🏮🚦🏮🚦🏮🚦🏮🚦🏮
💈ಆ ಶೇಣಿ ಮತ್ತು ಈ ಮಾಣಿ💈
🏮🚦🏮🚦🏮🚦🏮🚦🏮
ಶೇಣಿ ಮತ್ತು ಮಾಣಿ ಎರಡರಲ್ಲೂ ಸಮ ತೂಕದ ಮಾತ್ರೆ ಇದೆ….!
17/09/2017.
ಸುಧಾಕರ ಜೈನ್ ಹೊಸಬೆಟ್ಟು ಗುತ್ತು.
ಯಕ್ಷ ಚೈತನ್ಯ , (ರಿ) ಅಶ್ವತ್ಥಪುರ ಇದರ 13ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಾಳಮದ್ದಳೆ ಮತ್ತು ಶೇಣಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ನಾನು ಮಾಡಿದ 19 ನಿಮಿಷದ ಶೇಣಿ ಸಂಸ್ಮರಣ ನುಡಿಯ ಅಕ್ಷರ ರೂಪ.
20 ನಿಮಿಷ ಕಾಲಾವಕಾಶ ಅಂತ ಮೊದಲೇ ಹೇಳಿದ್ದರು. ಹಾಗಾಗಿ ನಾನು 19 ನಿಮಿಷಕ್ಕೆ ತಯಾರಿಮಾಡಿಕೊಂಡಿದ್ದೆ. ಹತ್ತೊಂಬತ್ತಕ್ಕೆ ಮುಗಿಸಿದೆ.
ಈ ಪುಣ್ಯದ ಅವಕಾಶವನ್ನು ಮಾಡಿಕೊಟ್ಟ,
🚦ಸದಾಶಿವ ರಾವ್ ನೆಲ್ಲಿಮಾರ್ ಇವರಿಗೆ ಪ್ರೀತಿಯ ನಮಸ್ಕಾರಗಳು.
ಸಂಸ್ಮರಣಾ ಭಾಷಣದ ನಡುವೆ ಶೇಣಿಯವರ ಮಾತನ್ನು ಶೇಣಿವರ ಸ್ವರದಲ್ಲೇ ಕೇಳಿಸಿದ ಸುಲಭ ಮತ್ತು ವಿಶೇಷ ತಂತ್ರಜ್ಞಾನ ಬಳಸಿಕೊಂಡದ್ದರ ಬಗ್ಗೆ ವಿವರ. ಇದರ ಜೊತೆಗೆ ಆಡಿಯೋ ಫೈಲ್ ಕೂಡ ಇದೆ.
ಈ ತಂತ್ರಜ್ಞಾನವನನ್ನು ತಿಳಿದುಕೊಂಡ ಆಸಕ್ತರು ಇದರಪ್ಪನದ್ದು ಮಾಡಬಹುದೆಂಬ ಆಸೆಯಿಂದ,
ಈಗ ಮೊದಲಿಗೆ ಅದರ ಮೇಕಿಂಗ್ ಕಥೆ.
ಶೇಣಿಯವರು ಆನಾರೋಗ್ಯಕ್ಕೆ ಒಳಗಾಗಿ ಕಣ್ಣು ದೃಷ್ಟಿಯನ್ನು ಕಳೆದುಕೊಂಡಾಗ ಕಾಣದ ಪ್ರೇಕ್ಷರನ್ನು ನೋಡದೆ ತನಗೆ ಅರ್ಥ ಹೇಳುವುದಕ್ಕೆ ಆಗುವುದಿಲ್ಲ ಎಂದು ಕುಳಿತರಂತೆ.
ಆದರೆ ನಾನು ಅವರ ಅಷ್ಟೂ ಅರ್ಥವನ್ನು ಅವರನ್ನು ನೋಡದೇ ಕೇಳಿದವನು.
ಅವರ ಬಗ್ಗೆ ಮಾತಾಡುವಾಗ, ನನ್ನ ಮಾತನ್ನು ಕೇಳುವ ಜನರೆಂದರೆ ಅದು ಶೇಣಿಯವರ ಪ್ರೇಕ್ಷರೇ ಆಗಿರುತ್ತಾರೆ ಎಂಬ ಧೈರ್ಯ ಮತ್ತು ನಂಬಿಕೆ ಇತ್ತು. ಹಾಗಾಗಿ ನಾನು ಅವರ ಬಗ್ಗೆ ಮಾತಾಡುವಾಗ ನನ್ನ ಮಾತನ್ನು ಕೇಳುವ ಜನ ಅವರ ಮಾತನ್ನೂ ಕೇಳುವಂತಾಗಬೇಕು ಎಂದು ಆಸೆ ಹುಟ್ಟಿತು.
ಮನುಷ್ಯನಿಗೆ ಮೊತ್ತ ಮೊದಲಾಗಿ ಇಮ್ಯಾಜಿನೇಷನ್ ಹುಟ್ಟುತ್ತದೆ. ಆ ಇಮ್ಯಾಜಿನೇಷನ್ ನನ್ನೇ ಸತ್ಯವಾಗಿಸಲು ಹೋಗುವವನು ವಿಜ್ಞಾನದ ದಾರಿ ಹಿಡಿಯುತ್ತಾನೆ. ಇಮ್ಯಾಜಿನೇಷನನ್ನು ಸತ್ಯದ ಹತ್ತಿರಕ್ಕೆ ತರುವವನು ಕಲಾವಿದನಾಗುತ್ತಾನೆ.
