶರಣಾಗಲು ಸಾಧ್ಯವಾಗುತ್ತಿದ್ದರೆ,

ನೀನು ನನಗೆ ದೇವರಾಗುತ್ತಿದ್ದೆ.
ನಾನು ನಿನಗೆ ದೇವರಾಗುತ್ತಿದ್ದೆ.

🔹ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

Monday, January 26, 2015

ಮುಳ್ಳನಪ್ಪಿದ ಬಟ್ಟೆ

ಮುಳ್ಳಿನ ಮೇಲೆ ಬಟ್ಟೆ ಬಿದ್ದರೂಬಟ್ಟೆ ಮೇಲೆ ಮುಳ್ಳೇ ಬಿದ್ದರೂ ಹರಿಯೋದು ಬಟ್ಟೆನೇ......!
ಈಗ ಮುಳ್ಳಿನ ಮೇಲೆ ಬಿದ್ದ ಬಟ್ಟೆಯನ್ನು ತೆಗೆದರೆ ಮಾತ್ರ ತಾನೇ ಹರಿಯೋದು. ತೆಗೆಯದೇ ಇದ್ದರೆ...!
ತೂತಷ್ಟೇ ಆದ ಬಟ್ಟೆ ಹರಿಯದೆ ಮುಳ್ಳಿನೊಡನೇ ಬದುಕ ಮಾಡೀತು.
ಅಷ್ಟೇ ಅಲ್ಲದೆ ಇನ್ನೆಂದೂ ಇನ್ನೊಂದು ಬಟ್ಟೆ  ಮುಳ್ಳಿನ ಮೇಲೆ ಬೀಳದಂತೆ  ಬಟ್ಟೆಯೇ ಕಾಪಾಡುತ್ತದೆ.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

Sunday, January 18, 2015

ಇಂಗ್ಲೀಷ್ ಇನ್ ಕನ್ನಡ

ಆಕ್ಚ್ವಲಿ ವಾಟ್ ಹಾಪಂಡ್ ಯು ನೋ....?
ಒನ್ಸ್ ಅಪಾನ್ ಟೈಮ್ ವಿ ಆರ್ ಆಲ್ ಟೈಪಿಂಗ್ ಕನ್ನಡ ಮೆಸ್ಸೇಜ್ ಇನ್ ಇಂಗ್ಲೀಷ್. ಬಟ್ ನೌ.... ಕನ್ನಡನೇ ನೇರವಾಗಿ ಟೈಪ್ ಮಾಡಬಹುದು ಆದರೂ ನಾನು ಇಂಗ್ಲೀಷನ್ನು ಕನ್ನಡದಲ್ಲಿ ಟೈಪ್ ಮಾಡಿ ಸೇಡು ತೀರಿಸಿಕೊಳ್ಳುತ್ತಿದ್ದೇನೆ.
                    

                  
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu

Saturday, January 17, 2015

ಕನ್ಯತ್ವ+ಪುರುಷತ್ವ




ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu