Tuesday, July 21, 2020

🛡🏵🛡🏵🛡🏵🛡🏵🛡

*ಅನಗತ್ಯ ಖರ್ಚಿಗೊಪ್ಪದ ಜಬ್ಬಾರ್ ಕುಬೇರ.*

⏪⏹⏸⏩⏺⏪⏹⏸⏩

ಕಟೀಲು ಸಪ್ತಾಹದ ನಾಲ್ಕನೇ ದಿನ.
ದಿನಾಂಕ 20/07/2018 ಎಂದಿನಂತೆ ಇಂದೂ ಸುದೀರ್ಘವಾದ ತಾಳಮದ್ದಳೆ.

ಪ್ರಸಂಗ ಸಮರ ಸೌಗಂಧಿಕಾ. ಜಬ್ಬಾರ್ ಸಮೋರವರದ್ದು ಕುಬೇರ.

ತಾಳಮದ್ದಳೆ ಮುಗಿಯುವಾಗ ತಡರಾತ್ರಿಯಾಗಿತ್ತು.

ಪುತ್ತೂರಿನಲ್ಲಿರುವ ತನ್ನ ಮನೆಗೆ ತಲುಪಲು ತಡರಾತ್ರಿಯ ವೇಳೆ ಬಸ್ಸಿನ ವ್ಯವಸ್ಥೆ ಇಲ್ಲ. ಆದ ಕಾರಣ ಕಟೀಲಿನಿಂದಲೇ ಶ್ರೀಹರಿ ಆಸ್ರಣ್ಣರು ಕಾರಿನ ವ್ಯವಸ್ಥೆ ಮಾಡಿದ್ದರು.

ಪುತ್ತೂರಿನ ಕಡೆಗೆ ಹೋಗುವ ಇನ್ನೊಬ್ಬ ಕಲಾವಿದ ಗಣರಾಜ ಕುಂಬ್ಳೆಯವರೂ ಆ ಕಾರಿನಲ್ಲಿ ಹೋಗುವವರಿದ್ದರು.

ಆದರೆ ಗಣರಾಜ ಕುಂಬ್ಳೆಯವರ ಸಂಬಂಧಿಕರೊಬ್ಬರು ತಾಳಮದ್ದಳೆಗೆ ಬಂದು ಅವರನ್ನು ತನ್ನ ಬೈಕಿನಲ್ಲಿ ಕರೆದುಕೊಂಡು ಹೋಗುವುದು ಅಂತ ಆಯ್ತು.

ಅಷ್ಟಾಗುವಾಗ ತನಗೊಬ್ಬನಿಗಾಗಿ ಕಾರು ಬೇಡ ಯಾಕೆ ಸುಮ್ಮನೇ ವ್ಯರ್ಥ ಖರ್ಚುಮಾಡುವುದು.

ನಾನು ಇಲ್ಲೇ ಮಲಗಿದ್ದು ನಾಳೆ ಬೆಳಿಗ್ಗೆ ನನ್ನಷ್ಟಕ್ಕೇ ಬಸ್ಸಿನಲ್ಲಿ ಹೋಗುತ್ತೇನೆ. ಮಲಗುವುದಕ್ಕೊಂದು ಜಾಗ ಸಿಕ್ಕರೆ ಸಾಕು ಎಂದರು.

ಒಂದು ವ್ಯವಸ್ಥೆಗೆ ತಾನು ಭಾರವಾಗಬಾರದು, ದುಡ್ಡು ಇನ್ನೊಬ್ಬರದ್ದೇ ಆದರೂ ತನ್ನಿಂದಾಗಿ ಅಥವಾ ತನಗಾಗಿ ಅನಗತ್ಯ ಖರ್ಚಾಗುವುದಕ್ಕೊಪ್ಪದ ಜಬ್ಬಾರರ ಈ ಗುಣ ತುಂಬಾ ಇಷ್ಟ ಆಯ್ತು.

ದೇವರ ಕೋಣೆಯಲ್ಲಿ ದಿನವಿಡೀ ದೀಪವೊಂದು ಬೆಳಗುತ್ತಿದ್ದರೆ ಅದು ಭಕ್ತಿಯಾಗುತ್ತದೆ.

ಆದರೆ ಬಚ್ಚಲುಮನೆಯಲ್ಲಿ ದಿನವಿಡೀ ಲೈಟೊಂದು ಉರಿಯುತ್ತಿದ್ದರೆ ಅದು ವ್ಯರ್ಥ ಖರ್ಚು ಎಂದಾಗುತ್ತದೆ.

ಉರಿಯುವಲ್ಲಿ ಉರಿಯದೆ ಬೆಳಗಬೇಕಾದಲ್ಲಿ ಬೆಳಗುವ ಈ ನಮ್ಮ ಜಬ್ಬಾರರ *“ಕುಬೇರ ಧರ್ಮ"*
ನಮಗೂ ಪ್ರೇರಣೆಯಾಗಲಿ ಎಂಬ ಪ್ರೀತಿಯಿಂದ ಈ ಅಕ್ಷರಗಳು.

ರಾತ್ರಿ ಜಬ್ಬಾರರು ಉಳಿದುಕೊಂಡ ರೂಮ್ ನಂಬರ್ 20 ನಾನು ಉಳಿದುಕೊಂಡಿದ್ದ ರೂಮ್ ನಂಬರ್ 30.

ಹತ್ತು ನಂಬರಿನ ಅಂತರದ ದಾರಿಯಲ್ಲಿ ಸಾಗಿ ಕುಬೇರ ಜಬ್ಬಾರರ ರೂಮಿನ ಬಾಗಿಲು ತಟ್ಟಿದೆ ಕೀಚಕ ವಧೆಯ ಅರ್ಜುನ ನಾನೆಂಬ ಅಳುಕಿನಲ್ಲೇ.

ಕೈಯ್ಯಲ್ಲಿದ್ದ ಮೊಬೈಲನ್ನು ಚಾರ್ಜಿಗಿಟ್ಟ ಕುಬೇರ. ಚಾರ್ಜ್ ಖಾಲಿಯಾಗುತ್ತಿದ್ದ ಮೊಬೈಲನ್ನು ಕೈಯ್ಯಲ್ಲಿ ಹಿಡಿದುಕೊಂಡು ರೆಕಾರ್ಡ್ ಮಾಡುತ್ತಿದ್ದ ಅರ್ಜುನ.

ಅರ್ಜುನನಿಗೆ ನಾನು ಸಿದ್ಧಪಡಿಸಿಕೊಂಡಿದ್ದ ಅರ್ಥದ ಔಟ್ ಲೈನ್ ಹೀಗಿದೆ ಎಂದು ವಿವರಿಸಿದೆ. ಒಂದು ವೇಳೆ ನಾನು ಇವರಿಗೆ ಸಿಗದೆ ನೇರ ಸ್ಟೇಜ್ ಗೆ ಹೋಗುತ್ತಿದ್ದರೆ ಅರ್ಜುನನಿಂದ ಒಂದು ತಪ್ಪಾಗುತ್ತಿತ್ತು. ಅದನ್ನು ತಪ್ಪಿಸಿದರು. ತಿದ್ದಿ ಹೇಳಿದರು. ತಿದ್ದಿದ್ದು ಮಾತ್ರವಲ್ಲದೆ, ನೀವು ಸಿದ್ಧಪಡಿಸಿದ್ದರಲ್ಲಿ ಅದೊಂದು ತುಂಬಾ ಚೆನ್ನಾಗಿದೆ, ಕ್ರಿಯೆಟಿವ್ ಆಗಿದೆ ಅದನ್ನು ಬಿಡದೇ ಹೇಳಿ ಎಂದು ಮೋಟಿವೇಟ್ ಕೂಡ ಮಾಡಿದರು.


ಮರುದಿನದ ಪ್ರಸಂಗ ಕೀಚಕ ವಧೆ. ಅದರಲ್ಲಿ ನನ್ನದೊಂದು ಅರ್ಜುನ.

ಅರ್ಜುನನ ಹೆಸರು ದೊಡ್ಡದು.

ಆದರೆ

ಆಫೀಸಿನಲ್ಲಿ ಅರ್ಜುನನ ಹೆಸರಲ್ಲಿ ರಜೆ ಕೇಳಿದಗಾ, ಕೀಚಕನನ್ನು ಮರ್ಡರ್ ಮಾಡೋದು ಭೀಮ ಅಲ್ವಾ ಮಾರಾಯ ?
ಮತ್ತೆ

ನಿನ್ನ ಅರ್ಜನನಿಗೆ ಎಂತ ಕೆಲಸ ಉಂಟು ಅಂತ ಕೇಳಿದ್ದರು.

ಅದು ನಾವು ಈ ಸಲ ಕೀಚಕನನ್ನು ಉಸಿರುಗಟ್ಟಿಸಿ ಮರ್ಡರ್ ಮಾಡುವುದು ಅಂತ ಪ್ಲಾನ್ ಮಾಡಿದ್ದೇವೆ.

