🏮⚜🏮⚜🏮⚜🏮
ಅಂಗೈಯಲ್ಲೊಂದು ಅಹಂಕಾರದ ಕಣ್ಣು
🏮⚜🏮⚜🏮⚜🏮
🧭 29/09/2019
⭕ಸುಧಾಕರ ಜೈನ್ ಹೊಸಬೆಟ್ಟು ಗುತ್ತು.
🔗 9900500832
📿 📍📿
ಅಂಗೈಯಲ್ಲೊಂದು ಅಹಂಕಾರದ ಕಣ್ಣು
📿📍📿
ಮುಖದಲ್ಲಿರುವ ಕಣ್ಣುಗಳಲ್ಲಿ ನಾವು ಜಗತ್ತನ್ನು ನೋಡುತ್ತೇವೆ.
ನಾವು ನೋಡಿದ ಜಗತ್ತನ್ನು, ನಾವು ನೋಡುವ ಜಗತ್ತಿಗೆ, ನಾವು ನೋಡದ ಜಗತ್ತಿಗೆ ತೋರಿಸ ಬಯಸುತ್ತೇವೆ.
ಮೆದುಳಿನ ಒಳಗಣ್ಣು ಮತ್ತು ಹೃದಯದ ಒಳಗಣ್ಣನ್ನು ಮುಚ್ಚುತ್ತೇವೆ ಅಂಗೈಯಲ್ಲಿರುವ ನಮ್ಮ ಅಹಂಕಾರದ ಕಣ್ಣನ್ನು ಆನ್ ಮಾಡುತ್ತೇವೆ. ವೀಡಿಯೋ ಮಾಡಿ ನಾವು ನೋಡುವ ಜಗತ್ತಿಗೆ, ನಾವು ನೋಡದ ಜಗತ್ತಿಗೆ ತೋರಿಸಿ ಬಿಡುತ್ತೇವೆ.
ನೋಡಬಾರದ್ದನ್ನು, ನೋಡಬಾರದು ಎಂದು, ಅನಿಮಿಷರಾದ ದೇವತೆಗಳಿಗೆ ಇಲ್ಲದ ರೆಪ್ಪೆಗಳು ಮನುಷ್ಯನ ಕಣ್ಣುಗಳಿಗೆ ಇವೆ.
ಆದರೆ ನೋಡಬಾರದ ಜಗತ್ತನ್ನೇ ನೋಡ ಬಯಸುತ್ತೇವೆ. ಮುಚ್ಚಬಹುದಾದ ರೆಪ್ಪೆಗಳನ್ನೂ ಅರಳಿಸಿ ನೋಡುತ್ತೇವೆ.
ಭೃಗು ಮಹರ್ಷಿ ಪಾದದಡಿಯಲ್ಲಿ ಅಂದರೆ ಅಂಗಾಲಿನಲ್ಲೊಂದು ಕಣ್ಣು ಇತ್ತು.
ಅದು ಭೃಗು ಮಹರ್ಷಿಗಳಿಗೆ ದೊಡ್ಡ ಅಹಂಕಾರವನ್ನೇ ಕೊಟ್ಟಿತ್ತು.
ಆ ಅಹಂಕಾರವನ್ನು ಕಿತ್ತು ಹಾಕಬೇಕೆಂಬ ಉದ್ಧೇಶದಿಂದ,
ಪಾಲನಾ ಕರ್ತನಾದ ವಿಷ್ಣು ಭೃಗು ಮಹರ್ಷಿಗಳ ಪಾದವನ್ನು ಹಿಡಿದುಕೊಂಡು ಆ ಅಹಂಕಾರದ ಕಣ್ಣನ್ನೇ ಕಿತ್ತು ತೆಗೆದೆ.