ಒಟ್ಟಿನಲ್ಲಿ ಇಮ್ಯಾಜಿನೇಷನ್ ಈಸ್ ವೆರಿ ಇಂಪಾರ್ಟೆಂಟ್.
ಶೇಣಿಯವರ ಹಾಗೆ ಹೇಳಿದ್ದರು ಹೀಗೆ ಹೇಳಿದ್ದರು ಎಂದು ವಿವರಿಸುವ ಕಲೆಯ ದಾರಿಯ ಜೊತೆಗೆ ಹೀಗೆ ಮಾತಾಡಿದ್ದಾರೆ ಎಂದು ಸತ್ಯವನ್ನೇ ತೋರಿಸುವಲ್ಲಿ ವಿಜ್ಞಾನದ ದಾರಿ ಹಿಡಿದೆ.
· ನನಗೆ ಇಷ್ಟ ಆಗಿದ್ದ ಒಂದಷ್ಟು ಶೇಣಿಯವರ ಮಾತುಗಳನ್ನು ತಾಳಮದ್ದಳೆಯಿಂದ ಅಡೋಸಿಟಿ ಸಾಫ್ಟ್ ವೇರ್ ಬಳಸಿ ಕತ್ತರಿಸಿಕೊಂಡೆ.
· ಕತ್ತರಿಸಿಕೊಂಡ ಆಡಿಯೋ ತುಣುಕನ್ನು ಹೈಸೈಝ್ MP3 ಗೆ ಕನ್ವರ್ಟ್ ಮಾಡಿಕೊಂಡೆ.
· ಆ ಆಡಿಯೋ ಪೀಸ್ ಗಳಿಗೆ ನಂಬರ್ ಮತ್ತು ಫೈಲ್ ನೇಮ್ ಕೊಟ್ಟು ಮೊಬೈಲಿಗೆ ಹಾಕಿಕೊಂಡೆ.
· ನನ್ನಲ್ಲಿರುವ ಬ್ಲೂಟೂತನ್ನು ಡೈರೆಕ್ಟಾಗಿ ಆಂಪ್ಲಿಪ್ಲೇಯರ್ ಲೈನ್ ಇನ್ ಕನೆಕ್ಷನ್ ಮಾಡಿದೆ.
· ಮೊಬೈಲಿನಲ್ಲಿ ಸೇವ್ ಮಾಡಿಕೊಂಡಿದ್ದ ಆಡಿಯೋ ಫೈಲ್ ಹುಡುಕುವುದಕ್ಕೆ ಕಿರಿಕಿರಿ ಆಗದಂತೆ ಹೋಮ್ ಸ್ಕ್ರೀನ್ ಗೆ ಶಿಫ್ಟ್ ಮಾಡಿದೆ.
· ವೇದಿಕೆಯಲ್ಲಿ ನಿಂತುಕೊಂಡು ಮಾತಾಡುತ್ತಾ ಮೊಬೈಲಿನಲ್ಲಿ ಪ್ಲೇ ಮಾಡಿದ್ರೆ ಡೈರೆಕ್ಟಾಗಿ ಸಭೆಯ ಎಲ್ಲಾ ಸ್ಪೀಕರ್ ಗಳಲ್ಲಿ ಕೇಳುವ ಹಾಗೆ ಮಾಡಿಕೊಂಡೆ.
· ಸೌಂಡ್ ಕಂಟ್ರೋಲ್ ಕೂಡ ನಿಂತಲ್ಲಿಂದಲೇ ಆಗುವಂತೆ ಮೊಬೈಲಿನಿಂದಲೇ ವ್ಯವಸ್ಥೆ ಮಾಡಿಕೊಂಡೆ.
· ಭಾಷಣ ಮಾಡುತ್ತಾ ಮಾಡುತ್ತಾ ಸಂದರ್ಭಕ್ಕೆ ಸರಿಯಾಗಿ ಮೊಬೈಲ್ ಹಿಡಿದು ಕೊಂಡು ಪ್ಲೇ ಮಾಡಿದೆ.
· ಶೇಣಿಯವರು ಮಾತಾಡಿದರು.
ಇಲ್ಲಿಂದ ಸಂಸ್ಮರಣಾ ನುಡಿ
ನಮ್ಮಲ್ಲಿ ಎರಡು ಪರಂಪರೆ ಇದೆ.
ಒಂದು ದೇವರೇ ಮನುಷ್ಯನಾಗಿ ಭೂಲೋಕಕ್ಕೆ ಇಳಿದು ಬರುವುದು, ನಾಯಕನಾಗಿ, ನಾಯಕನೇ ದೇವರಾಗಿ ಬದುಕಿ ತೋರಿಸುವುದು.
ಇನ್ನೊಂದು ಮನುಷ್ಯನೇ ನಾಯಕನಾಗುತ್ತಾ ಆ ನಾಯಕನೇ ದೇವರಾಗುತ್ತಾ ಬದುಕಿ ತೋರಿಸುವುದು.
ಆತ ತೋರಿಸಿದ ದಾರಿಯಲ್ಲಿ ಭಕ್ತ ನಡೆದು ಸಾಗುವುದು.
ಶೇಣಿಯವರು ನಾಯಕನಾಗಿ, ನಾಯಕನೇ ದೇವರಾಗಿ ದಾರಿ ಮಾಡಿಕೊಂಡು ನಡೆದು ಬದುಕಿ ತೋರಿಸಿದರು.