 ಭೀಮ ಉಸಿರುಗಟ್ಟಿಸುವಾಗ ನಾನು ಒಂದು ಕೈಯ್ಯಲ್ಲಿ ಕೀಚಕನ ಕಾಲನ್ನು ಒತ್ತಿ ಹಿಡ್ಕೊಂಡು ಇನ್ನೊಂದು ಕೈಯ್ಯಲ್ಲಿ ಕೀಚಕನ ಪಾದದಡಿಗೆ ಕಚಗುಳಿ ಹಾಕ್ಲಿಕ್ಕೆ ಉಂಟು. ಕೀಚಕ ನಗುನಗುತ್ತಾ ಸಾಯಬೇಕು. ನೀವು ನಂಗೆ ರಜೆವೊಂದು ಕೊಡಿ ಮಾರ್ರೆ ಎಂದು ಕೇಳಿದ್ದೆ.

ಒಬ್ಬನೇ ಕುಳಿತು ಒಂದಷ್ಟು ಪಾತ್ರಗಳ ಜೊತೆಗೆ ಒಂದಷ್ಟು ಪಾತ್ರಗಳನ್ನು ಓದುವುದು ಸುಲಭ, ಬರೆಯುವುದೂ ಸುಲಭ. ಆದರೆ ಪಾತ್ರವಾಗಿ ಮಾತಾಡಬೇಕಲ್ಲಾ
ಆಗ ಆಗುವ ಕಷ್ಟಕ್ಕೆ ಹೀಗೆ ಹಿರಿಯರಿರುವ ಜಾಗಕ್ಕೆ ನಮ್ಮ ದಾರಿ ಹತ್ತಿರವಾಗುತ್ತಾ ಹೋಗುತ್ತದೆ.

ಕಾಲನ್ನು ಒತ್ತಿ ಹಿಡಿದು ಪಾದದಡಿಗೆ ಕಚಗುಳಿ ಹಾಕುವುದಕ್ಕಾಗದರೂ ಕಾಲ ಹಿಡಿಯುವ ಬಾಗುವಿಕೆ ಇರಬೇಕಲ್ಲ.

ಮಲಗಿರುವ ಕೃಷ್ಣನ ಕಾಲ ಬುಡದಲ್ಲಿ ಕುಳಿತ ಅರ್ಜುನನಿಗೆ ಕೃಷ್ಣನೇ ಮುಂದಕ್ಕೆ ಸಾರಥಿಯಾಗಿ ಸಿಕ್ಕ.

ಮಲಗಲು ಅಣಿಯಾಗುತ್ತಿದ್ದ ಕುಬೇರ ಜಬ್ಬಾರರ ಕಾಲು ಹಿಡಿದ ಈ ಅರ್ಜನನಾಗುವ ನನಗೆ ಜಬ್ಬಾರರ ಶಕ್ತಿಯ ಆಶೀರ್ವಾದ ಸಿಕ್ಕಿತು. 

ಜಬ್ಬಾರರಿಗೊಂದು ಪ್ರೀತಿಯ ನಮಸ್ಕಾರ.

➖➖➖➖➖➖➖➖➖

ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

21/07/2018.

