Sunday, July 12, 2020

ಮೋದಪ್ರಮೋದಾ

🏮🌿🏮🌿🏮

ಮೋದಪ್ರಮೋದಾ

🏮🌿🏮🌿🏮

🌻 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

10/07/2020

ಇಬ್ಬರು ಒದ್ದೆಯಾಗದಂತೆ ಜೊತೆಯಾಗಿ ಹೋಗುವಷ್ಟು ದೊಡ್ಡದಾದ ಛತ್ರಿ. ಅದನ್ನು ಬಿಡಿಸಿ ಹಿಡಿದುಕೊಂಡು ನಡೆಯುತ್ತಿದ್ದಳು ಪ್ರಮೋದಾ. ಒಂದು ಕೈಯಲ್ಲಿ ಛತ್ರಿ ಇನ್ನೊಂದು ಕೈಯಲ್ಲಿ ಮುದ್ದೆ ಮಾಡಿ ಎತ್ತಿ ಹಿಡಿದುಕೊಂಡ ಲಂಗ. ಬೆನ್ನಿನ ಮೇಲೊಂದು ಬ್ಯಾಗ್. ಪೈಥಾಗೊರಸನ ಪ್ರಮೇಯ , ನ್ಯೂಟನನ ಚಲನೆಯ ನಿಯಮ , ಕುವೆಂಪುರವರ ಓ ನನ್ನ ಚೇತನ ಇವೆಲ್ಲಾ ಇರುವ ಪುಸ್ತಕಗಳ ಬ್ಯಾಗ್. ಇಷ್ಟು ಭಾರಗಳನ್ನು ಹೊತ್ತ ಆ ಬ್ಯಾಗ್ ನ ಭಾರವೆಲ್ಲಾ ಪ್ರಮೋದಾಳ ಹೆಗಲಮೇಲೆ ಬಿದ್ದು ಎದೆಯನ್ನೆತ್ತಿ ನಡೆಯುವುದನ್ನು ಕಲಿಸಿಕೊಡುತ್ತಿತ್ತು.

ಗದ್ದೆಯನ್ನು ದಾಟಿ ಹೋದರೆ ಕಾಡಿನ ಮಧ್ಯೆ ಸಾಗುವ ದಾರಿ. ಆ ದಾರಿ ಆರಂಭ ಆಗುವಲ್ಲೆ ಒಂದು ಮರದ ಕೆಳಗೆ ಕಾಯುತ್ತಿರುವ ನಾಗೇಂದ್ರ. ನಾಗೇಂದ್ರನದ್ದು, ಒಬ್ಬನೇ ಹೋದರೂ ಒದ್ದೆಯಾಗುವಷ್ಟು ಚಿಕ್ಕದಾದ ಛತ್ರಿ. ಪ್ರಮೋದಾಳು ಮರದ ಹತ್ತಿರ ಬರುತ್ತಿದ್ದಂತೆ ಮರದ ಬುಡದಿಂದ ನಾಗೇಂದ್ರ ‘ಪ್ರಮೋದಾಳ ದಾರಿಗೆ’ ಬರುತ್ತಿದ್ದ. ಅಲ್ಲಿಂದ ಒಟ್ಟಿಗೇ ಮಾತಾಡುತ್ತಾ ಮಾತಾಡುತ್ತಾ ರಸ್ತೆ ಬದಿಯವರೆಗೆ ಜೊತೆಗೇ ಹೋಗುವುದು. ಮಳೆ ಇಲ್ಲದೇ ಇದ್ದರೆ, ಒಬ್ಬನೇ ಹೋದರೂ ಒದ್ದೆಯಾಗುವಷ್ಟು ಚಿಕ್ಕದಾದ ನಾಗೇಂದ್ರನ ಛತ್ರಿಯಡಿಯಲ್ಲಿ ಇಬ್ಬರೂ ಅಂಟಿಕೊಂಡು ಸ್ವಲ್ಪ ದೂರದವರೆಗೆ ನಡೆಯುವುದು. ಬದುಕಿನಲ್ಲಿ ಮುಂದೊಂದು ದಿನ ಏಳು ಹೆಜ್ಜೆಯನ್ನು ಹಾಕಬೇಕು ಎಂಬ ನಂಟಿನ ಪ್ರೀತಿಯ ಕನಸಿನಲ್ಲಿ ಒಂದೇ ಛತ್ರಿಯಡಿಯಲ್ಲಿ ಅಂಟಿಕೊಂಡು ಅಂಟಿಕೊಂಡು ನಡೆಯುವುದು.
ಮಳೆ ಬರುತ್ತಿದ್ದರೆ, ಇಬ್ಬರೂ ತಮ್ಮ ತಮ್ಮ ಮುಖವನ್ನು ಬಾಡಿಸಿಕೊಂಡು ಛತ್ರಿಗಳನ್ನು ಅರಳಿಸಿಕೊಂಡು ತಮ್ಮ ಛತ್ರಿಗಳು ಪರಸ್ಪರ ತಾಗುವಂತೆ ಹಿಡಿದುಕೊಂಡು ನಡೆಯುವುದು.
ರಸ್ತೆ ಬದಿಗೆ ಬರುತ್ತಿದ್ದಂತೆ, ನಾಗೇಂದ್ರ ಬಸ್ಸು ಹತ್ತಿ ನಗರಕ್ಕೆ ಕೆಲಸಕ್ಕೆ ಹೋಗುವುದು. ಪ್ರಮೋದಾ ಮತ್ತೆ ಒಂದಷ್ಟು ನಡೆದುಕೊಂಡು ತನ್ನ ಕೊನೆಯ ವರ್ಷದ ಹೈಸ್ಕೂಲಿಗೆ ಹೋಗುವುದು.
ಕಾಡಿನ ಮಧ್ಯದ ದಾರಿಯಲ್ಲಿ ಮಗಳೊಬ್ಬಳನ್ನೇ ಶಾಲೆಗೆ ಕಳುಹಿಸುವ ಭಯ ಪ್ರಮೋದಾಳ ತಂದೆ ಸೀತಾರಾಮರಿಗೆ ಇತ್ತು. ಹಾಗಂತ ದಿನಾಲು ತಾನೇ ಮಗಳನ್ನು ಶಾಲೆಯವರೆಗೋ ಅಥವಾ ರಸ್ತೆ ಬದಿಯವರೆಗೋ ಬಿಟ್ಟು ಬರುವುದು ಒಬ್ಬ ರೈತನಾಗಿ ತನ್ನ ದಿನನಿತ್ಯದ ಕೆಲಸಗಳ ನಡುವೆ ಅದು ಅಸಾಧ್ಯವಾಗಿತ್ತು. ಹಾಗಾಗಿ ದಿನಾಲೂ ಕೆಲಸಕ್ಕೆಂದು ನಗರಕ್ಕೆ ಹೋಗುವ ನಾಗೇಂದ್ರನ ಜೊತೆಗೆ ರಸ್ತೆ ಬದಿಯವರೆಗೆ ಮಗಳನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದರು.
ಕಾಡಿನ ದಾರಿಯಲ್ಲಿ ಧೈರ್ಯಕ್ಕೆ ಜೊತೆಯಾದ ನಾಗೇಂದ್ರನೇ ತನ್ನ ಬದುಕಿನಲ್ಲಿ ಕಾಡುವ ದಾರಿಗಳಲೆಲ್ಲಾ ಜೊತೆಯಾಗಬೇಕು ಎಂದು ಧೈರ್ಯದಲ್ಲಿ ಆಸೆ ಪಟ್ಟವಳು ಪ್ರಮೋದಾ.

ಹೈಸ್ಕೂಲಿನಲ್ಲಿ ಅತ್ಯುತ್ತಮ ಅಂಕ ಪಡೆದು ನಗರದ ಕಾಲೇಜು ಸೇರಿಕೊಂಡಳು.
ರಸ್ತೆಯ ಬದಿಯವರೆಗಷ್ಟಕ್ಕೆ ಜೊತೆಯಾಗಿ ಹೋಗುತ್ತಿದ್ದವರು ನಗರದವರೆಗೂ ಒಟ್ಟಿಗೆ ಹೋಗುವ ದಿನಗಳು ಬಂತು.
ಪ್ರಮೋದಾಳದ್ದು ಪಿಯುಸಿ ಪಾಸಾಗಿ ಡಿಗ್ರಿ ಸೆರುವ ಹೊತ್ತಿಗೆ ನಾಗೇಂದ್ರನಿಗೆ ಬೈಕ್ ಬಂದಿತ್ತು.

ಬಸ್ಸಿನಲ್ಲಿ ದೂರ ದೂರ ಕುಳಿತು ಪ್ರಯಾಣ ಮಾಡುತ್ತಿದ್ದವರು ಬೈಕಿನಲ್ಲಿ ಒಂದೇ ಸೀಟಿನಲ್ಲಿ ಕುಳಿತುಕೊಂಡು ಹೋಗುವ ಪ್ರಯಾಣವನ್ನು ಆರಂಭಿಸಿದರು.
ಬೈಕಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡುವಾಗ ಪ್ರಮೋದಾಳ ತುಟಿಗಳು ನಾಗೇಂದ್ರನ ಹತ್ತಿರ ಹತ್ತಿರ ಇರುತ್ತಿತ್ತು. ಹತ್ತಿರ ಅಂದರೆ ಯಾರಾದರೂ ಇರಬಹುದಾದ ಪ್ರದೇಶಕ್ಕೆ ಬಂದಾಗ ಮಾತ್ರ ಸ್ವಲ್ಪ ಹಿಂದೆ ಸರಿಯುತ್ತಿತ್ತು.
ಹೆಚ್ಚು ಹೊತ್ತು ಬೈಕಿನಲ್ಲಿ ಜೊತೆಗೇ ಇರಬೇಕೆಂಬ ಆಸೆ ಪಡುವ ಪ್ರಣಯದ ವೇಗ ಅದು. ಹಾಗಾಗಿ ಬೈಕಿನ ಪ್ರಯಾಣದ ವೇಗ ಬಹಳ ನಿಧಾನ.
ಬೈಕಿನ ಪ್ರಯಾಣದಲ್ಲಿ ಊರಿನವರೆಲ್ಲರ ಸುದ್ದಿಗಳನ್ನು ಮಾತಾಡುತ್ತಾ ಸಾಗುತ್ತಿದ್ದರು.
ಅಂತಿಮ ವರ್ಷದ ಡಿಗ್ರಿ ಮುಗಿಯುವ ಹೊತ್ತಿಗೆ ಊರಿನವರೆಲ್ಲ ಪ್ರಮೋದಾ ಮತ್ತು ನಾಗೇಂದ್ರನ ಸುದ್ದಿ ಮಾತಾಡುವಂತಾಯ್ತು.

ಸುದ್ದಿ ಸೀತಾರಾಮರ ಕಿವಿಗೂ ಬಿತ್ತು. ಬೈಕಿನಲ್ಲಿ ಹೋಗುತ್ತಿದ್ದ ಪ್ರಮೋದಾಳು ಮತ್ತೆ ಬಸ್ಸನ್ನೇರುವಂತಾಯ್ತು…!

ಹಾಗಂತ ಸೀತಾರಾಮರಿಗೂ ನಾಗೇಂದ್ರ ಅಂದರೆ ಬಹಳ ಪ್ರೀತಿ. ಅಳಿಯ ಸಿಕ್ಕರೆ ಈ ನಾಗೇಂದ್ರನಂತಹ ಅಳಿಯನೆ ಸಿಗಬೇಕು ಎಂದು. ಆದರೆ ನಾಗೇಂದ್ರನಂತಹ ಅಳಿಯನೇ ಬೇಕು ವಿನಃ ನಾಗೇಂದ್ರನೇ ಅಳಿಯನಾಗಿ ಬೇಡ.

ಕಾರಣ ಜಾತಿ…. ಅಷ್ಟೇ. ಅದೊಂದು ಬಿಟ್ಟರೆ ಬೇರೆ ಏನೂ ಇಲ್ಲ.

ಪ್ರಮೋದಾಳದ್ದು ಡಿಗ್ರಿ ಮುಗಿಯಿತು. ಮದುವೆಯ ಸಿದ್ಧತೆಗಳು ಆರಂಭ ಆಯ್ತು.
ತನ್ನನ್ನು ನೋಡಲು ಬಂದ ಹುಡುಗನನ್ನೊಮ್ಮೆ ನೋಡುವ ಮುನ್ನ ತನ್ನನ್ನೇ ತಾನೊಮ್ಮೆ ನೋಡಬೇಕೆಂದು ಕನ್ನಡಿಯ ಮುಂದೆ ನಿಂತರೆ ಕನ್ನಡಿಯಲ್ಲಿ ನಾಗೇಂದ್ರನೇ ಕಾಣುತ್ತಾನೆ ಪ್ರಮೋದಾಳಿಗೆ.
ಪ್ರಮೋದಾ ಎಂದು ಕರೆದ ಸ್ವರ ಕೇಳಿದಾಗಲೇ ಕನ್ನಡಿಯಲ್ಲಿ ತನಗೆ ತಾನು ಕಂಡಿದ್ದು.
ಚಹಾ ತುಂಬಿದ ಲೋಟಗಳನ್ನು ತಟ್ಟೆಯಲ್ಲಿ ಹಿಡಿದುಕೊಂಡು ತಾಯಿ ಬಂದು ಮಗಳ ಪಕ್ಕದಲ್ಲಿ ನಿಂತು ಕಣ್ಣೀರು ಒರೆಸಿಕೊಂಡರು.
ಮಗಳೇ ನಿನ್ನ ಅಪ್ಪನ ಕೋಪ ನನಗೆ ಮಾತ್ರ ಗೊತ್ತು. ಅವರ ಮಾತಿಗೆ ವಿರುದ್ಧವಾಗಿ ಹೋದರೆ ಏನಕ್ಕೇನೂ ಮಾಡಿಯಾರು ಮಗಳೇ. ಪ್ರೀತಿ ಸತ್ತರೆ ತೊಂದರೆ ಇಲ್ಲ ಮಗಳೇ. ಪ್ರೇಮಿ ಸಾಯಬಾರದು. ನಿನ್ನ ಪ್ರೀತಿಯನ್ನೇ ಕೊಂದು ಬಿಡು ಮಗಳೇ.