ಶೇಣಿಯವರ ಬಗ್ಗೆ ಸಂಸ್ಮರಣಾ ನುಡಿ ಮಾಡ್ತೀರಾ ಎಂದು ಕೇಳಿದಾಗ..? ಒಂದು ಕ್ಷಣ ನನಗಾ ಯೋಗ್ಯತೆ ಇದೆಯಾ…..! ಈ ಯೋಗ್ಯತೆ ಇದೆಯಾ ಎಂಬ ಪ್ರಶ್ನೆಯ ಹುಟ್ಟೇ ಇಲ್ಲದ ಯೋಗ್ಯತೆಯನ್ನು ತೋರಿಸಿದ ಯೋಗ್ಯತೆಯ ಕ್ಷಣ ಅದು.
ಇಲ್ಲಿಯವರೆಗೆ ಶೇಣಿ ಸಂಸ್ಮರಣೆ ಮಾಡಿದವರೆಲ್ಲಾ ಅವರನ್ನು ನೋಡಿದವರು. ಅವರೊಡನೆ ಒಡನಾಟ ಇದ್ದವರು. ಆದರೆ ನಾನು ಶೇಣಿಯವರನ್ನು ನೋಡದೇ ಇರುವವನು. ಹೇಗೆ ಸಾಧ್ಯ… ಹೇಗೆ ಸಾಧ್ಯ..? ಎಂದು ಹುಟ್ಟಿದ ಪ್ರಶ್ನೆಗೆ ಸಿಕ್ಕ ಉತ್ತರ ಸಾಧ್ಯ ಇದೆ.
ಬದುಕಿನಲ್ಲಿ ತಾನು ನೋಡದೇ ಇರುವ ಪಾತ್ರವನ್ನು ಮಾಡಿ ತಾನೊಂದು ಕ್ಷಣ ದೇವರಂತಾಗುವ ಕಲೆ ನಮ್ಮದು, ಯಕ್ಷಗಾನ. ಶೇಣಿಯವರನ್ನು ನೋಡದೇ ಇರುವ, ಆದರೆ ಮುಚ್ಚಿದ ಕಣ್ಣೊಳಗೂ ಅವರನ್ನು ಕಂಡಿರುವಂತಹ ನಾನು ಅವರ ಬಗ್ಗೆ ಭಕ್ತಿಯಿಂದ ಒಂದೆರಡು ತೊದಲು ನುಡಿಯನ್ನಾಡುವುದಕ್ಕೇನಾಗಬೇಕು ಎಂದು ಧೈರ್ಯದಿಂದಲೇ ಒಪ್ಪಿಕೊಂಡೆ.
ಶೇಣಿಯವರಿರುವ ಒಂದಷ್ಟು ತಾಳಮದ್ದಳೆಯನ್ನು ಕೇಳಿದ್ದೇನೆ.ಮತ್ತೆ ಅದರ ಬಗ್ಗೆ ಒಂದಷ್ಟು ಬರೆದಿದ್ದೇನೆ ಎನ್ನುವುದಷ್ಟೇ ನನಗಿರುವ ಯೋಗ್ಯತೆ.
ಅದೊಂದು ಎಲಿಮೆಂಟರಿ ಶಾಲೆ. ಆ ಶಾಲೆಯ ಒಂದು ಪಕ್ಕಾಸಿಗೆ ನೇತು ಹಾಕಿರುವ ಗಂಟೆ. ಆಗಂಟೆಗೆ ಸಿಕ್ಕಿಸಿರುವ ಒಂದು ಕೋಲು. ಆ ಗಂಟೆಯ ಶಬ್ಧ ಕೇಳುತ್ತಿದ್ದಂತೆ ಮೈದಾನದಲ್ಲಿಆಡುತ್ತಿದ್ದ ಮಕ್ಕಳೆಲ್ಲರೂ ತರಗತಿಯ ಒಳಗೆ ಕುಳಿತುಕೊಳ್ಳುತ್ತಾರೆ. ನೆಲದ ಮೇಲೆ ಕುಳಿತರೆ,ಬರೆಯುವುದಕ್ಕೆ ಬೆಂಚ್ಚೇ ಡೆಸ್ಕ್ ಆಗುತ್ತದೆ. ಓದುವುದಕ್ಕೆ ಕುಳಿತರೆ ಆ ಡೆಸ್ಕೇ ಬೆಂಚಾಗುತ್ತದೆ. ಅಲ್ಲೊಬ್ಬ ಹುಡುಗ. ನಾಲ್ಕನೇ ಕ್ಲಾಸಿನ ಆ ಹುಡುಗ ಎರಡು ಗೆರಗಳ ಮಧ್ಯೆ ಬರೆದಕನ್ನಡಾಕ್ಷರಗಳ ಚಂದವನ್ನು ಮೆಚ್ಚಿಕೊಂಡ ಆ ಶಾಲೆಯ ಮುಖ್ಯೋಪಧ್ಯಾಯರಾದ ಫಕೀರಬಂಗೇರ ಎಂಬ ಮೇಷ್ಟ್ರು, ನಾಳೆಯಿಂದ ನೀನು ಗೆರೆಗಳೇ ಇಲ್ಲದ ಪುಸ್ತಕದಲ್ಲಿಓರೆಕೋರೆಯಾಗದಂತೆ ಕಾಪಿ ಬರೆದುಕೊಂಡು ಬರಬೇಕು, ಎಂದು ಹೇಳುತ್ತಾರೆ.
