Saturday, March 24, 2018

ಬೆನ್ನಿನ ಮೇಲೆ ಗ್ರೀಸಿನ ಮೂರು ಗೆರೆಗಳು.

💈 ಬೆನ್ನಿನ ಮೇಲೆ ಗ್ರೀಸಿನ ಮೂರು ಗೆರೆಗಳು.
💈 

🚏 23/03/2018

🏀 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.


ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ಬೈಕಲ್ಲಿ ಬರ್ತಾ ಇದ್ದೆ. ಗಂಟೆಗೆ 40ಕಿಲೋ ಮೀಟರ್ ನ ಸ್ಪೀಡನಲ್ಲಿದ್ದ  ಬೈಕನ್ನು ಓವರ್ ಟೇಕ್ ಮಾಡಿ ಹೋಗುತ್ತಿದ್ದ ವಾಹನಗಳೆಲ್ಲವೂ ಮರು ಕ್ಷಣದಲ್ಲಿ ಮಾಯವಾಗುತ್ತಿದ್ದವು.

ಊರಲ್ಲಿ ಜೋರಾಗಿ ಮಳೆ ಬಂದಾಗ, ಮನೆಯ ಮುಂದಿನ ಕಿರು ನದಿಯ ದಂಡೆಯಲ್ಲಿರುವ ಕಲ್ಲಿನ ಮೇಲೆ ಕುಳಿತುಕೊಳ್ಳುತ್ತಿದ್ದೆ.  ಹರಿದು ಹೋಗುತ್ತಿದ್ದ ನೀರನ್ನೇ ನೋಡುತ್ತಾ ಇದ್ದೆ. ಅಲ್ಲೂ ಹೀಗೆ, ನೀರಲ್ಲಿ ತೇಲಿಕೊಂಡು ಬರುವ ತೆಂಗಿನ ಕಾಯಿಯೋ ಮರದ ದಿಮ್ಮಿಯೋ ನೋಡು ನೋಡುತ್ತಿದ್ದಂತೆ ವೇಗವಾಗಿ ನೀರಿನೊಡನೆ ಹರಿದು ಹೋಗುತ್ತಲೆ ಇದ್ದವು.

ಬೆಂಗಳೂರಿನ ಅಂತರರಾಷ್ಟ್ರೀಯ ರಸ್ತೆಯ ಬದಿಯ ಎತ್ತರದಲ್ಲಿ ಕುಳಿತು ನೋಡಿದರೆ, ಊರಿನ ತೋಡು ನೆನಪಾಗುತ್ತದೆ.

ಅಲ್ಲೂ ಹರಿಯುತ್ತದೆ. ಇಲ್ಲೂ ಹರಿಯುತ್ತದೆ.

ಎಡವಿ ಹರಿತಕ್ಕೆ ಸಿಕ್ಕಿಕೊಂಡರೆ

ಅಲ್ಲಿ ಕೊಚ್ಚಿಕೊಂಡು ಹೋಗುತ್ತದೆ. ಇಲ್ಲಿ ಹರಿದು ಹರಿದು ಹರಿದುಕೊಂಡೇ ಹೋಗುತ್ತದೆ.

ಅಲ್ಲಿಯಾದರೂ ಈಜಬಹುದು. ಇಲ್ಲಿ ಈಜುವುದು ಬಿಡಿ ತೇಲುವುದಕ್ಕೂ ಉಳಿಯದಂತಾಗುತ್ತದೆ.



ನನ್ನ ಗಾಡಿ ಪ್ಲೈಓವರ್ ಮೇಲೆ ಹತ್ತಿತ್ತು. ಅಲ್ಲೊಂದು ಮೂರು ಚಕ್ರದ ಜೀಪ್ ನಿಂತಿತ್ತು...! 

ಅಲ್ಲ ಚಕ್ರ ನಾಲ್ಕಿತ್ತು.

ಆದರೆ ಒಂದು, ಗಾಡಿಯ ನಟ್ಟು ಬೋಲ್ಟ್ ಗಳ ನಂಟನ್ನು ಕಳಚಿಕೊಂಡಿತ್ತು. 

ಮೂರು ಜನ ಇದ್ದರು. 

ಇಬ್ಬರು ಜೀಪನ್ನು ಎತ್ತುತ್ತಿದ್ದರು.

ಒಬ್ಬರು ಜೀಪಿನ ಪ್ಲೇಟ್ ಗೆ ಜ್ಯಾಕ್ ಕೊಡಲು ನೋಡುತ್ತಿದ್ದರು.