🔹🔰🔹🔰🔹🔰🔹🔰🔹

Sunday, July 12, 2020


.     🔘 ಶಿಲ್ಪಿ ಕೆತ್ತಿಕೊಂಡ ಸೆಲ್ಫಿ 🔘
ಎಲ್ಲರೂ ತೆಗೀತಾರೆ, ನಾನ್ಯಾಕೆ ತೆಗಿಬಾರ್ದು?ನೋಡೋಣ ಈಸಲ ತೆಗಿಲೇಬೇಕು ಅಂತ ನಿರ್ಧಾರ ಮಾಡಿ ಸ್ನಾನಕ್ಕೆ ಇಳಿದೆ. ಅಷ್ಟರಲ್ಲೆ ನೆನಪಾಗಿದ್ದು ನನ್ನ ಗಣಿತ ಟೀಚರ್ ಹೇಳಿದ ಮಾತು “ನಾಳೆ ಮಾಡುವುದನ್ನು ಇವತ್ತೇ ಮಾಡು, ಇವತ್ತು ಮಾಡುವುದನ್ನು ಈಗಲೇ ಮಾಡು”.
ಆಗೆಲ್ಲಾ ನನಗನ್ನಿಸುತ್ತಿದ್ದದ್ದು, ನಾಳೆ ಮಾಡುವುದನ್ನು ಇವತ್ತು ಮಾಡಬಹುದು. ಇವತ್ತಿದ್ದು ಈಗಲೇ ಮಾಡಬಹುದು. ಆದರೆ ನಿನ್ನೆ ಮಾಡಬೇಕಾಗಿದ್ದದ್ದನ್ನು ಯಾವಾಗಪ್ಪ ಮಾಡೋದು? ಏನೇ ಆದರೂ ಇವತ್ತಿಂದ ಶುಭಸ್ಯ ಶೀಘ್ರಂ ಎಂದು ನಿರ್ಧರಿಸಿದೆ.
ಆಮೇಲೆ ತೆಗೆಯೋದನ್ನು ಈಗಲೇ ತೆಗೆಯಬೇಕು.ಶುರುವಿಗೆ, ಹಾಕ್ಕೊಂಡಿದ್ದ ಬಾತ್ ರೂಂ ಚಿಲ್ಕ ತೆಗೆದೆ.ಬಾಗಿಲು ತೆಗೆದೆ. ಚಾರ್ಜಿಗಿಟ್ಟಿದ್ದ ಮೊಬೈಲ್ ತೆಗೆದೆ.ಪಾಸ್ವರ್ಡ್ ಹಾಕಿ ಲಾಕ್ ತೆಗೆದೆ.
ಮೊಬೈಲ್ ಕ್ಯಾಮರಾ ಆನ್ ಮಾಡಿದೆ. ಅಷ್ಟರಲ್ಲಿ ಟಿ.ವಿ. ಜಾಹೀರಾತಿನಲ್ಲಿ ಹುಡುಗಿ ಹೇಳೋದು ಕೇಳಿತು. “ನಿಮ್ಮ ಹಳೆಯ ಸಾಮಾನ್ ಕಚ ಕಚಖ್ ಮಾಡಿ ನಮಗೆ ಕಳುಹಿಸಿ”. ಅಯ್ಯೊಯಬಾ… ಏನಿದವಸ್ಥೆ….!ಹ್ಹೇ.. ಬಿಡಿಪ್ಪ… ಟಿ.ವಿ.ಯಲ್ಲಿ ಹೇಳಿದ್ದು ಹಳೇದಲ್ವಾ… ನಮ್ಮದಿನ್ನೂ ಹೊಸದೇ….! ಹೌದು ಹಳೇದು ಅಂತ ಆಗಬೇಕಾದರೆ ಹೊಸದೊಂದು ಬರಬೇಕಲ್ವಾ ಎಂದು ಸಮರ್ಥಿಸಿ ಸಮಾಧಾನದ ಉಸಿರು ತಗೊಂಡು ತೆಗೆಯಲಾರಂಭಿಸಿದೆ. ಫ್ರಂಟ್ ಕ್ಯಾಮರಾಗೆ ಮುಖವೊಡ್ಡಿದೆ. ಮೊದಲ ಬಾರಿಗೆ ಲವ್ ಪ್ರಪೋಸ್ ಮಾಡಲು ಕನ್ನಡಿ ನೋಡ್ಕೊಂಡು ಪ್ರಾಕ್ಟೀಸ್ ಮಾಡುವಾಗ ಹೇಗೆ ಬೇರೆ ಬೇರೆ ಭಾವನೆಗಳನ್ನು ಉತ್ಪತ್ತಿ ಮಾಡಿ ಯಾವುದರಲ್ಲಿ ಪಾಸಾಗಬಹುದೆಂದು ಪರೀಕ್ಷೆ ಮಾಡಿದೆನೋ ಹಾಗೆ. ಹಾಳಾದ ಈ ನೆನಪಿಗೆ ಆ ಮೊದಲ ಹುಡುಗಿ ಯಾರೆಂದು ನೆನಪೇ ಆಗದೆ ಸರಿಯಾಗಿ ಭಾವನೆ ಬರದೆ ಬರಡಾಯಿತು ಮನಸ್ಸು.ತಕ್ಷಣ ಹೆಂಡತಿಯ ಕಾಲ್ ಮೊಬೈಲ್ ರಿಂಗ್ ಆಯ್ತು,ಕ್ಯಾಮರಾ ಆಫಾಯ್ತು.
“ರೀ ಸ್ನಾನದ ಸೋಪ್ ಖಾಲಿಯಾಗಿದೆ. "ಹಂಗೇ"ಹೋಗಿ ಸೋಪ್ ತಗೊಂಡು ಬನ್ನಿ” ಕಾಲ್ ಕಟ್ ಆಯ್ತು. ಕ್ಯಾಮರಾ ಆನ್ ಆಯ್ತು. ಈಗ ಬಂತು ನೋಡಿ ಸರಿಯಾದ ಭಾವನೆ… ಮತ್ತೆ ಒಂದೆರಡು ಕಚ ಕಚಖ್ ಎಂದು ಫೋಟೋ ತಗೊಂಡೆ. ಹೊಸ ಭಾವಕ್ಕಿಂತ ಹಳೇ ಭಾವವೆ ಚಂದ ಎಂದು ಎಲ್ಲಾ ಫೋಟೋಗಳನ್ನೊಮ್ಮೆ ನೋಡಲು ಶುರುಮಾಡಿದೆ.
ಹ್ಹಾಂ… ಬ್ಯಾಗ್ರೌಂಡಲ್ಲಿ… ಟ್ಯಾಪ್ ಕಾಣ್ತಾ ಇದೆ… ಅಯ್ಯೋ ಬ್ಯಾಗ್ರೌಂಡು ಬಿಡಿ ಸ್ವಾಮೀ…. ಫೋರ್ ಗ್ರೌಂಡಲ್ಲೂ ಒಂದು ಟ್ಯಾಪ್… ಹೋಗ್ಲಿ ಬಿಡಿ ಫೋರ್ ಗ್ರೌಂಡ್ ಟ್ಯಾಪನ್ನು ಕಟ್ ಮಾಡ್ಕೊಂಡರಾಯಿತು….!ಫೋಟೋಶಾಪಲ್ಲಿ.
ಮೊಬೈಲ್ ಪಕ್ಕಕ್ಕಿಟ್ಟು ನೀರು ಹೊಯ್ಕೊಂಡೆ. ಸ್ನಾನದ ಸೋಪ್ ಮುಗಿದರೇನಂತೆ ಬಟ್ಟೆ ಸೋಪ್ ಇದೆಯಲ್ಲಾ… ಬಟ್ಟೆಯಲ್ಲಿರುವ ಎಂತೆಂತಹ ಕಲೆಯೇ ಹೋಗುತ್ತದಂತೆ… ಇನ್ನು ಈ ಕಲೆಗಾರನ ಕೊಳೆ ಹೋಗದೆ ಇದ್ದೀತೋ? ಸ್ವಲ್ಪ ಉರಿಯಬಹುದು…!ಕಣ್ಣು. ಮುಚ್ಚಿಕೊಂಡರಾಯ್ತಪ್ಪ.
ತಲೆಗೆ ಸ್ನಾನ ಮಾಡೋವಾಗ ತಲೆಯ ಹಿಂಭಾಗಕ್ಕೆ ನೀರು ಬಿದ್ದ ಕೂಡಲೆ ಮೆದುಳು ಚುರುಕಾಗುತ್ತದಂತೆ.ಸಿಕ್ಕಾಪಟ್ಟೆ ಐಡಿಯಾಗಳು ಬಂದವು, ಹೇಗೆಲ್ಲಾ ಸೆಲ್ಫಿ ತೆಗೆಯಬಹುದೆಂದು.
ಈ ಸೆಲ್ಫಿ ಅನ್ನುವ ಪದ ಕೇಳುವಾಗಲೇ ಒಂದು ಥರಾ ಸ್ವಾರ್ಥ ಭಾವ ಕಾಡುತ್ತದೆ. ಸೆಲ್ಫಿಶ್ ಅಂದರೆ ಸ್ವಾರ್ಥಿ ಎಂಬ ಅರ್ಥವೇ ಇದಕ್ಕೆ ಕಾರಣ ಇರಬಹುದು.ಸೆಲ್ಫಿಗೂ ಶಿಲ್ಪಿಗೂ ಹತ್ತಿರದ ಸಂಬಂಧ ಇದೆ ಅನ್ನಿಸುತ್ತದೆ. ಶಿಲ್ಪಿ ಬೇರೆಯವರನ್ನು ಕೆತ್ತುತ್ತಾನೆ. ಸೆಲ್ಫಿ ತನ್ನ ತಾನೇ ಕೆತ್ತಿ ಕೊಚ್ಚಿಕೊಳ್ಳುತ್ತಾನೆ. ಸರಿಯಾದ ಅರ್ಥ ಬಂತಲ್ಲ ಈಗ… ಸೆಲ್ಫಿ ಅಂದರೆ ಸ್ವಾರ್ಥಿ ಎಂದು.
ಹಾಗೆ ನೋಡಿದರೆ ಯಾರು ಸ್ವಾರ್ಥಿಗಳು ಅಲ್ಲ ಹೇಳಿ.ಮೊನ್ನೆ ಮೊನ್ನೆ ಒಬಾಮಾ ಕೂಡ ತನ್ನ ಸೆಲ್ಫಿ ಫೋಟೋ ತಗೊಂಡಿದ್ದು ವಿಶ್ವದೆಲ್ಲೆಡೆ ಸುದ್ದಿಯಾಗಿತ್ತು.
ವಿಷಯ ಅಂದರೆ ಸೆಲ್ಫಿ ತೆಗೆಯುತ್ತಿರುವ ದೃಶ್ಯವನ್ನು ಇನ್ನೊಬ್ಬ ಫೋಟೋ ತೆಗೆಯೋದು ಕೂಡ ಇದೆ.ಇದನ್ನು ಏನು ಹೇಳಬೇಕು. ಅನ್ ಸೆಲ್ಫಿ… ಇಲ್ಲ ಡಿಸ್ ಸೆಲ್ಫಿ… ಹ್ಹೇ ಇಲ್ಲಪ್ಪ. ಇದನ್ನು ಇನ್ ಸೆಲ್ಫಿ ಎಂದು ಹೇಳಬಹುದೇನೋ.