ಆದರೆ ಆ ಗೆರೆಗಳಿಲ್ಲದ ಪುಸ್ತಕದಲ್ಲಿ ಬರೆಯ ಬೇಕಾದ ಅಕ್ಷರಗಳು ನಿನ್ನ ಪಾಠ ಪುಸ್ತಕದಲ್ಲಿಇರುವವು ಬೇಡ. ನಾನು ನಿನಗೊಂದು ಬೇರೆ ಪುಸ್ತಕ ಕೊಡುತ್ತೇನೆ ಎಂದು ಒಂದುಹಸ್ತಾಕ್ಷರಗಳಿರುವ
ಪುಸ್ತಕವನ್ನು ಕೊಡುತ್ತಾರೆ. ಹುಡುಗ ಗೆರೆಗಳೇ ಇಲ್ಲದ ಪುಸ್ತಕದಲ್ಲಿಬರೆಯಲು ಆರಂಭಿಸುತ್ತಾನೆ. ನಾಲ್ಕನೇ ಕ್ಲಾಸಿನ ಆ ಹುಡುಗ ಬರೆಯುತ್ತಾ ಬರೆಯುತ್ತಾ ತಾನುಬರೆತ್ತಿರುವ ಆ ಅಕ್ಷರಗಳನ್ನು ಒಟ್ಟಾಗಿಸಿಕೊಂಡು ಪದಗಳಾಗಿ, ಪದಗಳನ್ನು ಪದವಾಗಿಹಾಡುತ್ತಾ ಬರೆಯಲಾರಂಭಿಸುತ್ತಾನೆ.
ಗುರುಗಳಾದ ಫಕೀರ ಬಂಗೇರರು ಕೊಟ್ಟ ಆ ಹಸ್ತಾಕ್ಷರದ ಪುಸ್ತಕ, ‘ಅಂಶುಮತಿ ಕಲ್ಯಾಣ’ ಎಂಬಪ್ರಸಂಗ ಪುಸ್ತಕ.
ನಾಲ್ಕನೇ ಕ್ಲಾಸಿನಲ್ಲೇ ಗೆರೆಗಳಿಲ್ಲದ ಪುಸ್ತಕದಲ್ಲಿ ಯಕ್ಷಗಾನದ ಪದ್ಯವನ್ನು ಹಾಡುತ್ತಾಬರೆಯುತ್ತಿದ್ದ ಆ ಬಾಲಕ, ಶೇಣಿ ಗೋಪಾಲ ಕೃಷ್ಣ ಭಟ್.
ಶೇಣಿ ಗೋಪಲ ಕೃಷ್ಣ ಭಟ್ ಇವರು ತನ್ನ ಬದುಕಿನಲ್ಲಿ ಗೆರೆಗಳೇ ಇಲ್ಲದ ಪುಸ್ತಕದಲ್ಲಿ ಬರೆದಿಟ್ಟುಹೋಗಿದ್ದಾರೆ. ಆ ಬರೆದ ಅಕ್ಷರಗಳೇ ಗೆರೆಗಳಾಗಿ ಹೋಗಿದೆ. ಆ ಅಕ್ಷರದ ಗೆರೆಗಳೇ ನಮಗಿಂದೂಮಾರ್ಗವಾಗಿ ಉಳಿದಿದೆ.
ಈ ಮಾರ್ಗದ ಉದ್ದ ಅಗಲದ ಅರಿವೇ ಇಲ್ಲದೆ ಅದೇ ಮಾರ್ಗದಲ್ಲಿ ನಡೆದು ಸಾಗುವ ಈ ಮರಿಮೊಮ್ಮಗನಿಗೆ ಆ ಹೆಜ್ಜೆಯ ಆಕಾರವೇ ಒಂದು ಚಿತ್ರವಾಗಿ, ಕಾವ್ಯವಾಗಿ ಕಂಡಾಗಲೇ ಈ ಪಾದದದಿಕ್ಕನ್ನೇ ಹಿಡಿದು ಸಾಗುವ ಧೈರ್ಯ ಬಂದದ್ದು.
ಹ್ಹುಂ…., ಭಲ್ಲುಕನ ಪದಚಿಹ್ನೆಯನ್ನು ಹಿಡಿದು ಸಾಗಿದ ಕೃಷ್ಣನಿಗೆ ಮಣಿ ಸಿಕ್ಕಿತು.
ಶೇಣಿಯವರ ಪದ ಚಿಹ್ನೆಯನ್ನು ಹಿಡಿದು ಭಕ್ತಿಯಿಂದ ಸಾಗಿದವರಿಗೆಲ್ಲಾ ಒಂದು ಅರ್ಥದಮಾಣಿಕ್ಯವೇ ಸಿಕ್ಕಿದೆ. ಸಿಗುತ್ತಲೇ ಇದೆ.
ನಾನು ನನ್ನ ಬದುಕಿನ ಡಿಗ್ರಿ ವಿದ್ಯಾಭ್ಯಾಸದ ಪ್ರಾಯದವರೆಗೆ ಈ ಶೇಣಿ ಗೋಪಾಲ ಕೃಷ್ಣ ಭಟ್ಎಂಬ ಹೆಸರನ್ನು ಕೇಳಿದವನೇ ಅಲ್ಲ. ನಾನು ಆಳ್ವಾಸ್ ಕಾಲೇಜಿನಲ್ಲಿ ಫಸ್ಟ್ ಇಯರ್ ಡಿಗ್ರಿಓದುತ್ತಿದ್ದಾಗ ನಮ್ಮ ಕಾಲೇಜಿನಲ್ಲಿ ಯಾವುದೋ ಒಂದು ದೊಡ್ಡ ಕಾರ್ಯಕ್ರಮ ನಡೆಯುತ್ತಿತ್ತು. ಅದು ಜೂಲೈ18 2006ರಂದು ನಮ್ಮ ಡಾ|| ಬಿ. ನಿತ್ಯಾನಂದ ಶೆಟ್ಟಿಯವರು ನೇರವಾಗಿ ಮೈಕ್ನ ಹತ್ತಿರ ಬಂದವರೇ ಇದೊಂದು ಪ್ರಕಟಣೆ. ಯಕ್ಷಗಾನ ಕ್ಷೇತ್ರದ ಭೀಷ್ಮನೆಂದೇ ಖ್ಯಾತಿಯನ್ನುಹೊಂದಿದ್ದ ಡಾ|| ಶೇಣಿ ಗೋಪಾಲ ಕೃಷ್ಣ ಭಟ್ ಇವರು ನಮ್ಮನ್ನು ಅಗಲಿದ್ದಾರೆ. ಒಂದು ಕ್ಷಣಎಲ್ಲರೂ ಎದ್ದು ನಿಂತು ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಬೇಕು ಅಂತ ಹೇಳಿದಾಗಲೇನಾನು ಶೇಣಿಯವರ ಹೆಸರನ್ನು ಮೊದಲ ಬಾರಿಗೆ ಕೇಳಿದ್ದು.