ಚಹಾ ತುಂಬಿದ ಲೋಟಗಳ ತಟ್ಟೆಯನ್ನು ಕೈಗೆತ್ತಿಕೊಂಡು ಹೊರಟಳು ಪ್ರಮೋದಾ ಹುಡುಗನನ್ನು ನೋಡಲು.

ನನ್ನ ಪ್ರೀತಿಯನ್ನು ಕೊಲ್ಲಲಾರೆ. ಅಮ್ಮ ಮಾಡಿದ, ಮಗಳು ಕೊಡುವ ಚಹಾವನ್ನು ಕುಡಿದು ಬದುಕಿನ ಸಂಗಾತಿಯನ್ನು ನಿರ್ಣಯ ಮಾಡುವ ಹುಡುಗನೊಡನೆ ಬದುಕುವುದಕ್ಕಿಂತ, ಪ್ರೀತಿಯನ್ನು ಬದುಕಿಸುವುದು ಒಳ್ಳೆಯದು. ಪ್ರೀತಿಯನ್ನು ಬದುಕಿಸಲು ಪ್ರೇಮಿಗಳಿಬ್ಬರೂ ನಾವುಗಳು ಸತ್ತರೆ ಆಯ್ತಲ್ಲ….! ಎಂದು ಯೋಚಿಸುತ್ತಾ ಪ್ರಮೋದಾ ಹುಡುಗನ ಎದುರು ಬಂದು ನಿಂತಳು.

ಚಹಾ ತಗೊಳ್ಳುವಾಗ ಹುಡುಗನ ಮುಖವನ್ನೊಮ್ಮೆ ನೋಡಿದಳು. ಪ್ರಮೋದಾಳಿಗೆ ತನ್ನ ಬದುಕಿನಲ್ಲೇ ಮೊತ್ತ ಮೊದಲ ಬಾರಿಗೆ ಬೇರೊಂದು ಹುಡುಗನ ರೂಪ ಇಷ್ಟ ಆಯ್ತು.

ಆದರೆ ಅದು ತನ್ನ ಪ್ರೀತಿಯನ್ನು ಕೊಂದು ಬದುಕುವಷ್ಟು ಅಲ್ಲ.

ಸೀತಾರಾಮರು ಮತ್ತು ಹುಡುಗನ ತಂದೆಯವರು ಮುಂದಿನ ಸಿದ್ಧತೆಯ ಬಗ್ಗೆ ಮಾತಾಡುತ್ತಿದ್ದರು.

ಮದುವೆಗೆ ದಿನವೂ ನಿಗದಿ ಆಯ್ತು.

ಮದುವೆಯ ದಿನದ ವರೆಗೆ ಪ್ರಮೋದಾ ಅಂಗಳಕ್ಕೂ ಇಳಿಯದಂತೆ ಆಜ್ಞೆಯಾಯ್ತು.

ಊರಿನ ಎರಡು ಜಾತಿಗಳು ಮಾತಾಡುವ ಮಾತುಗಳು ಸೀತಾರಾಮರ ಎರಡು ಕಿವಿಗಳಿಗೂ ಬಿತ್ತು.

ಮದುವೆಯ ಹಿಂದಿನ ದಿನ ಸಂಜೆ ಸೀತಾರಾಮರು ಮಗಳನ್ನು ಕರೆದು ಒಂದು ಗುಟ್ಟು ಹೇಳಿದರು.

ಪ್ರಮೋದಾ ತಂದೆಯ ಮಾತಿಗೆ ತುಂಬಾ ಸಂತೋಷದಿಂದ ಒಪ್ಪಿದಳು.

ರಾತ್ರಿ ಗಂಟೆ ಹತ್ತಾಯ್ತು. ಮದುಮಗಳು ಪ್ರಮೋದಾ ಮನೆಯ ಒಳಗಲ್ಲ ಅಂಗಳದಲ್ಲೂ ಕಾಣಲಿಲ್ಲ.

ಪ್ರಮೋದಾಳ ಅಮ್ಮ ಗಡಿಬಿಡಿಯಾದರು.

ಗಂಡನಿಗೆ ವಿಷಯ ತಿಳಿಸುವಾ ಎಂದು ಸೀತಾರಾಮರನ್ನು ಹುಡುಕಿದರು.

ಇಲ್ಲ ಸೀತಾರಾಮರೂ ಕಾಣಲಿಲ್ಲ…!

ಪ್ರಮೋದಾಳ ಅಮ್ಮ ಸರಸ್ವತಿ ಅಮ್ಮನವರಿಗೆ ಖಚಿತ ಆಯ್ತು…!

ಇನ್ನೇನು ಮಾಡುವುದೆಂದು ಸರಸ್ವತಿಯಮ್ಮ ಮೆಲ್ಲನೇ ಬಾವಿಯತ್ತ ನಡೆದರು.

ಅಷ್ಟರಲ್ಲಿ ಪ್ರಮೋದಾ ಮತ್ತು ಸೀತಾರಾಮರು ಅಂಗಳಕ್ಕೆ ಕಾಲಿಟ್ಟರು.

ನೀನೆಲ್ಲಿಗೆ ಮಾರೈದಿ..? ಬಾ ನಮಗಿಬ್ಬರಿಗೊಂದು ಊಟ ಹಾಕು.

ಇವತ್ತು ನಮ್ಮ ಮಗಳೀಕೆ ನಾಳೆಯಿಂದ ಗಂಡನ ಜೊತೆಗೆ ಊಟ ಮಾಡುವವಳು.

ಸರಸ್ವತಿಯಮ್ಮ ಹಿಂದೆ ಬಂದರು. ತಂದೆ ಮಗಳಿಗೆ ಊಟ ಹಾಕಿದರು.

ಉಂಡು ಮಲಗಿದರು. ಕತ್ತಲೊಂದು ಮುಗಿದು ಹೋಯ್ತು. ಬೆಳಗಾಯ್ತು.

ಪ್ರಮೋದಾಳ ಮದುವೆಯ ದಿಬ್ಬಣ ಹೊರಟು ಹೋಯ್ತು.

ಮದುಮಗಳು ಮಂಟಪ ಸೇರಿದಳು. ಹೂವಿನ ಮಾಲೆ ಮದುಮಗಳ ಕೈ ಸೇರಿತು.

ತಲೆ ತಗ್ಗಿಸಿ ಹೂವಿನ ಮಾಲೆಯನ್ನು ಹಿಡಿದು ನಿಂತಳು ಮದುಮಗಳು ಪ್ರಮೋದಾ.

ತಲೆ ತಗ್ಗಿಸಿ ನೋಡುತ್ತಿದ್ದ ಪ್ರಮೋದಾಳ ಕಣ್ಣಿಗೆ, ಎರಡು ಪಾದಗಳು ಮೆಲ್ಲ ಮೆಲ್ಲನೆ ಹೆಜ್ಜೆಯನ್ನಿಕ್ಕುತ್ತ ಬಂದು ತನ್ನ ಎದುರು ನಿಂತದ್ದು ಕಂಡಿತು.

ಹಿರಿಯ ಪಾದಗಳಂತೆ ಕಂಡವು ಅವು….!

ಅಂದು ಚಹಾ ಕೊಡುವಾಗ ಪಾದ ನೋಡಲಿಲ್ಲ ಮುಖವನ್ನೇ ನೋಡಿದ್ದು.

“ಹಾಕಿ…. ಮಾಲೆ ಹಾಕಿ” ಎಂದು ಪುರೋಹಿತರು ಮಂತ್ರದ ಧಾಟಿಯಲ್ಲೇ ಹೇಳಿದ್ದು ಪ್ರಮೋದಾಳ ಕಿವಿಗೆ ಬಿತ್ತು.

ಮಾಲೆ ಹಾಕಲೆಂದು ಕೈ ಎತ್ತುವ ಮುನ್ನ ಮುಖ ಎತ್ತಿದಳು.

ಪಾದ ಕಂಡ ಮುನುಷ್ಯನ ಮುಖ ಕಂಡಿತು…!

ಅಲ್ಲಾ ಇದು ನಾನು ಅಂದು ಕಂಡ ಮುಖ ಅಲ್ಲ….!
ಹಿರಿಯ ಪದಗಳಂತೆ ಕಂಡದ್ದಲ್ಲ. ಅದು ಹಿರಿಯ ಪಾದವೇ ಹೌದು. ಹಿರಿಯ ಪಾದದ ಮುಖದಲ್ಲೂ ಹಿರಿತನ ಇತ್ತು.

ಅಮ್ಮಾ ಎಂದು ಪ್ರಮೋದಾ ಕುಸಿದು ಬಿದ್ದಳು.

ಮುಹೂರ್ತದ ಸಮಯ ಮೀರುತ್ತಿದೆ. ಬೇಗ ಬೇಗ ಎಂದು ಪುರೋಹಿತರು ಮಂತ್ರ ಹೇಳುತ್ತಲೇ ಇದ್ದರು.

ಮಗಳ ಮುಖಕ್ಕೆ ನೀರು ಚುಮುಕಿಸಿ ಸರಸ್ವತಿಯಮ್ಮನವರು ಮಗಳನ್ನು ಉಪಚರಿಸಿದರು, ಎಚ್ಚರಿಸಿದರು.

ಕಣ್ಣು ತರೆದ ಪ್ರಮೋದಾ ಒಮ್ಮೆ ಸುತ್ತ ನೋಡಿದಳು.

ಯಾರೋ ಇಬ್ಬರು ಅಪರಿಚಿತರು ತನ್ನ ಹತ್ತಿರವೇ ನಿಂತಂತಾಗಿತ್ತು. ಅವರ ಸೊಂಟದಲ್ಲಿ ನೇತಾಡುತ್ತಿದ್ದ ಪಿಸ್ತೂಲುಗಳು ಕಂಡವು
ಅಮ್ಮ ಮಗಳ ಭುಜವನ್ನು ಅಮುಕಿದರು.
ಮಗಳು ಎದ್ದು ನಿಂತು ಮಾಲೆ ಹಾಕಿದಳು.
ಅಷ್ಟರಲ್ಲಿ ಹೊರಗಿನಿಂದ ನಾಗೇಂದ್ರನ ಅಣ್ಣ ಒಂದು ತಲವಾರು ಹಿಡಿದುಕೊಂಡು “ಏಯ್ ಸೀತಾರಾಮಾ” ಎಂದು ಬೊಬ್ಬಿಡಿತ್ತಾ ಮಂಟಪದತ್ತ ಓಡಿಬರುವುದು ಕಂಡಿತು.

ಅರೆ ಕ್ಷಣದಲ್ಲಿ ಒಂದಷ್ಟು ಪಿಸ್ತೂಲಿನ ಗುಂಡುಗಳು ಆಕಾಶದತ್ತ ಮುಖಮಾಡಿ ಹಾರಿತು.

ನಾಗೇಂದ್ರನ ಅಣ್ಣನ ಸುತ್ತು ಜನ ಸೇರಿದರು.

“ಹಾಕು ಮಗಳೆ ಹಾಕು .. ಹಾರ ಹಾಕು”

ಪ್ರಮೋದಾ ಹಾರ ಹಾಕಿದಳು, ಆತ ಕರಿಮಣಿ ಕಟ್ಟಿದ. ಮದುವೆ ಆಗಿಯೇ ಹೋಯ್ತು.

ಪ್ರಮೋದಾ ಕಾಯುತ್ತಾ ಇದ್ದಳು….! ರಾತ್ರಿ ಅಪ್ಪ ಹೇಳಿದಂತೆ ಆಗುವ ಆ ಒಂದು ಕ್ಷಣಕ್ಕಾಗಿ.

ಕಲ್ಯಾಣ ಮಂಟಪದಿಂದ ಮದುಮಗ ಮದುಮಗಳಿಬ್ಬರೂ, ಮದುಮಗಳ ಮನೆಯಕಡೆಗೆ ಹೊರಟರು.

ಪ್ರಮೋದಾ ಕಾಯುತ್ತಾ ಇದ್ದಳು….! ರಾತ್ರಿ ಅಪ್ಪ ಹೇಳಿದಂತೆ ಆಗುವ ಆ ಒಂದು ಕ್ಷಣಕ್ಕಾಗಿ.

