🐣🦅🐣🦅🐣🦅🐣🦅
ಮೊಟ್ಟೆಗೆ ರೆಕ್ಕೆ ಬಂದಿತ್ತು
🐣🦅🐣🦅🐣🦅🐣🦅
ಸುಧಾಕರ ಜೈನ್ ಹೊಸಬೆಟ್ಟು ಗುತ್ತು
09/06/2019
ತಾನಿಟ್ಟ ಮೊಟ್ಟೆಗೆ ಹಕ್ಕಿಯೋರ್ವಳು ಕಾವುಕೊಡುತ್ತಿದ್ದಳು.
ಮರಗಳ ಗೆಲ್ಲುಗಳೆಡೆಯಲ್ಲಿ ನೀಲಿಯಾಕಾಶವನ್ನು ಹುಡುಕುತ್ತಾ ಕಾವುಕೊಡುತ್ತಿದ್ದಳು.
ತನ್ನ ತನುವಿಗೆ ಕಾವುಕೊಟ್ಟು ಕಾವನ್ನೇರಿಸಿದ ತನ್ನಿನಿಯ ಹಾರಿಬರುವುದನ್ನು ಕಾಯುತ್ತಾ ಕಾಯುತ್ತಾ ಕಾವಾಗಿ ಕಾವು ಕೊಡುತ್ತಿದ್ದಳು.
ಕಾದು ಕಾದು ಬರದಿರುವ ಇನಿಯನ ಬರಿದಾದ ದಾರಿಯಲಿ ಹಾರಿಹೋದಳು.
ಹೊರಬಂದ ಮೊಟ್ಟೆಯನ್ನು ಗೂಡಲ್ಲಿ ಬಿಟ್ಟು ಒಳಗಿರುವ ಮೊಟ್ಟೆಯನ್ನು ಹೊಟ್ಟೆಯೊಳಗೇ ಇಟ್ಟುಕೊಂಡು ಹಾರಿಹೋದಳು.
ಬರಿದಾದ ದಾರಿಯಲಿ ಬರೆದೇ ಇರುವ ಇನಿಯನ ಹುಡುಕಿ ಹುಡುಕಿ ಬರಿದಾಗಿ ಹಾರಿಹೋದಳು.
ಗೂಡು ಸೇರುವ ಮುಂಚೆ ಗೂಡಿನ ಪಕ್ಕದಲ್ಲಿರುವ ಗೆಲ್ಲಮೇಲೊಮ್ಮೆ ಕುಳಿತು ಮತ್ತದೇ ಬರಿದಾದ ದಾರಿಯಲ್ಲಿ ತುಂಬಿ ಬರಬಹುದಾದ ಇನಿಯನಿಗಾಗಿ ಕಾಯುತ್ತ ಕತ್ತು ಹೊರಳಿಸಿದಳು.
ಹೊರಳಿದ ಕತ್ತಿಗೆ ಗೂಡು ಕಂಡಿತು
ಕಂಡಿತು ಗೂಡಲ್ಲಿ ಕಂಡಿತು, ತನ್ನ ಮೊಟ್ಟೆಗೆ ರೆಕ್ಕೆ ಬಂದಂಗೆ ಕಂಡಿತು...!
ತಾನಿಟ್ಟ ಮೊಟ್ಟೆಯಿಂದ ತನಗಿಂತಲೂ ದೊಡ್ಡದಾದ ರೆಕ್ಕೆ ಬರುವುದಕ್ಕುಂಟೇ ಎಂದು ಭಯದಿ ಬಡಿಯುತ್ತಿರುವ ಹೃದಯಕ್ಕೇ ತನ್ನ ರೆಕ್ಕೆಯನ್ನು ಬಡಿಯುತ್ತಾ ಗೂಡಿನ ಬಳಿ ಹಾರಿದಳಾಕೆ.
ಗೂಡಲ್ಲಿದ್ದ ದೊಡ್ಡ ರೆಕ್ಕೆಯೊಂದು ಎರಡಾಗಿ ಕಂಡು ಹಾರಿಹೋಯ್ತು.
ತನ್ನ ತನುವಿನಿಂದ ಕಾವು ಪಡೆದಿದ್ದ ಆ ಮೊಟ್ಟೆ ಒಡೆದು ಹೋಗಿತ್ತು.
ದೊಡ್ಡ ರೆಕ್ಕೆಯ ಆ ಹಕ್ಕಿಯ ಕೊಕ್ಕಿನಲ್ಲಿ ತನ್ನ ಮೊಟ್ಟೆಯೊಳಗಿನ ಹಳದಿ ರಸವು ಅಂಟಿಕೊಂಡಿತ್ತು.
ತುಂಬಿಕೊಂಡಿದ್ದ ಮೊಟ್ಟೆ ಬರಿದಾಗಿ ಹೋಗಿತ್ತು.
ಬಸಿರೊಡುದುಕೊಂಡ ಬರಿದಾದ ಮೊಟ್ಟೆ ಅಂಗಾತವಾಗಿ ಮಲಗಿಕೊಂಡಿತ್ತು.
ಗೂಡಲ್ಲಿ ಕುಳಿತು ಉಸಿರಾಡಿದಾಗ ಒಳ ಹೋಗುವ ಉಸಿರಲ್ಲೆಲ್ಲಾ ದೊಡ್ಡರೆಕ್ಕೆಯ ಹಕ್ಕಿಯ ವಾಸನೆಯೇ ಒಳ ಹೋಗಿ ಕರುಳಿಗೇ ಕುಕ್ಕುತ್ತಿತ್ತು.
ಕುಕ್ಕತ್ತಿತ್ತು ಕುಕ್ಕುತ್ತಿತ್ತು ಕುಕ್ಕುತ್ತಲೇ ಇತ್ತು
ತಾನು ತನ್ನಿನಿಯನ ಜೊತೆಯಾಗಿ ಕಟ್ಟಿದ ಗೂಡು ಹರಿದು ಹರಿದು ಹೋಗುವವರೆಗೂ ಕುಕ್ಕುತ್ತಲೇ ಇತ್ತು.
ಗೂಡೆಲ್ಲಾ ಹರಿದ ಹೋದ ಮೇಲೆ ಅದೇ ಗೆಲ್ಲಿನ ಮೇಲೆ ಕುಳಿತು ತನ್ನ ಗರ್ಭದಲ್ಲಿದ್ದ ಕೊನೆಯ ಮೊಟ್ಟೆಯನ್ನು ಕೊನೆಯಾಗಿಸಿತು.
ಕೆಳಗೆ ಬಿದ್ದು ಒಡೆದು ಹೋದ ಬಿಳಿ ಮೊಟ್ಟೆಯ ತುಂಬೆಲ್ಲಾ ಕಪ್ಪಿರುವೆ ತುಂಬಿಕೊಂಡಿತು.
ಮೊಟ್ಟೆಯ ಪಸೆಯೆಲ್ಲಾ ಬರಿದಾದ ಮೇಲೆ ಸಾಗಿತು ಇರುವೆ ಸಾಲು ಪಕ್ಕದಲ್ಲಿ ಬಿದ್ದಿದ್ದ ಕಾವು ಆರಿ ಹೋದ ಹಕ್ಕಿಯನ್ನು ತಿನ್ನಲೆಂದು.
🧵 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.
09/06/2019