ಶೇಣಿಯವರು ಇಲ್ಲದ ಲೋಕದಲ್ಲಿ ಕಣ್ಣು ಮುಚ್ಚಿಕೊಂಡು ಮೌನ ಪ್ರಾರ್ಥನೆ ಮಾಡುತ್ತಿದ್ದ ನನಗೆ ನನ್ನೊಳಗಿನ ಬೊಬ್ಬೆಯೊಂದು ಕೇಳಲಾರಂಭಿಸಿದ್ದು. ಒಬ್ಬ ಸಾಧಕನಾದ ಮನುಷ್ಯನಸಾವಿನಿಂದಲೇ ನಿನಗವನ ಪರಿಚಯವಾಗುತ್ತದೆ ಅಂದರೆ ಆ ಕ್ಷಣದವರೆಗೆ ನೀನು ಸತ್ತೇ ಇದ್ದಿ… ಹುಟ್ಟು, ಈಗಲಾದರೂ ಹುಟ್ಟು….! ಇಷ್ಟು ದೊಡ್ಡ ಕಾರ್ಯಕ್ರಮದ ಗದ್ದಲವನ್ನೇ ವಶಪಡಿಸಿಕೊಂಡು ಒಂದು ಕ್ಷಣ ಮೌನ ಸ್ಥಾಪನೆ ಮಾಡುವ ಶಕ್ತಿಯನ್ನು ಹೊಂದಿರುವ ಆ ಶಕ್ತಿಯಾರಿರಬಹುದೆಂದು ಹುಡುಕು, ಹೋಗು. ಎಂದು ನನ್ನ ಮೂಕ ಮನಸ್ಸು ಬೊಬ್ಬಿಡುತ್ತಿತ್ತು.
ಒಂದು ಹೂವು ಮೊಗ್ಗಾಗಿದ್ದಾಗ ನೋಡುವ ಭಾಗ್ಯ ನನಗಿರಲಿಲ್ಲ. ಅರಳಿದಾಗ ಕಾಣುವ ಕಣ್ಣು ತೆರೆಯಲಿಲ್ಲ…. ಅದೆಲ್ಲೋ, ಅದೆಷ್ಟೋ ಎತ್ತರದಲ್ಲಿ ಅರಿಳಿದ ಅದರ ಪರಿಮಳ ಊರ ತಂಬಾತುಂಬಿದ್ದರೂ ಆ ಪರಿಮಳವನ್ನು ಗೃಹಿಸಿ ಹೀರುವ ನನ್ನ ಮೂಗು ಅರಳಲೇ ಇಲ್ಲ. ಕಣ್ಣು ಮುಚ್ಚಿಕೊಂಡು ಅವರಿಗೊಂದು ಮೌನ ಪ್ರಾರ್ಥನೆ ಸಲ್ಲಿಸಿದ ಮೇಲೆ, ಕಣ್ಣು ತೆರೆದು, ಮೂಗರಳಿಸಿಕೊಂಡು ಆ ಕಸ್ತೂರಿ ಮೃಗದ ಹೆಜ್ಜೆಯನ್ನು ಹುಡುಕಿಕೊಂಡು ಸಾಗಲಾರಂಭಿಸಿದೆ.
“ಯಕ್ಷಗಾನ ಕ್ಷೇತ್ರದ ಭೀಷ್ಮ ಡಾ|| ಶೇಣಿ ಗೋಪಾಲ ಕೃಷ್ಣ ಭಟ್” ಎಂದು ಅವರು ಹೇಳಿದ್ದನ್ನು ನಿನಪಿಟ್ಟು ಕೊಂಡೆ.
ಕ್ಯಾಸೆಟ್ ಅಂಗಡಿಗೆ ಹೋದೆ. ಮೊತ್ತ ಮೊದಲ ಬಾರಿಗೆ ಡಾ|| ಶೇಣಿ ಗೋಪಾಲ್ ಕೃಷ್ಣ ಭಟ್ ಎಂಬ ಹೆಸರನ್ನು ಉಚ್ಛಾರ ಮಾಡಿ ಹೇಳಿದೆ. ಇವರು ಇರುವ ತಾಳಮದ್ದಳೆ ಕೊಡಿ ಅಂದೆ.