ರಾತ್ರಿ, ಅಪ್ಪ ನನ್ನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದೇ ರೇವತಿಯ ಮನೆಯ ಹತ್ತಿರ. ರೇವತಿಯ ಹತ್ತಿರ ಹೇಳಿದಂತೆ, ನಾಗೇಂದ್ರನನ್ನು ಕರೆಸಿ ಅಪ್ಪ ಮಾತಾಡುವುದು. ಮದುವೆ ಆಗಿ ಸಂಜೆ ಮನೆಗೆ ಬರುತ್ತಿದ್ದಂತೆ ನಮ್ಮ ಮನೆಯ ಹಿಂದೆ ಇರುವ ಕಾಡಿನ ದಾರಿಯಲ್ಲಿ ನಾಗೇಂದ್ರ ಮತ್ತು ನಾನು ಓಡಿ ಹೋಗಿ ರಸ್ತೆ ಸೇರಿದರೆ ಆಯ್ತು. ತಂದೆಯವರೇ ಅಲ್ಲೊಂದು ಗಾಡಿಯ ವ್ಯವಸ್ಥೆ ಮಾಡಿರುತ್ತಾರೆ. ಅಲ್ಲಿಂದ ಊರು ಬಿಟ್ಟು ಹೋಗಿ ಬದುಕುವುದು. ಇದನ್ನು ಮೊನ್ನೆ ನನ್ನನ್ನು ನೋಡಲು ಬಂದ ಮದುಮಗನಲ್ಲೂ ಮಾತಾಡಿ ಎಲ್ಲಾ ವ್ಯವಸ್ಥೆ ಮಾಡಿದ್ದೇನೆ ಅಂದಿದ್ದರು. ಆದರೆ ಇಲ್ಲಿ ನೋಡಿದರೆ ಮದುಮಗನೇ ಬೇರೆ. ಏನು ಆಗಿದೆಯೋ ಏನೋ. ಯೋಚಿಸುತ್ತಾ ಕುಳಿತು ಸಾಗುತ್ತಿದ್ದಂತೆ ಕಾರು ಮದುಮಗಳ ಮನೆಯ ಹತ್ತಿರ ತಲುಪಿತು.

ಮದುಮಗಳು ಪ್ರಮೋದಾ ಕಾರಿನಿಂದ ಇಳಿದವಳೇ ತಲೆಗೂದಲನ್ನು ಸರಿ ಮಾಡಿಕೊಳ್ಳುವ ನೆಪದಿಂದ ಅಲ್ಲೇ ಚೂರು ನಿಂತು, ನಾಗೇಂದ್ರನ ಮನೆ ಇರುವ ಕಡೆ ನೋಡಿದಳು.
ನಾಗೇಂದ್ರನ ಮನೆಯೇ ಕಾಣಲಿಲ್ಲ…!

ದಟ್ಟವಾದ ಹೊಗೆಯೊಂದು ಆಕಾಶವನ್ನು ಸೇರುವಾಸೆಯಿಂದ ನಿಧಾನಕ್ಕೆ ಮೇಲೇರುತ್ತಾ ಇತ್ತು.

ಮೇಲೇರುತ್ತಿರುವ ಹೊಗೆಯೆಡೆಯಲ್ಲಿ ಅಸ್ಪಷ್ಟವಾಗಿ ಮನೆ ಕಾಣಲಾರಂಭಿಸಿತು.

ಓಡಿಬಂದಳು…, ಪ್ರಮೋದಾಳ ಗೆಳತಿ ರೇವತಿ. ಪ್ರಮೋದಾಳನ್ನು ಅಪ್ಪಿಕೊಂಡು ಅತ್ತಳು.

“ಪ್ರಮೋದಾ…. ನಾವು ನಿನ್ನೆ ಮಾತಾಡಿದಂತೆ ಯಾವುದೂ ಆಗಲಿಲ್ಲ ಪ್ರಮೋದಾ. ನಿನ್ನ ಅಪ್ಪ ಹೇಳಿದಂತೆ ನೀನೂ ಕೆಲಸ ಮಾಡಿದೆ. ನಿನ್ನ ಅಪ್ಪ ಹೇಳಿದಂತೆ ನಾನೂ ಕೆಲಸ ಮಾಡಿದ್ದೆ. ಆದರೆ ನಿನ್ನ ಅಪ್ಪ ಮಾತ್ರ ಅವರು ಹೇಳಿದಂತೆ ಕೆಲಸ ಮಾಡಲೇ ಇಲ್ಲ. ಇಲ್ಲ ಪ್ರಮೋದಾ ನಿನ್ನ ಅಪ್ಪ, ಅಪ್ಪನೇ ಅಲ್ಲ. ಅವ ರಾಕ್ಷಸ…!”

“ಏನಾಯ್ತು ರೇವತಿ, ನನ್ನ ನಾಗೇಂದ್ರ ಈಗ ಎಲ್ಲಿದ್ದಾನೆ.”

ಅಲ್ಲಿ ನೋಡು ಪ್ರಮೋದಾ…, ನೋಡು ಅಲ್ಲಿ, ನಿನ್ನ ಅಪ್ಪ ಮತ್ತು ನಿನ್ನ ಗಂಡನ ಮುಖದಲ್ಲೊಂದು ಗೆಲುವಿನ ನಗು ನೋಡು.

ತನ್ನ ಗಂಡನಲ್ಲದ ಗಂಡು ಮತ್ತು ಅಪ್ಪ ನಿಂತಿರುವ ಕಡೆಗೆ ತಿರುಗಿದಳು.

ಅವರಿಬ್ಬರೂ ಪ್ರಮೋದಾ ಮತ್ತು ರೇವತಿಯನ್ನೇ ನೋಡುತ್ತಿದ್ದರು.

ಇಬ್ಬರ ಮುಖದಲ್ಲೂ ಒಂದು ನಗು, ಅದು ಅಸಹ್ಯ ನಗು…!

ಪ್ರಮೋದಾ ನಿನ್ನೆ ರಾತ್ರಿ ನೀನು ನಮ್ಮ ಮನೆಯ ಹತ್ತಿರ ಬಂದು ಕರೆದಾಗ, ನಾನು ಆತಂಕದಲ್ಲೇ ಹೊರಗೆ ಬಂದೆ. ಆದರೆ ನಿನ್ನ ಅಪ್ಪ ಮಾತಾಡಿದಾಗ ಒಂದು ರೀತಿಯಲ್ಲಿ ಸಮಾಧಾನ ಆಯ್ತು. ಆದರೆ ಇದೆಲ್ಲಾ ಬದುಕಿನಲ್ಲಿ ಸಾಧ್ಯವಾ ಅಂತ ಅಂದುಕೊಂಡೇ ನಾನು ನಾಗೇಂದ್ರನ ಮನೆಗೆ ಹೊರಟೆ.

ನಿನ್ನ ಅಪ್ಪ ಹೇಳಿದಂತೆ ನಾಗೇಂದ್ರನಲ್ಲಿ ಹೇಳಿ, ಅದರ ಬಗ್ಗೆ ಮಾತಾಡಲು ನಿನ್ನ ಅಪ್ಪ ಹೇಳಿದ ಜಾಗಕ್ಕೆ ನಾಗೇಂದ್ರನನ್ನು ಬರಲು ಹೇಳಿದ್ದು.

ನಾಗೇಂದ್ರನ ಮುಖದಲ್ಲಿ ಮೂಡಿದ ಉತ್ಸಾಹದ ನಗುವನ್ನು ಕಂಡು ನನ್ನ ಸಂತೋಷವೇ ಕಣ್ಣಲ್ಲಿ ನೀರಾಗಿ ಇಳಿಯಿತು ಪ್ರಮೋದಾ.

ನಾಗೇಂದ್ರ ನಿನ್ನ ಅಪ್ಪನನ್ನು ಭೇಟಿಯಾಗಲೆಂದು ಚಪ್ಪಲಿಯೊಳಗೆ ತನ್ನ ಪಾದಗಳನ್ನು ತುರುಕಿಸಿದ.

ಆದರೆ ನಿನ್ನ ಅಪ್ಪ ಮಾಡಿದ್ದು… ನೋಡು…!

ಪ್ರಮೋದಾ ನಾಗೇಂದ್ರನ ಮನೆಯ ಕಡೆಯಿಂದ ಹೊರಟ ದಟ್ಟವಾದ ಹೊಗೆ ನಿನ್ನ ಮನೆಯಕಡೆಗೊಮ್ಮೆ ತಿರುಗಿ ಆಕಾಶದ ಕಡೆಗೆ ಹೋಗುತ್ತಿದೆ.

ಪ್ರಮೋದಾ… ನಾಗೇಂದ್ರ ನಿನ್ನೆ ರಾತ್ರಿಯೇ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಅಂತ ಇವತ್ತು ಊರೆಲ್ಲಾ ಸುದ್ದಿ..!
ಆದರೆ ಮೈ ಮೇಲೆ ಸುಮಾರು ಗಾಯ ಇತ್ತಂತೆ… ಅಂತ ಕೊರಗುತ್ತಿದ್ದಾರೆ ಪ್ರಮೋದಾ.

ನಿನಗೆ ನಾಗೇಂದ್ರನ ಮೇಲೆ ಇರುವ ಪ್ರೀತಿಯ ವಿಷಯ, ನಿನ್ನನ್ನು ನೋಡಲು ಬಂದ ಹುಡುಗನಿಗೆ ಗೊತ್ತಾಗಿತ್ತಂತೆ.

ಅದಕ್ಕೆ ಈಗ ಈ ಹೆಂಡತಿ ಸತ್ತ ಎರಡು ಮಕ್ಕಳ ತಂದೆಯನ್ನು ನಿನಗೆ ಕಟ್ಟಿರುವುದು ಪ್ರಮೋದಾ.

ಗಾಳಿಯಲ್ಲಿ ಸೇರಿರ ಬಹುದಾದ ನಾಗೇಂದ್ರನ ಹೊಗೆಯನ್ನು ಉಸಿರಾಡಿದಳು ಪ್ರಮೋದಾ.

ಈಗಷ್ಟೇ ಮದುವೆಯಾದ ತನ್ನ ಗಂಡನ ಎರಡು ಮಕ್ಕಳನ್ನು ತಬ್ಬಿಕೊಂಡಳು.

🌻🌹🌻🌹🌻🌹🌻

Thursday, July 9, 2020

🏮💎🏮💎🏮

ಉಂಡು ಹೋದ ಅಮ್ಮ

🏮💎🏮💎🏮



⭕🔔⭕

ಸುಧಾಕರ ಜೈನ್ ಹೊಸಬೆಟ್ಟು ಗುತ್ತು

⭕🔔⭕


ವೇಗವಾಗಿ ಒಂದರ ಹಿಂದೆ ಒಂದು ಆರು ವಾಹನಗಳು ಬರುತ್ತಿತ್ತು. ವಾಹನಗಳು ಬರುತ್ತಿದ್ದ ರಭಸಕ್ಕೆ ರಸ್ತೆಯಪಕ್ಕದಲ್ಲಿ ನಿಂತಿದ್ದ ಖರ್ಜೂರದ ಮರಗಳು ಅಲ್ಲಾಡುವಂತೆ ಕಾಣುವ ಹಾಗೆ ನಡುಗುತ್ತಿದ್ದವು. ಎದುರಿಗೆ ಮತ್ತು ಕೊನೆಗೆ ಇದ್ದದ್ದು ತೆರೆದ ಜೀಪ್. ಆ ಜೀಪಿನಲ್ಲಿ ಅತ್ಯಾಧುನಿಕ ಗನ್‌ಗಳನ್ನು ಜೀಪಿನ ಫ್ರೇಮ್ ರಾಡಿಗೆ ಆಧಾರವಾಗಿ ಇಟ್ಟುಕೊಂಡು ಸುತ್ತಲೂ ಗುರಿ ಇಟ್ಟು ನಿಂತಿರುವ ಉಗ್ರರು.
ವೇಗವಾಗಿ ಬಂದ ವಾಹನಗಳು ದಸಕ್ಕೆಂದು ನಿಂತಾಗ ಕಪ್ಪು ರಸ್ತೆಯ ಮೇಲೂ ಕಪ್ಪಾದ ಗೆರೆಯಂತಹ ಬರೆ ಬಿದ್ದವು.
ಒಂದು ಕ್ಷಣ ಇಡೀ ವಾತಾವರಣದಲ್ಲಿ ಬೂಟಿನ ಸೌಂಡು ಮಾತ್ರ ಕೇಳುವಷ್ಟು ನಿಶಬ್ಧವೊಂದು ಹುಟ್ಟಿಕೊಂಡಿತು.

ಮರುಕ್ಷಣದಲ್ಲಿ ದಡಬಡ ದಡಬಡ ಶಬ್ಧಗಳಿಂದ ಎಲ್ಲಾ ಮನೆಯ ಬಾಗಿಲು ಮುಚ್ಚಿಕೊಂಡವು. ಮತ್ತೆ ಒಂದು ಕ್ಷಣ ಕಠೋರ ಮೌನ.

ಮರುಕ್ಷಣದಲ್ಲಿ ಢಂ ಢಂ  ಢಂ ಢಂ ಎಂಬ ಶಬ್ಧಗಳಿಂದ ಉಗ್ರರ ಗನ್‌ನೊಳಗೆ ಕುಳಿತಿದ್ದ ಬುಲೆಟ್‌ಗಳು ಒಳಗಿನಿಂದ ಚಿಲಕ ಬಿದ್ದಿರುವ ಬಾಗಿಲೊಳಗೆ ನುಗ್ಗಿತು.

ಒಂದಷ್ಟು ಬಾಗಿಲು ತೆರೆದುಕೊಂಡವು. ತೆರೆಯದ ಬಾಗಿಲ ಎದೆಗೆ ಮತ್ತೊಂದಷ್ಟು ಗುಂಡುಗಳು ನುಗ್ಗಿದವು. ಮತ್ತೊಂದಷ್ಟು ಮನೆಯ ಬಾಗಿಲುಗಳು ತೆರೆದುಕೊಂಡವು.