ಸ್ನಾನ ಮುಗಿಸಿ ಹೊರಬಂದೆ. ಕನ್ನಡಿ ಎದುರು ನಿಂತೆ.ಹಣೆಯ ಮೇಲೆ ನೀರ ಹನಿಗಳು ಶಿಸ್ತಿನಲ್ಲಿ ಕೂತಿದ್ದವು.ಇಳಿದು ಹೋಗುವ ಮುನ್ನ ನನ್ನ ಸೆಲ್ಫಿಯ ಹಣೆಬರಹ ನಿರ್ಧಾರ ಆಗಬೇಕೆಂದು ಮತ್ತೆ ಮೊಬೈಲ್ ಕೈಗೆತ್ತಿಕೊಂಡೆ. ಮೊಬೈಲಿನ ಫ್ರಂಟ್ ಕ್ಯಾಮರಾದಿಂದ ತೆಗೆದರೆ ಕಮ್ಮಿ ಗುಣಮಟ್ಟದ್ದಾಗುತ್ತದೆ ಎಂದು ಬ್ಯಾಕ್ ಕ್ಯಾಮರಾದಲ್ಲೇ ತೆಗೆಯಲು ನಿರ್ಧರಿಸಿದೆ. ಮೊದಲಿಗೆ ಸರ್ವ ವಿಘ್ನ ವಿನಾಶಕ ಗಣೇಶನ ಜೊತೆಗೊಂದು ಸೆಲ್ಫಿ ತೆಗೆದೆ. ನೋಡಿದರೆ ಫೋಟೋದಲ್ಲಿ ಕಳ್ಳ ಗಣಪಣ್ಣ ಮಾತ್ರ ಇದ್ದಾನೆ. ನಾನು ಬಿಡಿ, ಅವನ ಇಲಿಯೂ ಬರಲಿಲ್ಲ ನಾ ತೆಗೆದ ಸೆಲ್ಫಿಯಲ್ಲಿ. ಇರಲಿ ಗಣಪತಿ ಸ್ಥಾಪನೆ ಆದಂಗಾಯ್ತು.
ಮನೆಯಂಗಳಕೆ ಬಂದು ಮತ್ತೆ ಮೊಬೈಲ್ ಕ್ಯಾಮರಾ ಮುಖದೆದುರಿಗೆ ಹಿಡಿದು ಅಂದಾಜಿನಲ್ಲೇ ಕ್ಲಿಕ್ ಮಾಡಿದೆ. ರಪ್ಪ ಮೊಬೈಲ್ ತಿರುಗಿಸಿ ನೋಡಿದರೆ ಫೋಟೋದಲ್ಲಿ ಬಾಲ ಮಾತ್ರ ಕಾಣುತ್ತಿದೆ. ಅದು ಕೂಡ ಶೇಕ್ ಆಗಿದೆ. ಫೋಟೋ ತೆಗೆಯುವಾಗ ಪಕ್ಕದ ಮನೆಯ ನಾಯಿ ಬಂದು ನನ್ನ ಹಿಂದೆ ನಿಂತು ಬಾಲ ಅಲ್ಲಾಡಿಸುತ್ತಿತ್ತು. ಪಾಷ್ ಮಾರ್ರೆ ನಾಯಿ… ಕ್ಯಾಮರಾ ನೋಡಿದ್ರೂ ಬಾಲ ಅಲ್ಲಾಡಿಸುತ್ತದಲ್ಲ. ನಾಯಿ ಬಾಲಕ್ಕಿರುವ ಯೋಗ್ಯತೆ ನಂಗಿಲ್ವೆ? ಇದೊಳ್ಳೆ ಕಥೆ ಆಯ್ತಲ್ಲಾ. ವಾಸ್ತುನೇ ಸರಿಯಿಲ್ಲ.
ಲೊಕೇಷನ್ ಶಿಫ್ಟ್
ಕ್ಯಾಮರಾ
ಆಕ್ಷನ್
ಸ್ಮೈಲ್
ಎಂದು ಸ್ವಯಂ ಹೇಳಿಕೊಂಡು ಇನ್ನೊಂದು ಕ್ಲಿಕ್ಕಿಸಿದೆ.ಫೋಟೋ ನೋಡಿದರೆ ನನ್ನ ರುಂಡ ಇಲ್ಲ. ಕೆಳಭಾಗ ಮಾತ್ರ ಬಂದಿದೆ. ಜೊತೆಗೆ ಆಚೆ ಮನೆಯವರು ಒಣಗಲು ಹಾಕಿದ ಬಣ್ಣ ಮಾಸಿ ನೇತಾಡುತ್ತಿದ್ದ ಬಟ್ಟೆಗಳು.
ಅಯ್ಯೋ… ಈಗೇನು ಮಾಡೋದು ಎಂದು ಉಂಗುರವಿಲ್ಲದ ಉಂಗುರದ ಬೆರಳಿನಲ್ಲಿ ಮೆದುಳಿನ ಎಡಭಾಗಕ್ಕೆ ಒಂದು ಪೆಟ್ಟುಕೊಟ್ಟೆ. ಥಾಂ… ಎಂದು ಕೇಳಿದ ಹಾಗಾಯ್ತು.
ಅದ್ಯಾರೋ ಹೆಗಲ ಮೇಲೆ ಕೊಡಲಿ ಹಿಡ್ಕೊಂಡು ಊರ ಪೂರ್ತಿ ತನ್ನ ಕೊಡಲಿಯನ್ನು ಹುಡುಕಿದನಂತೆ.ಆಮೇಲೆ ಯಾರೋ ಒಬ್ಬರು ಹೇಳಿದರಂತೆ. ಓ ಪುಣ್ಯಾತ್ಮ ನೀನು ಹುಡುಕುವ ಕೊಡಲಿ ನಿನ್ನ ಹೆಗಲಲ್ಲೇ ಇದೆಯಲ್ಲ ಮಾರಾಯಾ..
ಈಗ ನಂದೂ ಕಥೆ ಅದೇ ಆಯ್ತಲ್ಲ.. ಪ್ರೊಫೆಶನಲ್ ಕ್ಯಾಮರಾ ನನ್ನ ಹೆಗಲಲ್ಲೇ ಇದ್ದರೂ ಕೂಡ ನನ್ನದೊಂದು ಫೋಟೋ ಬೇಕೆಂದರೆ ಯಾರ ಹೆಗಲಲ್ಲಿ ಕ್ಯಾಮರಾ ನೇತಾಡುತ್ತಿದೆ ಎಂದೇ ಹುಡುಕುವ ಹಣೆಬರಹ.
ಇನ್ನು ಇದೆಲ್ಲಾ ಆಗಲಿಕ್ಕಿಲ್ಲಾಂತ ಸೀದ ಮನೆಯೊಳಗೆ ಬಂದು ನನ್ನ ಹೆಗಲ ಕ್ಯಾಮರಾವನ್ನು ಸ್ಟಾಂಡಿಗೆ ಫಿಕ್ಸ್ ಮಾಡಿದೆ. ಮೂವತ್ತು ಸೆಕೆಂಡಿನಲ್ಲಿ ಕ್ಲಿಕ್ ಆಗುವಂತೆ ಸೆಲ್ಫ್ ಟೈಮರ್ ಇಟ್ಟೆ. ನಾನು ಹೋಗಿ ನಿಲ್ಲಬೇಕಾದಲ್ಲಿ ಒಂದು “ಹಿಡಿಸೂಡಿ” ಐಮೀನ್ ಪೊರಕೆ ಇಟ್ಟೆ.ಕಮ್ಮಿದ್ದಲ್ಲ ಈ ಪೊರಕೆ. ಮೊನ್ನೆ ಡೆಲ್ಲಿಯಲ್ಲಿ ಗೆದ್ದ ಪೊರಕೆಯ ಎರಡು ಕಡ್ಡಿ ಇದರಲ್ಲಿ ಬೆರೆತಿದೆ.
ಓ ಮೊನ್ನೆ ಬೆಳಿಗ್ಗೆ ವಾಕಿಂಗ್ ಹೋಗುವಾಗ ಜಿಂದಾಲ್ ಆಸ್ಪತ್ರೆ ಅಂಗಳದಲ್ಲಿ ನಮ್ಮ ಅರವಿಂದ “ಕ್ರೇಜಿ”-ವಾಲರು ಇನ್ನುಮುಂದೆ ತಾನು ಕಮಕ್ ಕಿಮಕ್ ಕೆಮ್ಮಂಗಿಲ್ಲ ಎಂದು ನಿರ್ಧರಿಸಿ ಯೋಗದ ಬೇರೆ ಬೇರೆ ಆಸನಗಳನ್ನು ಮಾಡಿ ಕೊನೆಗೆ ಪೊರಕೆ ಹಿಡಿದು ಸ್ವಚ್ಛಾಸನ ಮಾಡುತ್ತಿದ್ದರು. ಅದಾದ ಮೇಲೆಶವಾಸನದಲ್ಲಿದ್ದ ಆ ಪೊರಕೆಯ ಎರಡು ಕಡ್ಡಿಯನ್ನು ಕದ್ದು ತಂದು ಮನೆಯ ಪೊರಕೆಗೆ ಬೆರೆಸಿದೆ.
ಹಾಗೆ ಆ ಪೊರಕೆಗೆ ಫೋಕಸ್ ಮಾಡಿ ಕ್ಲಿಕ್ ಮಾಡಿ ಹೋಗಿ ನಿಲ್ಲಬೇಕೆನ್ನುವಷ್ಟರಲ್ಲಿ ಧರಣಿಪಾಲನ ಒಡತಿಯಾದ ಭೂಮಿಯ ಗುರುತ್ವಾಕರ್ಷಣಾ ಮೋಡಿ(ದಿ)ಗೆ ಪೊರಕೆ ಅಡ್ಡಬಿತ್ತು. ನಾನಿನ್ನು ಎಲ್ಲಿ ನಿಲ್ಲಬೇಕೆಂದು ಗೊತ್ತಾಗದೆ ಅತಂತ್ರನಾದೆ. ಕ್ಯಾಮರಾ ಕ್ಲಿಕ್ ಆಯ್ತು. ಗುಡಿಯಲ್ಲಿ ದೇವರೇ ಇಲ್ಲದ ಹಾಗೆ ಚಿತ್ರದಲ್ಲಿ ನಾನೇ ಇಲ್ಲದಾದೆನು. ಮತ್ತೊಮ್ಮೆ ಗುರುತ್ವಾಕರ್ಷಣಾ ಮೋಡಿಗೆ ವಿರುದ್ಧ ಬಲವಾಗಿ ಪೊರಕೆಯನ್ನು ಗಟ್ಟಿಯಾಗಿ ನೇರ ನಿಲ್ಲಿಸಿದೆ. ಕ್ಲಿಕ್ ಮಾಡಿದೆ. ಪೊರಕೆ ಜಾಗಕ್ಕೆ ಹೋಗಿ ಪೊರಕೆಯನ್ನು ತಳ್ಳಿ ನಾ ನಿಂತೆ. ಇನ್ನೂ ಇಪ್ಪತ್ತು ಸೆಕೆಂಡು ಬಾಕಿ ಇತ್ತು.ಆಗ ಕ್ಯಾಮರಾದ ಹಿಂದೆ ಹೆಂಡತಿ ಪ್ರವೇಶ ಆಯ್ತು.
ಹೆಂಡತಿಯ ಕಂಡು
ನಗೆಯನಾಡಿದ ಗಂಡು.
ಕ್ಯಾಮರಾ ಕ್ಲಿಕ್. ಫೋಟೋ ನೋಡಿ ನಾನೂ ಕ್ಲಿಕ್.
ಇಲ್ಲಿಗೆ ಈ ಸೆಲ್ಫಿ ಶಿಲ್ಪಿಯ ಕಥೆಯು ಮುಗಿಯಿತು. ಈ ಕಥೆಯನ್ನು ಓದಿದ ಆ ಲೋಕದವರಿಗೆ, ಈ (e)ಲೋಕಗಳಾದ ಫೇಸ್ ಬುಕ್, ವಾಟ್ಸಾಪ್ ಗಳಲ್ಲಿ ಶೇರ್ ಮಾಡಿ ಓದಿಸಿದವರಿಗೆ ಸನ್ಮಂಗಳವಾಗಲಿ.
ಜಯ ನಮೋ ಸೆಲ್ಫಿ ||
ಜಯ ಜಯ ಶಿಲ್ಪಿ ||
- 🔘 ಸುಧಾಕರ ಜೈನ್ ಹೊಸಬೆಟ್ಟು ಗುತ್ತು 🔘