ಮಾಗಧ ವಧೆ ಕೊಟ್ಟರು. ನನಗೆ ಅದರಲ್ಲಿ ಶೇಣಿಯವರು ಇದ್ದಾರು ಎಂಬ ಧೈರ್ಯ ಇರಲಿಲ್ಲ.ಕ್ಯಾಸೆಟ್ ಕವರಲ್ಲಿ ಅವರ ಹೆಸರನ್ನು ಹುಡುಕಿದೆ… ಮೊತ್ತ ಮೊದಲ ಬಾರಿಗೆ ಡಾ|| ಶೇಣಿ ಗೋಪಾಲ್ ಕೃಷ್ಣ ಭಟ್ ಎಂಬ ಹೆಸರನ್ನು ಓದಿದೆ.
ಅದೇ ಕ್ಯಾಸೆಟ್ಟಿನಲ್ಲಿರುವ ಒಂದು ಅಜ್ಜನ ಫೋಟೋ ನೋಡಿದೆ. ಆ ಫೋಟೋದ ಮೇಲೆ ಬೆರಳನ್ನಿಟ್ಟು ಇದು ಯಾರು ಎಂದು ಅಂಗಡಿಯವರಿಗೆ ಕೇಳಿದೆ.
ಅಂಗಡಿಯವರು ಉಚ್ಛರಿಸಿದರು ಡಾ|| ಶೇಣಿ ಗೋಪಾಲ್ ಕೃಷ್ಣ ಭಟ್.
ಕಿಸೆಯಲ್ಲಿದ್ದ ದುಡ್ಡನ್ನು ಅಂಗಡಿಯವರಿಗೆ ಕೊಟ್ಟೆ. ಅಂಗಡಿಯಲ್ಲಿದ್ದ ಶೇಣಿಯವರನ್ನು ನನ್ನ ಹೃದಯಕ್ಕೆ ಹತ್ತಿರದಲ್ಲೇ ಇದ್ದ ಕಿಸೆಯಲ್ಲಿ ಇಟ್ಟುಕೊಂಡು ಸೀದ ಮನೆಗೆ ಬಂದೆ.
ಅಲ್ಲಿಂದ ಆರಂಭ ಆಯ್ತು ಶೇಣಿಯವರ ಹೆಜ್ಜೆಯ ಮೇಲಿನ ನನ್ನ ಪ್ರಯಾಣ.
ಅವರಿಟ್ಟ ಒಂದು ಹೆಜ್ಜೆಯೇ ಮೇಲೆ ನಡೆಯಲು ಆರಂಭಿಸಿದರೂ ಅದೊಂದು ಬುಹು ದೂರದ ವರೆಗಿನ ದಾರಿಯಾಗಿ ಕಾಣುತ್ತದೆ. ಅಷ್ಟು ದೊಡ್ಡ ಹೆಜ್ಜೆ ಅದು.
ಶೇಣಿಯವರ ಒಂದು ತಾಳಮದ್ದಳೆಯ ಅರ್ಥವನ್ನು ಒಮ್ಮೆ ಕೇಳಿ ಮುಗಿಸುವಾಗ ಒಂದು ಪುಸ್ತಕವನ್ನು ಓದಿ ಮುಗಿಸಿದ ಅನುಭವ ಸಿಗುತ್ತದೆ. ಅದೇ ತಾಳಮದ್ದಳೆಯನ್ನು ಇನ್ನೊಮ್ಮೆ ಕೇಳಿದರೆ ಅದು ಮುಗಿಯುವಾಗ ಬೇರೆಯೇ ಒಂದು ಪುಸ್ತಕವನ್ನು ಓದಿ ಮುಗಿಸಿದ ಹಾಗಾಗುತ್ತದೆ.
ಭಾಗವತರಾದ ಕುರಿಯ ಗಣಪತಿ ಶಾಸ್ತ್ರಿಗಳು ಈಗ ಒಂದು ಮಾತು ಹೇಳಿದರು. ಶೇಣಿಯವರು ನಮ್ಮೊಡನೇ ಇದ್ದಾರೆ ಅವರು ಇಲ್ಲಿಗೆ ಇವತ್ತು ಬಂದೇ ಬಂದಿರುತ್ತಾರೆ.
ನಾನು ಇಲ್ಲಿ ಬಂದು ನಿಂತು ಮಾತಾಡಲು ಕಾರಣ ಆ ಶೇಣಿಯವರು.
ನಾನು ಮಾತಾಡಲು ಕಾರಣವಾದ ಆ ಶೇಣಿಯವರನ್ನೊಮ್ಮೆ, ಇಲ್ಲೇ ಇರುವ ಆ ಶೇಣಿಯವರನ್ನೊಮ್ಮೆ ಈಗ ಮಾತಾಡಿಸುವಾ…!
-ಗಂಗಾಶಾಪ ಎಂಬ ಪ್ರಸಂಗದಲ್ಲಿ ಶಂತನು ಚಕ್ರವರ್ತಿಯಾಗಿ ಮಾತಾಡುತ್ತಾ ಒಂದು ಮಾತುಹೇಳುತ್ತಾರೆ…..
ಪ್ಲೇ……
ನಾನು ಹೇಳಿದ ವಾಕ್ಯ ಕೊನೆಯಾಗುತ್ತಿದ್ದಂತೆ ಶೇಣಿಯವರ ಮಾತು……!
“ದೇವಲೋಕದಲ್ಲಿ ಇಂದ್ರ ಇಲ್ಲಾಂತಾಗುವಾಗ ಇಂದ್ರನಾಗುವುದಕ್ಕೆ ನಮ್ಮ ವಂಶದವರೇ ಬೇಕು. ಹಾಗಂತ ಊರಿನಲ್ಲಿ ಮಾಡಬಾರದ ಮಾಡಲಾಗದ ಅನ್ಯಾಯವನ್ನು ಮಾಡಿದವರು ಎಲ್ಲಿದ್ದಾರೆ ಎಂದರೆ ಅದು ನಮ್ಮ ಚಂದ್ರವಂಶದಲ್ಲೇ ಇದ್ದಾರೆ.”