ತೆರೆದ ಬಾಗಿಲ ಮನೆಗೆ ನುಗ್ಗಿದ ಉಗ್ರರು ಒಂದಷ್ಟು ಹುಡುಗರನ್ನು ಎಳೆದುಕೊಂಡು ಬಂದರು. ಒಬ್ಬಾಕೆ ತಾಯಿ ಉಗ್ರನೋರ್ವನ ತೊಡೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ನೇತಾಡುತ್ತಿದ್ದಳು.
ನನ್ನ ಮಗನನ್ನು ಬಿಟ್ಟುಬಿಡಿ, ಬಿಟ್ಟುಬಿಡಿ. ಬೇಕಾದರೆ ನಾನೇ ಬರುವೆ ಎಂಬು ಬೊಬ್ಬಿಟ್ಟು ಅಳುತ್ತಾ ತೊಡೆಯಲ್ಲೇ ನೇತಾಡುತ್ತಿದ್ದಳು.
ನೇತಾಡುತ್ತಿದ ತೊಡೆಯನ್ನೇ ಎತ್ತಿ ಹೆಜ್ಜೆ ಹಾಕುತ್ತಿದ್ದ ಉಗ್ರನ ವೇಗ ಕಡಿಮೆಯಾಗುತ್ತಿದ್ದನ್ನು ಕಂಡ ಇನ್ನೊಬ್ಬ ಉಗ್ರ ತೊಡೆಯಲ್ಲಿ ನೇತಾಡುತ್ತಿದ್ದ ಹೆಂಗಸಿಗೆ ಒದ್ದ.
ತಾಯಿ ಕೆಳಗೆ ಬಿದ್ದಳು.
ತೆರೆದ ಜೀಪುಗಳ ಮಧ್ಯೆ ನಿಂತಿರುವ ಪೂರ್ತಿ ಮುಚ್ಚಿರುವ ವಾಹನದೊಳಗೆ ಈ ಎಳೆದುಕೊಂಡು ತಂದ ಹುಡುಗರನ್ನು ತುಂಬಿಸಿದರು.

ಎಲ್ಲಾ ವಾಹನಗಳ ಬಾಗಿಲು ಮುಚ್ಚಿದರು.

ಸುಧಾರಿಸಿಕೊಂಡ ತಾಯಿ ಎದ್ದು ಮತ್ತೊಮ್ಮೆ ಜೀಪಿನಲ್ಲಿ ಕುಳಿತಿರುವ ಉಗ್ರನೋರ್ವನ ಕಾಲು ಹಿಡಿಕೊಂಡಳು.

ಜೀಪ್ ಹೊರಡಲಾರಂಭಿಸಿತು. ತಾಯಿ ಹಿಡಿದ ಕಾಲನ್ನು ಬಿಡಲೇ ಇಲ್ಲ. ದಮ್ಮಯ ನನ್ನ ಮಗನನ್ನು ಬಿಟ್ಟು ಬಿಡಿ ಬಿಟ್ಟು ಬಿಡಿ ಎಂದು ಬೇಡುತ್ತಲೇ ಹಿಡಿದ ಕಾಲಿನಲ್ಲಿ ನೇತಾಡುತ್ತಲೇ ಓಡಿದಳು.
ಹಿಂದೆ ಗನ್ ಹಿಡಿದುಕೊಂಡು ನಿಂತಿದ್ದ ಉಗ್ರ ಒದ್ದ.
ಹೆಂಗಸು ರಸ್ತೆಗೆ ಬಿದ್ದಳು. ಬಿದ್ದಲ್ಲಿಂದ ಮತ್ತೆ ಜೀಪಿನೆಡೆಗೆ ಓಡಿ ಬರಲೆತ್ನಿಸುವುದನ್ನು ಉಗ್ರ ಕನ್ನಡಿಯಲ್ಲಿ ಕಂಡ. ಹಿಂದೆ ತಿರುಗಿದ, ಓಡಿ ಬರುತ್ತಿದ್ದ ಆ ಹೆಂಗಸಿನ ಕಡೆಗೊಮ್ಮೆ ನೋಡಿದ.  ಉಗ್ರನಿಗೂ ಮನಸ್ಸು ಕರಗಿತೋ ಏನೊ. ಜೀಪನ್ನು ನಿಲ್ಲಿಸುವಂತೆ ಹೇಳಿದ. ಹೆಂಗಸು ತನ್ನ ತಾಯಿಯಂತೆ ಕಂಡಿತೋ ಏನೊ. ಕಿಸೆಯಿಂದ ಒಂದು ವಿಸಿಟಿಂಗ್ ಕಾರ್ಡ್ ತೆಗೆದು ಓಡೋಡಿ ಬರುತ್ತಿದ್ದ ತಾಯಿಗೆ  ಬಿಸಾಡಿದ.

“ಅದರಲ್ಲಿ ನಮ್ಮ ಆಫೀಸಿನ ಅಡ್ರೆಸ್ ಇದೆ. ನಾಳೆ ನಮ್ಮ ಆಫೀಸಿಗೆ ಬಾ.” ಜೀಪ್ ಹೊರಟಿತು. ಬಿಸಾಡಿದ ವಿಸಿಟಿಂಗ್ ಕಾರ್ಡ್ ವೇಗವಾಗಿ ಹೊರಟ ವಾಹನಗಳ ಗಾಳಿಯ ವೇಗಕ್ಕೆ ವಶವಾಗಿ ಅದೇ ದಿಕ್ಕಿಗೆ ಹಾರುತ್ತಿತ್ತು. ಕುಂಟುತ್ತಾ ಓಡಿ ಹೋಗಿ ವಿಸಿಟಿಂಗ್ ಕಾರ್ಡನ್ನು ಹಿಡಿದುಕೊಂಡಳು ತಾಯಿ.

ತನ್ನ ಮಗ ತಲುಪುಬಹುದಾದ ಜಾಗದ ಅಡ್ರಸನ್ನು ಗಟ್ಟಿಯಾಗಿ ಹಿಡಿದುಕೊಂಡಳು ತಾಯಿ. ಮನೆಗೆ ಹಿಂತಿರುಗಿದಳು. ಆ ಅಡ್ರಸಿಗೆ ತಾನು ತಲುಪಬಹುದಾದ ದಾರಿ ಮತ್ತು ಪ್ರಯಾಣದ ಬಗ್ಗೆ ಯೋಚಿಸಿದಳು.

ತನಗೆ ಹುಟ್ಟಿದ ಮಗನನ್ನು ಕಳೆದಕೊಂಡ ತಾಯಿ, ಲೋಕಕ್ಕೆ ಬೆಳಕನ್ನು ನೀಡುವ ಸೂರ್ಯನ ಹುಟ್ಟಿಗಾಗಿ ಕಾದಳು.

ಹೊರಟಳು ತಾಯಿ, ಕಳೆದುಕೊಂಡ ಮಗನನ್ನು ಪಡೆದುಕೊಳ್ಳಲು ಹೊರಟಳು.

ಉಗ್ರರು ಕೊಟ್ಟ ವಿಳಾಸಕ್ಕೆ ತಲುಪಿದಳು.

ವಿಸಿಟಿಂಗ್ ಕಾರ್ಡ್ ತೋರಿಸಿ ಘಟನೆಯನ್ನು ವಿವರಿಸಿ ಒಳ ಹೋಗಲು ಅಪ್ಪಣೆಗಾಗಿ ಕಾದಳು.

ಅಷ್ಟರಲ್ಲಿ ಅವಳನ್ನು ಒಳಗೆ ಕಳುಹಿಸುವಂತೆ ಒಳಗಿನಿಂದ ಒಂದು ಮೆಸ್ಸೇಜ್ ಬಂತು.

ವಿಸಿಟಿಂಗ್ ಕಾರ್ಡ್ ಬಿಸಾಡಿದವನ ಮುಖ ಕಂಡು ಸಂತೋಷಗೊಂಡಳು ತಾಯಿ.

ಓಡಿ ಹೋಗಿ ಆತನ ಮುಂದೆ ಮಂಡಿಯೂರಿ ನಿಂತು ಆತನ ಎರಡೂ ಕಾಲನ್ನು ತಬ್ಬಿಕೊಂಡಳು.

ಎಲ್ಲಿ ನನ್ನ ಮಗ..? ದಯಮಾಡಿ ಕಳುಹಿಸಿಕೊಡಿ.

ಡೋಂಟ್ ವರಿ, ಒಳಗೆ ಇದ್ದಾನೆ, ಬರ್ತಾನೆ.

ಈಗ ಊಟದ ಸಮಯ ಬನ್ನಿ ಊಟ ಮಾಡಿ ಆಮೇಲೆ ನಿಮ್ಮ ಮಗನನ್ನು ಕರೆದುಕೊಂಡು ಹೋಗುವಿರಂತೆ.

ಉಗ್ರನೊಳಗೆ ದೇವರೇ ಕಂಡಿದ್ದರು ಆ ತಾಯಿಗೆ. ಮೊಣಕಾಲೂರಿದಲ್ಲಿಂದ ಎದ್ದು ಊಟಮಾಡಲು ಹೇಳಿದ ಉಗ್ರನನ್ನು ತಬ್ಬಿಕೊಂಡಳು. ಹಣೆಗೊಂದು ಮುತ್ತನ್ನು ನೀಡಿದಳು.

ಅಬ್ಬಾ ಎಷ್ಟು ಒಳ್ಳೆಯ ಉಗ್ರ. ಇಂತಹ ಉಗ್ರನಿಗೆ ಜನ್ಮ ನೀಡಿದ ತಾಯಿ ಪುಣ್ಯಾತ್ಮಳು ಎಂದುಕೊಳ್ಳುತ್ತಾ ಆತ ತಟ್ಟೆ ಇಟ್ಟ ಎದುರಿನ ಕುರ್ಚಿಯಲ್ಲಿ ಕುಳಿತಳು.
ಒಬ್ಬ ಆ ತಾಯಿಗೆ ಊಟ ಬಡಿಸಿದ. ಇನ್ನೊಬ್ಬ ನೀರು ತಂದು ಕೊಟ್ಟ. ಇನ್ನೊಂದಷ್ಟು ಜನ ಉಗ್ರರು ಬಂದು ಅವಳ ಸುತ್ತಾ ಕೈ ಕಟ್ಟಿ ನಿಂತರು.
ಮಾತಾಡುತ್ತಾ ಮಾತಾಡುತ್ತಾ ಊಟ ಮುಗಿಸಿದಳು ತಾಯಿ.
ಒಬ್ಬ ಕೈ ತೊಳೆಯಲು ನೀರು ತಂದು ಕೊಟ್ಟ.
ಉಗ್ರರ ಊಟ ಉಂಡು, ಸತ್ಕಾರ ಕಂಡು, ತಾನು ಇಲ್ಲೇ ಇದ್ದರೆ ಹೇಗೆ…? ಇವರೆಲ್ಲರಿಗೂ ತಾನು ತಾಯಿಯಾಗಿ ಇವರೊಡನೇ ಇದ್ದು, ಇವರೆಲ್ಲರ ಮನಸ್ಸನ್ನು ಗೆದ್ದು ಇವರೆಲ್ಲರ ಬದುಕನ್ನೇ ಬದಲಿಸಬಹುದಲ್ವಾ ಎಂಬ ಆಸೆಪಟ್ಟುಕೊಂಡಳು.
ಸರಿ ಮಕ್ಕಳೇ ನೀವು ಹೇಳಿದಂತೆ ನೀವಿದ್ದಲ್ಲಿಗೆ ಬಂದೆ. ನೀವು ಹೇಳಿದಂತೆ ಊಟ ಮಾಡಿದೆ. ಇನ್ನು ನಾನು ಹೊರಡಬೇಕು.
ನನ್ನ ಮಗನನ್ನು ನನ್ನೊಡನೆ ಕಳುಹಿಸಿಕೊಡಿ ನಾನು ಹೊರಡುವೆ.

ಅಷ್ಟರಲ್ಲಿ ಸುತ್ತ ನಿಂತಿದ್ದ ಉಗ್ರರು ತಾಯಿ ಸುತ್ತ ಕುಣಿಯುವುದಕ್ಕೆ ಆರಂಭಿಸಿದರು.

ಕುಣಿಯುತ್ತಿರುವ ಉಗ್ರರ ಮಧ್ಯದಿಂದ ಸುತ್ತ ಇಣುಕಿದಳು ತನ್ನ ಮಗನು ಬರಬಹುದಾದ ದಿಕ್ಕಿನೆಡೆಗೆ.

ಕುಣಿಯುವುದನ್ನು ನಿಲ್ಲಿಸಿದ ಉಗ್ರರೆಲ್ಲರೂ ತಾಯಿಯನ್ನೇ ನೋಡಲಾರಂಭಿಸಿದರು.

ಎಲ್ಲಿ ನನ್ನ ಮಗ..! ಕಳುಹಿಸಿಕೊಡಿ ಹೊರಡುತ್ತೇವೆ ನಾವು.

ಎಲ್ಲರೂ ಬೊಬ್ಬಿಟ್ಟು ನಗಾಡಿದರು…!

ಎಲ್ಲಿ ನಿನ್ನ ಮಗ….?

ಈಗ ನಾವು ಹೇಗೆ ನಿನ್ನ ಮಗನನ್ನು ಕಳುಹಿಸಿಕೊಡುವುದು …?
ನೀನು ಈಗ ನಮ್ಮಲ್ಲಿ ಊಟ ಮಾಡಿದೆಯಲ್ಲಾ..?
ಇನ್ನು ಹೇಗೆ ನಾವು ನಿನ್ನ ಮಗನನ್ನು ಕಳುಹಿಸಿಕೊಡುವುದು….?
ನಾವು ಎಲ್ಲಿಂದ ನಿನ್ನ ಮಗನನ್ನು ಕಳುಹಿಸಿಕೊಡುವುದು …!
ನೀನು ಆಗಲೇ ಕರೆದುಕೊಂಡು ಹೋದೆಯಲ್ಲಾ….!