ಸ್ವಲ್ಪ ಎತ್ತರಕ್ಕೆ ಎತ್ತುತ್ತಿದ್ದಂತೆ ಆಗದು ಎಂದು ಕೆಳಗಿರುಸುತ್ತಿದ್ದರು. 

ನಾನು ನನ್ನ ಬೈಕಿನ ಸೈಡ್ ಸ್ಟಾಂಡನ್ನು ನೆಲಕ್ಕೂರಿಸಿದೆ. ಬೈಕಿನ ಕೀ ಯನ್ನು ಕಿಸೆಯೊಳಗಿಟ್ಟುಕೊಂಡೆ. ಅವರ ಬಳಿಗೆ ಹೋದೆ. ಜೀಪಿಗೆ ಕೈ ಕೊಟ್ಟೆ. ಜೋರಲ್ಲಿ ಬಾಯಿಂದ ಸೌಂಡ್ ಮಾಡಿದೆ. 

"ಐಸಭಾ..... ದೆತೊನಿ... ಹ್ವಾಯ್ ಪಾಡ್ ... ಪಾಡ್. ಪಾಡ್ ಮಿತ್ತ್... ದೆರ್ಪಿ... ಆಂಡ್ ಪೋಂಡ್....” ಇದು ನಮ್ಮ ತುಳು ಭಾಷೆಯ ಪದಗಳು.

ಒಂದು ನಾಲ್ಕು ಜನ ಸೇರಿ ಭಾರದ ವಸ್ತಗಳನ್ನು ಎತ್ತುವಾಗ ಅಥವಾ ಸಾಗಿಸುವಾಗ ಪರಸ್ಪರರ ಶಕ್ತಿಯನ್ನು ದ್ವಿಗುಣಗೊಳಿಸುವಲ್ಲಿ ಪ್ರೇರಣಾ ಶಕ್ತಿಯಾಗಿ, ಮೋಟಿವೇಟ್ ಗಾಗಿ ಈ ಶಬ್ಧಗಳನ್ನು ಫುಲ್ ಎನರ್ಜಿಟಿಕ್ ಆಗಿ ಹೇಳುವುದಿದೆ. ಹಾಗೆ ನೋಡಿದರೆ ಒಬ್ಬ ಇದನ್ನು ಎನರ್ಜಿಟಿಕ್ ಆಗಿ ಹೇಳುವ ಶೈಲಿಗೇ ಕೆಲಸದ ಭಾರ ಅರ್ಧದಷ್ಟು ಕಡಿಮೆಯಾಗಿರುತ್ತದೆ.

ಹೀಗೆ ನಾನಿಲ್ಲಿ ಜೀಪಿಗೆ ಕೈ ಕೊಟ್ಟು ಫುಲ್ ಸೌಂಡ್ ಮಾಡಿ ಇಷ್ಟು ಹೇಳುವಾಗ ಜ್ಯಾಕ್ ಜೀಪಿನ ಪ್ಲೇಟ್ ಕೆಳಗಡೆ ಕುಳಿತಿತ್ತು. ಮೂರೂ ಜನರು ಒಂದು ಕ್ಷಣ ನನ್ನೆಡೆಗೆ ನೋಡಿ ಒಂದು ಉಸಿರು ಬಿಟ್ಟರು. 

ಅವರಂದುಕೊಂಡಿದ್ದರು ನಾನು ಬಂದು ಎತ್ತಿದ್ದರಿಂದಲೇ ಆಯ್ತು ಅಂತ.    


ಆದರೆ ಸತ್ಯ ಹೇಳಬೇಕೆಂದರೆ, ನಿಜಕ್ಕೂ ನಾನು ಒಂದು ಹತ್ತು ಕೆಜಿಯಷ್ಟೂ ಭಾರ ಎತ್ತಲಿಲ್ಲ. ಕಾಲು ಉಳುಕಿದ್ದರಿಂದ ಎತ್ತಲು ಆಗುತ್ತಲಿರಲಿಲ್ಲ. 

ಅವರೇ ಎತ್ತಿದ್ದು. ಮೊದಲು ಎತ್ತಲು ನೋಡಿದಾಗ ಆಗದೇ ಇದ್ದದ್ದು ಈಗ ಆಗಿಯೇ ಹೋಯ್ತು. 