ಈಗ ನಮ್ಮೊಳಗಿನ ನಮ್ಮ ಪಾಲನಾ ಕರ್ತನಾದ ನಮ್ಮದೇ ಪ್ರಬುದ್ಧ ಬುದ್ಧಿಯೆಂಬ ವಿಷ್ಣು ನಮ್ಮ ಅಂಗೈಯಲ್ಲಿರುವ ಅಹಂಕಾರದ ಕಣ್ಣನ್ನು ಕಿತ್ತು ತೆಗೆಯಬೇಕಾದ ಕಾಲಕ್ಕೆ ಬಂದು ನಿಂತಿದ್ದೇವೆ.
ಬ್ರಹ್ಮನ ಸಭೆಯಲ್ಲಿ ಗಂಗೆಯ ಸೀರೆಯ ಸೆರಗು ಜಾರಿತು.
ದೇವತೆಗಳೆಲ್ಲಾ ರೆಪ್ಪೆಗಳಿಲ್ಲದ ತಮ್ಮ ಕಣ್ಣುಗಳಿಗೆ ತಮ್ಮತಮ್ಮ ಅಂಗೈಯನ್ನಡ್ಡ ಹಿಡಿದುಕೊಂಡರು.
ಆದರೆ ಭೂಲೋಕದಿಂದ ಹೋದ ಮಹಾಭಿಷ ರೆಪ್ಪೆಗಳನ್ನರಳಿಸಿ ನೋಡಬಾರದ್ದನ್ನು ನೋಡಿದ
ಏರಿ ಹೋಗಿದ್ದ ಎತ್ತರದಿಂದ ಕೆಳಗೆ ಇಳಿದು ಬಂದ.
ಇನ್ನೂ ಮೇಲೆ ಏರದ ನಾವೂ ನೋಡಬಾರದ ಜಗತ್ತನ್ನು ನೋಡ ಬಯಸುತ್ತೇವೆ.
ನೋಡಬಾರದ ಜಗತ್ತನ್ನು ನೋಡ ಬಯಸುವ ನಾವು,
ನಾವು ನೋಡುವ, ನಾವು ನೋಡದ ಜಗತ್ತಿಗೆ ತೋರಿಸ ಬಯಸುತ್ತೇವೆ.
ಇತ್ತೀಚೆಗೆ ನಡೆದ ಒಂದು ಘಟನೆಯ ವೀಡಿಯೋ ವೈರಲಾಯ್ತು.
ಮಾಲ್ ಒಂದಕ್ಕೆ ಹೋಗಿದ್ದ ಹೆಣ್ಣೋರ್ವಳು ಒಂದೆರಡು ಬಟ್ಟೆಗಳನ್ನು ಕದ್ದುಬಿಡುತ್ತಾಳೆ.
ಕದ್ದ ಬಟ್ಟೆಗಳನ್ನು ಬ್ಯಾಗಿನೊಳಗೆ ತುಂಬಿಸಿಕೊಂಡು ಹೊರಗೆ ಹೋಗುವಾಗ ಸಿಕ್ಕಿಹಾಕಿಕೊಳ್ಳುತ್ತಾಳೆ.
ಮಾಲ್ ನ ಮೇಲ್ವಿಚಾರಕನು ಆ ಬಟ್ಟೆಗಳನ್ನು ಕದ್ದ ಹುಡುಗಿಯನ್ನು ನಿಲ್ಲಿಸಿ ವಿಚಾರಣೆ ಮಾಡುತ್ತಾನೆ.
ವಿಚಾರಣೆಯನ್ನು ವೀಡಿಯೋ ಮಾಡುತ್ತಾನೆ. ಮಾತ್ರವಲ್ಲದೆ ಆಕೆಯ ಪರ್ಸ್
ನಲ್ಲಿದ್ದ ಅವಳ ಗಂಡನಾದ ಪೋಲಿಸರೊಬ್ಬರ ಫೋಟೋವನ್ನೂ ತೋರಿಸುತ್ತಾನೆ.