ಮತ್ತೆ ಸುತ್ತ ನಿಂತಿದ್ದ ಉಗ್ರರು ತಾಯಿಯ ಸುತ್ತ ಕುಣಿದರು.
ತಾಯಿಗೆ ಏನೂ ಅರ್ಥ ಆಗದೆ ಸುತ್ತ ನೋಡುತ್ತ ತನ್ನ ಮಗ ಬರಬುಹುದಾದ ದಾರಿಯ ಕಡೆಗೆ ಇಣುಕುತ್ತಿದ್ದಳು.

ದಯಮಾಡಿ ನನ್ನ ಮಗನನ್ನು ಕಳುಹಿಸಿಕೊಡಿ ಎಂದು ಬೊಬ್ಬಿಟ್ಟಳು.

ಕುಣಿಯುತ್ತಿದ್ದ ಉಗ್ರರೆಲ್ಲಾ ಒಂದು ಕ್ಷಣ ನಿಂತು ಬಿಟ್ಟರು.

ದಯಮಾಡಿ ನನ್ನ ಮಗನ್ನು ಕಳುಹಿಸಿಕೊಡಿ ಎಂದು ಬೇಡಿದಳು
ಮತ್ತೆ ಜೋರಾಗಿ ನಗಾಡಿದರು…,
ಎಲ್ಲಿಂದ ಕಳುಹಿಸಿಕೊಡಲಿ ನಿನ್ನ ಮಗನನ್ನು

ನೀನು ಈಗ ಊಟ ಮಾಡಿದೆಯಲ್ಲಾ…..!
ನಿನ್ನ ಮಗನ ಮಾಂಸವನ್ನೇ ನೀನು ಈಗ ಉಂಡದ್ದು…!
ನಿನ್ನ ಮಗನನ್ನು ಕೊಂದು ಅವನ ಮಾಂಸವನ್ನೆ ಅಡುಗೆ ಮಾಡಿ ನಿನಗೆ ಬಡಿಸಿದ್ದು ನಾವು.

ಮಗನ ಮಾಂಸವನ್ನೇ ಅಡುಗೆ ಮಾಡಿ, ಆ ಮಗನ ತಾಯಿಗೇ ಉಣ್ಣಿಸಿದ ಉಗ್ರರು ನಾವು…

ಮತ್ತೆ ಉಗ್ರರ ಉಗ್ರ ಡ್ಯಾನ್ಸ್…!

ISIS ಉಗ್ರರು ಸಿರಿಯಾದ ಕುರ್ದಿಸ್ತಾನ್ ಎಂಬಲ್ಲಿ ಮಾಡಿದ ಈ ನೈಜ ಕೃತ್ಯ
ದಿನಾಂಕ 2 ಮಾರ್ಚ್ 2015 ರಂದು ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು.

ಆ ನೈಜ ಘಟನೆಯ ಸುದ್ದಿಯನ್ನೇ ಆಧಾರವಾಗಿಟ್ಟುಕೊಂಡು ಬರೆದ ಕಥೆ ಇದು.


⭕🔔⭕

ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

9900500832

09/07/2020


🌿🌹🌿🌹🌿🌹🌿

Saturday, February 29, 2020

🌺🦋🌺🦋🌺🦋🌺

ಅಮ್ಮಾ ನೀನೇಕೆ ಅಮ್ಮನಾಗದೆ ಹೋದೆ?

🌺🦋🌺🦋🌺🦋🌺

ಅಮ್ಮ ನಾನು ಬೆಣ್ಣೆ ಕದ್ದೆನಮ್ಮ. ಮಣ್ಣು ತಿಂದೆನಮ್ಮ

ಹೌದಮ್ಮ ನಾನು ಮಣ್ಣೇ ತಿಂದೆನಮ್ಮ

ನೀನು ನನ್ನ ಬಾಯಿ ಬಿಡಿಸಲಿಲ್ಲಮ್ಮ. ನಾನು ಬಾಯಿ ಬಿಟ್ಟಾಗ ಕಾಣುವ ನನ್ನ ಕರಾಳ ವಿಶ್ವದ ರೂಪವನ್ನು ನೋಡುವ ಸಾಮರ್ಥ್ಯ ನಿನ್ನಲ್ಲಿಲ್ಲವೆಂದು ತಾನೇ ನೀನು ನನ್ನ ಬಾಯಿ ಬಿಡಿಸದೆ ನನ್ನನ್ನೇ ಬಿಟ್ಟು ಹೋಗಿದ್ದು.

ಅಮ್ಮ ನೀನು ಯಶೋದೆಯಾಗಲಿಲ್ಲ...! ಯಾಕೆ...? ಹೌದು ನಾನು ಕೃಷ್ಣನಾಗಲು ಸಾಧ್ಯವೇ?

ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲ ಎಂದರಿತ ಬುದ್ಧ ಬೆಳಗಾಗಬಹುದಾದ ಆ ಕತ್ತಲಲ್ಲೇ ತನ್ನ ಮನೆಯಲ್ಲಿದ್ದ ಸಾಸಿವೆಯನ್ನು ಚೆಲ್ಲಿ ಹೊರ ನಡೆದು ಹೋದ.

ಅವನೇನೋ ಆಸೆಯನ್ನು ಬಿಟ್ಟು ಸುಖಿಯಾಗಲು ಹೋದ.

ಆದರೆ ಬುದ್ಧ ಚೆಲ್ಲಿ ಹೋದ ಆ ಸಾಸಿವೆಯನ್ನು ಹೆಕ್ಕುತ್ತಾ ಸಾವಿನಂತಹ ಆ ಮನೆಯಲ್ಲಿ ತನ್ನ ಬದುಕಿಗೆ ಒಗ್ಗರಣೆ ಹಾಕಬೇಕಾದ ಅವನ ಹೆಂಡತಿಯ ಆಸೆಗೆ ಯಾರು ಕಿವಿಯಾಗಬೇಕಮ್ಮ.

ಸಾವೇ ಇಲ್ಲದ ನನ್ನ ತಪ್ಪುಗಳು ನನ್ನಲ್ಲೇ ಮನೆ ಮಾಡಿಯಾಗಿತ್ತು. ನನ್ನದು ಸಾವಿರುವ ಮನೆಯ ಸಾಸಿವೆಯ ಮನಸ್ಸಾಗಿ ಹೋಯ್ತು. ನಿನ್ನದು ಬುದ್ಧನ ದಾರಿ ಹಿಡಿದ ಮನಸ್ಸಾಗಿ ಹೋಯ್ತು.

ಅಮ್ಮ ನಾನು ನನ್ನ ಅಮಲಿನ ತೊಟ್ಟಿಲಲ್ಲೆ ಇದ್ದೆನಮ್ಮ.

ಎಚ್ಚರಗೊಂಡಾಗ ನೀನಿರಲಿಲ್ಲ.

ಅಮ್ಮ ಒಂದು ವೇಳೆ ಎಚ್ಚರ ತಪ್ಪುವ ಆ ಚಿರ ನಿದ್ದೆಯೇ ಬಂತೆಂದರೆ ನೀ ಮತ್ತೆ ಬರುವೆಯಾ..!

ಬಂದು ಬರಿದಾದ ಸೂತಕದ ತೊಟ್ಟಿಲನು ಬಿಚ್ಚಿಡುವೆಯಾ....?

ಅಮ್ಮ ನಿಜವಾಗಿಯೂ ಎಚ್ಚರಗೊಂಡಿದ್ದೇನೆ. ಎಚ್ಚೆತ್ತುಕೊಂಡಿದ್ದೇನೆ. ಇನ್ನೆಂದೂ ನಿದ್ದೆ ಬಾರದಂತೆ ಎಚ್ಚರಗೊಂಡಿದ್ದೇನೆ.

ಒಮ್ಮೆ ಬಂದು ಬಿಡಮ್ಮ.

ತೊಟ್ಟಿಲಿಗೆ ಹತ್ತಿಸಿದವಳು ನೀನೇ ಅಲ್ವಮ್ಮ.

ಈಗ ತೊಟ್ಟಿಲಿಂದ ಇಳಿಯೊದಾದರು ಹೇಗೆ.

ಹಾರಿದರೆ ಉಳಿದೀತೆ ಸೊಂಟ.

ಹ್ಹಾಂ… !
ಹಾರಾಡಿದ್ದು ಸಾಕೆಂದೇ....? ಇಳಿಯಲಾರದಷ್ಟು ಎತ್ತರದ ತೊಟ್ಟಿಲಿಗೇರಿಸಿ ಹೊರಟೇ ಹೋದೆಯ ತಾಯಿ.

ಅಮ್ಮ ನೀ ಹೊರ ಹೋಗುವಾಗ ಮುಚ್ಚಿದ ಬಾಗಿಲ ಚಿಲಕ ತೆಗೆಯುವಾಗ ಆ ಚಿಲಕ ಮಾತಾಡದಂತೆ ಅದರ ಕತ್ತನ್ನು ಬಿಗಿ ಹಿಡಿದಿದ್ದೆಯಂತೆ ಹೌದೆ?

ಹೌದು ನಾನು ಎಚ್ಚರಗೊಂಡರೆ ನಿನ್ನ ಹಿಡಿದಿಟ್ಟು ಕೊಳ್ಳುವೆನೆಂದಲ್ಲವೇ....?

ಅಮ್ಮ ಹೇಗಮ್ಮ ಎಲ್ಲವನ್ನು ತೊರೆದು ಹೋಗುವ ವೈರಾಗ್ಯದ ಕ್ರೂರತೆ ನಿನಗೆ ಬಂದಿದ್ದು.... ಹೇಗಮ್ಮ?

ಅಂದು ಬುದ್ದನಿಗೂ ಇದೇ ವೈರಾಗ್ಯದ ಕ್ರೂರತೆ ಬಂದಿದ್ದಾ…?

ಚಿಲಕ ತೆಗೆದ ಮೇಲೆ ಬಾಗಿಲು ತೆಗೆಯುವಾಗ, ಬಾಗಿಲ ಬಾರವನ್ನು ಹೊತ್ತ ಬೀಜಾಗ್ರದ ಭಾರವನ್ನು ನೀನೇ ಹೊತ್ತು ಬಾಗಿಲನ್ನು ಎತ್ತಿ ತೆಗೆದೆಯಂತೆ ಹೌದಾ…? ನಾನು ಬೀಜಾಗ್ರವನ್ನು ನೋಡಿದಾಗ ಅದರ ನಾಲಗೆಯಲ್ಲಿ ಎಣ್ಣೆಯ ಪಸೆ ಅರಿಯುತ್ತಿತ್ತು.  ಪಾಪ ಅದರ ನಾಲೆಗೆ ಹೊರಳದಂತೆ ಎಣ್ಣೆ ಅಂಟಿತ್ತು. ಇಲ್ಲದೇ ಇದ್ದರೆ ನೀನು ಹೊರಗೆ ಹೋಗುವಾಗ ಅದಾದರೂ ನನ್ನನ್ನು ಕರೆಯುತ್ತಿತ್ತು.

ಅಮ್ಮ ನೀವು ಮನೆಯಿಂದ ಹೊರಗೆ ಹೋಗುವಾಗ ಬಾಗಿಲ ಕಡೆಗೆ ನೋಡಿಲ್ವಾ.....!

ತಪ್ಪೊಪ್ಪಿಕೊಂಡ ಕಂದನ ಬಿಟ್ಟು ಹೋಗಬೇಡಮ್ಮ ತಾಯಿ.

ತಾಯಿ ಮನಸ್ಸು ಮಾಡಿದರೆ ಆಕೆಗೆ ಇನ್ನೊಂದು  ಮಗುವಾಗ ಬಹುದು. ಆದರೆ ಮಗುವಿಗೆ ಇನ್ನೊಂದು ತಾಯಿ ಸಿಗುವುದುಂಟೆ ಈ ಜಗದಲ್ಲಿ.

ಅಮ್ಮ ತಪ್ಪಾಗಿದೆ. ತಪ್ಪನ್ನೊಪ್ಪಿಕೊಂಡಿರುವೆ. ಶಿಕ್ಷೆಯನ್ನು ನಿಮ್ಮೆದೆರೇ ಅನುಭವಿಸುವ ಅವಕಾಶ ಕೊಡಿ. ಕೊರಗಿ ಕೊರಗಿ ನಿನ್ನ ಬೇಡುತಿಹುದು ತಾಯಿ. ಬಂದು ಬಿಡು.

ಹ್ಹೂಂ ನನ್ನ ಮಗುವಿಗೆ ಅಮ್ಮ ಆಗಬೇಕಾದ ನಿನ್ನನ್ನು ಅಮ್ಮ ಅಂತನೇ ಹೇಳ್ತಾ ಇದ್ದೆ-ನಲ್ಲ...?

ಅಮ್ಮಾ ನನಗೆ ಅಮ್ಮ ಆಗಿದ್ದವಳು ನೀನು. ನನ್ನ ಮಗುವಿಗೆ ಅಮ್ಮ ಆಗುವುದಕ್ಕಿಂತ ಮುಂಚೆ ಹೊರಟೇ ಹೋದೆಯಲ್ಲ ತಾಯಿ.