ಇದು ತಾನು ಆ ಕ್ಷಣದಲ್ಲಿ ಶಂತನುವೇ ಆಗಿದ್ದರೂ ಕೂಡ ತನ್ನ ವಂಶದ ಸಾಮರ್ಥ್ಯದ ಬಗ್ಗೆ ಇರುವ ಅಭಿಮಾನ ಮತ್ತು ತನ್ನ ವಂಶದಿಂದಾದ ಅನ್ಯಾಯದ ಬಗ್ಗೆ ಇರುವ ದುರಾಭಿಮಾನವನ್ನು ಪ್ರಕಟಿಸುವಲ್ಲಿ ಶೇಣಿಯವರು ತನ್ನ ಪಾತ್ರಕ್ಕಷ್ಟೇ ನ್ಯಾಯ ಕೊಡುವ ನ್ಯಾಯವಾದಿ ಅನ್ನುವುದಕ್ಕಿಂತಲೂ, ನಿಜವಾದ ನ್ಯಾಯಕ್ಕೆ ನ್ಯಾಯವನ್ನು ಕೊಡುವ ನ್ಯಾಯ ಮೂರ್ತಿಗಳ ಹಾಗೆ ಕಾಣುತ್ತಾರೆ.
ಅಲ್ಲಿಂದ ಮುಂದಕ್ಕೆ ಹೋಗುತ್ತಾ ಶಂತನು ಚಕ್ರವರ್ತಿ ಬೇಟೆಗೆ ಹೊರಡುವ ಕಾಲ.. ಈ ಬೇಟೆಎಂಬುವುದೊಂದು ಕ್ರೀಡೆ ಅಂತ ಹೇಳುತ್ತಾ ಮಲ್ಲನೇ ಒಂದು ಕಡೆಯಿಂದ ನಮ್ಮ ನಾಡಿನಜನಪದ ಕ್ರೀಡೆಗಳಲ್ಲಿ ಒಂದಾದ ಕಂಬಳದ ಬಗ್ಗೆ ಮಾತಾಡುತ್ತಾರೆ. ಆದರೆ ಯಾವುದೇಕಾರಣಕ್ಕೂ ಕಂಬಲ… ಎತ್ತು ಎಂಬ ಯಾವ ಶಬ್ಧವೂ ಬರುವುದಿಲ್ಲ ಅವರ ಬಾಯಿಂದ…. ಆದರೆ ಕಂಬಳ ನಿಷೇದದ ಬಗೆಗಿನ ಅವರೊಂದು ಅಭಿಪ್ರಾಯವನ್ನು ಶಂತನು ಆಗಿಹೇಳುತ್ತಾರೆ…!
ಫ್ಲೇ.
“ಬೇಟೆ ಅಂದರೆ ಇದೊಂದು ನಮ್ಮ ನಾಡಿನ ಕಲೆ ಇದೊಂದು ನಮ್ಮ ನಾಡಿನ ಕ್ರೀಡೆ. ಬೇಟೆ ಕ್ರೀಡೆಗೆ ಸಂಬಂಧಿಸಿದ್ದೇ ಹೊರತು ವ್ಯಸನಕ್ಕೆ ಸಂಬಂಧಿಸಿದ್ದಲ್ಲ. ಮತ್ತೆ ಈ ಕ್ರೀಡೆಯಿಂದ ಹಿಂಸೆಯಾಗುತ್ತದೆ, ಇನ್ನೊಂದಾಗುತ್ತದೆ ಮತ್ತೊಂದು ಆಗುತ್ತದೆ ಎಂದು ಇಲ್ಲ. ಕ್ರೀಡೆಯ ಮೇಲೆ ಇನ್ನು ಮುಂದೆ ಪ್ರಾಣಿ ಹಿಂಸೆ ಸಲ್ಲದು ಎಂಬ ಆಕ್ಷೇಪ ಬರಬಹುದು. ಆದರೆ ಸಧ್ಯ ನಮ್ಮಲ್ಲಿ ಬಹುದೊಡ್ಡ ಕ್ರೀಡೆಯೆಂದರೆ ಬೇಟೆ.”
ಈ ಮೇಲಿನ ಮಾತನ್ನು ಹೇಳುವಲ್ಲಿ ಶೇಣಿಯವರ ಪ್ರಜ್ಞೆಯ ಧ್ವನಿಯನ್ನು ಗಮನಿಸಬೇಕು. ಯಾವುದನ್ನು ನೇರವಾಗಿ ಬೆತ್ತಲುಗೊಳಿಸಿ ಹೇಳುವುದಿಲ್ಲ. ಹಾಗೆ ನೋಡಿದ್ರೆ ರಂಜನೆಗಾಗಿಯಾದರೂ ನಮ್ಮ ಊರಿನ ಕಂಬಳವನ್ನೋ ಅಥವಾ ಕೋಳಿ ಅಂಕವನ್ನೋ ನೇರವಾಗಿ ಹೇಳಬಹುದು, ಹೇಳುವವರು ಇದ್ದಾರೆ ಕೂಡ. ಆದರೆ ಶಂತನುವಾಗಿ ತಾನು ಕುಳಿತಿರುವ ಸಿಂಹಾನಸದ ಊರು ಯಾವುದು, ಆ ಊರಿನಲ್ಲಿ ಈ ಕ್ರೀಡೆ ಇತ್ತೋ ಇಲ್ವೋ ಎಂಬ ಪ್ರಜ್ಞೆ ಪ್ರೇಕ್ಷಕನಾದ ನಮ್ಮಲ್ಲೂ ಜಾಗೃತಿಗೊಳಿಸಿದ್ದಾರೆ. ಈ ಪ್ರಜ್ಞೆ ಇಲ್ಲದ ಕೆಲವರ ಅರ್ಥ ಕೇಳುವಾಗ ಶಂತನು ನಮ್ಮ ಗದ್ದೆಯ ಕಟ್ಟಪುಣಿಯಲ್ಲಿ ( ಗದ್ದೆ ಬದು) ಕೂತು ಮಾತಾಡಿದಷ್ಟು ಹಗುರವಾಗಿ ಬಿಡುವ ಅಪಾಯ ಇದೆ
ಇನ್ನು ನಾವೀಗ
ಶೇಣಿಯವರು ರಾವಣವಧೆಯ ರಾವಣನಾಗಿ ಮಾತಾಡುವ ಆರಂಭದ ಒಂದೇ ಒಂದು ಮಾತನ್ನು ಕೇಳಬೇಕು.