ಈ ಪ್ರಕರಣದಲ್ಲಿ ಭಾಗಿಯಾಗದ ಅವಳ ಗಂಡನ ಮಾನಕ್ಕೂ ಹಾನಿ ಮಾಡುತ್ತಾನೆ.
ಕದ್ದದ್ದು ತಪ್ಪು ಹೌದೇ ಹೌದು. ಆದರೆ ಆ ಹುಡುಗಿಯಲ್ಲಿರುವ ಕಳ್ಳತನದ ದುಷ್ಟತನಕ್ಕಿಂತ ಈ ವೀಡಿಯೋ ಮಾಡಿ ಲೋಕಾರ್ಪಣೆ ಮಾಡಿದವನಲ್ಲಿ ಹೆಚ್ಚಿನ ಕ್ರೂರತೆಯ ಅಹಂಕಾರದ ದುಷ್ಟತನ ಕಾಣುತ್ತದೆ.
ಆ ಮೇಲ್ವಿಚಾರಕರಿಗೆ ಎರಡು ನ್ಯಾಯಯುತವಾದ ಆಯ್ಕೆ ಇತ್ತು.
ಒಂದಾ ಪೋಲಿಸ್ ಕಂಪ್ಲೇಂಟ್ ಕೊಟ್ಟು ಆಕೆಯನ್ನು ಪೋಲಿಸರ ವಶಕ್ಕೆ ಒಪ್ಪಿಸುವುದು.
ಅಥವಾ ಹೃದಯವಂತಿಕೆಯ ಮನುಷ್ಯನಾಗಿ ಆ ಹುಡುಗಿಯ ಪರಿಸ್ಥಿತಿ ಮತ್ತು ಮನಸ್ಥಿತಿಯನ್ನು ಅರಿತು ಸರಿಯಾಗಿ ವಿಚಾರಿಸಿ ಆಕೆಗೆ, ಆಕೆ ಕದ್ದ ಬಟ್ಟೆಗಳನ್ನೇ ಉಡುಗೊರೆಯಾಗಿ ಕೊಟ್ಟು ಬಿಡಬೇಕಿತ್ತು.
ಈ ತರಹದ ಒಳ್ಳೆಯತನದಿಂದ ಕೆಟ್ಟವರನ್ನೂ ಒಳ್ಳೆಯವರನ್ನಾಗಿಸಿದ ಎಷ್ಟೋ ಘಟಿತ ಘಟನೆಗಳು ಇವೆಯಲ್ಲಾ.
ಒಂದು ಹಂತದ counselling ಮಾಡಿ ಸರಿಯಾಗಿ ಬುದ್ಧಿವಾದ ಹೇಳಿ, ಇನ್ನು ಮುಂದೆ ಇಂತಹ ಪರಿಸ್ಥಿತಿ ಬರದಂತೆ ಮತ್ತು ಈ ಪ್ರಕರಣದಿಂದ ಮಾನಸಿಕವಾಗಿ ಕುಗ್ಗದಂತೆ ಧೈರ್ಯದಿಂದ ಒಳ್ಳೆಯ ರೀತಿಯಲ್ಲಿ ಬದುಕುವಂತೆ ಪ್ರೇರೇಪಿಸಿ ಕಳುಹಿಸಬಹುದಿತ್ತು.
ಅದು ಬಿಟ್ಟು ಆ ರೀತಿ ವೀಡಿಯೋ ಮಾಡಿ, ಮಾನ ಹರಾಜು ಹಾಕಬಾರದಿತ್ತು.
ಮನುಷ್ಯನಿಗೆ ಮಾನಕ್ಕಿಂತ ಮಿಗಿಲಾದದ್ದು ಏನೂ ಇಲ್ಲ.
ಮಾನ ಹೋದ ಮೇಲೆ ಬದುಕು ಬೇಡ ಎಂದು ಆ ಹುಡುಗಿ ಆತ್ಮ ಹತ್ಯೆ ಮಾಡಿಕೊಂಡರೆ..?
