🌺🦋🌺🦋🌺🦋🌺
ಅಮ್ಮಾ ನೀನೇಕೆ ಅಮ್ಮನಾಗದೆ ಹೋದೆ?
🌺🦋🌺🦋🌺🦋🌺
ಅಮ್ಮ ನಾನು ಬೆಣ್ಣೆ ಕದ್ದೆನಮ್ಮ. ಮಣ್ಣು ತಿಂದೆನಮ್ಮ
ಹೌದಮ್ಮ ನಾನು ಮಣ್ಣೇ ತಿಂದೆನಮ್ಮ
ನೀನು ನನ್ನ ಬಾಯಿ ಬಿಡಿಸಲಿಲ್ಲಮ್ಮ. ನಾನು ಬಾಯಿ ಬಿಟ್ಟಾಗ ಕಾಣುವ ನನ್ನ ಕರಾಳ ವಿಶ್ವದ ರೂಪವನ್ನು ನೋಡುವ ಸಾಮರ್ಥ್ಯ ನಿನ್ನಲ್ಲಿಲ್ಲವೆಂದು ತಾನೇ ನೀನು ನನ್ನ ಬಾಯಿ ಬಿಡಿಸದೆ ನನ್ನನ್ನೇ ಬಿಟ್ಟು ಹೋಗಿದ್ದು.
ಅಮ್ಮ ನೀನು ಯಶೋದೆಯಾಗಲಿಲ್ಲ...! ಯಾಕೆ...? ಹೌದು ನಾನು ಕೃಷ್ಣನಾಗಲು ಸಾಧ್ಯವೇ?
ಸಾವಿಲ್ಲದ ಮನೆಯಿಂದ ಸಾಸಿವೆ ತರಲು ಸಾಧ್ಯವಿಲ್ಲ ಎಂದರಿತ ಬುದ್ಧ ಬೆಳಗಾಗಬಹುದಾದ ಆ ಕತ್ತಲಲ್ಲೇ ತನ್ನ ಮನೆಯಲ್ಲಿದ್ದ ಸಾಸಿವೆಯನ್ನು ಚೆಲ್ಲಿ ಹೊರ ನಡೆದು ಹೋದ.
ಅವನೇನೋ ಆಸೆಯನ್ನು ಬಿಟ್ಟು ಸುಖಿಯಾಗಲು ಹೋದ.
ಆದರೆ ಬುದ್ಧ ಚೆಲ್ಲಿ ಹೋದ ಆ ಸಾಸಿವೆಯನ್ನು ಹೆಕ್ಕುತ್ತಾ ಸಾವಿನಂತಹ ಆ ಮನೆಯಲ್ಲಿ ತನ್ನ ಬದುಕಿಗೆ ಒಗ್ಗರಣೆ ಹಾಕಬೇಕಾದ ಅವನ ಹೆಂಡತಿಯ ಆಸೆಗೆ ಯಾರು ಕಿವಿಯಾಗಬೇಕಮ್ಮ.
ಸಾವೇ ಇಲ್ಲದ ನನ್ನ ತಪ್ಪುಗಳು ನನ್ನಲ್ಲೇ ಮನೆ ಮಾಡಿಯಾಗಿತ್ತು. ನನ್ನದು ಸಾವಿರುವ ಮನೆಯ ಸಾಸಿವೆಯ ಮನಸ್ಸಾಗಿ ಹೋಯ್ತು. ನಿನ್ನದು ಬುದ್ಧನ ದಾರಿ ಹಿಡಿದ ಮನಸ್ಸಾಗಿ ಹೋಯ್ತು.
ಅಮ್ಮ ನಾನು ನನ್ನ ಅಮಲಿನ ತೊಟ್ಟಿಲಲ್ಲೆ ಇದ್ದೆನಮ್ಮ.
ಎಚ್ಚರಗೊಂಡಾಗ ನೀನಿರಲಿಲ್ಲ.
ಅಮ್ಮ ಒಂದು ವೇಳೆ ಎಚ್ಚರ ತಪ್ಪುವ ಆ ಚಿರ ನಿದ್ದೆಯೇ ಬಂತೆಂದರೆ ನೀ ಮತ್ತೆ ಬರುವೆಯಾ..!
ಬಂದು ಬರಿದಾದ ಸೂತಕದ ತೊಟ್ಟಿಲನು ಬಿಚ್ಚಿಡುವೆಯಾ....?
ಅಮ್ಮ ನಿಜವಾಗಿಯೂ ಎಚ್ಚರಗೊಂಡಿದ್ದೇನೆ. ಎಚ್ಚೆತ್ತುಕೊಂಡಿದ್ದೇನೆ. ಇನ್ನೆಂದೂ ನಿದ್ದೆ ಬಾರದಂತೆ ಎಚ್ಚರಗೊಂಡಿದ್ದೇನೆ.
ಒಮ್ಮೆ ಬಂದು ಬಿಡಮ್ಮ.