ನಾನು ಮಾಡಿದ್ದು ಕೇವಲ ಒಂದು ಮೋಟಿವೇಷನ್ ಸೌಂಡ್ ಅಷ್ಟೇ. ಅದು ಅವರಲ್ಲೇ ಕಮರಿ ಹೋಗಿದ್ದ ಪೋಸಿಟಿವ್ ಎನರ್ಜಿಯನ್ನು ಚಿಗುರಿಸಿತು. ಅವರ ಒಳಗಿದ್ದ ಅಷ್ಟೂ ಶಕ್ತಿಯನ್ನು ಹೊರಗೆ ತಂದಿತ್ತು.

ಮೂವರೂ ಬಂದು ಕೈ ಕುಲುಕಿದರು.  ಪರಸ್ಪರ ಹೆಸರು ಹೇಳಿಕೊಂಡೆವು. ಒಬ್ಬನ ಹೆಸರು ರಝಾಕ್.
 ಇನ್ನೊಬ್ಬನ ಹೆಸರು ಶಂಕರ. ಮತ್ತೊಬ್ಬರು ಜೀಪಿನ ಮಾಲೀಕ ರಹೀಮ.

ಈ ರಹೀಮರಿಗೆ ಗೆದ್ದ ಮರುಕ್ಷಣದ ಭಾವುಕತೆ.  
ಹತ್ತಿರಕ್ಕೆ ಎಳೆದುಕೊಂಡು ಬೆನ್ನ ಮೇಲೆ ಕೈ ಇಟ್ಟರು. ತಟ್ಟಿದರು. ಸವರಿದರು.

ಶಂಕರ ಟಯರ್ ಫಿಕ್ಸ್ ಮಾಡಿ ಬೋಲ್ಟ್ ಗಳನ್ನು ತಿರುಗಿಸುತ್ತಿದ್ದರು. ರಝಾಕ್ ಜ್ಯಾಕನ್ನು ಸಡಿಲಿಸುತ್ತಿದ್ದರು.

ನಾವಿದ್ದ ಪ್ಲೈ ಓವರ್ ಎಂಬೀ ಮೇಲು ಸೇತುವೆಯ ರಸ್ತೆಯ ಹೊಯಿಲಿನಲ್ಲಿ ವಾಹನಗಳು ಹರಿದು ಹೋಗುತ್ತಲೇ ಇದ್ದವು. 




ಜೀಪ್ ರೆಡಿ ಆಯ್ತು. ರಹೀಮರೇ ಡ್ರೈವರ್ ಸೀಟಲ್ಲಿ ಕುಳಿತರು. 
ಅವರು ಗಾಡಿ ಸ್ಟಾರ್ಟ್ ಮಾಡಿದರು. ಕ್ಲಚ್ ಬಿಟ್ಟರು. ಎಕ್ಸೆಲರೇಟರು ಕೊಟ್ಟರು.

ನಾನೂ ಗಾಡಿ ಸ್ಟಾರ್ಟ್ ಮಾಡಿದೆ. ನೆಲಕ್ಕೂರಿಸಿದ್ದ ಸ್ಟಾಂಡ್ ತೆಗೆದೆ. ಎಕ್ಷೆಲರೇಟರ್ ಕೊಟ್ಟೆ.

ಮನೆಗೆ ಬಂದು ಅಂಗಿ ತೆಗೆದೆ. ಅಂಗಿಯ ಬೆನ್ನಿನ ಮೇಲೆ ಗ್ರೀಸಿನ ಮೂರು ಗೆರೆಗಳು.

ಬೆನ್ನು ಸವರಿದ, ಬೆನ್ನು ತಟ್ಟಿದ ರಹೀಮರ ಬೆರಳಿನ ಅಚ್ಚು ನನ್ನ ಬೆನ್ನ ಮೇಲೆ ಇತ್ತು.

ರಾಮ ಸೇತುವೆ ದಾಟಿ ಹೋದ. ಅಳಿಲಿನ ಬೆನ್ನ ಮೇಲೆ ಮೂರು ಗೆರೆ ಎಳೆದ.

ರಹೀಮ ಮೇಲು ಸೇತುವೆ ದಾಟಿ ಹೋದ. ನನ್ನ ಬೆನ್ನ ಮೇಲೆ ಗ್ರೀಸಿನ ಮೂರು ಗೆರೆ ಎಳೆದು ಹೋದ. 



🏀 ಸುಧಾಕರ ಜೈನ್ ಹೊಸಬೆಟ್ಟು ಗುತ್ತು.

🎯 9900500832. 


🐿🥢🐿🥢🐿🥢🐿🥢🐿