ಹೆಂಡತಿಯ ಈ ವಿಡಿಯೋ ನೋಡಿ ಮನನೊಂದ ಗಂಡನ ನಿರ್ಣಯದಿಂದ ದಾಂಪತ್ಯದಲ್ಲಿ ಬಿರುಕಾಗಿ ಗಂಡನಿಂದ ಪರಿತ್ಯಕ್ತಳಾದರೆ. ಬೇರೆ ದಾರಿ ಇಲ್ಲ ಎಂದು ಆ ಹುಡುಗಿ ಆತ್ಮ ಹತ್ಯೆಯ ದಾರಿ ಕಂಡುಕೊಂಡರೆ…?
ಆಗ ಈ ವೀಡಿಯೋ ಮಾಡಿ ಹಂಚಿದವನು ಮತ್ತು ಹಂಚಿಕೊಂಡವರೆಲ್ಲರೂ ವೀಡಿಯೋ ನೋಡಿಕೊಂಡೇ ಒಂದು ಹೊತ್ತಿನಲ್ಲೇ ಎರಡು ಹೊತ್ತಿನ ಊಟ ಮಾಡಿ ತಿಂದು ತೇಗುತ್ತಾ ಬದುಕು ಮಾಡುತ್ತಾರಾ..?
ಆ ಹುಡುಗಿ ಹಾಗೆ ಕದ್ದ ನಂತರದ ದೃಶ್ಯವೆಲ್ಲಾ ಅಂಗೈಯಲ್ಲಿದ್ದ ಅಹಂಕಾರದ ಕಣ್ಣಿನಿಂದ ವೀಡಿಯೋ ಆಗಿ, ಈಗ ನೋಡಬಾರದ ಜಗತ್ತಿನ ಎಲ್ಲರ ಅಂಗೈಯಲ್ಲಿರುವ ಅದೇ ಅಹಂಕಾರದ ವಿಧವಾ ಕಣ್ಣಿಗೆ ಆಭರಣವಾಯ್ತು.
ಆ ವೀಡಿಯೋ ಮಾಡಿದವನ ಮೆದುಳಿನ ಒಳಗಣ್ಣು, ಹೃದಯದ ಒಳಗಣ್ಣು ಮುಚ್ಚಿಹೋಗಿತ್ತು ಅನ್ನುವುದಕ್ಕಿಂತಲೂ ಕುರುಡಾಗಿತ್ತು ಅಂತಲೇ ಹೇಳಬಹುದು.
ಆದರೆ ಆ ವಿಡಿಯೋವನ್ನು ಫೇಸ್ ಬುಕ್ ವ್ಹಾಟ್ಸಾಪ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಾರಲ್ಲಾ ಇವರುಗಳ ಬೌದ್ಧಿಕ ಕಣ್ಣೂ ಕುರುಡಾಗಿ ಹೋಗುತ್ತದಲ್ಲಾ…?
ಕಳ್ಳತನಕ್ಕೆ ಸಾವಿರ ಸಾವಿರ ಕಾರಣಗಳು ಇರುತ್ತವೆ.
ಹಾಗಂತ ಆ ಸಾವಿರ ಕಾರಣಗಳಲ್ಲಿ ಯಾವ ಒಂದು ಕಾರಣವೂ ಕಳ್ಳತನವನ್ನು ಸಮರ್ಥಿಸಿಕೊಳ್ಳುವಂತಹುಗಳು ಅಲ್ಲ.
ಆದರೆ ಕಾರಣಗಳು ಶಿಕ್ಷೆಕೊಡುವ ಕ್ರೂರತೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.
ಅಡಿಕೆ ಕದ್ದ ಕಳ್ಳನಿಗೆ ಆನೆ ಕದ್ದ ಕಳ್ಳತನದ ಶಿಕ್ಷೆ ಕೊಡಬಾರದಲ್ಲ.