ತೊಟ್ಟಿಲಿಗೆ ಹತ್ತಿಸಿದವಳು ನೀನೇ ಅಲ್ವಮ್ಮ.
ಈಗ ತೊಟ್ಟಿಲಿಂದ ಇಳಿಯೊದಾದರು ಹೇಗೆ.
ಹಾರಿದರೆ ಉಳಿದೀತೆ ಸೊಂಟ.
ಹ್ಹಾಂ… !
ಹಾರಾಡಿದ್ದು ಸಾಕೆಂದೇ....? ಇಳಿಯಲಾರದಷ್ಟು ಎತ್ತರದ ತೊಟ್ಟಿಲಿಗೇರಿಸಿ ಹೊರಟೇ ಹೋದೆಯ ತಾಯಿ.
ಅಮ್ಮ ನೀ ಹೊರ ಹೋಗುವಾಗ ಮುಚ್ಚಿದ ಬಾಗಿಲ ಚಿಲಕ ತೆಗೆಯುವಾಗ ಆ ಚಿಲಕ ಮಾತಾಡದಂತೆ ಅದರ ಕತ್ತನ್ನು ಬಿಗಿ ಹಿಡಿದಿದ್ದೆಯಂತೆ ಹೌದೆ?
ಹೌದು ನಾನು ಎಚ್ಚರಗೊಂಡರೆ ನಿನ್ನ ಹಿಡಿದಿಟ್ಟು ಕೊಳ್ಳುವೆನೆಂದಲ್ಲವೇ....?
ಅಮ್ಮ ಹೇಗಮ್ಮ ಎಲ್ಲವನ್ನು ತೊರೆದು ಹೋಗುವ ವೈರಾಗ್ಯದ ಕ್ರೂರತೆ ನಿನಗೆ ಬಂದಿದ್ದು.... ಹೇಗಮ್ಮ?
ಅಂದು ಬುದ್ದನಿಗೂ ಇದೇ ವೈರಾಗ್ಯದ ಕ್ರೂರತೆ ಬಂದಿದ್ದಾ…?
ಚಿಲಕ ತೆಗೆದ ಮೇಲೆ ಬಾಗಿಲು ತೆಗೆಯುವಾಗ, ಬಾಗಿಲ ಬಾರವನ್ನು ಹೊತ್ತ ಬೀಜಾಗ್ರದ ಭಾರವನ್ನು ನೀನೇ ಹೊತ್ತು ಬಾಗಿಲನ್ನು ಎತ್ತಿ ತೆಗೆದೆಯಂತೆ ಹೌದಾ…? ನಾನು ಬೀಜಾಗ್ರವನ್ನು ನೋಡಿದಾಗ ಅದರ ನಾಲಗೆಯಲ್ಲಿ ಎಣ್ಣೆಯ ಪಸೆ ಅರಿಯುತ್ತಿತ್ತು. ಪಾಪ ಅದರ ನಾಲೆಗೆ ಹೊರಳದಂತೆ ಎಣ್ಣೆ ಅಂಟಿತ್ತು. ಇಲ್ಲದೇ ಇದ್ದರೆ ನೀನು ಹೊರಗೆ ಹೋಗುವಾಗ ಅದಾದರೂ ನನ್ನನ್ನು ಕರೆಯುತ್ತಿತ್ತು.
ಅಮ್ಮ ನೀವು ಮನೆಯಿಂದ ಹೊರಗೆ ಹೋಗುವಾಗ ಬಾಗಿಲ ಕಡೆಗೆ ನೋಡಿಲ್ವಾ.....!
ತಪ್ಪೊಪ್ಪಿಕೊಂಡ ಕಂದನ ಬಿಟ್ಟು ಹೋಗಬೇಡಮ್ಮ ತಾಯಿ.
ತಾಯಿ ಮನಸ್ಸು ಮಾಡಿದರೆ ಆಕೆಗೆ ಇನ್ನೊಂದು ಮಗುವಾಗ ಬಹುದು. ಆದರೆ ಮಗುವಿಗೆ ಇನ್ನೊಂದು ತಾಯಿ ಸಿಗುವುದುಂಟೆ ಈ ಜಗದಲ್ಲಿ.
ಅಮ್ಮ ತಪ್ಪಾಗಿದೆ. ತಪ್ಪನ್ನೊಪ್ಪಿಕೊಂಡಿರುವೆ. ಶಿಕ್ಷೆಯನ್ನು ನಿಮ್ಮೆದೆರೇ ಅನುಭವಿಸುವ ಅವಕಾಶ ಕೊಡಿ. ಕೊರಗಿ ಕೊರಗಿ ನಿನ್ನ ಬೇಡುತಿಹುದು ತಾಯಿ. ಬಂದು ಬಿಡು.
ಹ್ಹೂಂ ನನ್ನ ಮಗುವಿಗೆ ಅಮ್ಮ ಆಗಬೇಕಾದ ನಿನ್ನನ್ನು ಅಮ್ಮ ಅಂತನೇ ಹೇಳ್ತಾ ಇದ್ದೆ-ನಲ್ಲ...?