ಮೋದಪ್ರಮೋದಾ

🏮🌿🏮🌿🏮

ಮೋದಪ್ರಮೋದಾ

🏮🌿🏮🌿🏮

🌻 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

10/07/2020

ಇಬ್ಬರು ಒದ್ದೆಯಾಗದಂತೆ ಜೊತೆಯಾಗಿ ಹೋಗುವಷ್ಟು ದೊಡ್ಡದಾದ ಛತ್ರಿ. ಅದನ್ನು ಬಿಡಿಸಿ ಹಿಡಿದುಕೊಂಡು ನಡೆಯುತ್ತಿದ್ದಳು ಪ್ರಮೋದಾ. ಒಂದು ಕೈಯಲ್ಲಿ ಛತ್ರಿ ಇನ್ನೊಂದು ಕೈಯಲ್ಲಿ ಮುದ್ದೆ ಮಾಡಿ ಎತ್ತಿ ಹಿಡಿದುಕೊಂಡ ಲಂಗ. ಬೆನ್ನಿನ ಮೇಲೊಂದು ಬ್ಯಾಗ್. ಪೈಥಾಗೊರಸನ ಪ್ರಮೇಯ , ನ್ಯೂಟನನ ಚಲನೆಯ ನಿಯಮ , ಕುವೆಂಪುರವರ ಓ ನನ್ನ ಚೇತನ ಇವೆಲ್ಲಾ ಇರುವ ಪುಸ್ತಕಗಳ ಬ್ಯಾಗ್. ಇಷ್ಟು ಭಾರಗಳನ್ನು ಹೊತ್ತ ಆ ಬ್ಯಾಗ್ ನ ಭಾರವೆಲ್ಲಾ ಪ್ರಮೋದಾಳ ಹೆಗಲಮೇಲೆ ಬಿದ್ದು ಎದೆಯನ್ನೆತ್ತಿ ನಡೆಯುವುದನ್ನು ಕಲಿಸಿಕೊಡುತ್ತಿತ್ತು.

ಗದ್ದೆಯನ್ನು ದಾಟಿ ಹೋದರೆ ಕಾಡಿನ ಮಧ್ಯೆ ಸಾಗುವ ದಾರಿ. ಆ ದಾರಿ ಆರಂಭ ಆಗುವಲ್ಲೆ ಒಂದು ಮರದ ಕೆಳಗೆ ಕಾಯುತ್ತಿರುವ ನಾಗೇಂದ್ರ. ನಾಗೇಂದ್ರನದ್ದು, ಒಬ್ಬನೇ ಹೋದರೂ ಒದ್ದೆಯಾಗುವಷ್ಟು ಚಿಕ್ಕದಾದ ಛತ್ರಿ. ಪ್ರಮೋದಾಳು ಮರದ ಹತ್ತಿರ ಬರುತ್ತಿದ್ದಂತೆ ಮರದ ಬುಡದಿಂದ ನಾಗೇಂದ್ರ ‘ಪ್ರಮೋದಾಳ ದಾರಿಗೆ’ ಬರುತ್ತಿದ್ದ. ಅಲ್ಲಿಂದ ಒಟ್ಟಿಗೇ ಮಾತಾಡುತ್ತಾ ಮಾತಾಡುತ್ತಾ ರಸ್ತೆ ಬದಿಯವರೆಗೆ ಜೊತೆಗೇ ಹೋಗುವುದು. ಮಳೆ ಇಲ್ಲದೇ ಇದ್ದರೆ, ಒಬ್ಬನೇ ಹೋದರೂ ಒದ್ದೆಯಾಗುವಷ್ಟು ಚಿಕ್ಕದಾದ ನಾಗೇಂದ್ರನ ಛತ್ರಿಯಡಿಯಲ್ಲಿ ಇಬ್ಬರೂ ಅಂಟಿಕೊಂಡು ಸ್ವಲ್ಪ ದೂರದವರೆಗೆ ನಡೆಯುವುದು. ಬದುಕಿನಲ್ಲಿ ಮುಂದೊಂದು ದಿನ ಏಳು ಹೆಜ್ಜೆಯನ್ನು ಹಾಕಬೇಕು ಎಂಬ ನಂಟಿನ ಪ್ರೀತಿಯ ಕನಸಿನಲ್ಲಿ ಒಂದೇ ಛತ್ರಿಯಡಿಯಲ್ಲಿ ಅಂಟಿಕೊಂಡು ಅಂಟಿಕೊಂಡು ನಡೆಯುವುದು.
ಮಳೆ ಬರುತ್ತಿದ್ದರೆ, ಇಬ್ಬರೂ ತಮ್ಮ ತಮ್ಮ ಮುಖವನ್ನು ಬಾಡಿಸಿಕೊಂಡು ಛತ್ರಿಗಳನ್ನು ಅರಳಿಸಿಕೊಂಡು ತಮ್ಮ ಛತ್ರಿಗಳು ಪರಸ್ಪರ ತಾಗುವಂತೆ ಹಿಡಿದುಕೊಂಡು ನಡೆಯುವುದು.
ರಸ್ತೆ ಬದಿಗೆ ಬರುತ್ತಿದ್ದಂತೆ, ನಾಗೇಂದ್ರ ಬಸ್ಸು ಹತ್ತಿ ನಗರಕ್ಕೆ ಕೆಲಸಕ್ಕೆ ಹೋಗುವುದು. ಪ್ರಮೋದಾ ಮತ್ತೆ ಒಂದಷ್ಟು ನಡೆದುಕೊಂಡು ತನ್ನ ಕೊನೆಯ ವರ್ಷದ ಹೈಸ್ಕೂಲಿಗೆ ಹೋಗುವುದು.
ಕಾಡಿನ ಮಧ್ಯದ ದಾರಿಯಲ್ಲಿ ಮಗಳೊಬ್ಬಳನ್ನೇ ಶಾಲೆಗೆ ಕಳುಹಿಸುವ ಭಯ ಪ್ರಮೋದಾಳ ತಂದೆ ಸೀತಾರಾಮರಿಗೆ ಇತ್ತು. ಹಾಗಂತ ದಿನಾಲು ತಾನೇ ಮಗಳನ್ನು ಶಾಲೆಯವರೆಗೋ ಅಥವಾ ರಸ್ತೆ ಬದಿಯವರೆಗೋ ಬಿಟ್ಟು ಬರುವುದು ಒಬ್ಬ ರೈತನಾಗಿ ತನ್ನ ದಿನನಿತ್ಯದ ಕೆಲಸಗಳ ನಡುವೆ ಅದು ಅಸಾಧ್ಯವಾಗಿತ್ತು. ಹಾಗಾಗಿ ದಿನಾಲೂ ಕೆಲಸಕ್ಕೆಂದು ನಗರಕ್ಕೆ ಹೋಗುವ ನಾಗೇಂದ್ರನ ಜೊತೆಗೆ ರಸ್ತೆ ಬದಿಯವರೆಗೆ ಮಗಳನ್ನು ಕರೆದುಕೊಂಡು ಹೋಗುವಂತೆ ಹೇಳಿದ್ದರು.
ಕಾಡಿನ ದಾರಿಯಲ್ಲಿ ಧೈರ್ಯಕ್ಕೆ ಜೊತೆಯಾದ ನಾಗೇಂದ್ರನೇ ತನ್ನ ಬದುಕಿನಲ್ಲಿ ಕಾಡುವ ದಾರಿಗಳಲೆಲ್ಲಾ ಜೊತೆಯಾಗಬೇಕು ಎಂದು ಧೈರ್ಯದಲ್ಲಿ ಆಸೆ ಪಟ್ಟವಳು ಪ್ರಮೋದಾ.

ಹೈಸ್ಕೂಲಿನಲ್ಲಿ ಅತ್ಯುತ್ತಮ ಅಂಕ ಪಡೆದು ನಗರದ ಕಾಲೇಜು ಸೇರಿಕೊಂಡಳು.
ರಸ್ತೆಯ ಬದಿಯವರೆಗಷ್ಟಕ್ಕೆ ಜೊತೆಯಾಗಿ ಹೋಗುತ್ತಿದ್ದವರು ನಗರದವರೆಗೂ ಒಟ್ಟಿಗೆ ಹೋಗುವ ದಿನಗಳು ಬಂತು.
ಪ್ರಮೋದಾಳದ್ದು ಪಿಯುಸಿ ಪಾಸಾಗಿ ಡಿಗ್ರಿ ಸೆರುವ ಹೊತ್ತಿಗೆ ನಾಗೇಂದ್ರನಿಗೆ ಬೈಕ್ ಬಂದಿತ್ತು.