"ನೀನು ಬಿಡಪ್ಪ, ನೀನು ಸಕಲ ಕಲಾವಲ್ಲಭ ನೀನು" ಅಂತ
ಮಾತಿನ ಮಧ್ಯೆ ಗೆಳೆಯನೊಬ್ಬ ನನ್ನನ್ನು ಕುರಿತು ಹೇಳುತ್ತಿದ್ದ.

ಸಕಲ ಕಲಾ ವಲ್ಲಭನಂತೆ....!

ಹ್ಹೂಂ ಎಷ್ಟೊಂದು ಚುಚ್ಚುತಾ ಇದೆ ಗೊತ್ತಾ ಈ ಮಾತು.

ನಿನಗೊಬ್ಬಳಿಗೇ ವಲ್ಲಭನಾಗಿ ಉಳಿಯಲಾರದೆ ತಿರಸ್ಕೃತನಾದ ಮೇಲೆ ಅದ್ಯಾವ ಕಲೆಗೆ ವಲ್ಲಭನಾಗುವ ಗಂಡಸುತನ ನನ್ನಲ್ಲಿ ಉಳಿದೀತು.

ಹೋದೆಯಲ್ಲ ಬರುವ ಮನಸ್ಸು ಮಾಡದೇ ದೂರ ನಿಂತೆಯಲ್ಲ.

ಅಮ್ಮ ನಾನು ಇಲ್ಲದೆ ನೀನು ಅಮ್ಮ ಆಗುವುದಕ್ಕೆ ಸಾಧ್ಯನಾ.....?

ಅಥವಾ


ನನಗಲ್ಲದೆ, ನಾನಿಲ್ಲದೆ ನೀನು ಅಮ್ಮನಾಗುವೆ ಎಂದು ಹೊರಟೆಯಾ ತಾಯಿ..?

ಹಾಗಾದರೆ..!

ಅಮ್ಮ ನೀನಿಲ್ಲದ ಮೇಲೆ ನಾನ್ಯಾಕೆ..?

ಅಮ್ಮಾ ನೀ ನಿಲ್ಲದ ಮೇಲೆ ನಾ ನಿಲ್ಲಲ್ಯಾಕೆ...?


ಕಾಯುತ್ತಿರುವೆನೆಂದು ಹೇಳಲೇ ಕಾದು ಕಾದು ಕಾದು ಹೋದರೆ ಸೀದು ಹೋಗುವುದಲ್ಲಾ.

ಬೇಯುವವರೆಗೆ ಕಾಯಲಾರದೆ ಕಾದು ಕಾದಾಡಿದವರು ನಾವು.

ಆದರೂ ಕಾಯಬೇಕಂತೆ...!

ಕೊತ ಕೊತ ಕುದಿಯುವ ಎಣ್ಣೆಗೆ ಇಣುಕಿದರೆ ಮುಖದ ಪ್ರತಿಬಿಂಬ ಕಾಣುವುದಿಲ್ಲವಂತೆ.

ಕಾಯುತ್ತಿರುವ ಎಣ್ಣೆ ಆರುವವರೆಗೆ ಕಾಯಬೇಕಂತೆ. ತಣ್ಣಗಾದ ಮೇಲೆ ಇಣುಕಿದರೆ ಮುಖ ಕಾಣುತ್ತದೆಯಂತೆ.

ಕನ್ನಡಿಯಲ್ಲಿಯೂ ನೋಡಲಾಗದ ಈ ಮುಖವನ್ನು ಕಾದ ನೀನು ತಣ್ಣಗಾಗುವವರೆಗೆ ಕಾಯಬೇಕ ನಿನ್ನಲ್ಲಿ‌ ನನ್ನನ್ನು ನೋಡಲು.

ಕುದಿಯುತ್ತಿರುವ ಎಣ್ಣೆ ಆರೀತೆಂದು ಕಾಯುತ್ತಾ ಕುಳಿತೆರೆ ಪೂರ್ತಿ ಆವಿಯಾಗಿ ಹೋದೀತೆಂಬ ಅಭದ್ರತೆಯಿಂದ ಉರಿಯನ್ನು ತಣಿಸಲೆಂದು‌ ಬಳಿ ಬಂದರೆ ಸುಟ್ಟೇ ಬಿಟ್ಟೆಯಲ್ಲಮ್ಮಾ.



29-02-2016




💈ಸುಧಾಕರ ಜೈನ್ ಹೊಸಬೆಟ್ಟು ಗುತ್ತು


☮☮☮☮☮☮☮☮☮

Thursday, October 10, 2019

🏮⚜🏮⚜🏮⚜🏮


ಅಂಗೈಯಲ್ಲೊಂದು ಅಹಂಕಾರದ ಕಣ್ಣು


🏮⚜🏮⚜🏮⚜🏮


🧭 29/09/2019


⭕ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

🔗 9900500832


📿 📍📿

ಅಂಗೈಯಲ್ಲೊಂದು ಅಹಂಕಾರದ ಕಣ್ಣು

📿📍📿


ಮುಖದಲ್ಲಿರುವ ಕಣ್ಣುಗಳಲ್ಲಿ ನಾವು ಜಗತ್ತನ್ನು ನೋಡುತ್ತೇವೆ.

ನಾವು ನೋಡಿದ ಜಗತ್ತನ್ನು, ನಾವು ನೋಡುವ ಜಗತ್ತಿಗೆ, ನಾವು ನೋಡದ ಜಗತ್ತಿಗೆ ತೋರಿಸ ಬಯಸುತ್ತೇವೆ.

ಮೆದುಳಿನ ಒಳಗಣ್ಣು ಮತ್ತು ಹೃದಯದ ಒಳಗಣ್ಣನ್ನು ಮುಚ್ಚುತ್ತೇವೆ ಅಂಗೈಯಲ್ಲಿರುವ ನಮ್ಮ ಅಹಂಕಾರದ ಕಣ್ಣನ್ನು ಆನ್ ಮಾಡುತ್ತೇವೆ.  ವೀಡಿಯೋ ಮಾಡಿ ನಾವು ನೋಡುವ ಜಗತ್ತಿಗೆ, ನಾವು ನೋಡದ ಜಗತ್ತಿಗೆ ತೋರಿಸಿ ಬಿಡುತ್ತೇವೆ.


ನೋಡಬಾರದ್ದನ್ನು, ನೋಡಬಾರದು ಎಂದು, ಅನಿಮಿಷರಾದ ದೇವತೆಗಳಿಗೆ ಇಲ್ಲದ ರೆಪ್ಪೆಗಳು ಮನುಷ್ಯನ ಕಣ್ಣುಗಳಿಗೆ ಇವೆ.

ಆದರೆ ನೋಡಬಾರದ ಜಗತ್ತನ್ನೇ ನೋಡ ಬಯಸುತ್ತೇವೆ. ಮುಚ್ಚಬಹುದಾದ ರೆಪ್ಪೆಗಳನ್ನೂ ಅರಳಿಸಿ ನೋಡುತ್ತೇವೆ.

ಭೃಗು  ಮಹರ್ಷಿ ಪಾದದಡಿಯಲ್ಲಿ ಅಂದರೆ ಅಂಗಾಲಿನಲ್ಲೊಂದು ಕಣ್ಣು ಇತ್ತು.

ಅದು ಭೃಗು ಮಹರ್ಷಿಗಳಿಗೆ ದೊಡ್ಡ ಅಹಂಕಾರವನ್ನೇ ಕೊಟ್ಟಿತ್ತು.

ಆ ಅಹಂಕಾರವನ್ನು ಕಿತ್ತು ಹಾಕಬೇಕೆಂಬ ಉದ್ಧೇಶದಿಂದ,

ಪಾಲನಾ ಕರ್ತನಾದ ವಿಷ್ಣು ಭೃಗು ಮಹರ್ಷಿಗಳ ಪಾದವನ್ನು ಹಿಡಿದುಕೊಂಡು ಆ ಅಹಂಕಾರದ ಕಣ್ಣನ್ನೇ ಕಿತ್ತು ತೆಗೆದೆ.

ಈಗ ನಮ್ಮೊಳಗಿನ ನಮ್ಮ ಪಾಲನಾ ಕರ್ತನಾದ ನಮ್ಮದೇ ಪ್ರಬುದ್ಧ ಬುದ್ಧಿಯೆಂಬ ವಿಷ್ಣು ನಮ್ಮ ಅಂಗೈಯಲ್ಲಿರುವ ಅಹಂಕಾರದ ಕಣ್ಣನ್ನು ಕಿತ್ತು ತೆಗೆಯಬೇಕಾದ ಕಾಲಕ್ಕೆ ಬಂದು ನಿಂತಿದ್ದೇವೆ.


ಬ್ರಹ್ಮನ ಸಭೆಯಲ್ಲಿ ಗಂಗೆಯ ಸೀರೆಯ ಸೆರಗು ಜಾರಿತು.
ದೇವತೆಗಳೆಲ್ಲಾ ರೆಪ್ಪೆಗಳಿಲ್ಲದ ತಮ್ಮ ಕಣ್ಣುಗಳಿಗೆ ತಮ್ಮತಮ್ಮ ಅಂಗೈಯನ್ನಡ್ಡ ಹಿಡಿದುಕೊಂಡರು.

ಆದರೆ ಭೂಲೋಕದಿಂದ ಹೋದ ಮಹಾಭಿಷ ರೆಪ್ಪೆಗಳನ್ನರಳಿಸಿ  ನೋಡಬಾರದ್ದನ್ನು ನೋಡಿದ

ಏರಿ ಹೋಗಿದ್ದ ಎತ್ತರದಿಂದ ಕೆಳಗೆ ಇಳಿದು ಬಂದ.

ಇನ್ನೂ ಮೇಲೆ ಏರದ ನಾವೂ ನೋಡಬಾರದ ಜಗತ್ತನ್ನು ನೋಡ ಬಯಸುತ್ತೇವೆ.

ನೋಡಬಾರದ ಜಗತ್ತನ್ನು ನೋಡ ಬಯಸುವ ನಾವು,
ನಾವು ನೋಡುವ, ನಾವು ನೋಡದ ಜಗತ್ತಿಗೆ ತೋರಿಸ ಬಯಸುತ್ತೇವೆ.

ಇತ್ತೀಚೆಗೆ ನಡೆದ ಒಂದು ಘಟನೆಯ ವೀಡಿಯೋ ವೈರಲಾಯ್ತು.

ಮಾಲ್ ಒಂದಕ್ಕೆ ಹೋಗಿದ್ದ ಹೆಣ್ಣೋರ್ವಳು ಒಂದೆರಡು ಬಟ್ಟೆಗಳನ್ನು ಕದ್ದುಬಿಡುತ್ತಾಳೆ.

ಕದ್ದ ಬಟ್ಟೆಗಳನ್ನು ಬ್ಯಾಗಿನೊಳಗೆ ತುಂಬಿಸಿಕೊಂಡು ಹೊರಗೆ ಹೋಗುವಾಗ ಸಿಕ್ಕಿಹಾಕಿಕೊಳ್ಳುತ್ತಾಳೆ.

ಮಾಲ್ ನ ಮೇಲ್ವಿಚಾರಕನು ಆ ಬಟ್ಟೆಗಳನ್ನು ಕದ್ದ ಹುಡುಗಿಯನ್ನು ನಿಲ್ಲಿಸಿ ವಿಚಾರಣೆ ಮಾಡುತ್ತಾನೆ.
ವಿಚಾರಣೆಯನ್ನು ವೀಡಿಯೋ ಮಾಡುತ್ತಾನೆ.  ಮಾತ್ರವಲ್ಲದೆ ಆಕೆಯ ಪರ್ಸ್
ನಲ್ಲಿದ್ದ ಅವಳ ಗಂಡನಾದ ಪೋಲಿಸರೊಬ್ಬರ ಫೋಟೋವನ್ನೂ ತೋರಿಸುತ್ತಾನೆ.
ಈ ಪ್ರಕರಣದಲ್ಲಿ ಭಾಗಿಯಾಗದ ಅವಳ ಗಂಡನ ಮಾನಕ್ಕೂ ಹಾನಿ ಮಾಡುತ್ತಾನೆ.



ಕದ್ದದ್ದು ತಪ್ಪು ಹೌದೇ ಹೌದು. ಆದರೆ ಆ ಹುಡುಗಿಯಲ್ಲಿರುವ ಕಳ್ಳತನದ ದುಷ್ಟತನಕ್ಕಿಂತ ಈ ವೀಡಿಯೋ ಮಾಡಿ ಲೋಕಾರ್ಪಣೆ ಮಾಡಿದವನಲ್ಲಿ ಹೆಚ್ಚಿನ ಕ್ರೂರತೆಯ ಅಹಂಕಾರದ ದುಷ್ಟತನ ಕಾಣುತ್ತದೆ.


ಆ ಮೇಲ್ವಿಚಾರಕರಿಗೆ ಎರಡು ನ್ಯಾಯಯುತವಾದ ಆಯ್ಕೆ ಇತ್ತು.

ಒಂದಾ ಪೋಲಿಸ್ ಕಂಪ್ಲೇಂಟ್ ಕೊಟ್ಟು ಆಕೆಯನ್ನು ಪೋಲಿಸರ ವಶಕ್ಕೆ ಒಪ್ಪಿಸುವುದು.

ಅಥವಾ ಹೃದಯವಂತಿಕೆಯ ಮನುಷ್ಯನಾಗಿ ಆ ಹುಡುಗಿಯ ಪರಿಸ್ಥಿತಿ ಮತ್ತು ಮನಸ್ಥಿತಿಯನ್ನು ಅರಿತು ಸರಿಯಾಗಿ ವಿಚಾರಿಸಿ ಆಕೆಗೆ, ಆಕೆ ಕದ್ದ ಬಟ್ಟೆಗಳನ್ನೇ ಉಡುಗೊರೆಯಾಗಿ ಕೊಟ್ಟು ಬಿಡಬೇಕಿತ್ತು.