ಒಂದೇ ವಾಕ್ಯದಲ್ಲಿ ರಾಮಾಯಣದ ರಾಮನ ಸ್ಥಿತಿ ಏನಾಗಿತ್ತು ಈಗ ಏನಾಗಿದೆ. ರಾವಣನ ಸ್ಥಿತಿ ಏನಾಗಿತ್ತು ಈಗ ಏನಾಗಿದೆ. ಎನ್ನುವುದನ್ನು ಹೇಳುತ್ತಾರೆ.
ಪ್ಲೇ….
ಹುಟ್ಟಿನಿಂದಲೇ ಓಲಗದಲ್ಲಿರಬೇಕಾದವನು ಮರದ ಬುಡದಲ್ಲಿ. ಯಾರಿಗೂ ಯಾವ ಕಾಲದಲ್ಲಿಯೂ ಊಹಿಸಲಿಕ್ಕೆ ಬಾರದೆ ಇದ್ದಂತಹ ಒಬ್ಬ ಮರದ ಬುಡದಲ್ಲಿ ಹುಟ್ಟಿದವ ಓಲಗದ ಚಾವಡಿಯಲ್ಲಿ.
ಇಂತಹ ಶೇಣಿಯವರ ಅರ್ಥವನ್ನು ಕೇಳಿ ಅರ್ಥೈಸಿಕೊಳ್ಳುವವನು ಒಂದು ಲೆವೆಲ್ ನವನೇ ಆಗಿರಬೇಕು.
ಇಲ್ಲ ಅಷ್ಟು ಸುಲಭಕ್ಕೆ ಶೇಣಿಯವರ ಮಾತು ಅರ್ಥ ಆಗುವುದಿಲ್ಲ. ಮತ್ತೆ ಮತ್ತೆ ಕೇಳುತ್ತಾ ಸಾಗಿದಾಗೆಲ್ಲಾ ಅದೊಂದು ಪುಸ್ತವನ್ನೇ ಓದಿ ಮುಗಿಸದ ಸುಖ ನಮಗೆ ಸಿಗುತ್ತದೆ.
ಇಂತಹ ಶೇಣಿಯವರ ಬಗ್ಗೆ ನೆನಗೆ ಅನ್ನಿಸುತ್ತಾ ಇದ್ದದ್ದು ನನ್ನ ಅಮ್ಮನಿಗೆ ಪ್ರಾಯ ಕಡಿಮೆ ಆಯ್ತೇನೋ ಅಂತ, ಒಂದು. ಇನ್ನೊಂದು ಕಡೆಯಿಂದ ಅನ್ನಿಸುವುದು ಶೇಣಿಯವರ ಅಮ್ಮನಿಗೆ ಪ್ರಾಯ ಹೆಚ್ಚಾಯ್ತೇನೋ ಎಂದು. ಅಂದರೆ ಅವರು ಇದ್ದಾಗಲೇ ನಾನು ಹುಟ್ಟಿ ಬೆಳೆದಿರಬೇಕಿತ್ತು ಅಂತ. ಏನಿಲ್ಲದೇ ಇದ್ದರೂ ಒಂದು ಬ್ಯಾಗ್ ಹಿಡ್ಕೊಂಡ ಅವರ ಹಿಂದೆ ಹೋಗ್ತಾ ಇರಬಹುದಿತ್ತೇನೋ ಅಂತ ಅನ್ನಿಸುವುದು.
ಇದಕ್ಕಿಂತ ಹೆಚ್ಚಾಗಿ ಏನೂ ಹೇಳುವುದಕ್ಕೂ ನನಗೆ ಬರುತ್ತಿಲ್ಲ.
ಯಾಕೆಂದರೇ ಸದಾ ವೇದಿಕೆಯಲ್ಲಿರುವವರು ಸಭೆಯಲ್ಲಿದ್ದಾರೆ, ಸದಾ ಸಭೆಯಲ್ಲೇ ಇರಬೇಕಾದ ನಾನು ವೇದಿಕೆಯಲ್ಲಿದ್ದೇನೆ.
ಇದು ಶೇಣಿಯವರ ರಾವಣನ ಶೈಲಿಯಲ್ಲಿ ಹೇಳಿದ್ದು.
ಎಲ್ಲರಿಗೂ ಪ್ರೀತಿಯ ನಮಸ್ಕಾರ.
💈ಸುಧಾಕರ ಜೈನ್ ಹೊಸಬೆಟ್ಟು ಗುತ್ತು
No comments:
Post a Comment