ಬಸ್ಸಿನಲ್ಲಿ ದೂರ ದೂರ ಕುಳಿತು ಪ್ರಯಾಣ ಮಾಡುತ್ತಿದ್ದವರು ಬೈಕಿನಲ್ಲಿ ಒಂದೇ ಸೀಟಿನಲ್ಲಿ ಕುಳಿತುಕೊಂಡು ಹೋಗುವ ಪ್ರಯಾಣವನ್ನು ಆರಂಭಿಸಿದರು.
ಬೈಕಿನಲ್ಲಿ ಕುಳಿತುಕೊಂಡು ಪ್ರಯಾಣ ಮಾಡುವಾಗ ಪ್ರಮೋದಾಳ ತುಟಿಗಳು ನಾಗೇಂದ್ರನ ಹತ್ತಿರ ಹತ್ತಿರ ಇರುತ್ತಿತ್ತು. ಹತ್ತಿರ ಅಂದರೆ ಯಾರಾದರೂ ಇರಬಹುದಾದ ಪ್ರದೇಶಕ್ಕೆ ಬಂದಾಗ ಮಾತ್ರ ಸ್ವಲ್ಪ ಹಿಂದೆ ಸರಿಯುತ್ತಿತ್ತು.
ಹೆಚ್ಚು ಹೊತ್ತು ಬೈಕಿನಲ್ಲಿ ಜೊತೆಗೇ ಇರಬೇಕೆಂಬ ಆಸೆ ಪಡುವ ಪ್ರಣಯದ ವೇಗ ಅದು. ಹಾಗಾಗಿ ಬೈಕಿನ ಪ್ರಯಾಣದ ವೇಗ ಬಹಳ ನಿಧಾನ.
ಬೈಕಿನ ಪ್ರಯಾಣದಲ್ಲಿ ಊರಿನವರೆಲ್ಲರ ಸುದ್ದಿಗಳನ್ನು ಮಾತಾಡುತ್ತಾ ಸಾಗುತ್ತಿದ್ದರು.
ಅಂತಿಮ ವರ್ಷದ ಡಿಗ್ರಿ ಮುಗಿಯುವ ಹೊತ್ತಿಗೆ ಊರಿನವರೆಲ್ಲ ಪ್ರಮೋದಾ ಮತ್ತು ನಾಗೇಂದ್ರನ ಸುದ್ದಿ ಮಾತಾಡುವಂತಾಯ್ತು.

ಸುದ್ದಿ ಸೀತಾರಾಮರ ಕಿವಿಗೂ ಬಿತ್ತು. ಬೈಕಿನಲ್ಲಿ ಹೋಗುತ್ತಿದ್ದ ಪ್ರಮೋದಾಳು ಮತ್ತೆ ಬಸ್ಸನ್ನೇರುವಂತಾಯ್ತು…!

ಹಾಗಂತ ಸೀತಾರಾಮರಿಗೂ ನಾಗೇಂದ್ರ ಅಂದರೆ ಬಹಳ ಪ್ರೀತಿ. ಅಳಿಯ ಸಿಕ್ಕರೆ ಈ ನಾಗೇಂದ್ರನಂತಹ ಅಳಿಯನೆ ಸಿಗಬೇಕು ಎಂದು. ಆದರೆ ನಾಗೇಂದ್ರನಂತಹ ಅಳಿಯನೇ ಬೇಕು ವಿನಃ ನಾಗೇಂದ್ರನೇ ಅಳಿಯನಾಗಿ ಬೇಡ.

ಕಾರಣ ಜಾತಿ…. ಅಷ್ಟೇ. ಅದೊಂದು ಬಿಟ್ಟರೆ ಬೇರೆ ಏನೂ ಇಲ್ಲ.

ಪ್ರಮೋದಾಳದ್ದು ಡಿಗ್ರಿ ಮುಗಿಯಿತು. ಮದುವೆಯ ಸಿದ್ಧತೆಗಳು ಆರಂಭ ಆಯ್ತು.
ತನ್ನನ್ನು ನೋಡಲು ಬಂದ ಹುಡುಗನನ್ನೊಮ್ಮೆ ನೋಡುವ ಮುನ್ನ ತನ್ನನ್ನೇ ತಾನೊಮ್ಮೆ ನೋಡಬೇಕೆಂದು ಕನ್ನಡಿಯ ಮುಂದೆ ನಿಂತರೆ ಕನ್ನಡಿಯಲ್ಲಿ ನಾಗೇಂದ್ರನೇ ಕಾಣುತ್ತಾನೆ ಪ್ರಮೋದಾಳಿಗೆ.
ಪ್ರಮೋದಾ ಎಂದು ಕರೆದ ಸ್ವರ ಕೇಳಿದಾಗಲೇ ಕನ್ನಡಿಯಲ್ಲಿ ತನಗೆ ತಾನು ಕಂಡಿದ್ದು.
ಚಹಾ ತುಂಬಿದ ಲೋಟಗಳನ್ನು ತಟ್ಟೆಯಲ್ಲಿ ಹಿಡಿದುಕೊಂಡು ತಾಯಿ ಬಂದು ಮಗಳ ಪಕ್ಕದಲ್ಲಿ ನಿಂತು ಕಣ್ಣೀರು ಒರೆಸಿಕೊಂಡರು.
ಮಗಳೇ ನಿನ್ನ ಅಪ್ಪನ ಕೋಪ ನನಗೆ ಮಾತ್ರ ಗೊತ್ತು. ಅವರ ಮಾತಿಗೆ ವಿರುದ್ಧವಾಗಿ ಹೋದರೆ ಏನಕ್ಕೇನೂ ಮಾಡಿಯಾರು ಮಗಳೇ. ಪ್ರೀತಿ ಸತ್ತರೆ ತೊಂದರೆ ಇಲ್ಲ ಮಗಳೇ. ಪ್ರೇಮಿ ಸಾಯಬಾರದು. ನಿನ್ನ ಪ್ರೀತಿಯನ್ನೇ ಕೊಂದು ಬಿಡು ಮಗಳೇ.

ಚಹಾ ತುಂಬಿದ ಲೋಟಗಳ ತಟ್ಟೆಯನ್ನು ಕೈಗೆತ್ತಿಕೊಂಡು ಹೊರಟಳು ಪ್ರಮೋದಾ ಹುಡುಗನನ್ನು ನೋಡಲು.

ನನ್ನ ಪ್ರೀತಿಯನ್ನು ಕೊಲ್ಲಲಾರೆ. ಅಮ್ಮ ಮಾಡಿದ, ಮಗಳು ಕೊಡುವ ಚಹಾವನ್ನು ಕುಡಿದು ಬದುಕಿನ ಸಂಗಾತಿಯನ್ನು ನಿರ್ಣಯ ಮಾಡುವ ಹುಡುಗನೊಡನೆ ಬದುಕುವುದಕ್ಕಿಂತ, ಪ್ರೀತಿಯನ್ನು ಬದುಕಿಸುವುದು ಒಳ್ಳೆಯದು. ಪ್ರೀತಿಯನ್ನು ಬದುಕಿಸಲು ಪ್ರೇಮಿಗಳಿಬ್ಬರೂ ನಾವುಗಳು ಸತ್ತರೆ ಆಯ್ತಲ್ಲ….! ಎಂದು ಯೋಚಿಸುತ್ತಾ ಪ್ರಮೋದಾ ಹುಡುಗನ ಎದುರು ಬಂದು ನಿಂತಳು.

ಚಹಾ ತಗೊಳ್ಳುವಾಗ ಹುಡುಗನ ಮುಖವನ್ನೊಮ್ಮೆ ನೋಡಿದಳು. ಪ್ರಮೋದಾಳಿಗೆ ತನ್ನ ಬದುಕಿನಲ್ಲೇ ಮೊತ್ತ ಮೊದಲ ಬಾರಿಗೆ ಬೇರೊಂದು ಹುಡುಗನ ರೂಪ ಇಷ್ಟ ಆಯ್ತು.

ಆದರೆ ಅದು ತನ್ನ ಪ್ರೀತಿಯನ್ನು ಕೊಂದು ಬದುಕುವಷ್ಟು ಅಲ್ಲ.

ಸೀತಾರಾಮರು ಮತ್ತು ಹುಡುಗನ ತಂದೆಯವರು ಮುಂದಿನ ಸಿದ್ಧತೆಯ ಬಗ್ಗೆ ಮಾತಾಡುತ್ತಿದ್ದರು.

ಮದುವೆಗೆ ದಿನವೂ ನಿಗದಿ ಆಯ್ತು.

ಮದುವೆಯ ದಿನದ ವರೆಗೆ ಪ್ರಮೋದಾ ಅಂಗಳಕ್ಕೂ ಇಳಿಯದಂತೆ ಆಜ್ಞೆಯಾಯ್ತು.

ಊರಿನ ಎರಡು ಜಾತಿಗಳು ಮಾತಾಡುವ ಮಾತುಗಳು ಸೀತಾರಾಮರ ಎರಡು ಕಿವಿಗಳಿಗೂ ಬಿತ್ತು.

ಮದುವೆಯ ಹಿಂದಿನ ದಿನ ಸಂಜೆ ಸೀತಾರಾಮರು ಮಗಳನ್ನು ಕರೆದು ಒಂದು ಗುಟ್ಟು ಹೇಳಿದರು.

ಪ್ರಮೋದಾ ತಂದೆಯ ಮಾತಿಗೆ ತುಂಬಾ ಸಂತೋಷದಿಂದ ಒಪ್ಪಿದಳು.

ರಾತ್ರಿ ಗಂಟೆ ಹತ್ತಾಯ್ತು. ಮದುಮಗಳು ಪ್ರಮೋದಾ ಮನೆಯ ಒಳಗಲ್ಲ ಅಂಗಳದಲ್ಲೂ ಕಾಣಲಿಲ್ಲ.

ಪ್ರಮೋದಾಳ ಅಮ್ಮ ಗಡಿಬಿಡಿಯಾದರು.

ಗಂಡನಿಗೆ ವಿಷಯ ತಿಳಿಸುವಾ ಎಂದು ಸೀತಾರಾಮರನ್ನು ಹುಡುಕಿದರು.

ಇಲ್ಲ ಸೀತಾರಾಮರೂ ಕಾಣಲಿಲ್ಲ…!