ಈ ತರಹದ ಒಳ್ಳೆಯತನದಿಂದ ಕೆಟ್ಟವರನ್ನೂ ಒಳ್ಳೆಯವರನ್ನಾಗಿಸಿದ ಎಷ್ಟೋ ಘಟಿತ ಘಟನೆಗಳು ಇವೆಯಲ್ಲಾ.

ಒಂದು ಹಂತದ counselling ಮಾಡಿ ಸರಿಯಾಗಿ ಬುದ್ಧಿವಾದ ಹೇಳಿ, ಇನ್ನು ಮುಂದೆ ಇಂತಹ ಪರಿಸ್ಥಿತಿ ಬರದಂತೆ ಮತ್ತು ಈ ಪ್ರಕರಣದಿಂದ ಮಾನಸಿಕವಾಗಿ ಕುಗ್ಗದಂತೆ ಧೈರ್ಯದಿಂದ ಒಳ್ಳೆಯ ರೀತಿಯಲ್ಲಿ ಬದುಕುವಂತೆ ಪ್ರೇರೇಪಿಸಿ ಕಳುಹಿಸಬಹುದಿತ್ತು.

ಅದು ಬಿಟ್ಟು ಆ ರೀತಿ ವೀಡಿಯೋ ಮಾಡಿ, ಮಾನ ಹರಾಜು ಹಾಕಬಾರದಿತ್ತು.

ಮನುಷ್ಯನಿಗೆ ಮಾನಕ್ಕಿಂತ ಮಿಗಿಲಾದದ್ದು ಏನೂ ಇಲ್ಲ.

ಮಾನ ಹೋದ ಮೇಲೆ ಬದುಕು ಬೇಡ ಎಂದು ಆ ಹುಡುಗಿ ಆತ್ಮ ಹತ್ಯೆ ಮಾಡಿಕೊಂಡರೆ..?
ಹೆಂಡತಿಯ ಈ ವಿಡಿಯೋ ನೋಡಿ ಮನನೊಂದ ಗಂಡನ ನಿರ್ಣಯದಿಂದ ದಾಂಪತ್ಯದಲ್ಲಿ ಬಿರುಕಾಗಿ ಗಂಡನಿಂದ ಪರಿತ್ಯಕ್ತಳಾದರೆ.  ಬೇರೆ ದಾರಿ ಇಲ್ಲ ಎಂದು ಆ ಹುಡುಗಿ ಆತ್ಮ ಹತ್ಯೆಯ ದಾರಿ ಕಂಡುಕೊಂಡರೆ…?

ಆಗ ಈ ವೀಡಿಯೋ ಮಾಡಿ ಹಂಚಿದವನು ಮತ್ತು ಹಂಚಿಕೊಂಡವರೆಲ್ಲರೂ ವೀಡಿಯೋ ನೋಡಿಕೊಂಡೇ ಒಂದು ಹೊತ್ತಿನಲ್ಲೇ ಎರಡು ಹೊತ್ತಿನ ಊಟ ಮಾಡಿ ತಿಂದು ತೇಗುತ್ತಾ ಬದುಕು ಮಾಡುತ್ತಾರಾ..?



ಆ ಹುಡುಗಿ ಹಾಗೆ ಕದ್ದ ನಂತರದ ದೃಶ್ಯವೆಲ್ಲಾ ಅಂಗೈಯಲ್ಲಿದ್ದ ಅಹಂಕಾರದ ಕಣ್ಣಿನಿಂದ ವೀಡಿಯೋ ಆಗಿ, ಈಗ ನೋಡಬಾರದ ಜಗತ್ತಿನ ಎಲ್ಲರ ಅಂಗೈಯಲ್ಲಿರುವ ಅದೇ ಅಹಂಕಾರದ ವಿಧವಾ ಕಣ್ಣಿಗೆ ಆಭರಣವಾಯ್ತು.


ಆ ವೀಡಿಯೋ ಮಾಡಿದವನ ಮೆದುಳಿನ ಒಳಗಣ್ಣು, ಹೃದಯದ ಒಳಗಣ್ಣು ಮುಚ್ಚಿಹೋಗಿತ್ತು ಅನ್ನುವುದಕ್ಕಿಂತಲೂ ಕುರುಡಾಗಿತ್ತು ಅಂತಲೇ ಹೇಳಬಹುದು.

ಆದರೆ ಆ ವಿಡಿಯೋವನ್ನು ಫೇಸ್ ಬುಕ್ ವ್ಹಾಟ್ಸಾಪ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರಲ್ಲಾ ಇವರುಗಳ ಬೌದ್ಧಿಕ ಕಣ್ಣೂ ಕುರುಡಾಗಿ ಹೋಗುತ್ತದಲ್ಲಾ…?



ಕಳ್ಳತನಕ್ಕೆ ಸಾವಿರ ಸಾವಿರ ಕಾರಣಗಳು ಇರುತ್ತವೆ.

ಹಾಗಂತ ಆ ಸಾವಿರ ಕಾರಣಗಳಲ್ಲಿ ಯಾವ ಒಂದು ಕಾರಣವೂ ಕಳ್ಳತನವನ್ನು ಸಮರ್ಥಿಸಿಕೊಳ್ಳುವಂತಹುಗಳು ಅಲ್ಲ.


ಆದರೆ ಕಾರಣಗಳು ಶಿಕ್ಷೆಕೊಡುವ ಕ್ರೂರತೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.


ಅಡಿಕೆ ಕದ್ದ ಕಳ್ಳನಿಗೆ ಆನೆ ಕದ್ದ ಕಳ್ಳತನದ ಶಿಕ್ಷೆ ಕೊಡಬಾರದಲ್ಲ.


ಕೈಗೆ ಸಿಕ್ಕ ಕಳ್ಳನಿಗೆ ಕೈಗೆ ಸಿಗದ ಕಳ್ಳನ ಶಿಕ್ಷೆಯನ್ನೂ ಸೇರಿಸಿ ಕೊಡಬಾರದಲ್ವಾ.


ಕದಿಯಲಾರದ ಕದಿಯಬಾರದ ಸ್ಥಿತಿವಂತರೂ ಯಾಕೆ ಕದಿಯುತ್ತಾರೆ…?

ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ರವರು ಹೇಳುವ ಪ್ರಕಾರ,

ಒಬ್ಬ ಮನುಷ್ಯನಲ್ಲಿ ಈ ರೀತಿಯ ಕಳ್ಳತನ ಮಾಡಲು ಮುಖ್ಯ ಕಾರಣ,

 
ಕ್ಲೆಪ್ಟೋಮೇನಿಯಾ ಎಂಬ ಒಂದು ಚಿಕ್ಕ ಮನೋರೋಗ. ಇದನ್ನು ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್ ಅಂತಲೂ ಕರೆಯುತ್ತಾರೆ.

ಇದು ಬಹು ಸುಲಭವಾಗಿ ಗುಣವಾಗುವ ರೋಗವೂ ಹೌದು ಎನ್ನುತ್ತಾರೆ ಈ ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ರವರು.


ಈ ರೋಗದ ಪ್ರಾಥಮಿಕ ಹಂತವಾಗಿ ರಸ್ತೆಯಲ್ಲಿ ಸಿಗುವ ನಾಣ್ಯ ಹೆಕ್ಕುವುದರಿಂದ ಆರಂಭವಾಗಿರುತ್ತದೆ.

ಯಾಕೆಂದರೆ ರಸ್ತೆಯಲ್ಲಿ ಬಿದ್ದಿರುವ ಒಂದು ರೂಪಾಯಿಯದ್ದೋ, ಐದು ರೂಪಾಯಿಯದ್ದೋ ನಾಣ್ಯ ಅದು ನಮ್ಮದಾಗಿರುವುದಿಲ್ಲ.

ಆದರೂ ಅದನ್ನು ಹೆಕ್ಕುತ್ತೇವೆ. ಇನ್ನೂ ಸ್ವಲ್ಪ ದೊಡ್ಡ ಮೊತ್ತದ ಸಂಪತ್ತಾದರೆ ಹೆಕ್ಕುವಾಗ ಯಾರಾದರೂ ನೋಡುತ್ತಾರಾ ಎಂದು ನೋಡುತ್ತೇವೆ.

ಹ್ಹಾಂ…. ! ನಾವು ಮಾಡುವಾಗ ಯಾರೂ ನೋಡಬಾರದು…. ಯಾವ ಕಣ್ಣೂ ನೋಡಬಾರದು….. ಯಾವ ಅಂಗೈ ಕಣ್ಣಲ್ಲೂ ರೆಕಾರ್ಡ್ ಆಗಬಾರದು ಅನ್ನುವ ಜಾಗ್ರತೆ ಇದ್ದೇ ಇರುತ್ತದೆ.

ಆದರೆ ನಾವು ಆ ಗೆರೆಯ ಈಚೆ ಇದ್ದರೆ ರಪ್ಪನೇ ನಮ್ಮ ಅಂಗೈ ಕಣ್ಣನ್ನು ಆನ್ ಮಾಡುತ್ತೇವೆ ವೀಡಿಯೋ ಮಾಡುತ್ತೇವೆ. ಲೋಕಕ್ಕೆ ಹಂಚುತ್ತೇವೆ.

ಪ್ರಬುದ್ಧತೆಯ ಅರಿವಿಲ್ಲದ ನ್ಯೂಸ್ ಚಾನೆಲ್ ಪರಂಪರೆ, ಲೈಕ್ ಶೇರ್ ಗಳ ಮೊತ್ತದಲ್ಲಿ ವೈರಲ್  ಎಂಬ ರೋಗ ಕೊಡುವ ಸುಖದ ಅಮಲಿನ ಪರಂಪರೆ ಜನರನ್ನು ಈ ವಿಡಿಯೋ ಮಾಡುವ ಮತ್ತು ಅದನ್ನು ಹಂಚಿಕೊಂಡು ಸುಖಿಸುವ ಹಂತಕ್ಕೆ ತಲುಪಿಸಿದೆ.

ಹಾಗೆ ನೋಡಿದರೆ, ಪರರ ಬದುಕಿನ ತಪ್ಪನ್ನು ಜಗತ್ತಿಗೆ ತೋರಿಸುವ ನಾವು ನಮ್ಮ ಬದುಕಿನಲ್ಲಿ ಒಂದೂ ತಪ್ಪು ಮಾಡದೆ ಇರುವ  ಸಾಧ್ಯತೆಯಾದರೂ ಇದ್ದೀತಾ.

ಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು…!

ಬದುಕಿನಲ್ಲಿ ತಪ್ಪೇ ಮಾಡದ ಮನುಷ್ಯನ ಮೈಯಿಂದ ಒಂದು ರೋಮ ತನ್ನಿ ಎಂದರೆ, ತಪ್ಪೇ ಮಾಡದ ತನುವಿನಿಂದ ಒಂದು ರೋಮ ಸಿಗುವುದಕ್ಕುಂಟಾ.

ತಪ್ಪೇ ಮಾಡದೆ ಇರುವವ ಇರುವುದಕ್ಕುಂಟಾ..?

ಇರುತ್ತಾನೆ ಎಂದಾದರೆ ಆತ ದೇವರಾಗುವುದಿಲ್ವಾ.

ಅಲ್ಲ ದೇವರ ಬದುಕಿನ ಕಥೆಗಳಲ್ಲಾ ತಪ್ಪುಗಳು ಕಾಣುವ ನಮಗೆ ದೇವರೇ ಕೆಲವು ಕಡೆ ತಪ್ಪು ಮಾಡಿದ್ದಾನೆ ಮತ್ತು ಆ ತಪ್ಪುಗಳನ್ನೇ ಒಪ್ಪಿಕೊಂಡವರಂತೆ ನಾವು.

ಇನ್ನು ತಪ್ಪು ಮಾಡಿದ ಮನುಷ್ಯರನ್ನು ಒಪ್ಪಿಕೊಳ್ಳುವ, ಪ್ರೀತಿಸುವ ಹೃದಯವಂತರಾಗಲಾದಷ್ಟು ಕ್ರೂರಿಗಳು ಯಾಕಗುತ್ತೇವೆ.

ಅಹಂಕಾರದ ಕಣ್ಣು ಕೊಡುವ ಶಕ್ತಿ ಅದು. ಅದನ್ನು ಮೊದಲು ಕಿತ್ತು ಬಿಡಬೇಕಾದ ದೃಷ್ಟಿಯೊಂದು ನಮಗೆ ಬೇಕಾಗಿದೆ.

ನಮ್ಮ ಶಿಷ್ಟ ಪರಂಪರೆಯಲ್ಲಿ , ನಮ್ಮ ಸಂವಿಧಾನದಲ್ಲಿ ಒಬ್ಬ ಆರೋಪಿಗೆ ಅಲ್ಲ ಅಪರಾಧಿಗಾದರೂ ಒಂದು ಶಿಕ್ಷೆಯನ್ನು ಕೊಡುವಾಗ ಒಂದು ಶಿಷ್ಟಾಚಾರವನ್ನು ಪಾಲನೆ ಮಾಡುತ್ತಾರೆ.

ಕತ್ತಲ ಕೋಣೆಯಲ್ಲಿ ಶಿಕ್ಷೆ ಅಥವಾ ಯಾರು ನೋಡದ ಜಾಗದಲ್ಲಿ ಶಿಕ್ಷೆ ಹೀಗೆ.