ಕೈಗೆ ಸಿಕ್ಕ ಕಳ್ಳನಿಗೆ ಕೈಗೆ ಸಿಗದ ಕಳ್ಳನ ಶಿಕ್ಷೆಯನ್ನೂ ಸೇರಿಸಿ ಕೊಡಬಾರದಲ್ವಾ.
ಕದಿಯಲಾರದ ಕದಿಯಬಾರದ ಸ್ಥಿತಿವಂತರೂ ಯಾಕೆ ಕದಿಯುತ್ತಾರೆ…?
ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ರವರು ಹೇಳುವ ಪ್ರಕಾರ,
ಒಬ್ಬ ಮನುಷ್ಯನಲ್ಲಿ ಈ ರೀತಿಯ ಕಳ್ಳತನ ಮಾಡಲು ಮುಖ್ಯ ಕಾರಣ,
ಕ್ಲೆಪ್ಟೋಮೇನಿಯಾ ಎಂಬ ಒಂದು ಚಿಕ್ಕ ಮನೋರೋಗ. ಇದನ್ನು ಇಂಪಲ್ಸ್ ಕಂಟ್ರೋಲ್ ಡಿಸಾರ್ಡರ್ ಅಂತಲೂ ಕರೆಯುತ್ತಾರೆ.
ಇದು ಬಹು ಸುಲಭವಾಗಿ ಗುಣವಾಗುವ ರೋಗವೂ ಹೌದು ಎನ್ನುತ್ತಾರೆ ಈ ಪ್ರಖ್ಯಾತ ಮನೋವೈದ್ಯರಾದ ಡಾ. ಸಿ.ಆರ್. ಚಂದ್ರಶೇಖರ್ ರವರು.
ಈ ರೋಗದ ಪ್ರಾಥಮಿಕ ಹಂತವಾಗಿ ರಸ್ತೆಯಲ್ಲಿ ಸಿಗುವ ನಾಣ್ಯ ಹೆಕ್ಕುವುದರಿಂದ ಆರಂಭವಾಗಿರುತ್ತದೆ.
ಯಾಕೆಂದರೆ ರಸ್ತೆಯಲ್ಲಿ ಬಿದ್ದಿರುವ ಒಂದು ರೂಪಾಯಿಯದ್ದೋ, ಐದು ರೂಪಾಯಿಯದ್ದೋ ನಾಣ್ಯ ಅದು ನಮ್ಮದಾಗಿರುವುದಿಲ್ಲ.
ಆದರೂ ಅದನ್ನು ಹೆಕ್ಕುತ್ತೇವೆ. ಇನ್ನೂ ಸ್ವಲ್ಪ ದೊಡ್ಡ ಮೊತ್ತದ ಸಂಪತ್ತಾದರೆ ಹೆಕ್ಕುವಾಗ ಯಾರಾದರೂ ನೋಡುತ್ತಾರಾ ಎಂದು ನೋಡುತ್ತೇವೆ.
ಹ್ಹಾಂ…. ! ನಾವು ಮಾಡುವಾಗ ಯಾರೂ ನೋಡಬಾರದು…. ಯಾವ ಕಣ್ಣೂ ನೋಡಬಾರದು….. ಯಾವ ಅಂಗೈ ಕಣ್ಣಲ್ಲೂ ರೆಕಾರ್ಡ್ ಆಗಬಾರದು ಅನ್ನುವ ಜಾಗ್ರತೆ ಇದ್ದೇ ಇರುತ್ತದೆ.
ಆದರೆ ನಾವು ಆ ಗೆರೆಯ ಈಚೆ ಇದ್ದರೆ ರಪ್ಪನೇ ನಮ್ಮ ಅಂಗೈ ಕಣ್ಣನ್ನು ಆನ್ ಮಾಡುತ್ತೇವೆ ವೀಡಿಯೋ ಮಾಡುತ್ತೇವೆ. ಲೋಕಕ್ಕೆ ಹಂಚುತ್ತೇವೆ.