ಪ್ರಮೋದಾಳ ಅಮ್ಮ ಸರಸ್ವತಿ ಅಮ್ಮನವರಿಗೆ ಖಚಿತ ಆಯ್ತು…!

ಇನ್ನೇನು ಮಾಡುವುದೆಂದು ಸರಸ್ವತಿಯಮ್ಮ ಮೆಲ್ಲನೇ ಬಾವಿಯತ್ತ ನಡೆದರು.

ಅಷ್ಟರಲ್ಲಿ ಪ್ರಮೋದಾ ಮತ್ತು ಸೀತಾರಾಮರು ಅಂಗಳಕ್ಕೆ ಕಾಲಿಟ್ಟರು.

ನೀನೆಲ್ಲಿಗೆ ಮಾರೈದಿ..? ಬಾ ನಮಗಿಬ್ಬರಿಗೊಂದು ಊಟ ಹಾಕು.

ಇವತ್ತು ನಮ್ಮ ಮಗಳೀಕೆ ನಾಳೆಯಿಂದ ಗಂಡನ ಜೊತೆಗೆ ಊಟ ಮಾಡುವವಳು.

ಸರಸ್ವತಿಯಮ್ಮ ಹಿಂದೆ ಬಂದರು. ತಂದೆ ಮಗಳಿಗೆ ಊಟ ಹಾಕಿದರು.

ಉಂಡು ಮಲಗಿದರು. ಕತ್ತಲೊಂದು ಮುಗಿದು ಹೋಯ್ತು. ಬೆಳಗಾಯ್ತು.

ಪ್ರಮೋದಾಳ ಮದುವೆಯ ದಿಬ್ಬಣ ಹೊರಟು ಹೋಯ್ತು.

ಮದುಮಗಳು ಮಂಟಪ ಸೇರಿದಳು. ಹೂವಿನ ಮಾಲೆ ಮದುಮಗಳ ಕೈ ಸೇರಿತು.

ತಲೆ ತಗ್ಗಿಸಿ ಹೂವಿನ ಮಾಲೆಯನ್ನು ಹಿಡಿದು ನಿಂತಳು ಮದುಮಗಳು ಪ್ರಮೋದಾ.

ತಲೆ ತಗ್ಗಿಸಿ ನೋಡುತ್ತಿದ್ದ ಪ್ರಮೋದಾಳ ಕಣ್ಣಿಗೆ, ಎರಡು ಪಾದಗಳು ಮೆಲ್ಲ ಮೆಲ್ಲನೆ ಹೆಜ್ಜೆಯನ್ನಿಕ್ಕುತ್ತ ಬಂದು ತನ್ನ ಎದುರು ನಿಂತದ್ದು ಕಂಡಿತು.

ಹಿರಿಯ ಪಾದಗಳಂತೆ ಕಂಡವು ಅವು….!

ಅಂದು ಚಹಾ ಕೊಡುವಾಗ ಪಾದ ನೋಡಲಿಲ್ಲ ಮುಖವನ್ನೇ ನೋಡಿದ್ದು.

“ಹಾಕಿ…. ಮಾಲೆ ಹಾಕಿ” ಎಂದು ಪುರೋಹಿತರು ಮಂತ್ರದ ಧಾಟಿಯಲ್ಲೇ ಹೇಳಿದ್ದು ಪ್ರಮೋದಾಳ ಕಿವಿಗೆ ಬಿತ್ತು.

ಮಾಲೆ ಹಾಕಲೆಂದು ಕೈ ಎತ್ತುವ ಮುನ್ನ ಮುಖ ಎತ್ತಿದಳು.

ಪಾದ ಕಂಡ ಮುನುಷ್ಯನ ಮುಖ ಕಂಡಿತು…!

ಅಲ್ಲಾ ಇದು ನಾನು ಅಂದು ಕಂಡ ಮುಖ ಅಲ್ಲ….!
ಹಿರಿಯ ಪದಗಳಂತೆ ಕಂಡದ್ದಲ್ಲ. ಅದು ಹಿರಿಯ ಪಾದವೇ ಹೌದು. ಹಿರಿಯ ಪಾದದ ಮುಖದಲ್ಲೂ ಹಿರಿತನ ಇತ್ತು.

ಅಮ್ಮಾ ಎಂದು ಪ್ರಮೋದಾ ಕುಸಿದು ಬಿದ್ದಳು.

ಮುಹೂರ್ತದ ಸಮಯ ಮೀರುತ್ತಿದೆ. ಬೇಗ ಬೇಗ ಎಂದು ಪುರೋಹಿತರು ಮಂತ್ರ ಹೇಳುತ್ತಲೇ ಇದ್ದರು.

ಮಗಳ ಮುಖಕ್ಕೆ ನೀರು ಚುಮುಕಿಸಿ ಸರಸ್ವತಿಯಮ್ಮನವರು ಮಗಳನ್ನು ಉಪಚರಿಸಿದರು, ಎಚ್ಚರಿಸಿದರು.

ಕಣ್ಣು ತರೆದ ಪ್ರಮೋದಾ ಒಮ್ಮೆ ಸುತ್ತ ನೋಡಿದಳು.

ಯಾರೋ ಇಬ್ಬರು ಅಪರಿಚಿತರು ತನ್ನ ಹತ್ತಿರವೇ ನಿಂತಂತಾಗಿತ್ತು. ಅವರ ಸೊಂಟದಲ್ಲಿ ನೇತಾಡುತ್ತಿದ್ದ ಪಿಸ್ತೂಲುಗಳು ಕಂಡವು
ಅಮ್ಮ ಮಗಳ ಭುಜವನ್ನು ಅಮುಕಿದರು.
ಮಗಳು ಎದ್ದು ನಿಂತು ಮಾಲೆ ಹಾಕಿದಳು.
ಅಷ್ಟರಲ್ಲಿ ಹೊರಗಿನಿಂದ ನಾಗೇಂದ್ರನ ಅಣ್ಣ ಒಂದು ತಲವಾರು ಹಿಡಿದುಕೊಂಡು “ಏಯ್ ಸೀತಾರಾಮಾ” ಎಂದು ಬೊಬ್ಬಿಡಿತ್ತಾ ಮಂಟಪದತ್ತ ಓಡಿಬರುವುದು ಕಂಡಿತು.

ಅರೆ ಕ್ಷಣದಲ್ಲಿ ಒಂದಷ್ಟು ಪಿಸ್ತೂಲಿನ ಗುಂಡುಗಳು ಆಕಾಶದತ್ತ ಮುಖಮಾಡಿ ಹಾರಿತು.

ನಾಗೇಂದ್ರನ ಅಣ್ಣನ ಸುತ್ತು ಜನ ಸೇರಿದರು.

“ಹಾಕು ಮಗಳೆ ಹಾಕು .. ಹಾರ ಹಾಕು”

ಪ್ರಮೋದಾ ಹಾರ ಹಾಕಿದಳು, ಆತ ಕರಿಮಣಿ ಕಟ್ಟಿದ. ಮದುವೆ ಆಗಿಯೇ ಹೋಯ್ತು.

ಪ್ರಮೋದಾ ಕಾಯುತ್ತಾ ಇದ್ದಳು….! ರಾತ್ರಿ ಅಪ್ಪ ಹೇಳಿದಂತೆ ಆಗುವ ಆ ಒಂದು ಕ್ಷಣಕ್ಕಾಗಿ.

ಕಲ್ಯಾಣ ಮಂಟಪದಿಂದ ಮದುಮಗ ಮದುಮಗಳಿಬ್ಬರೂ, ಮದುಮಗಳ ಮನೆಯಕಡೆಗೆ ಹೊರಟರು.

ಪ್ರಮೋದಾ ಕಾಯುತ್ತಾ ಇದ್ದಳು….! ರಾತ್ರಿ ಅಪ್ಪ ಹೇಳಿದಂತೆ ಆಗುವ ಆ ಒಂದು ಕ್ಷಣಕ್ಕಾಗಿ.

ರಾತ್ರಿ, ಅಪ್ಪ ನನ್ನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದೇ ರೇವತಿಯ ಮನೆಯ ಹತ್ತಿರ. ರೇವತಿಯ ಹತ್ತಿರ ಹೇಳಿದಂತೆ, ನಾಗೇಂದ್ರನನ್ನು ಕರೆಸಿ ಅಪ್ಪ ಮಾತಾಡುವುದು. ಮದುವೆ ಆಗಿ ಸಂಜೆ ಮನೆಗೆ ಬರುತ್ತಿದ್ದಂತೆ ನಮ್ಮ ಮನೆಯ ಹಿಂದೆ ಇರುವ ಕಾಡಿನ ದಾರಿಯಲ್ಲಿ ನಾಗೇಂದ್ರ ಮತ್ತು ನಾನು ಓಡಿ ಹೋಗಿ ರಸ್ತೆ ಸೇರಿದರೆ ಆಯ್ತು. ತಂದೆಯವರೇ ಅಲ್ಲೊಂದು ಗಾಡಿಯ ವ್ಯವಸ್ಥೆ ಮಾಡಿರುತ್ತಾರೆ. ಅಲ್ಲಿಂದ ಊರು ಬಿಟ್ಟು ಹೋಗಿ ಬದುಕುವುದು. ಇದನ್ನು ಮೊನ್ನೆ ನನ್ನನ್ನು ನೋಡಲು ಬಂದ ಮದುಮಗನಲ್ಲೂ ಮಾತಾಡಿ ಎಲ್ಲಾ ವ್ಯವಸ್ಥೆ ಮಾಡಿದ್ದೇನೆ ಅಂದಿದ್ದರು. ಆದರೆ ಇಲ್ಲಿ ನೋಡಿದರೆ ಮದುಮಗನೇ ಬೇರೆ. ಏನು ಆಗಿದೆಯೋ ಏನೋ. ಯೋಚಿಸುತ್ತಾ ಕುಳಿತು ಸಾಗುತ್ತಿದ್ದಂತೆ ಕಾರು ಮದುಮಗಳ ಮನೆಯ ಹತ್ತಿರ ತಲುಪಿತು.