ಆದರೆ ದುಷ್ಟ ಪರಂಪರೆಯಲ್ಲಿ ರಾಕ್ಷಸ ವಿಧಾನದಲ್ಲಿ ಒಬ್ಬ ಅಪರಾಧಿಗೆ ಅಲ್ಲ ಆರೋಪಿಗಾದರೂ ಶಿಕ್ಷೆಯನ್ನು ಕೊಡುವಾಗ ಸಾರ್ವಜನಿಕವಾಗಿ , ಲೋಕಕ್ಕೆ ಕಾಣುವ ಹಾಗೆ ಕ್ರೂರವಾಗಿ ಶಿಕ್ಷೆಯನ್ನು ಕೊಡುವ ಪರಂಪರೆಯೂ ಇತ್ತು, ಮತ್ತು ಇದೆ ಕೂಡ.

ಮುಂಚೆ ರಾಕ್ಷಸರು ಅಂತ ಹೇಳುತ್ತಿದ್ದೆವು ಈಗ ಉಗ್ರರು ಅಂತ ಹೇಳುತ್ತೇವೆ. ಪದ ಮಾತ್ರ ಬದಲಾಗಿದೆ ಉಳಿದೆಲ್ಲವೂ ಅದೇ.

ಅದೇ ಮನಸ್ಥಿತಿಯವರು ನಾವು,

ಅಂಗೈಯಲ್ಲೊಂದು ಅಹಂಕಾರದ ಕಣ್ಣು ಇಟ್ಟುಕೊಂಡು ನಾವು ನೋಡಬಾರದ ಜಗತ್ತನ್ನು   ನಾವು ನೋಡಿದ ಜಗತ್ತನ್ನು, ನಾವು ನೋಡುವ ಜಗತ್ತಿಗೆ, ನಾವು ನೋಡದ ಜಗತ್ತಿಗೆ ತೋರಿಸ ಬಯಸುತ್ತೇವೆ.

ರಾಕ್ಷಸ ಪರಂಪರೆ, ಉಗ್ರ ಮನಸ್ಥಿತಿ ಪರಂಪರೆಯ ನಾವು ನಮ್ಮ ಅಂಗೈಯಲ್ಲಿರುವ ಅಹಂಕಾರದ ಕಣ್ಣಿನಿಂದ ವೀಡಿಯೋ ಮಾಡಿ ಹರಿಯಬಿಡುತ್ತೇವೆ. ಹರಿದು ಬಂದದ್ದನ್ನು ಹಂಚಿಕೊಂಡು ನಮ್ಮೊಳಗಿನ ರಾಕ್ಷಸನನ್ನು ಸಾಕುತ್ತಿರುತ್ತೇವೆ.


ಈ ರೀತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು ಮತ್ತು ಅದನ್ನು ಹಂಚಿಕೊಂಡು ಸುಖಿಸುವುದು ಕೂಡ ಒಂದು ಮನೋರೋಗ.
ಈ ಮನೋರೋಗಕ್ಕೆ ಹೆಸರು ಇನ್ನುಇಡಬೇಕಷ್ಟೆ


🍂📍🍂📍🍂📍🍂📍🍂

Sunday, September 1, 2019

🧭 ಸತ್ತ ಕಣ್ಣಿಂದ ಇಳಿವ ನೀರು 🧭

ಬಿಟ್ಟು ಹೋದ ಆ ಜೀವದ ನೆನಪು

ಈ ಜೀವ ಬಿಟ್ಟು ಹೋಗುವವರೆಗೂ ಜೀವಂತವಾಗಿರುತ್ತದೆ.

ಆ ಜೀವ ಹುಟ್ಟಿದ ದಿನ ನೆನಪಿಗೆ ಬರುತ್ತದೆ, ಸತ್ತೇ ಹೋದ ಈ ಜೀವಕ್ಕೆ.

ಸತ್ತ ಈ ಕಣ್ಣಿಂದ ಇಳಿವ ನೀರು
ಜೀವಂತಿಕೆಯ ಆ ಕಣ್ಣಿಗೆ ಕಾಣಲಾಗಷ್ಟು ನೀರನ್ನು ತುಂಬಿಸಿಯೇ ಸತ್ತದ್ದಲ್ಲಾ ಈ ಜೀವ.

ಸತ್ತು ಹೋದ ಜೀವದಿಂದ ಹೊರಟು ಹೋದ ಉಸಿರಿಗೊಂದು ಹುಟ್ಟು.

ಶ್ವಾಸಕೋಶದ ಗರ್ಭವನು ಬಿಟ್ಟು ಹೋದ ಉಸಿರು ಅದು.

ಅದು ಹುಟ್ಟಿತು

ಇದು ಸತ್ತಿತು‌.

ಬಿಟ್ಟು ಹೋದ ಆ ಜೀವದ ನೆನಪು

ಈ ಜೀವ ಬಿಟ್ಟು ಹೋಗುವವರೆಗೂ ಜೀವಂತವಾಗಿರುತ್ತದೆ.

ಕಿಟಕಿಯಾಚೆ ಕತ್ತಲ ಹೊತ್ತಿನ‌
ಹಳದಿ ಬಣ್ಣದ ಆಕಾಶದ ಮುಂದಿದ್ದ
ಗೋಡೆಯ ಮೇಲೆ ಸಮರಸೌ
ಮ್ಯಾವ್ ಎಂದಿತೊಂದು ಬೆಕ್ಕು.

ಜೀವಂತ ಇಲಿಯನು ಬಾಲದಲ್ಲಿ ಹಿಡಿದುಕೊಂಡು ಬಂದಳು ಹೆಂಡತಿ ವೈಜಯಂತಿ.

ಬೆಕ್ಕಿನ‌ ಆಹಾರ ಹೆಂಡತಿಯ‌ ಕೈಯ್ಯಲ್ಲಿತ್ತು...!

ಇಪ್ಪತ್ತನಾಲ್ಕು ವರುಷಗಳ ಹಿಂದೆ,
ಇಂದಿನ ದಿನ ಹುಟ್ಟಿದ ಹನಿಯೊಂದು
ಪುಣ್ಯ ನದಿಯಾಗಿ ಹರಿದು ಸಾಗುತ್ತಿದೆ.

ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

🎯 20/08/2019.

Sunday, June 9, 2019

🐣🦅🐣🦅🐣🦅🐣🦅

ಮೊಟ್ಟೆಗೆ ರೆಕ್ಕೆ ಬಂದಿತ್ತು


🐣🦅🐣🦅🐣🦅🐣🦅

ಸುಧಾಕರ ಜೈನ್ ಹೊಸಬೆಟ್ಟು ಗುತ್ತು


09/06/2019

ತಾನಿಟ್ಟ ಮೊಟ್ಟೆಗೆ ಹಕ್ಕಿಯೋರ್ವಳು ಕಾವುಕೊಡುತ್ತಿದ್ದಳು.

ಮರಗಳ ಗೆಲ್ಲುಗಳೆಡೆಯಲ್ಲಿ ನೀಲಿಯಾಕಾಶವನ್ನು ಹುಡುಕುತ್ತಾ ಕಾವುಕೊಡುತ್ತಿದ್ದಳು.

ತನ್ನ ತನುವಿಗೆ ಕಾವುಕೊಟ್ಟು  ಕಾವನ್ನೇರಿಸಿದ ತನ್ನಿನಿಯ ಹಾರಿಬರುವುದನ್ನು ಕಾಯುತ್ತಾ ಕಾಯುತ್ತಾ ಕಾವಾಗಿ‌ ಕಾವು ಕೊಡುತ್ತಿದ್ದಳು.


ಕಾದು ಕಾದು ಬರದಿರುವ ಇನಿಯನ ಬರಿದಾದ ದಾರಿಯಲಿ ಹಾರಿಹೋದಳು.


ಹೊರಬಂದ ಮೊಟ್ಟೆಯನ್ನು ಗೂಡಲ್ಲಿ ಬಿಟ್ಟು ಒಳಗಿರುವ ಮೊಟ್ಟೆಯನ್ನು ಹೊಟ್ಟೆಯೊಳಗೇ ಇಟ್ಟುಕೊಂಡು ‌ಹಾರಿಹೋದಳು.


ಬರಿದಾದ ದಾರಿಯಲಿ ಬರೆದೇ ಇರುವ ಇನಿಯನ ಹುಡುಕಿ ಹುಡುಕಿ ಬರಿದಾಗಿ ಹಾರಿಹೋದಳು.

ಗೂಡು ಸೇರುವ ಮುಂಚೆ ಗೂಡಿನ ಪಕ್ಕದಲ್ಲಿರುವ ಗೆಲ್ಲಮೇಲೊಮ್ಮೆ ಕುಳಿತು ಮತ್ತದೇ ಬರಿದಾದ ದಾರಿಯಲ್ಲಿ ತುಂಬಿ ಬರಬಹುದಾದ ಇನಿಯನಿಗಾಗಿ ಕಾಯುತ್ತ ಕತ್ತು ಹೊರಳಿಸಿದಳು.

ಹೊರಳಿದ ಕತ್ತಿಗೆ ಗೂಡು ಕಂಡಿತು


ಕಂಡಿತು ಗೂಡಲ್ಲಿ ಕಂಡಿತು, ತನ್ನ ಮೊಟ್ಟೆಗೆ ರೆಕ್ಕೆ ಬಂದಂಗೆ ಕಂಡಿತು...!



ತಾನಿಟ್ಟ ಮೊಟ್ಟೆಯಿಂದ ತನಗಿಂತಲೂ ದೊಡ್ಡದಾದ ರೆಕ್ಕೆ ಬರುವುದಕ್ಕುಂಟೇ ಎಂದು ಭಯದಿ ಬಡಿಯುತ್ತಿರುವ ಹೃದಯಕ್ಕೇ ತನ್ನ ರೆಕ್ಕೆಯನ್ನು ಬಡಿಯುತ್ತಾ ಗೂಡಿನ‌ ಬಳಿ ಹಾರಿದಳಾಕೆ.


ಗೂಡಲ್ಲಿದ್ದ ದೊಡ್ಡ ರೆಕ್ಕೆಯೊಂದು ಎರಡಾಗಿ ಕಂಡು‌ ಹಾರಿಹೋಯ್ತು.

ತನ್ನ ತನುವಿನಿಂದ ಕಾವು ಪಡೆದಿದ್ದ ಆ ಮೊಟ್ಟೆ ಒಡೆದು ಹೋಗಿತ್ತು.

ದೊಡ್ಡ ರೆಕ್ಕೆಯ‌ ಆ ಹಕ್ಕಿಯ ಕೊಕ್ಕಿನಲ್ಲಿ ತನ್ನ ಮೊಟ್ಟೆಯೊಳಗಿನ ಹಳದಿ ರಸವು ಅಂಟಿಕೊಂಡಿತ್ತು.


ತುಂಬಿಕೊಂಡಿದ್ದ ಮೊಟ್ಟೆ ಬರಿದಾಗಿ ಹೋಗಿತ್ತು.


ಬಸಿರೊಡುದುಕೊಂಡ ಬರಿದಾದ ಮೊಟ್ಟೆ ಅಂಗಾತವಾಗಿ ಮಲಗಿಕೊಂಡಿತ್ತು.


ಗೂಡಲ್ಲಿ ಕುಳಿತು ಉಸಿರಾಡಿದಾಗ ಒಳ ಹೋಗುವ ಉಸಿರಲ್ಲೆಲ್ಲಾ ದೊಡ್ಡರೆಕ್ಕೆಯ ಹಕ್ಕಿಯ ವಾಸನೆಯೇ ಒಳ ಹೋಗಿ ಕರುಳಿಗೇ ಕುಕ್ಕುತ್ತಿತ್ತು.


ಕುಕ್ಕತ್ತಿತ್ತು ಕುಕ್ಕುತ್ತಿತ್ತು ಕುಕ್ಕುತ್ತಲೇ ಇತ್ತು
ತಾನು ತನ್ನಿನಿಯನ‌ ಜೊತೆಯಾಗಿ ಕಟ್ಟಿದ ಗೂಡು ಹರಿದು ಹರಿದು ಹೋಗುವವರೆಗೂ ಕುಕ್ಕುತ್ತಲೇ ಇತ್ತು.

ಗೂಡೆಲ್ಲಾ ಹರಿದ ಹೋದ ಮೇಲೆ ಅದೇ ಗೆಲ್ಲಿನ ಮೇಲೆ ಕುಳಿತು ತನ್ನ ಗರ್ಭದಲ್ಲಿದ್ದ ಕೊನೆಯ ಮೊಟ್ಟೆಯನ್ನು ಕೊನೆಯಾಗಿಸಿತು.

ಕೆಳಗೆ ಬಿದ್ದು ಒಡೆದು ಹೋದ ಬಿಳಿ ಮೊಟ್ಟೆಯ ತುಂಬೆಲ್ಲಾ ಕಪ್ಪಿರುವೆ ತುಂಬಿಕೊಂಡಿತು.


ಮೊಟ್ಟೆಯ ಪಸೆಯೆಲ್ಲಾ ಬರಿದಾದ ಮೇಲೆ ಸಾಗಿತು ಇರುವೆ ಸಾಲು ಪಕ್ಕದಲ್ಲಿ ಬಿದ್ದಿದ್ದ ಕಾವು ಆರಿ ಹೋದ ಹಕ್ಕಿಯನ್ನು ತಿನ್ನಲೆಂದು.


🧵 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

        09/06/2019