ಪ್ರಬುದ್ಧತೆಯ ಅರಿವಿಲ್ಲದ ನ್ಯೂಸ್ ಚಾನೆಲ್ ಪರಂಪರೆ, ಲೈಕ್ ಶೇರ್ ಗಳ ಮೊತ್ತದಲ್ಲಿ ವೈರಲ್ ಎಂಬ ರೋಗ ಕೊಡುವ ಸುಖದ ಅಮಲಿನ ಪರಂಪರೆ ಜನರನ್ನು ಈ ವಿಡಿಯೋ ಮಾಡುವ ಮತ್ತು ಅದನ್ನು ಹಂಚಿಕೊಂಡು ಸುಖಿಸುವ ಹಂತಕ್ಕೆ ತಲುಪಿಸಿದೆ.
ಹಾಗೆ ನೋಡಿದರೆ, ಪರರ ಬದುಕಿನ ತಪ್ಪನ್ನು ಜಗತ್ತಿಗೆ ತೋರಿಸುವ ನಾವು ನಮ್ಮ ಬದುಕಿನಲ್ಲಿ ಒಂದೂ ತಪ್ಪು ಮಾಡದೆ ಇರುವ ಸಾಧ್ಯತೆಯಾದರೂ ಇದ್ದೀತಾ.
ಸಾವಿಲ್ಲದ ಮನೆಯಿಂದ ಸಾಸಿವೆಯನ್ನಾದರೂ ತರಬಹುದು…!
ಬದುಕಿನಲ್ಲಿ ತಪ್ಪೇ ಮಾಡದ ಮನುಷ್ಯನ ಮೈಯಿಂದ ಒಂದು ರೋಮ ತನ್ನಿ ಎಂದರೆ, ತಪ್ಪೇ ಮಾಡದ ತನುವಿನಿಂದ ಒಂದು ರೋಮ ಸಿಗುವುದಕ್ಕುಂಟಾ.
ತಪ್ಪೇ ಮಾಡದೆ ಇರುವವ ಇರುವುದಕ್ಕುಂಟಾ..?
ಇರುತ್ತಾನೆ ಎಂದಾದರೆ ಆತ ದೇವರಾಗುವುದಿಲ್ವಾ.
ಅಲ್ಲ ದೇವರ ಬದುಕಿನ ಕಥೆಗಳಲ್ಲಾ ತಪ್ಪುಗಳು ಕಾಣುವ ನಮಗೆ ದೇವರೇ ಕೆಲವು ಕಡೆ ತಪ್ಪು ಮಾಡಿದ್ದಾನೆ ಮತ್ತು ಆ ತಪ್ಪುಗಳನ್ನೇ ಒಪ್ಪಿಕೊಂಡವರಂತೆ ನಾವು.
ಇನ್ನು ತಪ್ಪು ಮಾಡಿದ ಮನುಷ್ಯರನ್ನು ಒಪ್ಪಿಕೊಳ್ಳುವ, ಪ್ರೀತಿಸುವ ಹೃದಯವಂತರಾಗಲಾದಷ್ಟು ಕ್ರೂರಿಗಳು ಯಾಕಗುತ್ತೇವೆ.
ಅಹಂಕಾರದ ಕಣ್ಣು ಕೊಡುವ ಶಕ್ತಿ ಅದು. ಅದನ್ನು ಮೊದಲು ಕಿತ್ತು ಬಿಡಬೇಕಾದ ದೃಷ್ಟಿಯೊಂದು ನಮಗೆ ಬೇಕಾಗಿದೆ.