ಮದುಮಗಳು ಪ್ರಮೋದಾ ಕಾರಿನಿಂದ ಇಳಿದವಳೇ ತಲೆಗೂದಲನ್ನು ಸರಿ ಮಾಡಿಕೊಳ್ಳುವ ನೆಪದಿಂದ ಅಲ್ಲೇ ಚೂರು ನಿಂತು, ನಾಗೇಂದ್ರನ ಮನೆ ಇರುವ ಕಡೆ ನೋಡಿದಳು.
ನಾಗೇಂದ್ರನ ಮನೆಯೇ ಕಾಣಲಿಲ್ಲ…!

ದಟ್ಟವಾದ ಹೊಗೆಯೊಂದು ಆಕಾಶವನ್ನು ಸೇರುವಾಸೆಯಿಂದ ನಿಧಾನಕ್ಕೆ ಮೇಲೇರುತ್ತಾ ಇತ್ತು.

ಮೇಲೇರುತ್ತಿರುವ ಹೊಗೆಯೆಡೆಯಲ್ಲಿ ಅಸ್ಪಷ್ಟವಾಗಿ ಮನೆ ಕಾಣಲಾರಂಭಿಸಿತು.

ಓಡಿಬಂದಳು…, ಪ್ರಮೋದಾಳ ಗೆಳತಿ ರೇವತಿ. ಪ್ರಮೋದಾಳನ್ನು ಅಪ್ಪಿಕೊಂಡು ಅತ್ತಳು.

“ಪ್ರಮೋದಾ…. ನಾವು ನಿನ್ನೆ ಮಾತಾಡಿದಂತೆ ಯಾವುದೂ ಆಗಲಿಲ್ಲ ಪ್ರಮೋದಾ. ನಿನ್ನ ಅಪ್ಪ ಹೇಳಿದಂತೆ ನೀನೂ ಕೆಲಸ ಮಾಡಿದೆ. ನಿನ್ನ ಅಪ್ಪ ಹೇಳಿದಂತೆ ನಾನೂ ಕೆಲಸ ಮಾಡಿದ್ದೆ. ಆದರೆ ನಿನ್ನ ಅಪ್ಪ ಮಾತ್ರ ಅವರು ಹೇಳಿದಂತೆ ಕೆಲಸ ಮಾಡಲೇ ಇಲ್ಲ. ಇಲ್ಲ ಪ್ರಮೋದಾ ನಿನ್ನ ಅಪ್ಪ, ಅಪ್ಪನೇ ಅಲ್ಲ. ಅವ ರಾಕ್ಷಸ…!”

“ಏನಾಯ್ತು ರೇವತಿ, ನನ್ನ ನಾಗೇಂದ್ರ ಈಗ ಎಲ್ಲಿದ್ದಾನೆ.”

ಅಲ್ಲಿ ನೋಡು ಪ್ರಮೋದಾ…, ನೋಡು ಅಲ್ಲಿ, ನಿನ್ನ ಅಪ್ಪ ಮತ್ತು ನಿನ್ನ ಗಂಡನ ಮುಖದಲ್ಲೊಂದು ಗೆಲುವಿನ ನಗು ನೋಡು.

ತನ್ನ ಗಂಡನಲ್ಲದ ಗಂಡು ಮತ್ತು ಅಪ್ಪ ನಿಂತಿರುವ ಕಡೆಗೆ ತಿರುಗಿದಳು.

ಅವರಿಬ್ಬರೂ ಪ್ರಮೋದಾ ಮತ್ತು ರೇವತಿಯನ್ನೇ ನೋಡುತ್ತಿದ್ದರು.

ಇಬ್ಬರ ಮುಖದಲ್ಲೂ ಒಂದು ನಗು, ಅದು ಅಸಹ್ಯ ನಗು…!

ಪ್ರಮೋದಾ ನಿನ್ನೆ ರಾತ್ರಿ ನೀನು ನಮ್ಮ ಮನೆಯ ಹತ್ತಿರ ಬಂದು ಕರೆದಾಗ, ನಾನು ಆತಂಕದಲ್ಲೇ ಹೊರಗೆ ಬಂದೆ. ಆದರೆ ನಿನ್ನ ಅಪ್ಪ ಮಾತಾಡಿದಾಗ ಒಂದು ರೀತಿಯಲ್ಲಿ ಸಮಾಧಾನ ಆಯ್ತು. ಆದರೆ ಇದೆಲ್ಲಾ ಬದುಕಿನಲ್ಲಿ ಸಾಧ್ಯವಾ ಅಂತ ಅಂದುಕೊಂಡೇ ನಾನು ನಾಗೇಂದ್ರನ ಮನೆಗೆ ಹೊರಟೆ.

ನಿನ್ನ ಅಪ್ಪ ಹೇಳಿದಂತೆ ನಾಗೇಂದ್ರನಲ್ಲಿ ಹೇಳಿ, ಅದರ ಬಗ್ಗೆ ಮಾತಾಡಲು ನಿನ್ನ ಅಪ್ಪ ಹೇಳಿದ ಜಾಗಕ್ಕೆ ನಾಗೇಂದ್ರನನ್ನು ಬರಲು ಹೇಳಿದ್ದು.

ನಾಗೇಂದ್ರನ ಮುಖದಲ್ಲಿ ಮೂಡಿದ ಉತ್ಸಾಹದ ನಗುವನ್ನು ಕಂಡು ನನ್ನ ಸಂತೋಷವೇ ಕಣ್ಣಲ್ಲಿ ನೀರಾಗಿ ಇಳಿಯಿತು ಪ್ರಮೋದಾ.

ನಾಗೇಂದ್ರ ನಿನ್ನ ಅಪ್ಪನನ್ನು ಭೇಟಿಯಾಗಲೆಂದು ಚಪ್ಪಲಿಯೊಳಗೆ ತನ್ನ ಪಾದಗಳನ್ನು ತುರುಕಿಸಿದ.

ಆದರೆ ನಿನ್ನ ಅಪ್ಪ ಮಾಡಿದ್ದು… ನೋಡು…!

ಪ್ರಮೋದಾ ನಾಗೇಂದ್ರನ ಮನೆಯ ಕಡೆಯಿಂದ ಹೊರಟ ದಟ್ಟವಾದ ಹೊಗೆ ನಿನ್ನ ಮನೆಯಕಡೆಗೊಮ್ಮೆ ತಿರುಗಿ ಆಕಾಶದ ಕಡೆಗೆ ಹೋಗುತ್ತಿದೆ.

ಪ್ರಮೋದಾ… ನಾಗೇಂದ್ರ ನಿನ್ನೆ ರಾತ್ರಿಯೇ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಅಂತ ಇವತ್ತು ಊರೆಲ್ಲಾ ಸುದ್ದಿ..!
ಆದರೆ ಮೈ ಮೇಲೆ ಸುಮಾರು ಗಾಯ ಇತ್ತಂತೆ… ಅಂತ ಕೊರಗುತ್ತಿದ್ದಾರೆ ಪ್ರಮೋದಾ.

ನಿನಗೆ ನಾಗೇಂದ್ರನ ಮೇಲೆ ಇರುವ ಪ್ರೀತಿಯ ವಿಷಯ, ನಿನ್ನನ್ನು ನೋಡಲು ಬಂದ ಹುಡುಗನಿಗೆ ಗೊತ್ತಾಗಿತ್ತಂತೆ.

ಅದಕ್ಕೆ ಈಗ ಈ ಹೆಂಡತಿ ಸತ್ತ ಎರಡು ಮಕ್ಕಳ ತಂದೆಯನ್ನು ನಿನಗೆ ಕಟ್ಟಿರುವುದು ಪ್ರಮೋದಾ.

ಗಾಳಿಯಲ್ಲಿ ಸೇರಿರ ಬಹುದಾದ ನಾಗೇಂದ್ರನ ಹೊಗೆಯನ್ನು ಉಸಿರಾಡಿದಳು ಪ್ರಮೋದಾ.

ಈಗಷ್ಟೇ ಮದುವೆಯಾದ ತನ್ನ ಗಂಡನ ಎರಡು ಮಕ್ಕಳನ್ನು ತಬ್ಬಿಕೊಂಡಳು.

🌻🌹🌻🌹🌻🌹🌻