ಅಮ್ಮಾ ನನಗೆ ಅಮ್ಮ ಆಗಿದ್ದವಳು ನೀನು. ನನ್ನ ಮಗುವಿಗೆ ಅಮ್ಮ ಆಗುವುದಕ್ಕಿಂತ ಮುಂಚೆ ಹೊರಟೇ ಹೋದೆಯಲ್ಲ ತಾಯಿ.
"ನೀನು ಬಿಡಪ್ಪ, ನೀನು ಸಕಲ ಕಲಾವಲ್ಲಭ ನೀನು" ಅಂತ
ಮಾತಿನ ಮಧ್ಯೆ ಗೆಳೆಯನೊಬ್ಬ ನನ್ನನ್ನು ಕುರಿತು ಹೇಳುತ್ತಿದ್ದ.
ಸಕಲ ಕಲಾ ವಲ್ಲಭನಂತೆ....!
ಹ್ಹೂಂ ಎಷ್ಟೊಂದು ಚುಚ್ಚುತಾ ಇದೆ ಗೊತ್ತಾ ಈ ಮಾತು.
ನಿನಗೊಬ್ಬಳಿಗೇ ವಲ್ಲಭನಾಗಿ ಉಳಿಯಲಾರದೆ ತಿರಸ್ಕೃತನಾದ ಮೇಲೆ ಅದ್ಯಾವ ಕಲೆಗೆ ವಲ್ಲಭನಾಗುವ ಗಂಡಸುತನ ನನ್ನಲ್ಲಿ ಉಳಿದೀತು.
ಹೋದೆಯಲ್ಲ ಬರುವ ಮನಸ್ಸು ಮಾಡದೇ ದೂರ ನಿಂತೆಯಲ್ಲ.
ಅಮ್ಮ ನಾನು ಇಲ್ಲದೆ ನೀನು ಅಮ್ಮ ಆಗುವುದಕ್ಕೆ ಸಾಧ್ಯನಾ.....?
ಅಥವಾ
ನನಗಲ್ಲದೆ, ನಾನಿಲ್ಲದೆ ನೀನು ಅಮ್ಮನಾಗುವೆ ಎಂದು ಹೊರಟೆಯಾ ತಾಯಿ..?
ಹಾಗಾದರೆ..!
ಅಮ್ಮ ನೀನಿಲ್ಲದ ಮೇಲೆ ನಾನ್ಯಾಕೆ..?
ಅಮ್ಮಾ ನೀ ನಿಲ್ಲದ ಮೇಲೆ ನಾ ನಿಲ್ಲಲ್ಯಾಕೆ...?
ಕಾಯುತ್ತಿರುವೆನೆಂದು ಹೇಳಲೇ ಕಾದು ಕಾದು ಕಾದು ಹೋದರೆ ಸೀದು ಹೋಗುವುದಲ್ಲಾ.
ಬೇಯುವವರೆಗೆ ಕಾಯಲಾರದೆ ಕಾದು ಕಾದಾಡಿದವರು ನಾವು.
ಆದರೂ ಕಾಯಬೇಕಂತೆ...!
ಕೊತ ಕೊತ ಕುದಿಯುವ ಎಣ್ಣೆಗೆ ಇಣುಕಿದರೆ ಮುಖದ ಪ್ರತಿಬಿಂಬ ಕಾಣುವುದಿಲ್ಲವಂತೆ.
ಕಾಯುತ್ತಿರುವ ಎಣ್ಣೆ ಆರುವವರೆಗೆ ಕಾಯಬೇಕಂತೆ. ತಣ್ಣಗಾದ ಮೇಲೆ ಇಣುಕಿದರೆ ಮುಖ ಕಾಣುತ್ತದೆಯಂತೆ.
ಕನ್ನಡಿಯಲ್ಲಿಯೂ ನೋಡಲಾಗದ ಈ ಮುಖವನ್ನು ಕಾದ ನೀನು ತಣ್ಣಗಾಗುವವರೆಗೆ ಕಾಯಬೇಕ ನಿನ್ನಲ್ಲಿ ನನ್ನನ್ನು ನೋಡಲು.
ಕುದಿಯುತ್ತಿರುವ ಎಣ್ಣೆ ಆರೀತೆಂದು ಕಾಯುತ್ತಾ ಕುಳಿತೆರೆ ಪೂರ್ತಿ ಆವಿಯಾಗಿ ಹೋದೀತೆಂಬ ಅಭದ್ರತೆಯಿಂದ ಉರಿಯನ್ನು ತಣಿಸಲೆಂದು ಬಳಿ ಬಂದರೆ ಸುಟ್ಟೇ ಬಿಟ್ಟೆಯಲ್ಲಮ್ಮಾ.
29-02-2016
💈ಸುಧಾಕರ ಜೈನ್ ಹೊಸಬೆಟ್ಟು ಗುತ್ತು
☮☮☮☮☮☮☮☮☮