ನಮ್ಮ ಶಿಷ್ಟ ಪರಂಪರೆಯಲ್ಲಿ , ನಮ್ಮ ಸಂವಿಧಾನದಲ್ಲಿ ಒಬ್ಬ ಆರೋಪಿಗೆ ಅಲ್ಲ ಅಪರಾಧಿಗಾದರೂ ಒಂದು ಶಿಕ್ಷೆಯನ್ನು ಕೊಡುವಾಗ ಒಂದು ಶಿಷ್ಟಾಚಾರವನ್ನು ಪಾಲನೆ ಮಾಡುತ್ತಾರೆ.
ಕತ್ತಲ ಕೋಣೆಯಲ್ಲಿ ಶಿಕ್ಷೆ ಅಥವಾ ಯಾರು ನೋಡದ ಜಾಗದಲ್ಲಿ ಶಿಕ್ಷೆ ಹೀಗೆ.
ಆದರೆ ದುಷ್ಟ ಪರಂಪರೆಯಲ್ಲಿ ರಾಕ್ಷಸ ವಿಧಾನದಲ್ಲಿ ಒಬ್ಬ ಅಪರಾಧಿಗೆ ಅಲ್ಲ ಆರೋಪಿಗಾದರೂ ಶಿಕ್ಷೆಯನ್ನು ಕೊಡುವಾಗ ಸಾರ್ವಜನಿಕವಾಗಿ , ಲೋಕಕ್ಕೆ ಕಾಣುವ ಹಾಗೆ ಕ್ರೂರವಾಗಿ ಶಿಕ್ಷೆಯನ್ನು ಕೊಡುವ ಪರಂಪರೆಯೂ ಇತ್ತು, ಮತ್ತು ಇದೆ ಕೂಡ.
ಮುಂಚೆ ರಾಕ್ಷಸರು ಅಂತ ಹೇಳುತ್ತಿದ್ದೆವು ಈಗ ಉಗ್ರರು ಅಂತ ಹೇಳುತ್ತೇವೆ. ಪದ ಮಾತ್ರ ಬದಲಾಗಿದೆ ಉಳಿದೆಲ್ಲವೂ ಅದೇ.
ಅದೇ ಮನಸ್ಥಿತಿಯವರು ನಾವು,
ಅಂಗೈಯಲ್ಲೊಂದು ಅಹಂಕಾರದ ಕಣ್ಣು ಇಟ್ಟುಕೊಂಡು ನಾವು ನೋಡಬಾರದ ಜಗತ್ತನ್ನು ನಾವು ನೋಡಿದ ಜಗತ್ತನ್ನು, ನಾವು ನೋಡುವ ಜಗತ್ತಿಗೆ, ನಾವು ನೋಡದ ಜಗತ್ತಿಗೆ ತೋರಿಸ ಬಯಸುತ್ತೇವೆ.
ರಾಕ್ಷಸ ಪರಂಪರೆ, ಉಗ್ರ ಮನಸ್ಥಿತಿ ಪರಂಪರೆಯ ನಾವು ನಮ್ಮ ಅಂಗೈಯಲ್ಲಿರುವ ಅಹಂಕಾರದ ಕಣ್ಣಿನಿಂದ ವೀಡಿಯೋ ಮಾಡಿ ಹರಿಯಬಿಡುತ್ತೇವೆ. ಹರಿದು ಬಂದದ್ದನ್ನು ಹಂಚಿಕೊಂಡು ನಮ್ಮೊಳಗಿನ ರಾಕ್ಷಸನನ್ನು ಸಾಕುತ್ತಿರುತ್ತೇವೆ.
ಈ ರೀತಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು ಮತ್ತು ಅದನ್ನು ಹಂಚಿಕೊಂಡು ಸುಖಿಸುವುದು ಕೂಡ ಒಂದು ಮನೋರೋಗ.
ಈ ಮನೋರೋಗಕ್ಕೆ ಹೆಸರು ಇನ್ನುಇಡಬೇಕಷ್ಟೆ
🍂📍🍂📍🍂📍🍂📍🍂

Nice Article
ReplyDeleteಧನ್ಯವಾದಗಳು ಧಣಿ
ReplyDelete